• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋಮಿಯೋಪತಿ ಸಾಧಕ ಡಾ| ಎಂ.ಬಿ.ರಹಾಳಕರ್

By Staff
|

Dr. Madhav Balkrishna Rahalkar, Homeopathy expertಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಹೋಮಿಯೋಪತಿ ತಜ್ಞ ರಹಾಳಕರ್ ಅವರೇ ಜ್ವಲಂತ ಸಾಕ್ಷಿ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ದೀರ್ಘ ಪರಿಶ್ರಮವಿಲ್ಲದೆ ಸಿದ್ಧಿಯು ದೊರೆಯುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ರಹಾಳಕರ್ ಅವರ ಜೀವನಗಾಥೆಯೇ ಸಾಧಿಸಬೇಕೆನ್ನುವವರಿಗೆ ಒಂದು ಪ್ರೇರಕ ಶಕ್ತಿ. 'ಜೀವಿ' ಕುಲಕರ್ಣಿ ಅವರಿಂದ ರಹಾಳಕರ್ ಅವರ ಪರಿಚಯ.

ಕೇವಲ ಎಸ್ಎಸ್‌ಸಿ (ಆಗಿನ ಮೆಟ್ರಿಕ್) ಪಾಸಾದ, ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸಮಾಡಲು ಮುಂಬೈಗೆ ಆಗಮಿಸಿದ ವ್ಯಕ್ತಿ ಹೋಮಿಯೋಪತಿಯಲ್ಲಿ ನಿಷ್ಣಾತನಾದ ಕಥೆ ರೋಮಾಂಚನ ಹುಟ್ಟಿಸುವಂಥದ್ದು. ಹೆಚ್ಚು ಕಲಿಯದ, ವಿಜ್ಞಾನದ ವಿದ್ಯಾರ್ಥಿಯಾಗುವ ಅವಕಾಶ ಪಡೆಯದ, ಜ್ಯೋತಿಷ್ಯದಲ್ಲಿ ಮತ್ತು ಅಧ್ಯಾತ್ಮದಲ್ಲಿ ಆಸಕ್ತಿ ತಳೆದಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಹೋಮಿಯೋಪತಿಯಲ್ಲಿ ಸಾಧಿಸಿರುವ ಪ್ರಗತಿ ನೋಡಿದರೆ ಆಶ್ಚರ್ಯವಾಗುತ್ತದೆ. ತಮ್ಮ ಇಳಿವಯಸ್ಸಿನಲ್ಲಿಯೂ ವೃತ್ತಿ ಮತ್ತು ವೃತ್ತಿಪರತೆಯನ್ನು ಬಿಡಲೊಪ್ಪದ ಡಾ. ಮಾಧವ ಬಾಳಕೃಷ್ಣ ರಹಾಳಕರ್ ಅವರೇ ಈ ಸಾಧಕ.

ಎಂ.ಡಿ.ಪದವೀಧರರಾದ ಎಲೋಪಥಿತಜ್ಞ ಡಾಕ್ಟರರನೇಕರು ಹೋಮಿಯೋಪಥಿಗೆ ಮಾರುಹೋಗಿದ್ದಾರೆ, ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಹೋಮಿಯೋಪಥಿಯ ಜನಕ ಡಾ| ಸ್ಯಾಮ್ಯುವೆಲ್ ಹನ್ನಿಮನ್ ಅವರು ಸ್ವತಃ ಉತ್ತಮ ಎಲೋಪಥಿ ಡಿಗ್ರಿ ಪಡೆದ ಡಾಕ್ಟರರಾಗಿದ್ದರು. ಪಾರಂಪರಿಕ ಔಷಧಿ ಪದ್ಧತಿಯ ಕೊರತೆಯನ್ನು ಕಂಡು ಹೊಸ ಪದ್ಧತಿಗೆ ಆವಿಷ್ಕಾರ ನೀಡಿದರು.

