• search

ಅಲೆಅಲೆಯಾಗಿ ತೇಲಿಬಂದ ಪ್ರೇತಾತ್ಮ ಅಳುವ ದನಿ!

By ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಸಿಂಗಪುರದ ಎಲ್ಲ ಮುಖ್ಯ ಬಡಾವಣೆಗಳ ಹೆಸರಿನ ಹಿಂದೆ ಎನೋ ಒಂದು ಕಥೆಯಿದೆ. ನಾನು ಸಿಂಗಪುರಕ್ಕೆ ಬಂದೆ ಮೇಲೆ ಮೊಟ್ಟ ಮೊದಲು ಮನೆ ಮಾಡಿದ್ದು ಆಂಗ್ ಮೋ ಕಿಯೋನಲ್ಲಿ. ಅಲ್ಲಿ ನಾನು, ನನ್ನ ಮಡದಿ ಮತ್ತು ಪುಟ್ಟ ಮಗಳು ಬಂದು ನೆಲೆಸಿದ ಮೇಲೆ ನಮ್ಮ ಜೀವನದಲ್ಲಿಯ ತುಂಬಾ ಆನಂದದ ಮತ್ತು ನೆಮ್ಮದಿಯ ಕೆಲವು ದಿನಗಳನ್ನು ಕಂಡೆವು. ಆದುದರಿಂದ ನನಗೆ ಆಂಗ್ ಮೋ ಕಿಯೋದ ಮೇಲೆ ವಿಶೇಷ ಅಭಿಮಾನ. ಸದಾ ಹಸಿರಿನಿಂದ ತುಂಬಿದ ಆಂಗ್ ಮೋ ಕಿಯೋದ ಸುತ್ತ ಮುತ್ತಲ ಪ್ರಾಂತ್ಯದಲ್ಲಿ ಅಪ್ಪರ್ ಸೆಲೆಟಾರ್ ಸರೋವರ, ಲೋವರ್ ಸೆಲೆಟಾರ್ ಸರೋವರಗಳಂತಹ ಅನೇಕ ಚಿಕ್ಕ ಪುಟ್ಟ ಸರೋವರಗಳಿವೆ. ಈ ಸರೋವರಗಳ ಸುತ್ತಲೂ ನಿತ್ಯಹಸಿರಿನ ಮತ್ತು ಪುರಾತನ ಅರಣ್ಯಪ್ರಾಂತ್ಯಗಳಿವೆ. ಆಂಗ್ ಮೋ ಕಿಯೋ ಬಡಾವಣೆಯಲ್ಲಿ ಕೂಡ ಅನೇಕ ಉದ್ಯಾನಗಳಿವೆ ಅಲ್ಲದೇ ಎಲ್ಲ ತರಹ ಸೌಲಭ್ಯಗಳನ್ನೊಳಗೊಂಡಿದೆ ಮತ್ತು ಸಿಂಗಪೂರಿನ ಮುಖ್ಯ ವಾಣಿಜ್ಯ ಕೇಂದ್ರವಾದ ದಕ್ಷಿಣ ಪ್ರಾಂತ್ಯಕ್ಕೆ ಹತ್ತಿರವಾಗಿದೆ.

  ನನ್ನ ಪ್ರಿಯ ಆಂಗ್ ಮೋ ಕಿಯೋದ ಇತಿಹಾಸದ ಬಗ್ಗೆ ನನಗೆ ಸಾಧ್ಯವಾದಷ್ಟು ಅಭ್ಯಾಸ ಮಾಡುವುದು ನನ್ನ ಒಂದು ಹವ್ಯಾಸವಾಗಿ ಬೆಳೆದಿದೆ. ಈ ಆಂಗ್ ಮೋ ಕಿಯೋಕ್ಕೆ ಆ ಹೆಸರು ಹೇಗೆ ಬಂದಿತು ಎಂಬ ಕುತೂಹಲ ನನ್ನಲ್ಲಿತ್ತು. ಮೊದಮೊದಲು ಅದು ಯಾರೋ ಒಬ್ಬ ಮೊದಲ ಚೀನೀ ವಲಸೆಗಾರನೋ ಅಥವಾ ಸಿಂಗಪುರದ ಪ್ರಸಿದ್ಧ ಚೀನಿ ಮೂಲದ ಯಾರೋ ವ್ಯಕ್ತಿಯಾಗಿರಬೇಕು ಎಂದು ಕೊಂಡಿದ್ದೆ. ಕ್ರಮೇಣ ಸಿಂಗಪುರದ ಸಂಸ್ಕೃತಿಯಲ್ಲಿ ಕಲೆತು ಇಲ್ಲಿಯ ಅನೇಕ ಪಾರಂಪರಿಕ ಮತ್ತು ಆಡು ಭಾಷೆಗಳನ್ನು ಅರಿಯತೊಡಗಿದ ಮೇಲೆ, ಸಿಂಗಪುರದ ಒಂದು ಮುಖ್ಯ ಚೀನೀ ಉಪ ಭಾಷೆಯಾದ ಹೊಕ್ಕೇನ್ನಲ್ಲಿ ಆಂಗ್ ಮೋ ಎಂದರೆ ಕೆಂಚು ಕೂದಲಿನವರು ಎಂದು ತಿಳಿಯಿತು. ಇಲ್ಲಿಯ ಜನರು ಯುರೋಪಿಯನ್ ಜನರಿಗೆ ಇಟ್ಟ ಅನಾದರದ ಮಾತು ಈ ಆಂಗ್ ಮೋ ಎಂದು ತಿಳಿಯಿತು. ಅಲ್ಲದೇ ಕಿಯೋ ಎಂದರೆ ಸೇತುವೆ. ಆಂಗ್ ಮೋ ಕಿಯೋ ಅಂದರೆ ಕೆಂಚು ಕೂದಲಿನವರ ಸೇತುವೆ. ಇದರಲ್ಲಿ ಮತ್ತೆ ಕೆಲವು ಪ್ರಶ್ನೆಗಳು ಉಳಿದವು. ಮುಖ್ಯವಾಗಿ ಇಂತಹ ಅನಾದರದ ಮಾತನ್ನು ಇಲ್ಲಿಯ ಪ್ರಾಂತ್ಯದ ಹೆಸರನ್ನಾಗಿ ಹೇಗೆ ಬಳಸಿದ್ದಾರೆ ಎಂಬ ಒಂದು ಸವಾಲು. ಅಲ್ಲದೇ ಯಾವ ಸೇತುವೆಯನ್ನು ಕುರಿತು ಈ ಹೆಸರಿದೆ? ಆ ಸೇತುವೆ ಎಲ್ಲಿದೆ? ಏತಕ್ಕೆ ಈ ಹೆಸರು ಬಂದಿತು? ಎಂಬ ಇತರ ಪ್ರಶ್ನೆಗಳು.

