• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಳಿಜಾರು : ಒಂದು ನೀಳ್ಗತೆ (ಭಾಗ 3)

By * ಭರತ್ ಎನ್ ಶಾಸ್ತ್ರಿ, ಮೆಸ್ಸಾಚುಸೆಟ್
|

(ಇಳಿಜಾರು : ಕಥೆಯ ಮೂರನೇ ಭಾಗ)

ಬೆಳಿಗ್ಗೆ ಅವನನ್ನು ಮಲಗಿದಂತೆಯೇ ಸ್ಕೋಪಿ ರೂಮಿಗೆ ಕರೆದುಕೊಂಡು ಹೋದರು. ಡಾ. ಸೂದ್ ಸ್ಕೋಪ್ ಕೈಲಿ ಹಿಡಿದು ಸೂಚನೆಗಳನ್ನು ಕೊಡುತ್ತಾ ಹೋದರು.."ಡಾ ಶಂಕರ್ ಪ್ಲೀಸ್ ಸ್ವಾಲೊ .. ದಟ್"ಸ್ ಗುಡ್.." ಕಣ್ಣಲ್ಲಿ ನೀರೂರುತ್ತಿದೆ.. ಯಮಯಾತನೆಯನ್ನು ಕೊಡುತ್ತಾ ಸ್ಕೋಪ್ ಗಂಟಲಲ್ಲಿ ಇಳಿಯುತ್ತಿದೆ. "ಸೀ .. ಹ್ಯೂಜ್ ವೆರೆಸಿಸ್ (ಅನ್ನ ನಾಳದ ಕೆಳ ತುದಿಯಲ್ಲಿ ಜಠರದ ಸಮೀಪ ಇರುವ ವೆಯಿನ್ ಗಳು.. ನಿಧಾನವಾಗಿ ಹದಗೆಡುತ್ತಿರುವ ಲಿವರಿನ ಖಾಯಿಲೆಯಲ್ಲಿ ಊದಿಕೊಳ್ಳುತ್ತವೆ.) ಐ ಆಮ್ ಬ್ಯಾಂಡಿಂಗ್ ದೆಮ್...ಐ ಕೆನ್ ಸೀ ಕಪಲ್ ಆಫ್ ದೆಮ್ ಇನ್ ದಿ ಸ್ಟಮಕ್ ಆಲ್ಸೊ..ಇಟ್ ಈಸ್ ಹೈ ಟೈಮ್ ಯೂ ಸ್ಟಾಪ್ಡ್ ಆಲ್ಕೊಹಾಲ್."

ವಾರ್ಡಿಗೆ ಶಂಕರಪ್ಪನನ್ನು ಮರಳಿ ತಂದಾಗ ಸುಧೀಂದ್ರ ಇರಲಿಲ್ಲ. ಅವನಿಗೆ ನಿದ್ದೆ ಹತ್ತುವಂತೆ ಅನ್ನಿಸಿದಾಗ ಕಣ್ಣು ಬಿಟ್ಟರೆ ಎದಿರಿಗೆ ನಿಂತಿದ್ದ. "ರೌಂಡ್ಸ್ ಅಂತ ಹೊರಗೆ ಕಳಿಸಿದರು.." ಅಂದ. ಆಯಾಸದಿಂದ ಶಂಕರಪ್ಪ ಕಣ್ಣು ಮುಚ್ಚಿದ. ನಿದ್ದೆಯಲ್ಲಿ ಮತ್ತದೇ ಕನಸು.. ಯಾವುದೋ ಸ್ಟೇಷನ್, ಶಬನಮ್ ನೀರು ಕೇಳಿದ್ದರಿಂದ ಇವನು ಇಳಿದು ನೀರು ತರಲು ಹೋದಾಗ ಟ್ರೇನ್ ವಿಸಲ್ ಹಾಕಿ ಚಲಿಸಲು ಆರಂಭಿಸುತ್ತದೆ. ಶಬ್ನಮ್ ಕಿಟಕಿಯಿಂದ ಕೈ ಹಾಕಿ ರೋದಿಸುತ್ತಿದ್ದಾಳೆ.. "ಪಾನಿ .. ಪಾನಿ.. ಶಂಕರ್".. ಇವನು ಓಡುತ್ತಿದ್ದಾನೆ, ಟ್ರೇನಿನ ವೇಗ ಕ್ಷಣ ಕ್ಷಣಕ್ಕೆ ಹೆಚ್ಚುತ್ತಿದೆ.. ಹಾ.. ಬಿದ್ದೆನಾ.. ದೇವರೆ ಏನಿದು ರಕ್ತ ನನ್ನ ಬಾಯಲ್ಲಿ.. ಧಡಕ್ಕನೆ ಎಚ್ಚರವಾಗಿ ಮತ್ತೊಮ್ಮೆ ವಾಂತಿ.. ಆಸ್ಪತ್ರೆಯ ಅಂಗಿಯೆಲ್ಲಾ ರಣ ರಕ್ತಮಯ. ಸುಧೀಂದ್ರ ಗಾಬರಿಯಲ್ಲಿ ಓಡಿ ಹೋಗಿ ಡ್ಯೂಟಿ ರೆಸಿಡೆಂಟನ್ನು ಕರೆದು ಬಂದ. ಅವಳು ತಕ್ಷಣ ಬಿಪಿ ಚೆಕ್ ಮಾಡಿ ಅಂದಿನ ಚಾರ್ಟನ್ನು ಮತ್ತೊಮ್ಮೆ ಗಮನಿಸಿ "ಸಮ್ ಟ್ರಿಕ್ಲಿಂಗ್ ವಿಲ್ ಬಿ ದೇರ್.. ಲೆಟ್ ಅಸ್ ಕೀಪ್ ಅ ಕಂಟಿನ್ಯುಅಸ್ ಡ್ರೇನ್ ಥ್ರೂ ಆರ್ ಟಿ..(ಕೊಂಚ ರಕ್ತ ಸೋರುವಿಕೆ ಇರುತ್ತದೆ..ಸತತವಾಗಿ ಜಠರದ ರಸ ಹೊರಗೆ ಬರುವ ಹಾಗೆ ಇಡುವ..) ಮತ್ತೆರಡು ಯೂನಿಟ್ ಬ್ಲಡ್ ಕೊಡುವ.." ಎಂದಳು.

