ಇನ್ನೆಷ್ಟು ಅವಕಾಶ ಬೇಕು ಸ್ವಾಮಿ.. ಆರ್‌ಸಿಬಿಯ 11 ಕೋಟಿ ಆಟಗಾರ ಜಿತೇಶ್ ಶರ್ಮಾ ವಿರುದ್ಧ ಸಿಡಿದೆದ್ದ ಅಂಬಟಿ ರಾಯುಡು
RCB Jitesh Sharma: ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆದರೂ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮಾತ್ರ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇವರ ಫಾರ್ಮ್ ಬಗ್ಗೆ ಅಂಬಾಟಿ ರಾಯುಡು ಅಸಮಾಧಾನ ಹೊರಹಾಕಿದ್ದು, ಇದು ಸಖತ್ ವೈರಲ್ ಆಗುತ್ತಿದೆ.
ಈ ಸೀಸನ್‌ನಲ್ಲಿ ಆರ್‌ಸಿಬಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಜಿತೇಶ್ ಕಣಕ್ಕಿಳಿದಿದ್ದರೂ, 8 ಇನ್ನಿಂಗ್ಸ್‌ಗಳಿಂದ ಗಳಿಸಿರುವುದು ಕೇವಲ 64 ರನ್ ಮಾತ್ರ. ಗುರುವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಸತತ ಎರಡನೇ ಸೋಲು ಅನುಭವಿಸಿತು. ಇದರ ಬೆನ್ನಲ್ಲೇ ಜಿತೇಶ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಜಿತೇಶ್ ಶರ್ಮಾ ಬಗ್ಗೆ ರಾಯುಡು ಹೇಳಿದ್ದೇನು?
ಭಾರತ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಜಿತೇಶ್ ಶರ್ಮಾ ತಮ್ಮ ಬ್ಯಾಟಿಂಗ್‌ನಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಆರ್‌ಸಿಬಿ ಪ್ಲೇ-ಆಫ್ ಹಂತದತ್ತ ಸಾಗುತ್ತಿರುವ ಈ ಸಮಯದಲ್ಲಿ ಪ್ರಮುಖ ಆಟಗಾರನೊಬ್ಬನ ಈ ಕಳಪೆ ಫಾರ್ಮ್ ತಂಡದ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.
'ಕಮ್‌ಬ್ಯಾಕ್ ಮಾಡುವ ಪ್ರಯತ್ನ ಮಾಡಿತ್ತಿಲ್ಲ'
ವಿಶೇಷವಾಗಿ ಜಿತೇಶ್ ಶರ್ಮಾ ಅವರ ಶಾರ್ಟ್ ಬಾಲ್ ಎದುರಿಸಲು ಪರದಾಡುತ್ತಿದ್ದಾರೆ. ಈ ಬಗ್ಗೆ ಇಎಸ್ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ರಾಯುಡು, "ಸಿಕ್ಕ ಸಮಯದಲ್ಲಿ ಜಿತೇಶ್ ಶರ್ಮಾ ಕಮ್‌ಬ್ಯಾಕ್ ಮಾಡಲು ಉತ್ತಮ ಅವಕಾಶವಿತ್ತು. ಆದರೆ ಅವರು ಶಾರ್ಟ್ ಬಾಲ್‌ಗಳನ್ನು ಎದುರಿಸುವಲ್ಲಿ ಹೆಣಗಾಡುತ್ತಿದ್ದಾರೆ. ಈ ಬಿಡುವಿನ ಅವಧಿಯಲ್ಲಿ ಅವರು ಈ ತಾಂತ್ರಿಕ ದೋಷದ ಬಗ್ಗೆ ಕೆಲಸ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಿದಂತೆ ಕಾಣುತ್ತಿಲ್ಲ," ಎಂದು ತಿಳಿಸಿದ್ದಾರೆ.