1925ರ ಮೇ 10ರಂದು ಜನಿಸಿದ ಡಾ| ಮಾಧವ ಬಾಳಕೃಷ್ಣ ರಹಾಳಕರರು ಒಬ್ಬ ಉಪಾಸಕರು. ಇವರ ಪೂರ್ವಜರು ನಾಸಿಕದಲ್ಲಿದ್ದರು. ಇವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರು. ಪಾಲ್‌ಘರ್‌ದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸೋದರ ಮಾವ ಆಯುರ್ವೇದ ಪಂಡಿತರಾಗಿದ್ದರು. ಅವರು ಮೂಲವ್ಯಾಧಿಗೆ ಬೆಣ್ಣೆಯಲ್ಲಿ ಮಿಶ್ರಮಾಡಿ ಒಂದು ವನಸ್ಪತಿಯನ್ನು ಗುಪ್ತ ಔಷಧಿ ಎಂದು ಕೊಡುತ್ತಿದ್ದರಂತೆ. ಅವರು ಇದಕ್ಕೆ ಹಣ ಸ್ವೀಕರಿಸುತ್ತಿರಲಿಲ್ಲ. ಅವರ ಸಹವಾಸದಲ್ಲಿ ಇವರಿಗೆ ಹಲವಾರು ಔಷಧಿ, ಗಿಡಮೂಲಿಕೆಗಳ ಪರಿಚಯ ಬಾಲ್ಯದಲ್ಲೇ ಆಗಿತ್ತು.

ಬಾಲ್ಯದಲ್ಲೇ ಸಾಧನೆ ಪ್ರಾರಂಭ : ಇವರಿಗಿನ್ನೂ ಎಂಟು ವರ್ಷ. ಅದೇ ಮುಂಜಿಯಾಗಿತ್ತು. ಚೆನ್ನಾಗಿ ಮಂತ್ರ ಹೇಳುತ್ತಿದ್ದರು. ಆಗ ನಾಸಿಕದಲ್ಲಿದ್ದರು. ಅಲ್ಲಿ ದೇಶಪಾಂಡೆ ಎಂಬ 90 ವರ್ಷದ ವೃದ್ಧರು ಇವರಿಗೆ ಭೇಟಿಯಾಗಿದ್ದರಂತೆ. ಗ್ರಹಣದ ದಿನ ಗೋದಾವರಿ ನದಿಯಲ್ಲಿ ಸ್ನಾನಕ್ಕೆ ಕರೆದು ಇವರಿಗೆ ಎರಡು ಮಂತ್ರಗಳ ಉಪದೇಶ ಮಾಡಿದರಂತೆ. ಒಂದು, ಚೇಳು ಕಡಿದಾಗ ವಿಷ ಇಳಿಸುವ ಮಂತ್ರ. ಇನ್ನೊಂದು, ಹಲ್ಲುಶೂಲೆಯನ್ನು ನಿವಾರಿಸುವ ಮಂತ್ರ. ಇವರ ಚಿಕ್ಕಮ್ಮನಿಗೆ ವಿಪರೀತ ಹಲ್ಲು ಶೂಲೆ ಆದಾಗ ಬಾಲಕನಾಗಿದ್ದ ಮಾಧವ ಮೊದಲ ಸಲ ಮಂತ್ರದ ಪ್ರಯೋಗ ಮಾಡಿಬಿಟ್ಟ. ಅವಳಿಗೆ ಗುಣವಾಯಿತು. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಬಾಲ್ಯದಲ್ಲೇ ಮಂತ್ರಸಿದ್ಧನೆಂಬ ಖ್ಯಾತಿ. ಇವರು ಶಾಲೆಯಲ್ಲಿ ಅಭ್ಯಾಸಕ್ಕಿಂತ ಹೆಚ್ಚು ಆಟದಲ್ಲೇ ಆಸಕ್ತರಾಗಿದ್ದರಂತೆ. ಕಬಡ್ಡಿಯಲ್ಲಿ ರಾಜ್ಯಮಟ್ಟದ ಆಟಗಾರರಾಗಿದ್ದರು. ಕುಸ್ತಿಪಟು ಆಗಿದ್ದರು. ಇಂದ್ರಜಾಲದಲ್ಲೂ ಪಳಗಿದ್ದರು, ಸ್ಟೇಜ್ ಶೋ ಮಾಡುತ್ತಿದ್ದರು. ಎಸ್ಎಸ್ಸಿವರೆಗೆ ಮಾತ್ರ ಶಿಕ್ಷಣ. ಒಂದು ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿತು ಎಂದು ಮಂಬೈಗೆ ಬಂದರು.

