Namma Metro: ಮೆಟ್ರೋ ಸೇವೆಯಲ್ಲಿ 20ಕ್ಕೂ ಹೆಚ್ಚು ಬಾರಿ ತಾಂತ್ರಿಕ ದೋಷ; ಅಂತಾರಾಷ್ಟ್ರೀಯ ಮಾನದಂಡ ಪಾಲಿಸಿ: ತೇಜಸ್ವಿ ಸೂರ್ಯ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ' ಸೇವೆಯಲ್ಲಿ ನಿರಂತರವಾಗಿ ಲೋಪದೋಷಗಳು ಕಂಡು ಬರುತ್ತಿವೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಜನವ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಬಾರಿ ತಾಂತ್ರಿಕ ದೋಷಗಳು ಕಂಡು ಬಂದಿವೆ. ಕೆಲವೇ ತಿಂಗಳುಗಳಲ್ಲಿ 20ಕ್ಕೂ ಅಧಿಕ ಸಲ ಸೇವೆಯಲ್ಲಿ ವ್ಯತ್ಯಯವಾಗಿದ್ದು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒಂದಷ್ಟು ಅಂಶಗಳನ್ನು ಉಲ್ಲೇಖಿಸಿ ಮೆಟ್ರೋ ಅಧಿಕಾರಿಗಳಿಗೆ ಸುಧಾರಣಾ ಕ್ರಮಗಳಿಗೆ ಒತ್ತಾಯಿಸಿದ್ದಾರೆ.
ಮೇಲಿಂದ ಮೇಲೆ ನಮ್ಮ ಮೆಟ್ರೋ ಸೇವೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ದೋಷಗಳು ಮತ್ತು ಸಂಚಾರ ವ್ಯತ್ಯಯಗಳು ಪ್ರಯಾಣಿಕರಲ್ಲಿ ತೀವ್ರ ಬೇಸರ ಮೂಡಿಸಿದೆ. ಕಬ್ಬನ್ ಉದ್ಯಾನದಲ್ಲಿ ಎರಡು ದಿನಗಳ ಹಿಂದಷ್ಟೇ ವಿದ್ಯುತ್ ಕೇಬಲ್ ಸ್ಪೋಟಗೊಂಡು, ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಪ್ರಯಾಣಿಕರು ಲಾರಿ ಹಿಡಿದು ತೆರಳಿದ್ದರು. ಅದರ ಬೆನ್ನಲ್ಲೆ ನೆನ್ನೆ ಗುರುವಾರ ಸಂಜೆ ಮತ್ತೆ ಇದೇ ನೇರಳೆ ಮಾರ್ಗದ ಕಬ್ಬನ್ ಉದ್ಯಾನ್ ನಿಲ್ದಾಣದಲ್ಲಿ ರೈಲಿನಲ್ಲಿ ದೋಷ ಕಂಡು ಬಂದಿದೆ. ನಾನು ಇದೇ ಮಾರ್ಗದಲ್ಲಿ ಸಂಚಾರ ಮಾಡಿದ ಕೆಲವು ನಿಮಿಷಗಳಲ್ಲಿ ಈ ಸೇವಾ ಸಮಸ್ಯೆ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.

20ಕ್ಕೂ ಹೆಚ್ಚು ಸಲ ತಾಂತ್ರಿಕ ದೋಷಗಳು
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 2024ರ ಜನವರಿಯಿಂದ 2026 ಜೂನ್ 25ರವರೆಗೆ ನಮ್ಮ ಮೆಟ್ರೋ ಜಾಲದಲ್ಲಿಒಟ್ಟು ಸುಮಾರು 20ಕ್ಕೂ ಹೆಚ್ಚು ಸಲ ತಾಂತ್ರಿಕ ದೋಷಗಳು ವರದಿಯಾಗಿವೆ. ಅದರಲ್ಲೂ ನೇರಳೆ (ಪರ್ಪಲ್) ಮೆಟ್ರೋ ಮಾರ್ಗದಲ್ಲೇ ಅತಿ ಹೆಚ್ಚು ಅಡಚಣೆಗಳು ಉಂಟಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ವಿವರಿಸಿದ್ದಾರೆ.