  I cannot believe this story, Vasant Kulkarni

  ಕೆಲವು ಸಿಂಗಪುರದ ಇತಿಹಾಸದ ಪುಸ್ತಕಗಳನ್ನು ಗ್ರಂಥಾಲಯದಿಂದ ತಂದು ನೋಡಿದೆ. ಸಿಂಗಪುರದ ಬಗೆಗಿನ ಕೆಲವು ಅಂತರ್ಜಾಲ ತಾಣಗಳನ್ನು ಕೂಡ ಹುಡುಕಿ ಓದಿದೆ. ಅದರಲ್ಲಿ ತಿಳಿದು ಬಂದಿದ್ದೆಂದರೆ ಜಾನ್ ಟರ್ನ್‌ಬುಲ್ ಥಾಮ್ಸನ್ ಎಂಬ ಬ್ರಿಟಿಷ್ ಇಂಜಿನಿಯರ್ ಸಿಂಗಪುರದಲ್ಲಿ ಬ್ರಿಟಿಷ್ ಸೇನೆಯ ಅನುಕೂಲಕ್ಕಾಗಿ ಅನೇಕ ಸೇತುವೆಗಳನ್ನು ನಿರ್ಮಿಸಿದ. ಅವುಗಳಲ್ಲಿ ಒಂದು ಸೇತುವೆ ಆಂಗ್ ಮೋ ಕಿಯೋ ಹತ್ತಿರ ನಿರ್ಮಾಣವಾಯಿತು. ಥಾಮ್ಸನ್ ಬಿಳಿಯ ಅಧಿಕಾರಿ ಮತ್ತು ಆತನ ಕೂದಲು ಕೆಂಚು ಕೂದಲು. ಆದುದರಿಂದ ಕೆಂಚು ತಲೆಯ ಇಂಜಿನಿಯರ್ ನಿರ್ಮಿಸಿದ ಸೇತುವೆ ಆದ್ದರಿಂದ ಆ ಸೇತುವೆಗೆ ಆಂಗ್ ಮೋ ಕಿಯೋ ಎಂಬ ಹೆಸರು ಎಂಬ ವಿವರಣೆ ದೊರಕಿತು. ಇದು ಅತ್ಯಂತ ಸರಿ ಎನಿಸಿದ ವಿವರಣೆ ಎನಿಸಿತು. ಆಂಗ್ ಮೋ ಎಂಬುದು ಈಗಿನ ದಿನಗಳಲ್ಲಿ ಅನಾದರದ ಮಾತಾಗಿರಬಹುದು. ಮುಂಚಿನ ದಿನಗಳಲ್ಲಿ ಭಾರತೀಯ, ಮಲಯ, ಚೀನೀ ಮತ್ತು ಯುರೋಪಿಯನ್ನರಂತಹ ಅನೇಕ ವಿಧದ ಜನರನ್ನು ಹೊಂದಿದ್ದ ಸಿಂಗಪುರದಲ್ಲಿ ಬಿಳಿಯ ಜನರನ್ನು ಒಂದು ಗುಂಪಾಗಿ ಗುರುತಿಸಲು ಅಂದಿನ ನಿರಕ್ಷರ ಚೀನೀ ವಲಸೆಗಾರರು ಸಹಜವಾಗಿಯೇ ಆಂಗ್ ಮೋ ಎಂದು ಕರೆದಿರಬಹುದು ಎಂದು ಎನಿಸಿತು. ಅಲ್ಲದೇ ಅಂದಿನ ದಿನಗಳಲ್ಲಿ ನದಿಯ ಪಕ್ಕದ, ಅಂದಿನ ಮುಖ್ಯ ನಗರದಿಂದ ದೂರವಾಗಿದ್ದ ಮತ್ತು ಮುಖ್ಯವಾಗಿ ಅರಣ್ಯ ಪ್ರಾಂತ್ಯವಾಗಿದ್ದ ಈ ಪ್ರದೇಶವನ್ನು ನಗರದೊಂದಿಗೆ ಜೋಡಿಸಲು ನಿರ್ಮಿಸಿದ ಆ ಕೆಂಚು ಕೂದಲಿನ ಇಂಜಿನಿಯರ್ ಬಗ್ಗೆ ಅಭಿಮಾನದಿಂದ ಕೂಡ ಈ ಹೆಸರಿಟ್ಟಿರುವ ಸಾಧ್ಯತೆ ಇದೆ ಎನಿಸಿತು. ಸಿಂಗಪುರದಲ್ಲಿ ಈಗಲೂ ಕೂಡ ಥಾಮ್ಸನ್ ಹೆಸರಿನಲ್ಲಿ ಥಾಮ್ಸನ್ ರೋಡ್ ಮತ್ತು ಅಪ್ಪರ್ ಥಾಮ್ಸನ್ ರೋಡ್ ಎಂಬ ಮುಖ್ಯ ರಸ್ತೆಗಳಿವೆ.

  ಆ ಸೇತುವೆ ಇನ್ನೂ ಇದೆಯೆ? ಇದ್ದರೆ ಅದೆಲ್ಲಿದೆ? ಇಲ್ಲದಿದ್ದರೆ ಅದರ ಪಳೆಯುಳಿಕೆಯೇನಾದರೂ ಉಂಟೇ? ಎಂಬ ಪ್ರಶ್ನೆಗಳು ಇನ್ನೂ ಉಳಿದವು. ಅಂತರ್ಜಾಲ ತಾಣಗಳಿಂದ ಆ ಸೇತುವೆ ಈಗಿಲ್ಲದಿದ್ದರೂ, ಅದು ಹಿಂದೊಮ್ಮೆ ಇದ್ದುದರ ಸ್ಥಳ ತಿಳಿಯಿತು. ಈಗಿನ ಆಂಗ್ ಮೋ ಕಿಯೋ ಅವೆನ್ಯೂ 1 ಮತ್ತು ಅಪ್ಪರ್ ಥಾಮ್ಸನ್ ರಸ್ತೆಗಳ ಸಂಗಮದ ಹತ್ತಿರ ಇತ್ತಂತೆ. ಅಲ್ಲಿ ಹತ್ತಿರದಲ್ಲಿಯೇ ಸುಂದರವಾದ ಬಿಶಾನ್- ಆಂಗ್ ಮೋ ಕಿಯೋ ಉದ್ಯಾನವನವಿದೆ. ಅಲ್ಲೊಮ್ಮೆ ಹೋಗಿ ನೋಡಿ ಬರಬೇಕೆನಿಸಿತು. ಹಳೆಯದೇನಾದರೂ ಪಳೆಯುಳಿಕೆಯಂತೆ ಕೊಂಚ ಗುರುತೇನಾದರೂ ಇರಬಹುದು ಎಂದೊಮ್ಮೆ ಅನಿಸಿತು. ನಿತ್ಯವೂ ಉಪ್ಗ್ರದೆ ಆಗುತ್ತಿರುವ ಸಿಂಗಪುರದಲ್ಲಿ ಅದು ಅಸಾಧ್ಯ ಎಂದು ಆಮೇಲೆ ಅನಿಸಿತು. ಆದುದರಿಂದ ನನ್ನ ಬಯಕೆಯನ್ನು ಆಗಿನ ಮಟ್ಟಿಗೆ ಹತ್ತಿಕ್ಕಿಕೊಂಡೆ.