ಜೋತಿಷ್ಯದಲ್ಲೂ ಇವರಿಗೆ ಗತಿ ಇತ್ತು. ಅದರಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರು. ಅದರ ಬಗ್ಗೆ ಒಂದು ಕತೆ ಇದೆ. ಇವರಿಗೆ 30 ವರ್ಷವಾದಾಗ (1955) ಇವರು ರಾತ್ರಿ ಹತ್ತು ಗಂಟೆಗೆ ಧ್ಯಾನದಲ್ಲಿ ಕುಳಿತಾಗ ಒಬ್ಬ ಸನ್ಯಾಸಿಯ ದರ್ಶನವಾಯಿತು. ಬಹಳೇ ಪ್ರಭಾವಿತರಾದರು. ಅವರ ಕಾಲು ಮುಟ್ಟಲು ಬಾಗಿದರು, ಮಂಚದಿಂದ ಕೆಳಗೆ ಬಿದ್ದರು. ಆ ಸನ್ಯಾಸಿಯನ್ನು ನಿಜ ಜೀವನದಲ್ಲಿ ಹುಡುಕುತ್ತಿದ್ದರು. ಪುಣೆಯಲ್ಲಿ ಅವರ ಸೋದರ (ಅಬಚಿಯ ಮಗ) ದೇಶಮುಖ ಎಂಬವರಿದ್ದರು. ಅವರ ಮನೆಯಲ್ಲಿ ಜಗನ್ನಾಥಪುರಿಯ ಶಂಕರಾಚಾರ್ಯರು ಬರಲಿದ್ದಾರೆ ಎಂದು ತಿಳಿದು ಇವರು ಪುಣೆಗೆ ಹೋದರು. ಅಲ್ಲಿ ಶಂಕರಾಚಾರ್ಯರ ಪಾದಪೂಜೆ ಇತ್ತು. ಸ್ವಾಮಿಗಳು ಎಲ್ಲರ ಮಧ್ಯದಲ್ಲಿ ನಿಂತ ಇವರನ್ನೇ ಆರಿಸಿ ಬಳಿಗೆ ಕರೆದರು, ಇವರನ್ನು ಉದ್ದೇಶಿಸಿ ಮಾತನಾಡಿದರು, "ಬಂದೆಯಾ? ಸರಿಯಾಯ್ತು." ಪರಿಚಯದ ವ್ಯಕ್ತಿಯೊಡನೆ ಮಾತಾಡುವ ಧಾಟಿಯಲ್ಲಿ ಮಾತಾಡುತ್ತ, "ಈ ಸಲ ಚಾತುರ್ಮಾಸ್ಯದಲ್ಲಿ ನಾವು ಮುಂಬೈಗೆ ಬರಲಿದ್ದೇವೆ. ಅಲ್ಲಿ ಬಂದು ಭೇಟಿಯಾಗು. ಮಂತ್ರೋಪದೇಶ ಮಾಡೆತ್ತೇವೆ" ಅಂದರು. ಕನಸಿನಲ್ಲಿ ದರ್ಶನ ಕೊಟ್ಟ ಸನ್ಯಾಸಿ ಇವರೇ ಎಂದು ಇವರಿಗೆ ಖಚಿತವಾಯ್ತಂತೆ. ಸ್ವಾಮಿಗಳನ್ನು ಇವರು ನಂತರ ಕಂಡರು. ಶ್ರಾವಣ ಮಾಸದಲ್ಲಿ 'ನವವರ್ಣಮಂತ್ರ' ದೀಕ್ಷೆ ಕೊಟ್ಟರಂತೆ. ಅಂದಿನಿಂದ ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಗತಿ ಪ್ರಾರಂಭವಾಯಿತು. ನಂತರ ಜಾತಕ ಬರೆಯುವುದು, ಫಲಜ್ಯೋತಿಷ್ಯ ಹೇಳುವುದೇ ಇವರ ವೃತ್ತಿಯಾಯಿತು.

