• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾ। ಪ್ರಭಂಜನಾಚಾರ್ಯರ ‘ಶ್ರೀಪೂರ್ಣಪ್ರಜ್ಞದರ್ಶನ’

By Staff
|

ಶ್ರೀ ಮಧ್ವರ ಜೀವನ ಮತ್ತು ಸಾಧನೆಯನ್ನು ಕುರಿತು ಒಂದು ಅಧಿಕೃತ ಗ್ರಂಥ ಕನ್ನಡದಲ್ಲಿ ಇರಲಿಲ್ಲವೆಂದು ತಿಳಿದ ಡಾ। ಪ್ರಭಂಜನಾಚಾರ್ಯರು ಆ ಸಾಹಸಕ್ಕೆ ಕೈಹಾಕಿದ್ದಾರೆ, ಮತ್ತು ಯಶಸ್ವಿಯಾಗಿದ್ದಾರೆ. ಓದುಗರ ಮೆಚ್ಚುಗೆಯನ್ನೂ ಗಳಿಸಿದ್ದಾರೆ, ಇದಕ್ಕೆ ಎರಡು ವರ್ಷಗಳಲ್ಲಿ ಅದರ ಮೂರು ಮುದ್ರಣಗಳು ಪ್ರಕಟವಾದದ್ದೇ ಸಾಕ್ಷಿ.

ಡಾ।'ಜೀವಿ" ಕುಲಕರ್ಣಿ, ಮುಂಬಯಿ

Sri Madhvacharyas life and Acchievementsಭಾರತದ ವೈದಿಕ ಮತಾಚಾರ್ಯರಲ್ಲಿ ಮೊದಲು ಶಂಕರಾಚಾರ್ಯರು, ನಂತರ ರಾಮಾನುಜಾಚಾರ್ಯರು, ನಂತರ ಮಧ್ವಾಚಾರ್ಯರು- ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳನ್ನು ಸ್ಥಾಪಿಸಿದರು. ತಮ್ಮ ಅಪ್ರತಿಮ ವೈದುಷ್ಯದಿಂದ ತಾತ್ವಿಕ ಪ್ರಪಂಚದಲ್ಲಿ ಅಪೂರ್ವ ಅಧ್ಯಾತ್ಮಿಕ ಕ್ರಾಂತಿ ಮಾಡಿದ ಮಹಾಪುರುಷರಿವರು. ನಾಲ್ಕನೆಯ ಆಚಾರ್ಯರು ಇನ್ನೂ ಅವತರಿಸಿಲ್ಲ. ಕಾಲಕ್ರಮೇಣ ಮಧ್ವಾಚಾರ್ಯರೇ ಕೊನೆಯವರು.

''ಅಂತೆಯೇ ಅವರ ಸಿದ್ಧಾಂತವೂ ಕೊನೆಯದು...ಚಿಂತನೆಯ ಪೂರ್ಣತೆಯಲ್ಲಿ ಅದೇ ಕೊನೆಯದು. ಅದಕ್ಕೆಂದೇ ಸಿದ್ಧಾಂತ ಎಂಬ ಹೆಸರು ಅವರ ಮತಕ್ಕೆ ಸಾರ್ಥಕ"" ಎನ್ನುತ್ತಾರೆ ಡಾ। ಪ್ರಭಂಜನಾಚಾರ್ಯರು.

ಒಂದು ಮೋಜಿನ ವಿಷಯವೆಂದರೆ ಈ ಆಚಾರ್ಯತ್ರಯರಿಗೆ ಕರ್ನಾಟಕವೇ ಕರ್ಮಭೂಮಿ. ಕೇರಳದಿಂದ ಶಂಕರರು ಶೃಂಗೇರಿಗೆ ಬಂದರು, ತಮಿಳುನಾಡಿನಿಂದ ರಾಮಾನುಜರು ಮೇಲುಕೋಟೆಗೆ ಬಂದರು. ಉಡುಪಿಯ ಬಳಿಯ ಪಾಜಕದಲ್ಲಿ ಜನಿಸಿದ ಮಧ್ವರಿಗೆ ಕರ್ನಾಟಕ ಜನ್ಮಭೂಮಿಯೂ, ಕರ್ಮಭೂಮಿಯೂ ಆಯಿತು.