  ***
  ಆ ನನ್ನ ಅದುಮಿದ ಬಯಕೆಯನ್ನು ಈಡೇರಿಸುವ ಅವಕಾಶ ಒಮ್ಮೆ ಒದಗಿ ಬಂದಿತು. ಅದು ನಾನು ಎಮ್.ಬಿ.ಎ ಮಾಡುತ್ತಿದ್ದ ಕಾಲ. ನನ್ನ ಸಹಪಾಠಿಯೊಬ್ಬನ ಬಳಿ ನನಗೆ ಬೇಕಾದ ಒಂದು ಪುಸ್ತಕವಿತ್ತು. ನನ್ನ ಅಸೈನ್‌ಮೆಂಟ್ ಒಂದಕ್ಕೆ ಈ ಪುಸ್ತಕ ಅತ್ಯವಶ್ಯವಾಗಿತ್ತು. ನನ್ನ ಆ ಸಹಪಾಠಿ ಮಿತ್ರ ನನಗೆ ಅದನ್ನು ಒಂದು ಶನಿವಾರ ಮುಂಜಾನೆ ಬಂದು ತೆಗೆದುಕೊಂಡು ಹೋಗಲು ತಿಳಿಸಿದ್ದ. ಅದರಂತೆ ನಾನು ಆ ಶನಿವಾರ ಮುಂಜಾನೆ ನನ್ನ ಈ ಮಿತ್ರನ ಮನೆಗೆ ತಲುಪಿದೆ. ಅವನ ಮನೆ ಆಂಗ್ ಮೋ ಕಿಯೋ ಅವೆನ್ಯು 1ರ ಬಳಿ ಇತ್ತು. ಅಲ್ಲಿ ತಲುಪಿ ಲಿಫ್ಟ್ ಏರಿ ಆ ಗೆಳೆಯನ ಮನೆಗೆ ತಲುಪಿದರೆ, ಆ ಆಸಾಮಿ ನಾಪತ್ತೆ! ನನ್ನ ಮೋಬೈಲ್‌ನಿಂದ ಆತನಿಗೆ ಫೋನಾಯಿಸಿದೆ. ಆತ ಕೂಡ ನಾನು ಬರುವುದನ್ನು ಮರೆತಿದ್ದ ಎಂದು ಕಾಣುತ್ತೆ. ಥಟ್ಟನೆ ನೆನಪಿಸಿಕೊಂಡು ತಾನಿರದಿದ್ದುದಕ್ಕೆ ಅನೇಕ ಬಾರಿ ಕ್ಷಮೆ ಕೇಳಿಕೊಂಡ. ಆತನಿಗೆ ಯಾವದೋ ಒಂದು ಅರ್ಜೆಂಟ್ ಕೆಲಸ ಆಕಸ್ಮಾತ್ತಾಗಿ ಬಂದಿದ್ದರಿಂದ ಹೋಗಬೇಕಾಯಿತೆಂದೂ, ಇನ್ನು ಕೇವಲ ಒಂದು-ಒಂದೂವರೆ ಗಂಟೆಯೊಳಗಾಗಿ ತಾನು ಬರುತ್ತೇನೆಂದೂ ತಿಳಿಸಿದ. ನಂತರ ಬಂದರೆ ತಾನು ಪುಸ್ತಕ ಕೊಡುವುದಾಗಿ ತಿಳಿಸಿದ. ಬೇರೇ ಉಪಾಯವಿಲ್ಲದೆ ನಾನು ಎರಡು ಗಂಟೆಯ ನಂತರ ಮತ್ತೆ ಬಂದು ಪುಸ್ತಕ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಮತ್ತೆ ಮನೆಗೆ ಹೋಗಿ ಬರುವುದಕ್ಕೆ ಎರಡು ಗಂಟೆಯ ಮೇಲೆ ಆಗುವುದರಿಂದ ಅಷ್ಟು ದೂರ ಪ್ರಯಾಣ ಮಾಡುವುದಕ್ಕಿಂತ ಇಲ್ಲಿಯೇ ಎಲ್ಲಾದರೂ ಸಮಯ ಕಳೆಯುವುದೆಂದು ನಿರ್ಧರಿಸಿದೆ.

  ಬಿಶಾನ್-ಆಂಗ್ ಮೋ ಕಿಯೋ ಉದ್ಯಾನ ಸಮೀಪದಲ್ಲಿಯೇ ಇರುವುದರಿಂದ, ಮತ್ತು ನನಗೆ ಅಲ್ಲಿ ಹೋಗಿ ಅಲ್ಲಿ ಹಳೆಯ ಸೇತುವೆಯ ಅವಶೇಷವೇನಾದರೂ ಇರುವುದನ್ನು ಹುಡುಕುವ ವಿಚಾರವಿದ್ದುದರಿಂದ ನೇರವಾಗಿ ಅಲ್ಲಿಯೇ ಹೋಗುವುದೆಂದು ನಿರ್ಧರಿಸಿ ಅಲ್ಲಿಗೆ ನಡೆದೆ. ಅಲ್ಲಿಂದ ಬಹಳ ದೂರವೇನಿಲ್ಲ ಈ ಉದ್ಯಾನ. ಆಂಗ್ ಮೋ ಕಿಯೋ ಉಪನಗರದ ಆಂಗ್ ಮೋ ಕಿಯೋ ಅವೆನ್ಯೂ 1 ಮತ್ತು ಬಿಶಾನ್ ಉಪನಗರದ ಮಧ್ಯೆ ಇರುವ ಉದ್ಯಾನಕ್ಕೆ ಅಲ್ಲಿಂದ ನಡೆದು ಹೋಗಬಹುದಾಗಿತ್ತು.

  ನಾನು ಮೇರಿ ಮೌಂಟ್ ರಸ್ತೆಯ ಬದಿಯಿಂದ ಆರಂಭಿಸಿ ಕಲಾಂಗ್ ನದಿಯ ದಂಡೆಯಲ್ಲಿ ನಡೆಯತೊಡಗಿದೆ. ಮುಂಜಾನೆ ಸುಮಾರು ಹತ್ತು ಗಂಟೆಯಾಗಿರಬಹುದು. ಭಾಗಶಃ ಮೋಡ ಕವಿದಿತ್ತು. ತಂಗಾಳಿ ಬೀಸುತ್ತಿತ್ತು. ಬಿಷಾನ್ ಉದ್ಯಾನದ ಉದ್ದಕ್ಕೂ ಕಲಾಂಗ್ ನದಿ ಹರಿದಿದೆ. ಕಲಾಂಗ್ ನದಿ ಲೋಯರ್ ಪಿಯರ್ಸ್ ಸರೋವರದಿಂದ ಸಮುದ್ರ ಮುಟ್ಟುವವರೆಗೆ ಸುಮಾರು ಹತ್ತು ಕಿಲೋ ಮೀಟರ್ ಪ್ರವಹಿಸುತ್ತದೆ. ಸಿಂಗಪುರದಲ್ಲಿ ಇದು ಎಲ್ಲಕ್ಕಿಂತ ಉದ್ದವಾದ ನದಿಯಾದರೂ ವಾಸ್ತವದಲ್ಲಿ ಇದೊಂದು ಚಿಕ್ಕ ನದಿ. ಬಿಷಾನ್ ಉದ್ಯಾನದಲ್ಲಿ ಈ ನದಿಯ ಪಾತ್ರ ತುಂಬಾ ಚಿಕ್ಕದು. ನಮ್ಮೂರಿನಲ್ಲಿ ಹರಿಯುವ ಹಳ್ಳಕ್ಕಿಂತ ಚಿಕ್ಕ ಪಾತ್ರ. ನದಿಯಲ್ಲಿ ಹೆಚ್ಚು ನೀರು ಇರಲಿಲ್ಲ. ಇತ್ತೀಚೆಗೆ ನಡೆದ ಉದ್ಯಾನದ ನವೀಕರಣದಲ್ಲಿ ನದಿಯ ಪ್ರವಾಹದ ವೇಗವನ್ನು ನಿಯಂತ್ರಿಸಲಾಗಿದೆ. ಆದರೂ ಈ ನದಿಯಲ್ಲಿ ಆಕಸ್ಮಾತ್ತಾಗಿ ಒಮ್ಮೆಲೇ ಪ್ರವಾಹ ಬರುವ ಸಂಭವವಿದ್ದುದರಿಂದ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಮತ್ತು ಪ್ರವಾಹವನ್ನು ಅಳೆಯುವ ಉಪಕರಣಗಳನ್ನು ಜೋಡಿಸಿದ್ದಾರೆ. ನದಿಯ ಹತ್ತಿರ ವಿವಿಧ ಬಗೆಯ ಪಕ್ಷಿಗಳು ಬರುವುದರಿಂದ, ನದಿಯುದ್ದಕ್ಕೂ ಅನೇಕ ಪಕ್ಷಿ ಪ್ರೇಮಿ ಛಾಯಾಚಿತ್ರಕಾರರು ತಮ್ಮ ದೊಡ್ಡ ದೊಡ್ಡ ಕ್ಯಾಮೆರಾಗಳನ್ನು ಇಟ್ಟುಕೊಂಡು ಕಾಯುತ್ತಿದ್ದರು. ಹಾಗೆಯೇ ಮುಂದುವರೆದು ಉದ್ಯಾನದ ಮಧ್ಯದಲ್ಲಿಯ ದೊಡ್ಡ ಕೊಳವನ್ನು ದಾಟಿ ಚಿಕ್ಕದಾದ ಕಮಲಗಳ ಕೊಳವೊಂದಕ್ಕೆ ಬಂದಾಗ ಬೆಳಗಿನ ಹತ್ತೂವರೆ ಆಗಿತ್ತು. ಇಲ್ಲಿ ಸುತ್ತ ಮುತ್ತಲೂ ಸಂಪೂರ್ಣವಾಗಿ ನಿರ್ಜನವಾಗಿತ್ತು.

  ಕೊಳದ ಮೇಲಿನಿಂದ ಕಟ್ಟಿಗೆಯಿಂದ ಒಂದು ಸೇತುವೆಯನ್ನು ನಿರ್ಮಿಸಿದ್ದಾರೆ. ಅದರ ಮೇಲಿನಿಂದ ನಡೆದರೆ ಕೊಳದಲ್ಲಿ ಅರಳಿರುವ ಕಮಲಗಳ ಮತ್ತು ಕಮಲದ ದೊಡ್ಡ ದೊಡ್ಡ ಎಲೆಗಳನ್ನು ನೋಡುತ್ತಾ ನಡೆಯಬಹುದು. ಕೊಳದ ಮಧ್ಯದಲ್ಲಿ ಒಂದು ಚಿಕ್ಕ ಆಶ್ರಯವೊಂದನ್ನು ನಿರ್ಮಿಸಿದ್ದಾರೆ. ಅಲ್ಲಿ ಕುಳಿತು ಬಹಳ ಹೊತ್ತು ಪ್ರಕೃತಿಯ ಒಡಲಲ್ಲಿ ಕುಳಿತು ಸುತ್ತಲಿನ ಹಸಿರಿನ, ಹೂಗಳ ಮತ್ತು ಹಕ್ಕಿಗಳ ದೃಶ್ಯವನ್ನು ಸವಿಯಬಹುದಾಗಿದೆ. ಕೊಳದ ಮಧ್ಯಭಾಗದ ಈ ಆಶ್ರಯ ತಾಣಕ್ಕೆ ನಾನು ತಲುಪಿದಾಗ ಯಾರೋ ಕುಳಿತಿದ್ದುದು ಕಂಡಿತು. ಬೆಳ್ಳಗಿನ ಅಂಗಿ ಮತ್ತು ಕೆನೆಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯ ವಯಸ್ಸು ಸುಮಾರು ಐವತ್ತಾಗಿರಬಹುದು. ಯಾರೋ ಉತ್ತರ ಭಾರತೀಯನ ಹಾಗೆ ಕಂಡಿತು. ನಸುನಕ್ಕು ನಮಸ್ಕರಿಸಿದೆ. ಆತ ಪ್ರತಿ ನಮಸ್ಕಾರ ಮಾಡಿದ. ನಾನು ಒಂದು ಬದಿಯಲ್ಲಿ ನಿಂತು ಕೊಳದತ್ತ ನೋಡತೊಡಗಿದೆ. ಇನ್ನೂ ತುಂಬಾ ಸಮಯವಿತ್ತು. ಆದುದರಿಂದ ಸ್ವಲ್ಪ ಹೊತ್ತಿನ ನಂತರ ಅಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಅಪ್ಪರ್ ಥಾಮ್ಸನ್ ರಸ್ತೆಯ ಬಳಿ ಹೋಗಿ ಅಲ್ಲಿ ಹಳೆಯ ಸೇತುವೆಯಿದ್ದ ಕುರುಹುಗಳು ಕಾಣುತ್ತವೆಯೇನೋ ಎಂದು ನೋಡುವದು ಎಂದು ನಿರ್ಧರಿಸಿದೆ.

  ನೀವು ಭಾರತೀಯರೋ ಅಥವಾ ಸಿಂಗಪುರಿಯನ್ನೋ ಎಂಬ ಪ್ರಶ್ನೆ ಕೇಳಿ ಬಂದಾಗ ಹಿಂತಿರುಗಿ ನೋಡಿದೆ. ಪ್ರಶ್ನೆ ಆ ವ್ಯಕ್ತಿಯಿಂದ ಬಂದಿತ್ತು. ಆತ ನನ್ನತ್ತ ಮುಗುಳು ನಗುತ್ತ ನೋಡುತ್ತಿದ್ದ. ಕಣ್ಣುಗಳಲ್ಲಿ ಒಂದು ವಿಚಿತ್ರವಾದ ಕಾಂತಿಯಿತ್ತು. ಎತ್ತರದ ನಿಲುವಿನ, ಗೋಧಿ ವರ್ಣದ ಮನುಷ್ಯ ಉತ್ತರ ಭಾರತೀಯನಿರಬಹುದು ಎನಿಸಿತು.

  ನಾನು ಭಾರತೀಯ, ಈಗ ಇಲ್ಲಿನ ಪರ್ಮನೆಂಟ್ ರೆಸಿಡೆಂಟ್ ಎಂದು ಹೇಳಿ ನನ್ನ ಪರಿಚಯ ಹೇಳಿಕೊಂಡೆ. ಆಗ ತಾನು ಭಾರತೀಯ ಮೂಲದ ಸಿಂಗಪುರಿಯನ್ ಮತ್ತು ಅನೇಕ ವರ್ಷಗಳ ಹಿಂದೆ ಭಾರತದಿಂದ ಇಲ್ಲಿ ಬಂದು ನೆಲೆಸಿ ಇಲ್ಲಿಯವನೇ ಆದವನು ಎಂದು ತಿಳಿದು ಬಂದಿತು. ಕಳೆದ ಅನೇಕ ದಶಕಗಳಿಂದ ಆಂಗ್ ಮೋ ಕಿಯೋದಲ್ಲಿಯೇ ಇರುತ್ತಿದ್ದೇನೆ ಎಂದು ತಿಳಿಸಿದ.

  "ಹಾಗಾದರೆ ನಿಮಗೆ ಆಂಗ್ ಮೋ ಕಿಯೋದ ಇತಿಹಾಸದ ಬಗ್ಗೆ ಚೆನ್ನಾಗಿ ಗೊತ್ತಿರಬೇಕಲ್ಲ?" ಎಂದು ಕೇಳಿದೆ.
  "ಓಹೋ! ತಕ್ಕ ಮಟ್ಟಿಗೆ ಗೊತ್ತು" ಎಂದು ಮಂದಹಾಸ ಬೀರಿದ.
  ನಾನು ನನ್ನ ಇಲ್ಲಿಯವರೆಗಿನ ಸಂಶೋಧನೆಯ ಕುರಿತು ಹೇಳಿದೆ. ಅದನ್ನು ಆಲಿಸಿದ ಆತ, ನನ್ನತ್ತ ತೀಕ್ಷ್ಣವಾಗೊಮ್ಮೆ ನೋಡಿ, "ಹಾಗಾದರೆ ನೀವು ಇಲ್ಲಿ ಆ ಸೇತುವೆಯಿದೆಯೋ ಇಲ್ಲವೋ ಎಂದು ನೋಡಲು ಬಂದಿದ್ದೀರಿ ಎಂದು ಕಾಣುತ್ತದೆ" ಎಂದ.
  "ಹೌದು, ನನಗೆ ಈ ಹೆಸರು ಈ ಪ್ರದೇಶಕ್ಕೆ ಹೇಗೆ ಬಂದಿತು ಎಂಬುದರ ಬಗ್ಗೆ ತುಂಬಾ ಕುತೂಹಲವಿದೆ" ಎಂದು ನುಡಿದೆ.
  "ಹಾಗಾದರೆ ನಿಮಗೆ ಒಂದು ಅತ್ಯಂತ ಮುಖ್ಯವಾದ ಸಂಗತಿಯೇ ಗೊತ್ತಿಲ್ಲ!" ಎಂದು ನುಡಿದ. ನಾನು ಆಶ್ಚರ್ಯದಿಂದ, "ಅದೇನದು ?" ಎಂದು ಕೇಳಿದಾಗ ಹೇಳತೊಡಗಿದ.

  ಸುಮಾರು ನೂರು ವರ್ಷಗಳ ಹಿಂದೆ ಇಲ್ಲಿ ಲಾರ್ಡ್ ವಿಂಡ್ಸರ್ ಎಂಬ ದೊಡ್ಡ ಬ್ರಿಟಿಷ್ ವ್ಯಾಪಾರಸ್ಥ ಬಂದು ಸಿಂಗಪುರದಲ್ಲಿ ದೊಡ್ಡದೊಂದು ಎಸ್ಟೇಟ್ ಒಂದನ್ನು ಖರೀದಿಸಿ ಇರತೊಡಗಿದ. ಆತನ ಜೊತೆ ಆತನ ಪತ್ನಿ ಜೆನ್ನಿಫರ್ ವಿಂಡ್ಸರ್ ಮತ್ತು ಮೂವರು ಮಕ್ಕಳು ಸಹ ಇದ್ದರು. ದೊಡ್ಡವರಿಬ್ಬರು ಹ್ಯಾರಿ ಮತ್ತು ಪಾಲ್ ಎಂಬ ಹುಡುಗರಾದರೆ ಚಿಕ್ಕವಳು ಏಂಜೆಲಾ ಎಂಬ ಪುಟ್ಟ ಹುಡುಗಿ. ಒಳ್ಳೇ ಸುಖಿ ಸಂಸಾರ ಅವರದು. ಹುಡುಗರಿಬ್ಬರೂ ಸ್ವಲ್ಪ ತುಂಟರಾದರೂ ಮನಸ್ಸಿನಿಂದ ಒಳ್ಳೇ ಸ್ವಭಾವದವರು. ಚಿಕ್ಕವಳಂತೂ ತುಂಬಾ ಮುಗ್ಧ ಮನಸ್ಸಿನ ಕಂದಮ್ಮ. ಆಗ ಸಿಂಗಪುರವನ್ನು ಬ್ರಿಟಿಷರೇ ಆಳುತ್ತಿದ್ದುದರಿಂದ ಇಲ್ಲಿಯ ಅನೇಕ ದೊಡ್ದ ದೊಡ್ಡ ಎಸ್ಟೇಟ್‌ಗಳ ಮಾಲೀಕರೂ ಕೂಡ ಅವರೇ ಆಗಿದ್ದರು. ವಿಂಡ್ಸರ್ ಕುಟುಂಬಕ್ಕೆ ಕೂಡ ಇಲ್ಲಿ ಅನೇಕ ಪರಿಚಿತ ಬ್ರಿಟಿಷ್ ಕುಟುಂಬಗಳಿದ್ದವು. ಅನೇಕ ದಿನಗಳಲ್ಲಿ ಮತ್ತು ಶಾಲೆಯ ರಜಾ ದಿನಗಳಲ್ಲಿ ಕೆಲವು ಮಿತ್ರರಲ್ಲಿ ಹೋಗಿ ಬಂದು ಮಾಡುತ್ತಿದ್ದರು.

  ಲಾರ್ಡ ವಿಂಡ್ಸರ್ ದೊಡ್ಡ ವ್ಯಾಪಾರಸ್ಥನಾದುದರಿಂದಲೂ ಮತ್ತು ಅನೇಕ ಬಾರಿ ವಿದೇಶ ಪ್ರಯಾಣ ಕೈಗೊಳ್ಳುತ್ತಿದ್ದುದರಿಂದಲೂ ಮನೆಯಲ್ಲಿ ಕೆಲವು ನಂಬಿಕಸ್ಥ ಆಳುಗಳನ್ನು ನೇಮಿಸಿಕೊಂಡಿದ್ದ. ಅನೇಕ ಭಾರತೀಯ ಮೂಲದ ಆಳುಗಳಲ್ಲದೇ ಚೀನೀ ಆಳುಗಳನ್ನು ಕೂಡ ನೇಮಿಸಿಕೊಂಡಿದ್ದ. ಅವರಲ್ಲಿ ಒಬ್ಬಾತ ಉತ್ತರ ಭಾರತದಿಂದ ಬಂದ ಹರಿಚರಣ್ ಸಿಂಗ್ ಎಂಬ ಯುವಕ. ಒಳ್ಳೆಯ ಬದುಕು ಹುಡುಕಿಕೊಂಡು ಭಾರತದಿಂದ ಹೊರಟವರ ಜೊತೆ ಸಿಂಗಪುರಕ್ಕೆ ಬಂದ ಹರಿಚರಣ ಸಿಂಗ್ ಮೊದಲು ಇಲ್ಲಿಯ ಯಾವುದೋ ಸೆಕ್ಯುರಿಟಿ ಏಜೆನ್ಸಿಯಲ್ಲಿ ಕಾವಲುಗಾರನಾಗಿ ಸೇರಿಕೊಂಡು ಕೆಲವು ಬ್ರಿಟಿಷ್ ಕಚೇರಿಗಳ ರಕ್ಷಣಾ ಸಿಬ್ಬಂದಿಯಾಗಿ ಕೆಲಸ ಮಾಡಿದ. ಆತನ ಉತ್ತಮ ಸ್ವಭಾವ ಮತ್ತು ನಂಬಿಕಸ್ಠ ನಡವಳಿಕೆಯಿಂದ ಆತನ ಹೆಸರನ್ನು ಯಾರೋ ಬ್ರಿಟಿಷ್ ಆಫೀಸರ್ ಲಾರ್ಡ್ ವಿಂಡ್ಸರ್‌ಗೆ ಶಿಫಾರಸು ಮಾಡಿದರು. ಹೀಗಾಗಿ ಆತ ವಿಂಡ್ಸರ್ ಮನೆಯಲ್ಲಿ ಕೆಲಸಗಾರನಾಗಿ ನೇಮಕಗೊಂಡ. ಕ್ರಮೇಣ ವಿಂಡ್ಸರ್‌ನ ವಿಶ್ವಾಸ ಗಳಿಸಿದ ಅವನು, ಅವರ ಮನೆಯ ಭಾಗವಾಗಿ ಹೋದ. ಮನೆಯ ಒಳ, ಹೊರಗಿನ ಮೇಲ್ವಿಚಾರಣೆ ಜೊತೆಗೆ ಮಕ್ಕಳ ರಕ್ಷಣೆಯ ಉಸ್ತುವಾರಿಯನ್ನೂ ವಹಿಸಿಕೊಂಡ. ಯಾವಾಗಲೂ ಲೇಡಿ ವಿಂಡ್ಸರ್ ಅಣತಿಯಂತೆ ಮಕ್ಕಳೆಲ್ಲೇ ಹೋಗಲಿ, ಅವರ ಜೊತೆ ಜೊತೆಗೇ ಇರುತ್ತಿದ್ದ.

  ಅದೊಂದು ದಿನ ಬೆಳ್ಳಂಬೆಳಗ್ಗೆ ಸುರಿಯುತ್ತಿತ್ತು ಜಡಿ ಮಳೆ! ವಿಂಡ್ಸರ್ ಮಕ್ಕಳ ಸ್ಕೂಲಿಗೆ ರಜೆ. ಹಿಂದಿನ ದಿನವೇ ಅವರು ತಮ್ಮ ಪರಿಚಯದ ಹ್ಯಾರಿಸ್ ಮನೆಗೆ ಹೋಗುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಸುರಿಯುತ್ತಿದ್ದ ಜಡಿಮಳೆಯನ್ನು ನೋಡಿ ಲೇಡಿ ವಿಂಡ್ಸರ್ ಮಕ್ಕಳಿಗೆ ತಮ್ಮ ಕಾರ್ಯಕ್ರಮವನ್ನು ಮುಂದಿನ ವಾರಕ್ಕೆ ಮುಂದೂಡಲು ಹೇಳಿದಳು. ಮಕ್ಕಳು ಜಪ್ಪೆನ್ನಲಿಲ್ಲ. ಸ್ವಲ್ಪ ಮಳೆ ಕಡಿಮೆಯಾದ ಮೇಲೆ ಹೋಗುವ ಹಟ ಮಾಡಿದರು. ಲಾರ್ಡ್ ವಿಂಡ್ಸರ್ ಮನೆಯಲ್ಲಿರಲಿಲ್ಲ. ಹರಿಚರಣ್‌ನಿಗೆ ಒಂದು ವಾರದಿಂದ ಚಳಿ ಜ್ವರ ಹಿಡಿದುಕೊಂಡಿತ್ತು. ಹೀಗಾಗಿ ಆತ ವಿಂಡ್ಸರ್ ಮನೆಯ ಹೊರಗಿನ ಔಟ್‌ಹೌಸಿನ ತನ್ನ ಮನೆಯಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಮಕ್ಕಳು ಯಾರ ಜೊತೆಯಿಲ್ಲದೇ ಹೋಗಲು ಹಟ ಮಾಡಿದರು. ಲೇಡಿ ವಿಂಡ್ಸರ್ ಕಷ್ಟಪಟ್ಟು ಮಳೆ ಪೂರಾ ನಿಂತು ಬಿಸಿಲು ಬಿದ್ದ ಮೇಲೆಯೇ ಅವರನ್ನು ಹೊರಕಳಿಸಲು ಒಪ್ಪಿದಳು. ಸತತವಾಗಿ ಎರಡು ಗಂಟೆ ಮಳೆ ಸುರಿದ ನಂತರ ಹೂಬಿಸಿಲು ಹರಡಿತು. ಮಕ್ಕಳು ತುಂಬಾ ಖುಶಿಯಿಂದ ಹ್ಯಾರಿಸ್ ಮನೆಗೆ ಹೋಗಲು ತಯಾರಾದರು. ವಿಂಡ್ಸರ್ ಮನೆಯಿಂದ ಹ್ಯಾರಿಸ್ ಮನೆಗೆ ಹೆಚ್ಚೆಂದರೆ ಒಂದು ಮೈಲು ಅಷ್ಟೇ! ಆದರೆ ಲೋಯರ್ ಪಿಯರ್ಸ್ ಸರೋವರದಿಂದ ಕಲ್ಲಾಂಗ್ ನದಿಯವರೆಗೆ ಹಳ್ಳವೊಂದು ಹರಿಯುತ್ತಿತ್ತು. ಆ ಹಳ್ಳದ ಮೇಲೆ ಚಿಕ್ಕದೊಂದು ಕಚ್ಚಾ ಸೇತುವೆಯಿತ್ತು. ಅದನ್ನು ದಾಟಿ ಮಕ್ಕಳು ಹೋಗಬೇಕಾಗಿತ್ತು. ಮಳೆ ಜೋರಾಗಿದ್ದರೆ ಅದರಲ್ಲಿ ನೀರಿನ ರಭಸ ಹೆಚ್ಚಾಗಿರುತ್ತಿತ್ತು. ಲೇಡಿ ವಿಂಡ್ಸರ್ ಮಕ್ಕಳಿಗೆ ಹತ್ತು ಬಾರಿ ನೀರಿನಿಂದ ದೂರವಾಗಿರಲು ಹೇಳಿ ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟಳು.

  ಮಕ್ಕಳು ಹೋಗಿ ಹತ್ತು ನಿಮಿಷದ ನಂತರ ಒಮ್ಮೆಲೇ ನಿದ್ದೆಯಿಂದೆದ್ದ ಹರಿಚರಣ್. ಮುಖ ತೊಳೆದುಕೊಂಡು ವಿಂಡ್ಸರ್ ಮನೆಗೆ ಬಂದು ಮಕ್ಕಳನ್ನು ಕರೆದ. ಹೊರಬಂದ ಲೇಡಿ ವಿಂಡ್ಸರ್ ಮಕ್ಕಳು ಹೊರಟು ಹೋದರೆಂದು ಹೇಳಿದಳು. ಒಮ್ಮೆಲೇ ಹರಿಚರಣ್‌ನ ಮುಖ ಕಪ್ಪಿಟ್ಟಿತು. ಸ್ವಲ್ಪ ಜೋರಾಗಿಯೇ ಒಡತಿಗೆ "ನೀವು ಮಕ್ಕಳನ್ನು ಬೇರೆ ಯಾರ ಜೊತೆಯಿಲ್ಲದೇ ಕಳಿಸಬಾರದಿತ್ತು ಮೇಡಮ್, ನನ್ನನ್ನು ಎಬ್ಬಿಸಬೇಕಾಗಿತ್ತು" ಎಂದ, "ಏಕೆ? ಏನಾಯಿತು? ಮಳೆ ನಿಂತು ಹೋಗಿದೆ" ಎಂದಳು.

  ಅಷ್ಟರಲ್ಲಿಯೇ ಹ್ಯಾರಿಸ್ ಮನೆಯತ್ತ ಓಡಲಾರಂಬಿಸಿದ ಹರಿಚರಣ್, ಓಡುತ್ತಲೇ ಹೇಳಿದ, "ಆ ಹಳ್ಳದ ಮೇಲೆ ನನಗೆ ಸ್ವಲ್ಪವೂ ಭರವಸೆ ಇಲ್ಲ, ಅಕಸ್ಮಾತ್ತಾಗಿ ನೀರು ಉಕ್ಕಿ ಬಂದು ದಾರಿಯಲ್ಲಿಯ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿಬಿಡುತ್ತದೆ."

  ಲೇಡಿ ವಿಂಡ್ಸರ್ ಎದೆ ಧಸಕ್ಕೆಂದಿತು. ಆಕೆ ನೋಡುವಷ್ಟರಲ್ಲಿಯೇ ಹರಿಚರಣ್ ದೃಷ್ಟಿಯಿಂದ ದೂರವಾಗಿದ್ದ. ಕೊರಳಲ್ಲಿಯ ಕ್ರಾಸನ್ನು ಕಣ್ಣಿಗೆ ಒತ್ತಿಕೊಳ್ಳುತ್ತಾ ತಾನು ಅತ್ತ ಹೋಗಲಾರಂಭಿಸಿದಳು. ಅಲ್ಲಿ ಅವಳು ಹೋಗುವಷ್ಟರಲ್ಲಿ ಅನಾಹುತ ಆಗಿಬಿಟ್ಟಿತ್ತು. ಆಕಸ್ಮಿಕವಾಗಿ ನುಗ್ಗಿದ ನೀರು ಸೇತುವೆಯ ಮೇಲಿನಿಂದ ದಾಟುತ್ತಿದ್ದ ಮಕ್ಕಳನ್ನು ಕೊಚ್ಚಿಕೊಂಡು ಹೋಗಿಬಿಟ್ಟಿತ್ತು. ಹರಿಚರಣ್ ಅಲ್ಲಿ ತಲುಪುವುದರಲ್ಲಿ ಎಲ್ಲ ಮುಗಿದು ಹೋಗಿತ್ತು. ಕೆಲವರು ದಾರಿಹೋಕರು ಪ್ರಯತ್ನ ಪಟ್ಟಿದ್ದರಾದರೂ ನೀರಿನ ಸೆಳೆತ ಅಪಾರವಾದುದರಿಂದ ಕಣ್ಮುಂದೆ ನಡೆದ ದುರ್ಘಟನೆಯ ಮೂಕ ಪ್ರೇಕ್ಷಕರಾಗಬೇಕಾಯಿತು. ವಿಂಡ್ಸರ್ ಮನೆ ದುಃಖದ ಕಾರ್ಗತ್ತಲಲ್ಲಿ ಕುಸಿಯಿತು. ಲಾರ್ಡ್ ಮತ್ತು ಲೇಡಿ ವಿಂಡ್ಸರ್‌ರ ಬದುಕು ಕುಸಿದುಹೋಯಿತು. ಮುಂದಿನ ಎರಡು ದಿನಗಳಲ್ಲಿ ಹ್ಯಾರಿ ಮತ್ತು ಪಾಲ್‌ರ ಕಳೇಬರಗಳು ಎರಡು ಕಿಲೋಮೀಟರ್ ದೂರದಲ್ಲಿ ದೊರೆತವು. ಎಷ್ಟು ಹುಡುಕಿದರೂ ಏಂಜೆಲಾ ಶವ ದೊರಕಲೇ ಇಲ್ಲ.

  ಹರಿಚರಣ್ ಈ ದುರ್ಘಟನೆಗೆ ತನ್ನನ್ನೇ ತಾನು ಹಳಿದುಕೊಂಡ. ತಾನು ಸ್ವಲ್ಪ ಬೇಗ ಏಳಬೇಕಾಗಿತ್ತು ಎಂದು ಎಷ್ಟೋ ಬಾರಿ ಹಲುಬಿದ. ಒಡೆಯ ಮತ್ತು ಒಡತಿಯ ದುರ್ಗತಿಯನ್ನು ಕುರಿತು ಬಹಳೇ ನೊಂದುಕೊಂಡ. ಇತ್ತ ಲೇಡಿ ವಿಂಡ್ಸರ್ ಹುಚ್ಚಳಂತಾದಳು. ಮಕ್ಕಳನ್ನು ತನ್ನ ಕೈಯಾರೆ ತಾನೇ ಮೃತ್ಯು ಕೂಪಕ್ಕೆ ತಳ್ಳಿದೆ ಎಂದು ಹಲವಾರು ಬಾರಿ ತನ್ನನ್ನು ದೂಷಿಸಿಕೊಂಡಳು. ಅತ್ತಳು ಕೆಲವು ಬಾರಿ ದಿಗ್ಭ್ರಮೆಗೊಂಡು ಸೇತುವೆಯ ಹತ್ತಿರಕ್ಕೆ ಕೂಗಿ ಮಕ್ಕಳನು ಕರೆದಳು. ಅನೇಕ ಬಾರಿ ಲಾರ್ಡ ವಿಂಡ್ಸರ್ ಅವಳನ್ನು ಇಂಗ್ಲೆಂಡಿಗೆ ಕಳಿಸಲು ಪ್ರಯತ್ನಿಸಿದರೂ ಅವಳ ವಿಂಡ್ಸರ್ ಮನೆ ಬಿಟ್ಟು ಕದಲಲೇ ಇಲ್ಲ. ಅವಳು ಹೆಚ್ಚು ಹೆಚ್ಚು ಸಮಯವನ್ನು ಸೇತುವೆಯ ಬಳಿ ಕಳೆಯತೊಡಗಿದಳು. ಹರಿಚರಣ್ ಕೂಡ ಒಡತಿಯ ಕಾವಲಿಗೆ ನಿಂತ.

  ಕೆಲವು ದಿನಗಳಲ್ಲಿ ಮತ್ತೊಂದು ಸುದ್ದಿ ಹರಡತೊಡಗಿತು. ಸೇತುವೆಯ ಸಮೀಪದಲ್ಲಿ ಮುಸ್ಸಂಜೆಯ ವೇಳೆಗೆ ಕೆಲವು ಬಾರಿ ಸಣ್ಣ ಹುಡುಗಿಯೊಬ್ಬಳು ಅಳುವ ಧ್ವನಿ ಕೇಳುತ್ತದೆ ಅದನ್ನು ಕೇಳಿದವರು ಅನೇಕರಿದ್ದಾರೆ ಎಂದು. ಅದು ಲೇಡಿ ವಿಂಡ್ಸರ್ ಕಿವಿಗೆ ಬಿದ್ದ ಮೇಲಂತೂ ಅವಳು ಮುಂಜಾವಿನಿಂದ ರಾತ್ರಿಯವರೆಗೆ ಸೇತುವೆಯ ಬದಿಯಲ್ಲಿಯೇ ಇರತೊಡಗಿದಳು. ಅವಳಿಗೆ ತನ್ನ ಮಗಳ ಆತ್ಮವೇ ಅಲ್ಲಿದ್ದು ದುಃಖಿಸುತ್ತಿದೆ ಎಂಬ ಭಾವನೆ ಬಲವಾಯಿತು. ಆ ಧ್ವನಿ ಅವಳಿಗೆ ಅನೇಕ ಬಾರಿ ಕೇಳಿಸಿದೆ ಎಂದು ಹೇಳಿದಳು ಕೂಡ. ಲಾರ್ಡ ವಿಂಡ್ಸರ್ ಅದನ್ನು ನಂಬಲಿಲ್ಲ. ಅವನಿಗೆ ಹೆಂಡತಿಯ ಪರಿಸ್ಥಿತಿಯ ಬಗ್ಗೆ ಕನಿಕರವಾಯಿತು. ಹರಿಚರಣ್ ಯಾವಾಗಲೂ ಒಡತಿಯ ಜೊತೆಗೇ ಇರುತ್ತಿದ್ದನಾದರೂ ಅಂಥ ಧ್ವನಿ ಎಂದೂ ಕೇಳಿಸಿರಲಿಲ್ಲ. ಕೆಂಚು ಕೂದಲಿನ ಕೆಂಪು ಮುಖದ ಬ್ರಿಟಿಷ್ ಹೆಂಗಸು ಅಲ್ಲಿ ಯಾವಾಗಲೂ ಇರುವದನ್ನು ನೋಡಿದ ಸ್ಥಳಿಯ ಚೀನೀಯರು ಆ ಸೇತುವೆಯನ್ನು ಆಂಗ್ ಮೋ ಕಿಯೋ (ಕೆಂಚು ಕೂದಲಿನವರ ಸೇತುವೆ) ಎಂದು ಕರೆಯಲಾರಂಭಿಸಿದರು.

  ಆ ಕಥೆ ಕೇಳಿದ ನನಗೆ ದುಃಖ ಮತ್ತು ಆಶ್ಚರ್ಯಗಳೆರಡೂ ಆದವು. ಇಂಥದೊಂದು ದಾರುಣ ಕಥೆ ಈ ಹೆಸರಿನ ಹಿಂದಿರುವುದನ್ನು ನಾನೆಂದೂ ಕಲ್ಪಿಸಿರಲಿಲ್ಲ.

  "ಎಲ್ಲಿಯವರೆಗೆ ಲೇಡಿ ವಿಂಡ್ಸರ್ ಸೇತುವೆಯ ಬಳಿ ಇದ್ದಳು?" ಎಂದು ಕೇಳಿದೆ.
  "ಅವಳು 1963ರಲ್ಲಿ ತೀರಿಕೊಂಡಳು. ಅವಳು ಅಲ್ಲಿಯೇ ಇರುತ್ತಿದ್ದಳು" ಎಂದ.
  "ಹರಿಚರಣ್‌ಗೆ ಏನಾಯಿತು?"
  "ಹರಿಚರಣ್‌ಗೆ ಏಂಜೆಲಾಳ ಧ್ವನಿ ಎಂದೂ ಕೇಳಿಸಿರಲಿಲ್ಲ. ಘಟನೆಯಾದ ಇಪ್ಪತ್ತೈದು ವರ್ಷದ ನಂತರ ಅದೊಂದು ಸಂಜೆ ಲೇಡಿ ವಿಂಡ್ಸರ್ ಮನೆಗೆ ಹಿಂತಿರುಗಲು ತಯಾರಾಗುತ್ತಿರುವಾದ ಆ ಧ್ವನಿ ಇನ್ನೊಮ್ಮೆ ಕೇಳಿಸಿತು. ಈಗ ಅದು ಹರಿಚರಣ್‌ಗೂ ಸ್ಪಷ್ಟವಾಗಿ ಕೇಳಿಸಿತ್ತು. ಅದನ್ನು ಕೇಳಿದ ಆತ ಅದರ ಮೂಲ ಹುಡುಕುತ್ತ ಹಳ್ಳದ ಬದಿಯಲ್ಲಿಯೇ ಹೊರಟ. ಆತ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ಆತನಿಗೆ ಲೋಯರ್ ಪಿಯರ್ಸ ಸರೋವರದ ಆಚೆಯಿಂದ ಮತ್ತೊಮ್ಮೆ ಕೇಳಿಸಿದಂತಾಯಿತು. ಅದೇನು ಹುಚ್ಚು ಆವೇಶ ಅವನಲ್ಲಿ ಬಂದಿತೋ, ಸರೋವರಕ್ಕೆ ಇಳಿದವನೇ ಆ ಧ್ವನಿಯು ಬಂದೆಡೆಗೆ ಈಜತೊಡಗಿದ. ಕೆಲವೇ ನಿಮಿಷದಲ್ಲಿ ಸರೋವರದ ಮಧ್ಯದಲ್ಲಿ ಮಾಯವಾಗಿ ಬಿಟ್ಟ. ಮುಂದೆ ಅವನನ್ನಾರೂ ಕಾಣಲಿಲ್ಲ. ಲಾರ್ಡ್ ವಿಂಡ್ಸರ್ ಅವನನ್ನು ಹುಡುಕಿಸಲೂ ಪ್ರಯತ್ನಿಸಿದರೂ ಆತ ಸಿಗಲೇ ಇಲ್ಲ."

  ಭಾರವಾದ ಮನಸ್ಸಿನಿಂದ ನಾನು ತಿರುಗಿ ಕೊಳದತ್ತ ನೋಡಿದೆ. ಸ್ವಲ್ಪ ಕ್ಷಣಗಳ ನಂತರ ಕೊಳದತ್ತಲೇ ನೋಡುತ್ತ ನನಗೇ ನಾನೇ ಮಾತನಾಡುವಂತೆ, "ಪ್ರೇತಾತ್ಮ ಅಳುವ ವಿಷಯದ ಬಗ್ಗೆ ನನಗೆ ನಂಬಿಕೆ ಬರುತ್ತಿಲ್ಲ. ಅದು ಲೇಡಿ ವಿಂಡ್ಸರ್ ಮತ್ತು ಇತರ ಜನಗಳ ಭ್ರಮೆ ಆಗಿರಬಹುದು. ಆದರೂ ತನ್ನ ಎಲ್ಲ ಚಿಕ್ಕ ಮಕ್ಕಳನ್ನು ಕಳೆದುಕೊಂಡ ಲೇಡಿ ವಿಂಡ್ಸರ್ ಬಗ್ಗೆ ತುಂಬಾ ವ್ಯಥೆ ಆಯಿತು. ಹರಿಚರಣ್‌ನ ಸ್ವಾಮಿ ಭಕ್ತಿ ಮತ್ತು ನಿಷ್ಠೆ ತುಂಬಾ ಮೆಚ್ಚತಕ್ಕದ್ದು. ನೀವೇನು ಹೇಳುತ್ತೀರಿ?" ಎಂದು ಕೇಳಿದೆ.

  "ನಾನು ನಂಬದೇ ಇರಲು ಸಾಧ್ಯವೇ ಇಲ್ಲ! ಎಲ್ಲ ನನ್ನ ಕಣ್ಣ ಮುಂದೆ ನಡೆದ ಘಟನೆ!" ದೂರದಿಂದ ಅಲೆಯಲೆಯಾಗಿ ತೇಲಿ ಬಂದ ಧ್ವನಿ ನನ್ನಲ್ಲಿ ಒಂದು ಕಂಪನ ಹುಟ್ಟಿಸಿತು. ತತ್‌ಕ್ಷಣ ಅವನತ್ತ ತಿರುಗಿ ನೋಡಿದೆ.

  ಅಲ್ಲಿ ಯಾರೂ ಇರಲಿಲ್ಲ!

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Short story by Vasant Kulkarni. I cannot believe this story. The mysterious person I met started telling the story of that man who built that bridge, which does not exist now. I was shivering after listening to the chilling story narrated by that old man.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more