ಟರ್ನಿಂಗ್ ಪಾಯಿಂಟ್ : ಐದು ವರ್ಷದ ಮೇಲೆ ಇವರ ಜೀವನದಲ್ಲಿ ಮತ್ತೊಂದು ತಿರುವು ಬಂತು. ಮುಂಬೈಯ ಉಪನಗರ ವಿಲೆಪಾರ್ಲೆಯಲ್ಲಿ ಒಂದು ಹೋಮಿಯೋಪಥಿ ಕಾಲೇಜು ಇದೆ. ಅಲ್ಲಿ ಉಪಪ್ರಾಂಶುಪಾಲರಾಗಿದ್ದ ಡಾ| ಗಾಯಕವಾಡರ ಪರಿಚಯ ಇವರಿಗಾಯ್ತು. ಡಾ| ಗಾಯಕವಾಡರು ಬೆಳಗಾವಿಯವರು. ಅವರು ಒಮ್ಮೆ ತಮ್ಮ ಜಾತಕ ಇವರಿಗೆ ತೋರಿಸಿದರು. ಜಾತಕ ನೋಡಿ, "ನೀವು ಒಳ್ಳೆಯ ಶಿಕ್ಷಕರು, ಆದರೆ ರೋಗಿಯನ್ನು ಗುಣಪಡಿಸುವಲ್ಲಿ ನೀವು ಅಯಶಸ್ವಿಯಾಗಿದ್ದೀರಿ." ಎಂದಾಗ ಅವರಿಗೆ ಆಶ್ಚರ್ಯವಾಗಿತ್ತು. ತಾವು ಆ ಕ್ಷೇತ್ರದಲ್ಲಿ ಯಶಸ್ಸು ಪಡೆಯುವದು ಹೇಗೆಂದು ವಿಚಾರಿಸಿದಾಗ ಇವರು ಹೇಳಿದರು. "ನೀವು ರೋಗಿಯ ಜಾತಕ ತೆಗೆದುಕೊಂಡು ಬನ್ನಿರಿ. ನಾನು ರೋಗಿಯ ರೋಗಕ್ಕೆ ಮೂಲ ಕಾರಣ ಏನೆಂದು ತಿಳಿಸುತ್ತೇನೆ. ನೀವು ಆ ಕಾರಣಕ್ಕೆ ಔಷಧಿ ಕೊಡಿರಿ. ಅವನು ರೋಗಮುಕ್ತನಾಗುತ್ತಾನೆ" ಎಂದರು. ಆ ಜಾತಕವನ್ನು ನೋಡಿ ರೋಗಿಯ ರೋಗಕ್ಕೆ ಮೂಲ ಕಾರಣವೇನೆಂದು ಕಂಡುಹಿಡಿದು ಹೇಳಿದರು. ಮುಂದೆ ರಹಾಳಕರರು ತಾವೇ ಹೋಮಿಯೋಪತಿ ಅಭ್ಯಾಸ ಮಾಡಲು ಮತ್ತು ರೋಗಿಗಳಿಗೆ ಔಷಧಿ ಕೊಡಲು ನಿಶ್ಚಯಿಸಿದರು. ಮದ್ರಾಸಿನ ಒಂದು ಸಂಸ್ಥೆ ಇವರಿಗೆ ತರಬೇತಿ ನೀಡಿತು. ರಿಜಿಸ್ಟ್ರೇಶನ್ ಬೆಂಗಳೂರಿನಲ್ಲಾಯಿತು. ನಂತರ ಇವರು ಹೋಮಿಯೋಪತಿ ಔಷಧಿ ಕೊಡಲು ಪ್ರಾರಂಬಿಸಿದರು ಪ್ರಾರಂಭಿಸಿದರು.