ಶ್ರೀ ಮಧ್ವಾಚಾರ್ಯರಿಗೆ ಸರ್ವಜ್ಞ, ಪೂರ್ಣಪ್ರಜ್ಞ, ಆನಂದತೀರ್ಥ ಎಂಬ ಸಾರ್ಥಕ ನಾಮಗಳಿವೆ. ಶ್ರೀ ಮಧ್ವರ ಬಗ್ಗೆ ಕೆಲವು ಉತ್ತಮ ಗ್ರಂಥಗಳು ಇಂಗ್ಲೀಷಿನಲ್ಲಿವೆ. ಡಾ। ಬಿ.ಎನ್‌.ಕೆ.ಶರ್ಮಾ ಅವರು ಶ್ರೀಮಧ್ವರ ಬಗ್ಗೆ ಗ್ರಂಥ ಬರೆದು ಡಿ.ಲಿಟ್‌ . ಪಡೆದಿದ್ದಾರೆ. ಆದರೆ ಶ್ರೀ ಮಧ್ವರ ಜೀವನ ಮತ್ತು ಸಾಧನೆಯನ್ನು ಕುರಿತು ಒಂದು ಅಧಿಕೃತ ಗ್ರಂಥ ಕನ್ನಡದಲ್ಲಿ ಇರಲಿಲ್ಲವೆಂದು ತಿಳಿದ ಡಾ। ಪ್ರಭಂಜನಾಚಾರ್ಯರು ಆ ಸಾಹಸಕ್ಕೆ ಕೈಹಾಕಿದ್ದಾರೆ, ಮತ್ತು ಯಶಸ್ವಿಯಾಗಿದ್ದಾರೆ. ಓದುಗರ ಮೆಚ್ಚುಗೆಯನ್ನೂ ಗಳಿಸಿದ್ದಾರೆ, ಇದಕ್ಕೆ ಎರಡು ವರ್ಷಗಳಲ್ಲಿ ಅದರ ಮೂರು ಮುದ್ರಣಗಳು ಪ್ರಕಟವಾದದ್ದೇ ಸಾಕ್ಷಿ.

ಇದು ಪಂಡಿತರ ಮನ್ನಣೆಯನ್ನೂ ಗಳಿಸಿದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರು ಹೇಳುತ್ತಾರೆ, -''ವಿಶ್ವಗುರುಗಳಾದ ಶ್ರೀಮದಾನಂದತೀರ್ಥರ ಮೇರುಸದೃಶ ವ್ಯಕ್ತಿತ್ವದ ದರ್ಶನವನ್ನು ಜನಸಾಮಾನ್ಯರೂ ತಿಳಿಯುವಂತೆ ಮಾಡಿಸುವ ಈ ಮಹಾ ಕೃತಿಯನ್ನು ಕಂಡು ನಮಗೆ ಅತ್ಯಂತ ಆನಂದವಾಗಿದೆ. ... ಸುಮಧ್ವವಿಜಯದಲ್ಲಿ ಇಲ್ಲದ ಅನೇಕ ಘಟನೆಗಳನ್ನು ಆಯಾಯಾಭಾಗದಲ್ಲಿ ಪರಂಪರೆಯಿಂದ ಬಂದ ಐತಿಹ್ಯವನ್ನು ಆಧರಿಸಿ ವಿವರಿಸಿದ್ದಾರೆ. ... ಇಂತಹ ಕೃತಿರತ್ನವನ್ನು ಸಮಾಜಕ್ಕೆ ಅರ್ಪಿಸಿ, ಶ್ರೀಹರಿವಾಯುಗಳ ಸೇವೆ ಮಾಡಿದ ಪ್ರಭಂಜನಾಚಾರ್ಯರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.""

