ಒಂದು ವರ್ಷದ ಮಗುವಿಗೆ ಬೇಸಿಗೆಯಲ್ಲಿ ಯಾವ ಆಹಾರ ನೀಡಬೇಕು? ಎಷ್ಟು ಪ್ರಮಾಣದಲ್ಲಿ ನೀಡಬೇಕು?
ಬೇಸಿಗೆಯಲ್ಲಿ ನೀರು ಕುಡಿದೇ ಹೊಟ್ಟೆ ತುಂಬಿ ಹೋಗುತ್ತದೆ. ಹಸಿವೂ ಕಡಿಮೆಯಾಗುವುದು. ಜೊತೆಗೆ ಏನೂ ತಿನ್ನಲು ಮನಸ್ಸಾಗುವುದಿಲ್ಲ. ಬೇಸಿಗೆಯಲ್ಲಿ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಹಸಿವು ಕಡಿಮೆಯೇ. ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಎನ್ನುವಾಗ ಪೋಷಕರಿಗೆ ಚಿಂತೆಯಾಗುತ್ತದೆ. ಆ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಉದ್ಭವಿಸುವ ಏಕೈಕ ಪ್ರಶ್ನೆಯೆಂದರೆ: ಮಗು ಏಕೆ ತಿನ್ನುತ್ತಿಲ್ಲ? ಅಲ್ಪಸ್ವಲ್ಪ ತಿನ್ನುವುದರದಿಂದ ಮಗುವಿಗೆ ಸಾಕಷ್ಟು ಪೋಷಣೆ ಸಿಗುತ್ತಿದೆಯೇ? ಎನ್ನುವುದು.
ಮಕ್ಕಳು ಬೇಸಿಗೆಯಲ್ಲಿ ತಿನ್ನುತ್ತಿಲ್ಲ ಎಂದು ಚಿಂತೆ ಮಾಡುವ ಮುನ್ನ ಯಾಕೆ ತಿನ್ನುತ್ತಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ.
ಬೇಸಿಗೆಯಲ್ಲಿ ಮಗು ತಿನ್ನಲು ನಿರಾಕರಿಸುವುದೇಕೆ?:
ಬೇಸಿಗೆಯಲ್ಲಿ ಮಕ್ಕಳಿಗೆ ಹಸಿವು ಕಡಿಮೆಯಾಗುವುದು ಸಾಮಾನ್ಯ. ಹೀಗಿರುವಾಗ ಅವರು ಆಹಾರ ತಿನ್ನಲು ಕೇಳುವುದಿಲ್ಲ. ತಂದಿಟ್ಟ ಊಟವನ್ನು ಪೂರ್ತಿಯಾಗಿ ತಿನ್ನುವುದೂ ಇಲ್ಲ. ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಹೆಚ್ಚಾಗುತ್ತಿದ್ದ ಹಾಗೆ ಅವರ ದೇಹದ ಉಷ್ಣತೆ ಕೂಡಾ ಏರುತ್ತದೆ. ಇದು ಅವರ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಉಳಿದ ಋತುವಿಗೆ ಹೋಲಿಸಿದರೆ ಬೇಸಿಗೆಯಲ್ಲಿ ಕಡಿಮೆ ಆಹಾರ ಸೇವಿಸುತ್ತಾರೆ. ನಮ್ಮಂತೆಯೇ, ಮಕ್ಕಳ ದೇಹಕ್ಕೂ ಈ ಸಮಯದಲ್ಲಿ ಹೆಚ್ಚಿನ ನೀರಿನ ಅಗತ್ಯವಿರುತ್ತದೆ.