ನೂರಾರು ಔಷಧಿಗಳಲ್ಲಿ ಮೂರುನಾಲ್ಕು ಆರಿಸಿ ಬೆರೆಸಿ ಅಸಂಖ್ಯ ಕಾಂಬಿನೇಶನ್ ಔಷಧಿ ಸಿದ್ಧಪಡಿಸುತ್ತಾರೆ. ಯಾವ ಔಷಧಿಗಳನ್ನು ಬೆರೆಸಿದರು ಎಂಬುದು ಅವರ ರಹಸ್ಯ. ಇನ್ನೊಬ್ಬರಿಗೆ ಅದನ್ನು ಹೇಳುವುದಿಲ್ಲ. ಬಾಟಲಿಯ ಮೇಲೆ ಕೆಲವು ಅಂಕಿಗಳನ್ನು ಬರೆಯುತ್ತಾರೆ. ಆ ಅಂಕಿಗಳ ರಹಸ್ಯ ಅವರಿಗೆ ಮಾತ್ರ ಗೊತ್ತು. "ಡಾಕ್ಟರರೇ ನೀವು ಶಿಷ್ಯರನ್ನು ತಯಾರಿಸಿರಿ. ಇಲ್ಲದಿದ್ದರೆ ನಿಮ್ಮ ಸಂಶೋಧನೆ ನಿಮ್ಮ ನಂತರ ಮುಕ್ತಾಯಗೊಳ್ಳಬಾರದು." ಎಂದಾಗ ಅವರು, "ನೀವು ಹೇಳುವುದು ಸರಿ." ಎಂದರು. ಇವರ ಮಗ ನನ್ನ ವಿದ್ಯಾರ್ಥಿಯಾಗಿದ್ದ. ಬಿ.ಎ.ಮಾಡಿ ಏನು ಪ್ರಯೋಜನ ಎಂದು ತಮ್ಮ ಮಾರ್ಗದಲ್ಲೇ ಅವನಿಗೆ ಪ್ರಶಿಕ್ಷಣ ನೀಡಲು ನಿಶ್ಚಯಿಸಿದರು. ಅವನನ್ನು ಔರಂಗಾಬಾದಿಗೆ ಕಳಿಸಿ ಅಲ್ಲಿಯ ಹೋಮಿಯೋಪತಿ ಕಾಲೇಜಿನಿಂದ ಶಿಕ್ಷಣ ಕೊಡಿಸಿದರು. ಆ ಕಾಲದಲ್ಲಿ ಎಸ್ಎಸ್ಸಿ ಪಾಸಾಗಿದ್ದರೆ ಸಾಕು ಹೋಮಿಯೋಪತಿ ಕಾಲೇಜಿನಲ್ಲಿ ಪ್ರವೇಶ ದೊರೆಯುತ್ತಿತ್ತು. ಈಗ ತಂದೆಯಂತೆ ಮಗ ಕೂಡ ಪ್ರಸಿದ್ಧ ಡಾಕ್ಟರ್ ಆಗಿದ್ದಾನೆ. ಸೊಸೆ ಕೂಡ ಹೊಮಿಯೋಪತಿ ಡಿಗ್ರಿ ಪಡೆದಿದ್ದಾಳೆ.