ಮೊನ್ನೆ ಮಂಗಳವಾರ ಸಂಜೆ ಇದೇ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಹಳಿಯಲ್ಲಿ ವಿದ್ಯುತ್ ಸರಬರಾಜು ಆಗದೇ ಭೂಗತ ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಏಕಾಎಕಿ ನಿಂತಿತ್ತು. ಜನರು ಸಂಚಾರ ಮಾಡಲಾಗದೇ ಗಂಟೆಗಳ ಕಾಲ ಸಮಸ್ಯೆ ಉಂಟಾಗಿತ್ತು.ಭಾರಿ ಜನದಟ್ಟಣೆ ಉಂಟಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ರಾತ್ರಿಯಿಡೀ ಕೆಲಸ ಮಾಡಿದ ತಜ್ಞರು ತಾಂತ್ರಿಕ ಈ ಬುಧವಾರ ಬೆಳಗ್ಗೆಯಿಂದ ಎಂದಿನಂತೆ ನೇರಳೆ ಮಾರ್ಗದಲ್ಲಿ ಸಂಚಾರ ಸೇವೆ ಆರಂಭವಾಯಿತಾದರೂ ಗುರುವಾರ ಸಂಜೆ ಮತ್ತೊಂದು ರೈಲಿನಲ್ಲಿ ಮತ್ತೊಂದು ದೋಷ ವರದಿಯಾಗಿದೆ. ರೈಲು ಬಾಗಿಲು ಸ್ವಯಂ ಆಗಿ ಬಾಗಿಲು ಹಾಕಿಕೊಳ್ಳದ ಕಾರಣಕ್ಕೆ ಹಲವು ನಿಮಿಷಗಳ ಕಾಲ ಸೇವೆಯಲ್ಲಿ ಅಡಚರಣೆ ಉಂಟಾಗಿದೆ ಎಂದು ಅವರು ಸಾಲು ಸಾಲು ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ಮೆಟ್ರೋ ಸೇವೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.
ತಜ್ಞರ ಸಲಹೆ, ಸುರಕ್ಷತಾ ಮಾನದಂಡ ಕ್ರಮಗಳಿಗೆ ಆಗ್ರಹ
ಈ ರೀತಿಯ ಸೇವಾ ವ್ಯತ್ಯಯವನ್ನು ಸಹಜವೆಂಬಂತೆ ಪರಿಗಣಿಸಲಾಗದು. ಇದು ಬಿಎಂಆರ್‌ಸಿಎಲ್ ಕಾರ್ಯಾಚರಣೆಯ ಭದ್ರತೆ ಮತ್ತು ಗುಣಮಟ್ಟದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಿತ್ಯ ಸುಮಾರು ಹತ್ತು ಲಕ್ಷದಷ್ಟು ಜನ ಮೆಟ್ರೋದಲ್ಲಿ ಸಂಚರಿಸುತ್ತಾರೆ. ಪ್ರಯಾಣದ ಸುರಕ್ಷತೆಯು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲಾಗದ ವಿಷಯವಾಗಿದ್ದೆ. ಆದ್ದರಿಂದ ಮೆಟ್ರೋ ನಿಗಮವು ಸೇವೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು. ಅಗತ್ಯ ಸೂಕ್ತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೆಟ್ರೋ ಸುರಕ್ಷತೆ ಮತ್ತು ಎಂಜಿನಿಯರಿಂಗ್ ಅಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಂಸದರು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಲಿಖಿತ ಶಿಫಾರಸುಗಳನ್ನು ರವಾನಿಸಿದ್ದಾರೆ. ಇದೇ ವೇಳೆ ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತರಿಗೂ ಅವರು ಪತ್ರ ಬರೆದಿದ್ದು, ಈ ಸರಣಿ ವೈಫಲ್ಯಗಳನ್ನು ನಿಯಂತ್ರಿಸಲು ಮತ್ತು ನಿಗಮವು ಅಂತರರಾಷ್ಟ್ರೀಯ ಮಟ್ಟದ ಉನ್ನತ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಕೋರಿದ್ದಾರೆ.
I was travelling on the Purple Line this evening and missed today’s disruption by just a few minutes.
— Tejasvi Surya (@Tejasvi_Surya) June 25, 2026
I spoke to several fellow commuters and shared with them that I have written to the Commissioner of Railway Safety seeking an audit into the repeated disruptions.
This is… pic.twitter.com/UmZMry8qte
ಐಟಿ ಕೇಂದ್ರ ಬೆಂಗಳೂರಿನಲ್ಲಿ ಮೆಟ್ರೋ ಸುಗಮ ಸಾರಿಗೆ ಒದಗಿಸುತ್ತದೆ. ನಮ್ಮ ಮೆಟ್ರೋ ಪ್ರಮುಖ ಆಧಾರವಾಗಿದೆ. ಮೆಟ್ರೋ ಜಾಲದಲ್ಲಿ ತಾಂತ್ರಿಕ ದೋಷಗಳನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಯೋಜನೆಯನ್ನು ರೂಪಿಸಬೇಕು. ಪ್ರಯಾಣಿಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.













Click it and Unblock the Notifications