ಬೆಳಗಾಯಿತು, ಮತ್ತದೇ ರೆಸಿಡೆಂಟು ಚಂದದ ನಡುಗೆಯಲ್ಲಿ ಬಂದು ಗುಡ್ ಮಾರ್ನಿಂಗ್ ಹೇಳಿದಳು. ಬೆಳ್ಳಗೆ ಹೊಳೆಯುತ್ತಿರುವ ಮುಖ, ಗುಲಾಬಿಯಂತೆ ಪಿಂಕ್ ಆದ ಕಿವಿಗಳು.. "ಡಾಕ್ಟರ್ ವಾಟ್ ಇಸ್ ಯುವರ್ ನೇಮ್?" ಎಂದ. "ಪ್ರಾಚೀ ಪರಾಂಜಪೆ" ಸುಂದರವಾಗಿ ನಕ್ಕು ಹೇಳಿದಳು .."ಓ..ಅಂದಹಾಗೆ, ಡಾ ಶಂಕರ್, ನೀವು ಹೆಚ್ಚು ಹೊತ್ತು ಮಲಗಿರೋದು ಒಳ್ಳೇದು, ನಿಮಗೆ ಸದ್ಯಕ್ಕೆ ಸ್ವಲ್ಪ ಫ್ಲೂಯಿಡ್ ಓವರ್ ಲೋಡ್ ಇದೆ, ಆದ್ದರಿಂದ ..ಬೆಟರ್ ಫಾರ್ ಯುವರ್ ಕಿಡ್ನೀಸ್..ಸೋ .. ಎದ್ದು ಕೂಡಬೇಡಿ" ಎಂದಳು. ಆಗಲೆಂದ.

ಸಂಜೆಗೆ ಬಾಲು ಮತ್ತಿಬ್ಬರು ಮೆಡಿಕಲ್ ಆಫೀಸರ್ ಗಳು ಶಂಕರಪ್ಪನನ್ನು ನೋಡಲು ಬಂದರು. ಪ್ರಾಚೀ ಇನ್ನೂ ವಾರ್ಡಿನಲ್ಲೇ ಇದ್ದಳು. ಇವನ ಬಳಿ ಬಂದ ವಿಸಿಟರ್ ಗಳನ್ನು ನೋಡಿ, ಮತ್ತು ಎಲ್ಲರೂ ಡಾಕ್ಟರ್ ಗಳೆಂದು ಅರ್ಥವಾದ ನಂತರ "ವೈ ಡೋಂ"ಟ್ ಯೂ ಆಲ್ ಹೆಲ್ಪ್ ಹಿಮ್ ಸ್ಟಾಪ್ ಆಲ್ಕೊಹಾಲ್?" ಎಂದಳು. ಎಲ್ಲರೂ ಮುಖ ಮುಖ ನೋಡಿಕೊಂಡರು. ಬಾಲು ಮಾತ್ರ ಹುಸಿನಕ್ಕ. ಅವನು ನಕ್ಕದ್ದು ನೋಡಿ ಶಂಕರಪ್ಪನಿಗೆ ಉರಿದು ಹೋಯಿತು. "ಕಳ್ಳ ನನ ಮಗ ಇವನೂ ನಾನೂ ಒಟ್ಟಿಗೆ ಅಲ್ಲವಾ ಈ ಆಸ್ಪತ್ರೆಗೆ ಸೇರಿದ್ದು. ಇವನೂ ತನ್ನಂತೆಯೇ ಇದ್ದರೂ ಈಗ ಕೈಹಿಡಿದ ಗಟ್ಟಿಗಿತ್ತಿಯ ಪುಣ್ಯದಿಂದ ಉದ್ಧಾರವಾಗಿ ಬಿಟ್ಟು ಸುಭಗನಂತೆ ಪೋಸ್ ಕೊಡುತ್ತಿದ್ದಾನೆ" ಎಂದು ಮನಸ್ಸಿನಲ್ಲೇ ಬೈದುಕೊಂಡ.

ನಾಯರ್ ಆಸ್ಪತ್ರೆಯಿಂದ ಮರಳಿ ಬಂದ ಶಂಕರಪ್ಪನಿಗೆ ತನ್ನಕ್ಕ ಮತ್ತು ಭಾವ ಊರಿನಿಂದ ಅನಿರೀಕ್ಷಿತವಾಗಿ ಬಂದದ್ದು ಆಶ್ಚರ್ಯವೆನಿಸಿತು. ಅವರು ಮೆಡಿಕಲ್ ಸೂಪರಿಂಟೆಂಡಂಟರ ಜತೆ ಮಾತನಾಡಿ, ಅವನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬೆಳಗಾವಿಗೆ ಕರೆದುಕೊಂಡುಹೋದರು.

ಶಬನಮ್ ಮನೆಯಲ್ಲಿ ಅವಳು ಹಿಂದೂ ಹುಡುಗನೊಬ್ಬನನ್ನು ಪ್ರೇಮಿಸುತ್ತಿರುವುದಾಗಿಯೂ, ಮತ್ತು ಮದುವೆ ಆಗಲು ನಿರ್ಧರಿಸಿರುವುದಾಗಿಯೂ ಕೇಳಿ ಅವಳ ಅಕ್ಕ ಹೆದರಿದಂತೆ "ಕಯಾಮತ್" ಆಗಿ ಹೋಯಿತು. ಅವಳ ತಂದೆ "ತಲ್ವಾರ್ ದೇದೊ ಮುಝೆ.. ಸಮಝ್ ಲೂಂ ಗಾ ಕಿ ಮೇರೀ ಸಿರ್ಫ್ ಏಕ್ ಬೇಟಿ ಹೈ..ಇಸ್ ಕೋ ಕಾಟ್ಕೆ ಟುಕ್ ಡೆ ಟುಕ್ ಡೆ ಕರ್ ದೂಂ ಗಾ" ಎಂದು ಆರ್ಭಟಿಸಿ ಆಯಿತು. ಅವಳು ಪ್ರೇಮಿಸುತ್ತಿರುವುದು ಒಬ್ಬ ಡಾಕ್ಟರನ್ನೆಂದು ತಿಳಿದ ನಂತರ ಇನ್ನಷ್ಟು ಉರಿದುಬಿದ್ದರು. "ಯೇ ಡಾಕ್ಟರ್ ಲೋಗೋಂ ಕಿ ಕೋಂ ಹೀ ಐಸಿ ಹೈ, ನರ್ಸೋಂ ಕೋ ಕ್ಯಾ ಸಮಝ್ ಕರ್ ಬೈಠೇ ಹೈ" ಎಂದು ಕುದಿದರು. ಆಚೀಚಿನವರಿಗೆ, ನಂಟರಿಗೆ, ತಬ್ಲೀಘ್ ನವರಿಗೆ ಸುದ್ದಿ ತಿಳಿಯದಂತೆ ಸಮಾಧಾನವಾಗಿರಲು ಅವಳ ಅಮ್ಮೀ ಪರಿಪರಿಯಾಗಿ ಬೇಡಿಕೊಂಡ ನಂತರ ವಿಪರೀತ ಪರಿಣಾಮಗಳ ಬಗ್ಗೆ ಹೆದರಿಸಿದರು. ಶಬನಮ್ ಅಮ್ಮೀಯ ಕಣ್ಣೀರಿಗೆ ಕರಗಿದರೂ ಏನೂ ಹೇಳಲಾರದೆ ಹೋದಳು. ಮರಳಿ ಮುಂಬೈಗೆ ಹೊರಟು ನಿಂತಾಗ ತಂದೆ ಮತ್ತೊಮ್ಮೆ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಳ್ಳುವುದೇ ಮೊದಲಾದ ಎಲ್ಲ ಬೆದರಿಕೆಗಳೊಂದಿಗೆ ಬೀಳ್ಕೊಟ್ಟರು.

ಆರ್ಥರ್ ರೋಡ್ ನಲ್ಲಿರುವ ಸೋಂಕು ರೋಗಗಳ ಆಸ್ಪತ್ರೆಗೆ ಶಬನಮ್ ಬಂದಾಗ ಮುಂಬೈಗೆ ಮರಳಿ ಹನ್ನೆರಡು ಗಂಟೆಗಳಷ್ಟೇ ಆಗಿದ್ದವು. ಕಳೆದ ಹತ್ತು ದಿನಗಳ ಅನಿರೀಕ್ಷಿತ ಪ್ರಯಾಣಗಳು, ತಂದೆ-ತಾಯೊಂದಿರ ಜತೆ ಮನಸ್ತಾಪ, ಅಕ್ಕನ ಮತ್ತು ಅಮ್ಮನ ಕಣ್ಣೀರು ಇವೆಲ್ಲದರಿಂದ ಅವಳು ನೊಂದಿದ್ದಳು. ಅವಳ ಮನಸ್ಸಿನಲ್ಲಿದ್ದದ್ದು ಈಗ ಒಂದೇ ಯೋಚನೆ. ಆದಷ್ಟು ಬೇಗ ಶಂಕರಪ್ಪನ ಬಳಿ ಹೋಗಿ ನಡೆದಿದ್ದನ್ನು ತಿಳಿಸಿ ಅವನನ್ನು ಮಾನಸಿಕವಾಗಿ ಕೋರ್ಟಿನ ಮದುವೆಗೆ ತಯಾರು ಮಾಡುವುದಾಗಿತ್ತು. ಜತೆಗೆ ಫೋನ್ ಮಾಡಿದರೆ ಅವನು ಉತ್ತರಿಸದೆ ಹೋದುದರ ಬಗ್ಗೆ ಸಿಟ್ಟೂ ಇತ್ತು.

ಹಾಸ್ಟೆಲಿಗೆ ಬಂದು ಅವನ ಕೋಣೆಯ ಬಾಗಿಲಿಗೆ ಬಿದ್ದ ಬೀಗವನ್ನು ಕಂಡು ಓಪಿಡಿಯಲ್ಲಿದ್ದಾನೆಂದುಕೊಂಡಳು. ಊಟದ ಹೊತ್ತಾದ್ದರಿಂದ ವಾರ್ಡಿನಿಂದ ಮರಳಿ ಬಂದಿದ್ದ ಸುಧೀಂದ್ರ ತನ್ನ ಕೋಣೆಯಿಂದ ಹೊರಬಿದ್ದವನು ಇವಳನ್ನು ನೋಡಿ ನಿಂತ. ಅವಳಿಗೆ ಶಂಕರಪ್ಪನ ಇತ್ತೀಚಿನ ಅನಾರೋಗ್ಯದ ಬಗ್ಗೆ ಹೇಳುತ್ತಿದ್ದಂತೆ ಶಬನಮ್ ಳ ಮುಖ ಬಿಳಿಚಿಕೊಂಡಿತು. ಅವನು ರಜೆಯ ಮೇಲೆ ಬೆಳಗಾವಿಗೆ ಮರಳಿ ಹೋಗಿದ್ದಾನೆಂದು ಸುಧೀಂದ್ರ ಹೇಳುತ್ತಿದ್ದಂತೆಯೇ ಮೆಡಿಕಲ್ ಸೂಪರಿಂಟೆಂಡಂಟರ ಕಾರಕೂನ, ಜತೆಗೆ ಮಧ್ಯ ವಯಸ್ಸಿನ ಮ್ಲಾನವದನದ ಹೆಂಗಸೊಬ್ಬಳು ಇವರ ಬಳಿಗೆ ನಡೆದು ಬಂದು ಶಂಕರಪ್ಪನ ಕೋಣೆಯ ಬೀಗವನ್ನು ತೆರೆದರು. ಏನೂ ಅರ್ಥವಾಗದೆ ಸುಧೀಂದ್ರ ಮತ್ತು ಶಬನಮ್ ಮುಖ ಮುಖ ನೋಡಿಕೊಂಡರು. ಹಿಂಬಾಲಿಸಿಕೊಂಡು ಬಂದ ಇಬ್ಬರು ಆಳುಗಳು ಶಂಕರಪ್ಪನ ಕೋಣೆಯಲ್ಲಿರುವ ವಸ್ತುಗಳನ್ನು ಖಾಲಿ ಮಾಡಲು ಆರಂಭಿಸಿದರು. ಸುಧೀಂದ್ರ ಕಾರಕೂನನ ಬಳಿ ಏನೆಂದು ವಿಚಾರಿಸಿದ. ಅವನು ನಾಲ್ಕು ದಿನಗಳ ಹಿಂದೆ, ಊರಿನಲ್ಲಿ ಮತ್ತೊಮ್ಮೆ ರಕ್ತವಾಂತಿಯಾಗಿ ಶಂಕರಪ್ಪ ಮರಣಿಸಿದನೆಂದೂ ಬಂದಾಕೆ ಅವನ ಅಕ್ಕನೆಂದೂ ತಿಳಿಸಿದ. ಶಬನಮ್ ದಿಙ್ಮೂಢಳಾದಳು. ಸುಧೀಂದ್ರ ತಲೆ ಅಡ್ಡಡ್ಡಲಾಗಿ ಆಡಿಸಿ ತ್ಚು.. ತ್ಚು.. ಎಂದ.

ಆಳುಗಳು ಆಗಲೇ ಆ ದೂಳು ತುಂಬಿದ ಪುಸ್ತಕಗಳನ್ನು ಹೊರಗಿಟ್ಟಿದ್ದರು. ಶಂಕರಪ್ಪನ ಅಕ್ಕ ಸುಧೀಂದ್ರನ ಬಳಿ ಬಂದು ಯಾರಿಗಾದರೂ ಆ ಪುಸ್ತಕಗಳು ಪ್ರಯೋಜನವಾಗುವಂತಿದ್ದರೆ ಕೊಡುವಂತೆ ವಿನಂತಿಸಿ ಅಳಲಾರಂಭಿಸಿದಳು. ಸುಧೀಂದ್ರ ಒಂದೆರಡು ಎಡಿಷನ್ ಗಳಷ್ಟು ಹಳತಾದ ಆ ಪುಸ್ತಕಗಳನ್ನು ನೋಡಿ ಅವುಗಳು ಯಾರಿಗೆ ಉಪಯುಕ್ತವಾಗಬಹುದೆಂದು ಸೋಜಿಗ ಪಡಲು ಆರಂಭಿಸಿದ.

ಹೊರಗೆ ಓಡಿದ ಶಬನಮ್ ಟ್ರಾಫಿಕ್ಕನ್ನೂ ಲೆಕ್ಕಿಸದೆ ಸರ್ರನೆ ರಸ್ತೆ ದಾಟಿ ಸಿಕ್ಕ ಮೊದಲ ಟ್ಯಾಕ್ಸಿ ಹಿಡಿದು "ಸಯನ್ ಹಾಸ್ಪಿಟಲ್ ಚಲೋ" ಎಂದು ಹೇಳಿ ಬಿಕ್ಕಳಿಸಲು ಪ್ರಾರಂಭಿಸಿದಳು. ದಾಡಿ ಬಿಟ್ಟು ಗುಂಡನೆಯ ಟೋಪಿ ಇಟ್ಟಿದ್ದ ಆ ಮುಸ್ಲಿಮ್ ಟ್ಯಾಕ್ಸಿ ಚಾಲಕ ಒಮ್ಮೆ ತಿರುಗಿ ನೋಡಿ ಮತ್ತೆ ರಸ್ತೆಯ ಕಡೆ ಗಮನವಿಟ್ಟು ಟ್ಯಾಕ್ಸಿ ಚಲಾಯಿಸಲು ಪ್ರಾರಂಭಿಸಿದ.

« ಇಳಿಜಾರು : ಕಥೆಯ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more