ಫ್ರೂಟ್ ಸಲಾಡ್ ಮಾಡುವ ಮುನ್ನ ತಿಳಿದುಕೊಳ್ಳಿ: ಈ ಹಣ್ಣುಗಳ ಕಾಂಬಿನೇಷನ್ ಅಪಾಯಕಾರಿ
ಇತ್ತೀಚಿನ ದಿನಗಳಲ್ಲಿ ಹಲವರು ಆರೋಗ್ಯಕರ ಜೀವನಶೈಲಿಗಾಗಿ ಫ್ರೂಟ್ ಸಲಾಡ್, ಜ್ಯೂಸ್ ಮತ್ತು ಮಿಕ್ಸ್ ಫ್ರೂಟ್‌ಗಳನ್ನು ಸೇವಿಸುತ್ತಿದ್ದಾರೆ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಎಲ್ಲಾ ಹಣ್ಣುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಪ್ಪು ಕಲ್ಪನೆ ಆಗಿದೆ. ಕೆಲವು ಹಣ್ಣುಗಳು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು ಎಂದು ಆಯುರ್ವೇದ ಹಾಗೂ ಪೌಷ್ಟಿಕ ತಜ್ಞರು ಹೇಳುತ್ತಾರೆ. ತಪ್ಪಾದ ಹಣ್ಣುಗಳ ಕಾಂಬಿನೇಷನ್‌ನಿಂದ ಹೊಟ್ಟೆ ಉಬ್ಬರ, ಗ್ಯಾಸ್, ಅಜೀರ್ಣ ಮತ್ತು ಪೋಷಕಾಂಶಗಳ ಕೊರತೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ಹುಳಿ ಹಣ್ಣು ಜೊತೆ ಸಿಹಿ ಹಣ್ಣು
ಕಿತ್ತಳೆ ಮತ್ತು ಬಾಳೆಹಣ್ಣು, ಸ್ಟ್ರಾಬೆರಿ ಮತ್ತು ಒಣ ದ್ರಾಕ್ಷಿ ಹೀಗೆ ಹುಳಿ ಹಾಗೂ ಸಿಹಿ ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಕಿತ್ತಳೆ, ಸ್ಟ್ರಾಬೆರಿ, ಸೇಬು ಮೊದಲಾದ ಹಣ್ಣುಗಳು ಬೇಗ ಜೀರ್ಣವಾಗುತ್ತವೆ. ಆದರೆ ಬಾಳೆಹಣ್ಣು, ಅಂಜೂರದಂತಹ ಸಿಹಿ ಹಣ್ಣುಗಳು ನಿಧಾನವಾಗಿ ಜೀರ್ಣವಾಗುತ್ತವೆ. ಎರಡನ್ನೂ ಒಟ್ಟಿಗೆ ತಿಂದರೆ ಹೊಟ್ಟೆಯಲ್ಲಿ ಫರ್ಮೆಂಟೇಶನ್ ಆಗಿ ಗ್ಯಾಸ್, ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಉಂಟಾಗುತ್ತದೆ.
ಸ್ಟಾರ್ಚ್‌ಯುಕ್ತ ಹಣ್ಣು ಜೊತೆ ಪ್ರೋಟೀನ್‌ಯುಕ್ತ ಹಣ್ಣು
ಹಸಿರು ಬಾಳೆಹಣ್ಣು ಮತ್ತು ಬೆಣ್ಣೆ ಹಣ್ಣು ಹೀಗೆ ಸ್ಟಾರ್ಚ್‌ಯುಕ್ತ ಹಾಗೂ ಪ್ರೋಟೀನ್‌ಯುಕ್ತ ಹಣ್ಣುಗಳನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆ ಗೊಂದಲಕ್ಕೀಡಾಗುತ್ತದೆ. ಸ್ಟಾರ್ಚ್‌ಯುಕ್ತ ಆಹಾರಕ್ಕೆ ಕ್ಷಾರೀಯ ವಾತಾವರಣ ಬೇಕಾದರೆ, ಪ್ರೋಟೀನ್ ಜೀರ್ಣಕ್ಕೆ ಆಮ್ಲೀಯ ವಾತಾವರಣ ಅಗತ್ಯವಿರುತ್ತದೆ. ಎರಡನ್ನೂ ಸೇರಿಸಿದಾಗ ಅಜೀರ್ಣ, ಹೊಟ್ಟೆಭಾರ ಮತ್ತು ಬಲಹೀನತೆ ಉಂಟಾಗುವ ಸಾಧ್ಯತೆ ಇದೆ.