ಬೇಸಿಗೆಯಲ್ಲಿ 1 ವರ್ಷದ ಮಗುವಿಗೆ ಯಾವ ಆಹಾರ ನೀಡಬೇಕು?:
ಬೇಸಿಗೆಯಲ್ಲಿ 1 ವರ್ಷದ ಮಗುವಿಗೆ ಹಗುರವಾದ, ಪೌಷ್ಟಿಕ ಮತ್ತು ನೀರಿನ ಅಂಶ ಜಾಸ್ತಿ ಇರುವ ಆಹಾರವನ್ನು ನೀಡಬೇಕು. ಈ ವಯಸ್ಸಿನಲ್ಲಿ ಮಕ್ಕಳು ವೇಗವಾಗಿ ಬೆಳೆಯುತ್ತಿರುತ್ತಾರೆ. ಆದ್ದರಿಂದ ಪೋಷಣೆ ಮತ್ತು ನೀರು ಎರಡರ ಸಮತೋಲಿತ ಆಹಾರವು ಮಗುವಿಗೆ ಅತ್ಯಗತ್ಯ.
ಮೊದಲು ಋತುಮಾನದ ಹಣ್ಣುಗಳನ್ನು ನೀಡಿ:
ಬೇಸಿಗೆಯಲ್ಲಿ, ನಿಮ್ಮ ಮಗುವಿಗೆ ಕಲ್ಲಂಗಡಿ, ಪ್ಲಮ್, ಖರ್ಬೂಜ, ಬಾಳೆಹಣ್ಣು, ಮಾವಿನಹಣ್ಣು ಮತ್ತು ಪೇರಳೆ ಸೇರಿದಂತೆ ಕಾಲೋಚಿತ ಹಣ್ಣುಗಳನ್ನು ನೀಡಬಹುದು. ಆದರೆ ಮಗುವಿಗೆ ಮೊದಲ ಬಾರಿಗೆ ಯಾವುದಾದರೂ ಹಣ್ಣನ್ನು ನೀಡುವುದಿದ್ದರೆ ಮೊದಲು ಸ್ವಲ್ಪ ಪ್ರಮಾಣದಲ್ಲಿ ನೀಡಿ, ಆ ಹಣ್ಣಿನಿಂದ ಮಗುವಿಗೆ ಅಲರ್ಜಿ ಆಗುವುದೇ ಎನ್ನುವುದನ್ನು ಗಮನಿಸಿ. ಆ ಹಣ್ಣಿನಿಂದ ಮಗುವಿನ ಮೇಲೆ ಯಾವ ರಿಯಾಕ್ಷನ್ ಕೂಡಾ ಆಗದೇ ಮಗು ಹಣ್ಣನ್ನು ಚೆನ್ನಾಗಿ ತಿನ್ನುತ್ತಿದ್ದರೆ, ಅದನ್ನು ನೀಡುವುದನ್ನು ಮುಂದುವರಿಸಬಹುದು.
ಮೊಸರು ಮತ್ತು ಮನೆಯಲ್ಲಿ ತಯಾರಿಸಿದ ತಂಪು ಪಾನೀಯ:
ದೊಡ್ಡವರಂತೆ ಮಕ್ಕಳು ಕೂಡಾ ಬೇಸಿಗೆಯಲ್ಲಿ ಶೀತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದ್ದರಿಂದ, ಅವರಿಗೆ ಮನೆಯಲ್ಲಿ ತಯಾರಿಸಿದ ಮೊಸರು, ಮೊಸರನ್ನ, ಲಸ್ಸಿ ಮತ್ತು ಮಜ್ಜಿಗೆಯನ್ನು ನೀಡಬಹುದು. ಮೊಸರು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಕೂಡಾ ಇದು ಒಳ್ಳೆಯದು.
ಮಕ್ಕಳಿಗೆ ಲೈಟ್ ಮತ್ತು ಪೌಷ್ಟಿಕ ಆಹಾರವನ್ನು ನೀಡಿ:
ನಿಮ್ಮ ಮಗು 1 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಈ ಋತುವಿನಲ್ಲಿ ಅವರಿಗೆ ಹಗುರವಾದ ಆಹಾರವನ್ನೇ ನೀಡಲು ಪ್ರಯತ್ನಿಸಿ. ಗಂಜಿ, ಹೆಸರು ಬೇಳೆ ಖಿಚಡಿ, ಬೇಯಿಸಿದ ಆಲೂಗಡ್ಡೆ ಹಿಸುಕಿದ ಕ್ಯಾರೆಟ್, ಕುಂಬಳಕಾಯಿ ಮತ್ತು ಸೋರೆಕಾಯಿ ಪ್ಯೂರಿಯನ್ನು ನೀಡಲು ಪ್ರಯತ್ನಿಸಿ.