ವೃದ್ಧಾಪ್ಯದಲ್ಲೂ ವೃತ್ತಿಪ್ರೇಮ : ರಹಾಳಕರರಿಗೆ ಈಗ 82ರ ಪ್ರಾಯ. ಮಗ ಸೊಸೆ ಅವರಿಗೆ ನಿವೃತ್ತರಾಗಲು ಹೇಳಿದರೆ ಅವರು ಕಿವಿಗೇ ಹಾಕಿಕೊಳ್ಳುತ್ತಿಲ್ಲ. ಮುಂಜಾನೆ 5.30ಕ್ಕೆ ಬಂದು 8.30ರವರೆಗೆ ತಮ್ಮ ದವಾಖಾನೆಯಲ್ಲಿ ಕುಳಿತುಕೊಳ್ಳುತ್ತಾರೆ. ಕಲ್ಯಾಣ-ಕರ್ಜತ್, ವಿರಾರ-ಡಾಹಣೂದಿಂದ ಕೂಡ ಜನ ಬರುತ್ತಾರೆ. ಹಳೆಯ ರೋಗಿಗಳಿಗೆ ಹಿರಿಯರಲ್ಲೇ ಹೆಚ್ಚಿನ ವಿಶ್ವಾಸ. ಮನೆಯಲ್ಲಿ ಜಪತಪ ಮುಗಿಸಿ ಜೋತ್ಯಿಷ್ಯ ಸಲಹೆ ನೀಡುತ್ತಾರೆ. ನನಗೆ ಇವರ ಶಿಷ್ಯತ್ವವಹಿಸುವ ಆಸೆಯಿತ್ತು. ಹೋಮಿಯೋಪತಿಯಲ್ಲಿ ನೆನಪಿಡಬೇಕಾದ ರೋಗ ಹಾಗೂ ಔಷಧಿಗಳ ಪಟ್ಟಿ ಕಂಡೆ ಗಾಬರಿಗೊಂಡೆ. ಇಳಿವಯಸ್ಸಿನಲ್ಲಿ ಇಷ್ಟೆಲ್ಲ ನೆನಪಿಡುವುದು ಕಷ್ಟ. ಆದರೂ ನಾನು ಅವರ ಶಿಷ್ಯತ್ವವಹಿಸಿದೆ. 1999ರಲ್ಲಿ ಆಷಾಢಶುದ್ಧ ಪೂರ್ಣಿಮೆಯ ಗ್ರಹಣದ ದಿನ ನನಗೆ ಅವರು ನಾಲ್ಕು ಮಂತ್ರ(ಸುಖಪ್ರವಾಸ, ಶಾರೀರಿಕ ಪೀಡಾ ಪರಿಹಾರ, ವಿದ್ಯಾರ್ಜನೆ-ವಾಕ್‌ಸಿದ್ಧಿ, ಧನಪ್ರಾಪ್ತಿ)ಗಳ ದೀಕ್ಷೆ ಕೊಟ್ಟರು. ನಾನು ನಿವೃತ್ತನಾದ ಮೇಲೆ ಮಂತ್ರ-ಥೆರಪಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದೆ.

ಡಾ.ಮಾಧವ ರಹಾಳಕರರಂತಹ ಇನ್ನೆಷ್ಟು ಪುರುಷರತ್ನಗಳು ನಮ್ಮ ಸುತ್ತಲೂ ಇದ್ದಾರೆ. ಅಂಥವರನ್ನು ಸಂದರ್ಶಿಸಲು ನಾನು ಸದಾ ಸಿದ್ಧ. ಅಂಥವರನ್ನು ಕಂಡಾಗ ನನಗೆ ಒಂದು ಉತ್ತಮ ಪುಸ್ತಕದ ನಿಧಿ ದೊರೆತಷ್ಟೇ ಆನಂದವಾಗುತ್ತದೆ.

ವಿ.ಸೂ. : ಯಾವುದೇ ಆರೋಗ್ಯ ಸಂಬಂಧಿ ಪ್ರಶ್ನೆಗಳಿದ್ದರೆ ಜೀವಿಯವರನ್ನು ಸಂಪರ್ಕಿಸಬಹುದು : jeevi65@gmail.com

ಡಾ. ರಹಾಳಕರ್ ಅವರನ್ನೂ ಜೀವಿ ಮುಖಾಂತರ ಸಂಪರ್ಕಿಸಬಹುದು.

ಪೂರಕ ಓದಿಗೆ

ಶಸ್ತ್ರಚಿಕಿತ್ಸೆ ಬೇಡವೆಂದರೆ ಹೋಮಿಯೋಪಥಿಗೆ ಶರಣಾಗಿ

ಪರ್ಯಾಯ ಚಿಕಿತ್ಸೆ ಮತ್ತು ಹೋಮಿಯೋಪತಿ(1)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more