"ಒಂದೇ ತಪ್ಪು ಪದೇ ಪದೇ ಮರುಕಳಿಸುತ್ತಿದೆ, ಇದು ಖಂಡಿತಾ ಒಳ್ಳೆಯ ಲಕ್ಷಣವಲ್ಲ. ಜಿತೇಶ್ ವಿಷಯದಲ್ಲಿ ನಾವು ಗಮಸಿರುವಂತೆ ದೌರ್ಬಲ್ಯವು ಇಷ್ಟೊಂದು ಗಂಭೀರವಾಗಿದ್ದಾಗ ಅದನ್ನು ಸರಿಪಡಿಸಿಕೊಳ್ಳುವುದು ಅಥವಾ ಸುಧಾರಿಸಿಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಟೂರ್ನಿಯ ಮಧ್ಯದಲ್ಲಿ ಅಭ್ಯಾಸ ನಡೆಸಲು ಹೆಚ್ಚಿನ ಸಮಯವಾಗಲಿ ಅಥವಾ ಅವಕಾಶವಾಗಲಿ ಸಿಗುವುದಿಲ್ಲ," ಎಂದು ಹೇಳಿದರು.
11 ಕೋಟಿ ಆಟಗಾರ ಜಿತೇಶ್ ಶರ್ಮಾ ಕಳಪೆ ಸಾಧನೆ
2025ರ ಐಪಿಎಲ್ ಹರಾಜಿನಲ್ಲಿ 11 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದ ಜಿತೇಶ್ ಶರ್ಮಾ ಕಳೆದ ಸೀಸನ್‌ನಲ್ಲಿ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಂದು ಕೇವಲ 33 ಎಸೆತಗಳಲ್ಲಿ ಅಜೇಯ 85 ರನ್ ಚಚ್ಚುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು.
ಆದರೆ 2026ರಲ್ಲಿ ಅದೇ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅದೇ ಎದುರಾಳಿ ತಂಡದ ವಿರುದ್ಧ ಜಿತೇಶ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಜಿತೇಶ್ ಶರ್ಮಾ ಅವರ ಈ ಕಳಪೆ ಪ್ರದರ್ಶನದಿಂದಾಗಿ ಆರ್‌ಸಿಬಿ ತಂಡವು ಲಕ್ನೋ ವಿರುದ್ಧ 9 ರನ್‌ಗಳ ಅಂತರದಿಂದ ಸೋಲನುಭವಿಸಬೇಕಾಯಿತು.
ಈ ಸೀಸನ್‌ನಲ್ಲಿ ಜಿತೇಶ್ ಗಳಿಸಿರುವ 64 ರನ್‌ಗಳು ಕೇವಲ 108.47 ರ ಸ್ಟ್ರೈಕ್-ರೇಟ್‌ನಲ್ಲಿ ಬಂದಿವೆ. ಕಳೆದ ವರ್ಷ 176.35 ರ ವೇಗದಲ್ಲಿ ಬ್ಯಾಟ್ ಬೀಸುತ್ತಿದ್ದ ಜಿತೇಶ್ ಅವರ ಫಾರ್ಮ್‌ನಲ್ಲಿ ಈ ಬಾರಿ ಭಾರಿ ಕುಸಿತ ಕಂಡುಬಂದಿದೆ. ಐಪಿಎಲ್ 2026ರಲ್ಲಿ ಅವರ ಇದುವರೆಗಿನ ಗರಿಷ್ಠ ಸ್ಕೋರ್ ಎಂದರೆ ಅದು ಕೇವಲ 23 ರನ್. ಪ್ಲೇ ಆಫ್ ರೇಸ್ ದಿನದಿಂದ ದಿನಕ್ಕೆ ಕಾವೇರುತ್ತಿರುವ ಈ ಸಮಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ನ ಈ ಕಳಪೆ ಪ್ರದರ್ಶನವು ತಂಡದಲ್ಲಿ ಅವರ ಸ್ಥಾನದ ಕುರಿತು ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದೆ. ಒಟ್ಟಿನಲ್ಲಿ ಜಿತೇಶ್ ಶರ್ಮಾ ಅವರನ್ನು ಹೊರಗಡೆ ಕೂರಿಸಿ ಬೇರೆಯವರಿಗೆ ಅವಕಾಶ ನೀಡಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆಯೇ ಅಂಬಟಿ ರಾಯುರು ಅವರು ಫಾರ್ಮ್‌ಗೆ ಮರಳಿದಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications