ಗೊಮೆನಸಾಯ್ (= ಕ್ಷಮಿಸು) (ಜಪಾನಿ ಕತೆ)

ಶನಿವಾರ ಸಂಜೆ ಶಿಬುಯಾದಲ್ಲಿ ಸಂಧಿಸುವ ಕಾರ್ಯಕ್ರಮ. ನಂತರ ಸಿನಿಮಾ, ಹೊಟೆಲ್, ಕ್ಲಬ್ ಏನಾದರೂ ಸರಿಯೆ. ಇವನು ಬುದ್ಧಿವಂತ, ಚನ್ನಾಗಿ ಸಂಪಾದಿಸುತ್ತಿದ್ದ. ಅವಳು ಚೆಲುವೆ, ದಿನದಿನಕ್ಕೂ ಅವಳ ಸೌಂದರ್ಯ ಹೆಚ್ಚಾಗುತ್ತಿತ್ತು. ಇಬ್ಬರೂ ಸೇರಿದರೆ ಹರ್ಷದ ಹೊನಲು.
ಆದರೆ ಇವತ್ತು ಅವಳು ಇನ್ನೂ ಬಂದಿಲ್ಲ, ಅರ್ಧಗಂಟೆ ಆಯಿತು ಆಗಲೇ. ಇವನು ಮೊಬೈಲಿನಲ್ಲಿ ಫೋನ್ ಮಾಡಿದ, ಉತ್ತರವಿಲ್ಲ. ಎಸ್ ಎಮ್ ಎಸ್ ಕಳಿಸಿದ, ಉತ್ತರವಿಲ್ಲ. "ಎಲ್ಲಿ ಹೋದಳೋ" ಎಂದುಕೊಂಡು ನಿಂತ, ಸಿಗರೇಟಿನ ನಂತರ ಸಿಗರೇಟು. ಹತ್ತಿರದ ಕೆಫೆಯಲ್ಲಿ ಕಾಫಿ ಕುಡಿದ. ಸಿಡಿಮಿಡಿಗೊಂಡ. "ಬರಲಿ ಮಾಡ್ತೀನಿ" ಅಂದುಕೊಂಡ. ಒಂದು ಗಂಟೆ ತಡ ಮಾಡಿ ಬಂದಳು ಸುಮೀರೆ.
ಅವಳೂ ಹೆದರಿಕೊಂಡೇ ಬಂದಳು. ಅವಳು ಬರುತ್ತಿದ್ದಂತೇ ನರೂಮಿ ಜೋರಾಗಿ ಅಂದ.
"ಯಾವೋನ ಹಿಂದೆ ಹೋಗಿದ್ದೆ? ಇಷ್ಟು ಹೊತ್ತು!"
ಇದನ್ನು ಕೇಳಿ ಅವಳಿಗೆ ಒಮ್ಮೆಗೇ ಸಿಟ್ಟು ಬಂತು.
"ಹೀಗೆ ಮಾತಾಡಿದರೆ ನಾನು ವಾಪಸ್ ಹೋಗ್ತೀನಿ"
ಅಂದವಳೇ ಅಲ್ಲಿಂದ ಹೊರಟುಬಿಟ್ಟಳು.
ಆಗಿದ್ದ ಸಮಚಾರವಿಷ್ಟೆ. ಅವಳ ಅಂಗಡಿಯಲ್ಲಿ ಓರ್ವ ಸ್ನೇಹಿತೆ. ಅವಳು ಪ್ರೇಮದಲ್ಲಿ ತನ್ನ ಕೈಸುಟ್ಟುಕೊಂಡಿದ್ದಳು. ನಂಬಿಸಿ ಓರ್ವ ಯುವಕ ಅವಳಿಗೆ ಕೈಕೊಟ್ಟಿದ್ದ. ಅವಳಿಗೆ ಸಮಾಧಾನ ಮಾಡುವುದು ತನ್ನ ಕರ್ತವ್ಯವೆಂದು ಸುಮೀರೆ ಅವಳನ್ನು ಹತ್ತಿರದ ಕೆಫೆ ವೆಲೋಚೆಗೆ ಕರೆದೊಯ್ದಳು. ಮಾತಾಡುವಾಗ ಯಾವುದೇ ಅಡಚಣೆ ಬೇಡವೆಂದು ಮೊಬೈಲ್ ಆಫ್ ಮಾಡಿದಳು. ಗೆಳತಿಯ ಮಾತು ಕೇಳಿಸಿಕೊಂಡು, ಅವಳಿಗೆ ಸಮಾಧಾನ ಹೇಳುತ್ತಾಹೋದಳು.
ಸಮಯದ ಮೇಲೆ ಪರಿವೆ ಇರಲಿಲ್ಲ. ನರೂಮಿ ಕಾಯುತ್ತಿರುತ್ತಾನೆ ಎಂಬುದು ಗೊತ್ತಿತ್ತು. ಮಧ್ಯೆ ಫೋನ್ ಮಾಡಿ ಸ್ವಲ್ಪ ಲೇಟು ಎಂದು ಹೇಳ ಬಹುದಾಗಿತ್ತು. ಆದರೆ ಅದು ಹೊಳೆಯಲಿಲ್ಲ. ಗೆಳತಿಯ ಪರಿಸ್ಥಿತಿ ಗಂಭೀರ ಎನಿಸಿತ್ತು.
ಸುಮೀರೆ ಟ್ರೈನ್ ಹಿಡಿದು ತನ್ನ ಅಪಾರ್ಟ್‌ಮೆಂಟಿನತ್ತ ಹೊರಟಳು. ಅವಳಿದ್ದದ್ದು ಮೆಗುರೋ ಎಂಬಲ್ಲಿ, ರೈಲ್ವೆ ಸ್ಟೇಷನ್ನಿಗೆ ಹತ್ತಿರವೇ ಇದ್ದ ದೊಡ್ಡ ಕಟ್ಟಡದಲ್ಲಿ. ಅಪಾರ್ಟ್‌ಮೆಂಟಿನ ಬಾಗಿಲಿಗೆ ಒಂದು ಧ್ವನಿ ನಿಯಂತ್ರಿತ ಬೀಗ. ಬೀಗದಕೈ ಇಲ್ಲ. ಬಾಗಿಲ ಮುಂದೆ ನಿಂತು ಪಾಸ್ ವರ್ಡ್ ಹೇಳಿದರೆ ಬಾಗಿಲು ತೆರೆದು ಕೊಳ್ಳುತ್ತಿತ್ತು. ನಿಂತು ರೋಷದಲ್ಲೇ "ನರೂಮಿ" ಎಂದಳು.
ಬಾಗಿಲು ತೆರೆದುಕೊಂಡಿತು. ಒಂದೇ ರೂಮಿನ ಅಪಾರ್ಟ್‌ಮೆಂಟ್ ಅದು. ಅದರಲ್ಲೇ ಚಿಕ್ಕದಾಗಿ ಅಡಿಗೆ ಮನೆ, ಸ್ನಾನದ ಮನೆ ಇತ್ಯಾದಿ. ಒಳ ಹೊಕ್ಕು ಕುಳಿತಳು. ಆದದ್ದನ್ನು ನೆನಸಿಕೊಂಡಳು. ಅಳು ಬಂತು. ಅರ್ಧ ಗಂಟೆ ಟೆಲಿವಿಷನ್ ನೋಡಿದಳು. ಅಷ್ಟು ಹೊತ್ತಿಗೆ ನರೂಮಿ ಮೇಲಿನ ಕೋಪ ಇಳಿದಿತ್ತು. ಅಂದು ಅವಳ ಲೆಕ್ಕಾಚಾರವೇ ಬೇರೆ ಆಗಿತ್ತು. ನರೂಮಿ ಜತೆ ಚನ್ನಾಗಿ ತಿರುಗಿ ಕುಡಿದು ಕುಣಿಯಬೇಕು ಎಂದೇ ಹೋಗಿದ್ದಳು. ಸ್ವಲ್ಪದರಲ್ಲಿ ಎಲ್ಲಾ ತಪ್ಪಿ ಹೋಯಿತು.
ಇವಳಿಗೆ ಅನ್ನಿಸಿತು, "ಅವನು ಮಾತಾಡುವ ಮುಂಚೆ ನಾನೇ ಅವನಿಗೆ ಗೊಮೆನಸಾಯ್ (ಸಾರಿ) ಹೇಳಿದ್ದರೆ ಏನಾಗುತ್ತಿತ್ತು? ಯಾಕೆ ಹೀಗೆ ದುಡುಕಿ ಬಂದು ಬಿಟ್ಟೆ?" ಸಿದ್ಧವಾಗಿದ್ದ ಅನ್ನ, ಮೀನು ಎರಡನ್ನೂ ತಿನ್ನ ಹೋದಳು, ಸೇರಲಿಲ್ಲ. ನಿದ್ದೆ ಮಾಡ ಹೋದಳು. ನಿದ್ದೆ ಬರಲಿಲ್ಲ.
"ಛೇ, ಅವನಿಗೆ ಗೊಮೆನಸಾಯ್ ಹೇಳ ಬೇಕಾಗಿತ್ತು"
ಫೋನ್ ಮಾಡುವುದಕ್ಕೆ ಬಿಗುಮಾನ. ಅಂತಹ ಕಚಡ ಮಾತಾಡಿದ್ದಾನೆ, ಅವನು. ನ್ಯಾಯವಾಗಿ ಅವನೇ ಗೊಮೆನಸಾಯ್ ಹೇಳ ಬೇಕು. ನಿದ್ದೆ ಬರಲಿಲ್ಲ. ಗೊಮೆನಸಾಯ್ ಹೇಳದೆ ವಿಧಿ ಇಲ್ಲ, ಅಲ್ಲಿಯ ವರೆಗೆ ನಿದ್ದೆಯೂ ಬರುವುದಿಲ್ಲ ಎನಿಸಿತು. ಕೈಗೆ ಹತ್ತಿರವಿದ್ದ ರಿಮೋಟನ್ನು ತೆಗೆದುಕೊಂಡು ಅದನ್ನು ಬಾಯ ಬಳಿ ಹಿಡಿದು "ಗೋಮೆನಸಾಯ್, ಗೋಮೆನಸಾಯ್" ಎಂದು ಕೂಗಿಕೊಂಡಳು. ಅದು ಬಾಗಿಲ ರಿಮೋಟ್ ಆಗಿತ್ತು. ಅದನ್ನು ಹಿಡಿದು ಹೀಗೆ ಕೂಗಿದರೆ ಪಾಸ್ ವರ್ಡ್ ಬದಲಾಗಬಹುದು ಎಂಬ ಎಚ್ಚರ ಅವಳಿಗಿರಲಿಲ್ಲ.
ಇತ್ತ ನರೂಮಿ ಹತ್ತಿರದ ಪಬ್ ಒಂದಕ್ಕೆ ಹೋಗಿ ಬಿಯರ್ ಕುಡಿದ. ಹೆಚ್ಚು ಕುಡಿಯಲಾಗಲಿಲ್ಲ. ಟ್ರೈನ್ ಹಿಡಿದು ತನ್ನ ಅಪಾರ್ಟ್‌ಮೆಂಟ್ ಇದ್ದ ಇಕೆಬುಕರೋ ಕಡೆ ಹೊರಟ. ಇವನಿಗೂ ಕೋಪ ಇಳಿದಿತ್ತು. ಅವಳೊಡನೆ ಚಕ್ಕಂದ ಆಡಲು ಸಿದ್ಧನಾಗಿ ಬಂದಿದ್ದ. ಆಕೆಯೊಡನೆ ಶಿಬಿಯಾದ ಬೆಡಗಿನ ರೆಸ್ಟೊರೆಂಟಿನಲ್ಲಿ ಕಾಲ ಕಳೆಯಬೇಕೆಂದಿದ್ದ. ನಂತರ ಅವಳೊಡನೆ ಅವಳ ಅಪಾರ್ಟ್‌ಮೆಂಟಿನಲ್ಲಿ! ಈಗ ಎನೂ ಇಲ್ಲದೆ ಪೆಚ್ಚಾಗಿ ಮನೆಗೆ ಹಿಂದಿರುಗ ಬೇಕಾಗಿದೆ.
ಆಕೆಯನ್ನು ಪಕ್ಕದಲ್ಲಿ ಕೂಡಿಸಿಕೊಂಡು ಆ ರೆಸ್ಟೊರೆಂಟಿನಲ್ಲಿ ಚಿಕನ್ ತಿನ್ನುವುದು ಹೇಗಿರುತ್ತಿತ್ತು! ಅವಳೊಡನೆ ಹಾಸಿಗೆಯಲ್ಲಿ ಹೇಗಿರುತ್ತಿತ್ತು! ಈಗ ಮುದುಕರಿಬ್ಬರ ನಡುವೆ ಟ್ರೈನಿನಲ್ಲಿ ಕುಳಿತಿರುವುದು ಹೇಗಿದೆ! ಅವನಿಗೆ ಅನ್ನಿಸಿತು,
"ಇದಕ್ಕೆ ನಾನೇ ಕಾರಣ. ಹಿಂದೆ ಮುಂದೆ ನೋಡದೆ ಹಾಗೆ ಮಾತನಾಡ ಬಾರದಾಗಿತು. ಅವಳು ಎಕೆ ತಡವಾಗಿ ಬಂದಳೋ ವಿಚಾರಿಸಬೇಕಾಗಿತ್ತು."
ಹಾಗೆ ಹೀಗೆ ಯೋಚನೆ ಮಾಡಿದ. ಕೊನೆಗೆ ಅನ್ನಿಸಿತು.
"ಹೌದು, ನಾನೇ ಅವಳಿಗೆ ಗೊಮೆನಸಾಯ್ ಹೇಳ ಬೇಕು".
ಆದರೆ ಮತ್ತೆ ಬಿಗುಮಾನದ ಪ್ರಶ್ನೆ. ಹಾಗೆ ತಿರುಗಿ ಹೋದವಳಿಗೆ ನಾನು ಗೊಮೆನಸಾಯ್ ಹೇಳುವುದೇ? ಬೇಡ ಅವಳ ಮನೆ ಬಾಗಿಲಲ್ಲಿ ನಿಂತು ಹೇಳಿ ಬರುತ್ತೀನಿ"
ಟ್ರೈನು ಇಕೆಬುಕರೋವಿಗೆ ಮೆಗುರೋ ಮಾರ್ಗವಾಗಿಯೇ ಹೋಗಬೇಕು. ಹಿಂದೆ ಎಷ್ಟೋ ಬಾರಿ ಮಾಡಿದ್ದಂತೆ ಇಂದೂ ನರೂಮಿ ಮೆಗುರೋನಲ್ಲಿ ಟ್ರೈನ್ ಇಳಿದು ಸುಮೀರೇಯ ಅಪಾರ್ಟ್‌ಮೆಂಟಿನತ್ತ ನಡೆದ. ಬಾಗಿಲಿಗೆ ಗೊಮೆನಸಾಯ್ ಹೇಳಿ ತಕ್ಷಣ ಹಿಂತಿರುಗುವುದು ಎಂದು ನಿಶ್ಚಯಿಸಿದ್ದ. ಬಾಗಿಲ ಮುಂದೆ ನಿಂತು ಒಂದಲ್ಲ ಮೂರು ಸಲಿ ಹೇಳುತ್ತೇನೆ ಅಂದುಕೊಂಡು ಸ್ವಲ್ಪ ಸಿಟ್ಟಿನಲ್ಲೇ ಕೂಗಿದ
"ಗೊಮೆನಸಾಯ್, ಗೊಮೆನಸಾಯ್"
ಅಶ್ಚರ್ಯ, ಸುಮೀರೇ ರೂಮಿನ ಬಾಗಿಲು ತೆರೆದುಕೊಂಡಿತು. ಅವನ ಅರಿವಿಲ್ಲದೆಯೇ ನರೂಮಿ ಸುಮೀರೆ ಕೊಠಡಿಯೊಳಗೆ ಬಂದು ಬಿಟ್ಟಿದ್ದ.
(ಈ ಕತೆಯ ಒಂದು ಆವೃತ್ತಿ ಬಹು ಹಿಂದೆ "ಅಮೆರಿಕನ್ನಡ"ದಲ್ಲಿ ಪ್ರಕಟಿತವಾಗಿತ್ತು)












Click it and Unblock the Notifications