ಡಾ। ಪ್ರಭಂಜನಾಚಾರ್ಯರ ಗುರುಗಳಾಗಿದ್ದ ಪ್ರೊ.ಕೆ.ಟಿ.ಪಾಂಡುರಂಗಿಯವರು ಹೇಳುತ್ತಾರೆ, ---''(ನಾರಾಯಣಪಂಡಿತಾಚಾರ್ಯರು ಬರೆದ) 'ಸುಮಧ್ವವಿಜಯ"ವನ್ನು, ಹೃಷೀಕೇಶತೀರ್ಥರು ಬರೆದ 'ಶ್ರೀಸಂಪ್ರದಾಯ ಪದ್ಧತಿ" ಮುಂತಾದ ಸಂಸ್ಕೃತದಲ್ಲಿರುವ ಶ್ರೀ ಮಧ್ವಾಚಾರ್ಯರ ಚರಿತ್ರೆಯ ಇನ್ನಿತರ ಆಕರ ಗ್ರಂಥಗಳನ್ನು ಓದಿದವರಿಗೂ ಈ ಗ್ರಂಥವು ಶ್ರೀಮದಾಚಾರ್ಯರ ಚರಿತ್ರೆ, ಅವರ ಮಹಾಕಾರ್ಯಗಳು ಮತ್ತು ಗ್ರಂಥಗಳ ವಿಷಯದಲ್ಲಿ ಹೊಸ ಬೆಳಕನ್ನು ಚೆಲ್ಲುತ್ತದೆ; ಹೊಸ ದೃಷ್ಟಿಯನ್ನು ಕೊಡುತ್ತದೆ; ಆಳವಾದ ಪರಿಚಯವನ್ನು ಮಾಡಿಕೊಡುತ್ತದೆ.""

ಮಹಾಮಹೋಪಾಧ್ಯಾಯ ಗಲಗಲಿ ಪಂಢರೀನಾಥಾಚಾರ್ಯರು ಮುಕ್ತಕಂಠದಿಂದ ಈ ಗ್ರಂಥವನ್ನು ಕೊಂಡಾದಿದ್ದಾರೆ, ಮೆಚ್ಚಿದ್ದಾರೆ. ಈ ಗ್ರಂಥವು ''ಸುಮಧ್ವವಿಜಯ ಮಹಾಕಾವ್ಯಕ್ಕೆ ಕನ್ನಡದಲ್ಲಿ ಬರೆದ ಒಂದು ಭಾಷ್ಯವೇ ಆಗಿದೆ ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ."" ಎನ್ನುತ್ತಾರೆ.

''ಧ್ವನಿಪ್ರಸ್ಥಾನದ ಪರಮಾಚಾರ್ಯನಾದ ಆನಂದವರ್ಧನನ 'ಧ್ವನ್ಯಾಲೋಕ"ಕ್ಕೆ ಅಭಿನವಗುಪ್ತನು ವ್ಯಾಖ್ಯಾನ ಬರೆದಿದ್ದಾನೆ. ಆನಂದತೀರ್ಥರ ಮೇಲಿನ ಏಕೈಕ ಕೃತಿ 'ಸುಮಧ್ವವಿಜಯ"ಕ್ಕೆ ಅನೇಕ ಪ್ರಾಚೀನರು ವ್ಯಾಖ್ಯಾನ ಬರೆದಿದ್ದರೂ, ಕನ್ನಡದಲ್ಲಿ ಆ ಮಹಾಗ್ರಂಥಕ್ಕೆ ಗ್ರಂಥಕಾರರ ವಚಸೋಕ್ತ ಮನಸೋಕ್ತ ವಾಚ್ಯಾರ್ಥ ವ್ಯಂಗ್ಯಾರ್ಥಗಳನ್ನು 'ಶ್ರೀಪೂರ್ಣಪ್ರಜ್ಞದರ್ಶನ"ದ ಮುಖಾಂತರ ಸಮೀಚೀನವಾಗಿ ಅಭಿವ್ಯಕ್ತಗೊಳಿಸುವ ಪಂ. ಪ್ರಭಂಜನಾಚಾರ್ಯರು ಕನ್ನಡ ನಾಡು ನುಡಿಗಳ ಅಭಿನವಗುಪ್ತರೇ ಸರಿ.!"" ಎಂಬ ಉದ್ಗಾರ ತೆಗೆಯುತ್ತಾರೆ.

ಶ್ರೀಮಧ್ವಾಚಾರ್ಯರ ಕಾಲವನ್ನು ನಿರ್ಣಯಿಸಿ ಒಂದು ಪ್ರತ್ಯೇಕ ಗ್ರಂಥವನ್ನೇ ಪ್ರಭಂಜನಾಚಾರ್ಯರು ಬರೆದಿದ್ದಾರೆ. ''ಆಚಾರ್ಯ ಶ್ರೀಮಧ್ವರು (ಕ್ರಿ.ಶ.1200-1280) ವಿಶ್ವ ಕಂಡ ಅದ್ಭುತ ದಾರ್ಶನಿಕರು. ಸಕಲ-ಶಾಸ್ತ್ರಗಳು, ಸಕಲಭಾಷೆಗಳು, ಸಕಲಕಲೆಗಳು ಅವರಿಗೆ ಕರತಲಾಮಲಕ. ಅದಕ್ಕೆಂದೇ ಪೂರ್ಣಪ್ರಜ್ಞರು ಎಂಬ ಹೆಸರು ಅವರಿಗೆ ಅನ್ವರ್ಥಕ. ವೇದೋಪನಿಷತ್ತುಗಳಂತೆ ಮಹಾಭಾರತ, ರಾಮಾಯಣ, ಭಾಗವತ ಮೊದಲಾದ ಸಕಲ ಮೂಲಗ್ರಂಥಗಳ ಭಾವವನ್ನು ವಿಶಿಷ್ಟ ರೀತಿಯಲ್ಲಿ ಆವಿಷ್ಕರಿಸಿದ ವಿದ್ವದ್ವಿಭೂತಿ ಎಂಬುದು ಅವರ ಹಿರಿಮೆ. ಅದಕ್ಕೆಂದೇ ಅವರ ಗ್ರಂಥಗಳಿಗೆ ಸರ್ವಮೂಲಗ್ರಂಥಗಳೆಂದು ಹೆಸರು. "" ಎಂದು ಪ್ರಭಂಜನಾಚಾರ್ಯರು ಬರೆಯುತ್ತಾರೆ.

''ದೇಹದಾರ್ಢ್ಯದಲ್ಲಿ ಎಂತಹ ಮಲ್ಲರಿಗೂ ಮಣ್ಣುಮುಕ್ಕಿಸಿದ ಜಗಜಟ್ಟಿ. ತತ್ವಶಾಸ್ತ್ರ, ಮಂತ್ರಶಾಸ್ತ್ರ ಮೊದಲಾದ ಸಕಲ ಶಾಸ್ತ್ರಗಳಲ್ಲಿಯೂ ಅವರು ದಶಪ್ರಮತಿ. ...ಅವರು ಭುವನದ ಭಾಗ್ಯ, ತ್ರಿಭುವನದ ಸೋಜಿಗ. ... ಶ್ರೀ ಮಧ್ವರ ಕಾರ್ಯ ನೋಡಿದರೆ ಅವರು ಅಭುನವ ವೇದವ್ಯಾಸ."" ಎನ್ನುತ್ತಾರೆ.

ಈ ಗ್ರಂಥದಲ್ಲಿ ಪೂರ್ಣಪ್ರಜ್ಞರ ಪೂರ್ಣ ದರ್ಶನವೇ ದೊರೆಯುತ್ತದೆ. ಈ ಗ್ರಂಥದ ಹೆಗ್ಗಳಿಕೆ ಎಂದರೆ ಈ ಗ್ರಂಥದಲ್ಲಿ 'ಸಾಧಾರವಿಲ್ಲದ ಯಾವ ವಿಷಯವೂ ಸೇರ್ಪಡೆಯಾಗಿಲ್ಲ"ಎಂಬ ಮಾತು. ಈ ಗ್ರಂಥದ ಮತ್ತೊಂದು ವೈಶಿಷ್ಯವೆಂದರೆ ಶ್ರೀ ಮಧ್ವರ ಜೀವನ ಹಾಗೂ ಕಾರ್ಯಕ್ಕೆ ಸಂಬಂಧಿಸಿದ ಅನನ್ಯ ಅಪೂರ್ವ ವರ್ಣರಂಜಿತ ಛಾಯಾಚಿತ್ರಗಳು ಇವೆ. ಹದಿನಾರು ಪುಟಗಳಷ್ಟು ಆರ್ಟ್‌ಪೇಪರಿನಲ್ಲಿ ಅಂದವಾಗಿ ಮುದ್ರಿತವಾಗಿವೆ.

ಅಧ್ಯಾತ್ಮವಿದ್ಯೆಯ ಹಿರಿಮೆ :

ತತ್ತ್ವಜ್ಞಾನ ಎಲ್ಲ ಜ್ಞಾನಗಳ ಮೂಲ ನೆಲೆ. ಇತರ ಶಾಸ್ತ್ರಗಳು ಅಂಗಗಳಾದರೆ, ತತ್ತ್ವಜ್ಞಾನ ಅಂಗಿ; ಅವು ದೇಹವಾದರೆ, ಇದು ಅವುಗಳ ಉಸಿರು(ಪ್ರಾಣ). ತತ್ತ್ವಜ್ಞಾನವಿಲ್ಲದ ಇತರ ಜ್ಞಾನಗಳೆಲ್ಲ ಉಸಿರಿಲ್ಲದ ದೇಹದಂತೆ ನಿರ್ಜೀವ. ಆಹಾರವಿಲ್ಲದೆ ದೇಹ ಉಳಿಯದು, ವಿಚಾರವಿಲ್ಲದೆ ಜೀವನ ಅರಳದು. ಬ್ರಹ್ಮಜಿಜ್ಞಾಸೆ ತತ್ತ್ವಜ್ಞಾನದ ಪರಮ ಗುರಿ. ವಿಜ್ಞಾನದ ಗುರಿ ಜಡಪ್ರಪಂಚವಾದರೆ, ಅಧ್ಯಾತ್ಮದ್ದು ಚೇತನಪ್ರಪಂಚ. ದೇಶದ ಪ್ರಗತಿ ಅರ್ಥಮೂಲವಾದರೆ, ಜೀವನದ ಪ್ರಗತಿ ತತ್ತ್ವಮೂಲ. ಜ್ಞಾನಕ್ಕಿಂತ ಪವಿತ್ರವಾದುದು ಇನ್ನೊಂದಿಲ್ಲ. (ನ ಹಿ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ).

ತತ್ತ್ವಜ್ಞಾನದ ಮೂಲ ಆಕರ :

ವಿಜ್ಞಾನದ ಚಿಂತನೆಗೆ ಪ್ರತ್ಯಕ್ಷ, ಪ್ರಯೋಗಗಳು ಆಕರವಾದರೆ, ತತ್ತ್ವಜ್ಞಾನಕ್ಕೆ ಶಾಸ್ತ್ರಗಳೇ ಪರಮಸಾಧನ. ವಿಜ್ಞಾನದ ಗುರಿ ಐಂದ್ರಿಯಕವಾದ ಮೂರ್ತಪ್ರಪಂಚವಾದರೆ, ತತ್ತ್ವಜ್ಞಾನದ್ದು ಅತೀಂದ್ರಿಯವಾದ ಅಮೂರ್ತಪ್ರಪಂಚ. ಅರಿವಿಗೆ ಆಗಮಗಳು ಮೂಲ; ವೇದವೇದಾಂಗ, ಇತಿಹಾಸಪುರಾಣ, ಸ್ಮೃತಿ ಮೊದಲಾದವು. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ, ಇವು ನಾಲ್ಕು ವೇದಗಳಾದರೆ; ಮಂತ್ರ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳು ಅದರ ಪ್ರಭೇದಗಳು.

ಶಿಕ್ಷಾ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ ಮತ್ತು ಕಲ್ಪ- ಇವು ಆರು ವೇದಾಂಗಗಳು. ಮಹಾಭಾರತ, ರಾಮಾಯಣ ಹಾಗೂ ಪಂಚರಾತ್ರ ಇವು ಇತಿಹಾಸಗಳು. ಹದಿನೆಂಟು ಪುರಾಣಗಳನ್ನು ವೇದವ್ಯಾಸರೇ ರಚಿಸಿದ್ದಾರೆ. ಭಾಗವತ, ವರಾಹ, ವಾಮನ, ವಿಷ್ಣು ಮುಂತಾದವು ಮಹಾಪುರಾಣಗಳಾದರೆ, ಮಹಾವರಾಹ, ನರಸಿಂಹ, ಮಹಾಕೂರ್ಮ ಮೊದಲಾದವು ಉಪಪುರಾಣಗಳು. ವ್ಯಾಸಸ್ಮೃತಿ, ಮನುಸ್ಮೃತಿ ಮೊದಲಾದವು ಸ್ಮೃತಿಗಳು. ಈ ಶಾಸ್ತ್ರಪ್ರಪಂಚ ತತ್ತ್ವಜ್ಞಾನದ ಆಕರ.

ಮಧ್ವರ ಅವತಾರ... ಉಡುಪಿ ಕ್ಷೇತ್ರ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more