ಕಲ್ಲಂಗಡಿ ಜೊತೆ ಇತರೆ ಹಣ್ಣುಗಳು
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ಇದು ಬೇಗ ಜೀರ್ಣವಾಗುತ್ತದೆ. ಆದರೆ ಸೇಬು ಅಥವಾ ಪೇರಳೆ ಹಣ್ಣುಗಳ ಜೊತೆ ತಿಂದರೆ ಹೊಟ್ಟೆಯಲ್ಲಿ ಫರ್ಮೆಂಟೇಶನ್ ಉಂಟಾಗಬಹುದು. ಇದರಿಂದ ಹೊಟ್ಟೆ ಉಬ್ಬರ, ವಾಕರಿಕೆ ಮತ್ತು ಅತಿಸಾರವೂ ಕಾಣಿಸಿಕೊಳ್ಳಬಹುದು. ಹೀಗಾಗಿ ಕಲ್ಲಂಗಡಿಯನ್ನು ಪ್ರತ್ಯೇಕವಾಗಿ ಸೇವಿಸುವುದೇ ಉತ್ತಮ.

ಪಪ್ಪಾಯಿ ಜೊತೆನಿಂಬೆಹಣ್ಣು
ಪಪ್ಪಾಯಿ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಇದನ್ನು ನಿಂಬೆಹಣ್ಣಿನ ಜೊತೆ ಸೇವಿಸುವುದು ಹೊಟ್ಟೆಗೆ ತೊಂದರೆ ಉಂಟುಮಾಡಬಹುದು. ನಿಂಬೆಹಣ್ಣಿನ ಆಮ್ಲೀಯ ಗುಣ ಮತ್ತು ಪಪ್ಪಾಯಿಯ ಕ್ಷಾರೀಯ ಗುಣ ಪರಸ್ಪರ ವಿರುದ್ಧವಾಗಿ ಕೆಲಸ ಮಾಡುವುದರಿಂದ ಆಸಿಡ್ ರಿಫ್ಲಕ್ಸ್ ಅಥವಾ ಹೊಟ್ಟೆ ಅಸ್ವಸ್ಥತೆ ಉಂಟಾಗಬಹುದು.

ಸೀಬೆಹಣ್ಣು ಜೊತೆ ಬಾಳೆಹಣ್ಣು
ಸೀಬೆಹಣ್ಣಿನಲ್ಲಿರುವ ಹೆಚ್ಚು ಫೈಬರ್ ಮತ್ತು ಬಾಳೆಹಣ್ಣಿನ ಸ್ಟಾರ್ಚ್ ಸಂಯೋಜನೆ ಹೊಟ್ಟೆ ಉಬ್ಬರ ಹಾಗೂ ಆಸಿಡಿಟಿಗೆ ಕಾರಣವಾಗಬಹುದು. ನಿರಂತರವಾಗಿ ಈ ಕಾಂಬಿನೇಷನ್ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇದೆ.
ಹಣ್ಣು ಜೊತೆ ತರಕಾರಿ
ಕಿತ್ತಳೆ ಮತ್ತು ಕ್ಯಾರೆಟ್ ಹೀಗೆ ಹಣ್ಣು ಹಾಗೂ ತರಕಾರಿಗಳನ್ನು ಒಂದೇ ಸಮಯದಲ್ಲಿ ಸೇವಿಸುವುದು ಕೆಲವರಿಗೆ ಅಜೀರ್ಣ ಉಂಟುಮಾಡಬಹುದು. ಹಣ್ಣುಗಳು ಬೇಗ ಜೀರ್ಣವಾಗುತ್ತವೆ, ಆದರೆ ತರಕಾರಿಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಇವುಗಳನ್ನು ಒಟ್ಟಿಗೆ ಸೇವಿಸಿದರೆ ಹೊಟ್ಟೆಯಲ್ಲಿ ಫರ್ಮೆಂಟೇಶನ್ ಉಂಟಾಗಿ ಗ್ಯಾಸ್ ಮತ್ತು ತಲೆನೋವು ಕಾಣಿಸಿಕೊಳ್ಳಬಹುದು.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾರಿಗಾದರೂ ನಿರಂತರ ಜೀರ್ಣಕ್ರಿಯೆ ಸಮಸ್ಯೆಗಳು ಕಂಡುಬಂದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.












Click it and Unblock the Notifications