ದೇಹದಲ್ಲಿ ನೀರು ಕಡಿಮೆಯಾಗಲು ಬಿಡಬೇಡಿ:
ನಿಮ್ಮ ಮಗು 6 ತಿಂಗಳಿಗಿಂತ ಹೆಚ್ಚು ವಯಸ್ಸಾಗಿದ್ದರೆ, ಸಣ್ಣ ಪ್ರಮಾಣದಲ್ಲಿ ನೀರನ್ನು ನೀಡಿ. ನಿಮ್ಮ ವೈದ್ಯರು ಶಿಫಾರಸು ಮಾಡಿದರೆ, ದಿನವಿಡೀ 2-3 ಚಮಚ ಎಳ ನೀರನ್ನು ನೀಡಬಹುದು. ಕಡಿಮೆ ಸಕ್ಕರೆ ಮತ್ತು ಕಡಿಮೆ ಉಪ್ಪು ಇರುವ ನಿಂಬೆ ನೀರನ್ನು ಕೂಡಾ ನೀಡಬಹುದು. ನಿಮ್ಮ ಮಗುವಿಗೆ ಇನ್ನೂ ಹಾಲುಣಿಸುತ್ತಿದ್ದರೆ ಅಥವಾ ಫಾರ್ಮುಲಾ-ಹಾಲು ನೀಡುತ್ತಿದ್ದರೆ, ಬೇಸಿಗೆಯಲ್ಲಿ ಹಾಲುಣಿಸುವಿಕೆ ಪ್ರಮಾಣ ಹೆಚ್ಚಾಗಬಹುದು. ಏಕೆಂದರೆ ಬೇಸಿಗೆಯಲ್ಲಿ ಮಗುವಿಗೆ ಹೆಚ್ಚು ಬಾಯಾರಿಕೆಯಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಹಾಗಾಗಿ ಮಗು ಹೆಚ್ಚು ಹಾಲು ಬೇಕು ಎನ್ನುವುದು ಸಾಮಾನ್ಯ.
1 ವರ್ಷದ ಮಗು ಎಷ್ಟು ತಿನ್ನಬೇಕು?:
ಒಂದು ವರ್ಷದ ಮಗುವಿಗೆ ದಿನಕ್ಕೆ ಮೂರು ಮುಖ್ಯ ಊಟಗಳನ್ನು ನೀಡಿ. ಅವರ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ನೀಡಿ. ನೀವು ನೀಡುವ ಊಟ ಪೌಷ್ಟಿಕಾಂಶವನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅವುಗಳ ನಡುವೆ 2-3 ತಿಂಡಿಗಳನ್ನು ಸಹ ನೀಡಬಹುದು. 1 ವರ್ಷದ ಮಕ್ಕಳಿಗೆ ಪ್ರತಿ 3-4 ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಆಹಾರವನ್ನು ನೀಡಿ. 1 ರಿಂದ 2 ವರ್ಷದೊಳಗಿನ ಮಗುವಿಗೆ ಸಾಮಾನ್ಯವಾಗಿ ದಿನಕ್ಕೆ ಸುಮಾರು 1,000 ಕ್ಯಾಲೊರಿಗಳು ಬೇಕಾಗುತ್ತವೆ. ಆದ್ದರಿಂದ, ಪ್ರತಿ ಊಟದಲ್ಲಿ ಅರ್ಧದಿಂದ 1 ಕಪ್ ಘನ ಆಹಾರವನ್ನು ಸೇರಿಸಲು ಪ್ರಯತ್ನಿಸಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications