ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಜಾರು : ಒಂದು ನೀಳ್ಗತೆ (ಭಾಗ 2)

By * ಭರತ್ ಎನ್ ಶಾಸ್ತ್ರಿ, ಮೆಸ್ಸಾಚುಸೆಟ್
|
Google Oneindia Kannada News

Bharat N Sastry, Massachusetts, USA
(ಇಳಿಜಾರು : ಕಥೆಯ ಎರಡನೇ ಭಾಗ)

ಇಂತಹ ಹುಮ್ಮಸ್ಸು ಶಂಕರಪ್ಪನಿಗೆ ಮೈಗೂಡಲೇ ಇಲ್ಲ. ಬಂದ ಹೊಸತರಲ್ಲಿ ಪೋಸ್ಟ್ ಗ್ರಾಜುಯೇಶನ್ ಮುಂತಾದ ಕನಸುಗಳಿದ್ದರೂ ಮುಂಬೈ ನಂತಹ ದೊಡ್ಡ ಊರು ಕೊಡಬಹುದಾದ ಅನಾಮಿಕತೆ ಮತ್ತು "ಕೇರ್ ಫ್ರೀ' ಜೀವನ ಹೆಚ್ಚು ಆಪ್ಯಾಯಮಾನವೆನ್ನಿಸುತ್ತಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಒಂದಿಬ್ಬರು ಮೆಡಿಕಲ್ ಆಫೀಸರುಗಳು, ತಮಗೆ ಏರಲಾರದ ಎತ್ತರಕ್ಕೆ "ಅದು ಪ್ರಯೋಜನವಿಲ್ಲ" ಎಂಬಂತಹ ಫೀಡ್ ಬ್ಯಾಕ್ ಕೊಡುತ್ತಿದ್ದುದೂ ಈ ವಿಷಯದಲ್ಲಿ ಶಂಕರಪ್ಪನ ನಿರಾಸಕ್ತಿಗೆ ಕಾರಣವಾಯಿತು. ಎಟುಕಲಾರದ ದ್ರಾಕ್ಷಿ ಹುಳಿಯಲ್ಲವೆ!

ಏನೂ ಮಾಡಲಾಗದವನು ಸುಮ್ಮನೆ ಕೂತಾಗ ಮನಸ್ಸೆಂಬ ಮರ್ಕಟಕ್ಕೆ ಎದುರಿಗೆ ಕುಳಿತಿರುತ್ತಿದ್ದ ಶಬನಮ್ ಳ ಮೇಲೆ ಅನುರಾಗ ಮೂಡಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಆದರೆ ಶಬನಮ್ ಒಳ್ಳೆಯ ಹುಡುಗಿಯಾದ್ದರಿಂದ ಅವರ ಪ್ರೇಮ ಅವಳು ಸಯನ್ ನ ಲೋಕಮಾನ್ಯ ತಿಲಕ್ ಆಸ್ಪತ್ರೆಗೆ ಕೆಲಸ ಬದಲಾಯಿಸಿದರೂ ಮುಂದುವರಿಯಿತು.

ಮುಂಬೈಯ ಮಹಾನಗರಪಾಲಿಕೆ ಆಸ್ಪತ್ರೆಗಳಲ್ಲಿಯ ಬ್ರಹ್ಮಚಾರಿ ತರುಣ ವೈದ್ಯರಿಗಿದ್ದ ಪ್ರಲೋಭನೆಗಳಲ್ಲಿ ಮದಿರೆಯ ಅತಿ ಬಳಕೆಯೂ ಒಂದು. ಶಂಕರಪ್ಪನಿಗೂ ಅದರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಅನಧಿಕೃತ ಹೇಳಿಕೆಯೊಂದು ಚಾಲ್ತಿಯಲ್ಲಿ ಇದ್ದದ್ದೂ ಹೌದು, "ಮಹಾನಗರ ಪಾಲಿಕೆಯಲ್ಲಿರುವ ಅವಿವಾಹಿತ ಪುರುಷ ವೈದ್ಯರು ಆಲ್ಕೊಹಾಲ್ ಸಂಬಂಧಿ ಯಕೃತ್ತಿನ ರೋಗಗಳಿಗೆ ಈಡಾಗುತ್ತಾರೆ" ಅಂತ. ಎಮ್ ಬಿ ಬಿ ಎಸ್ ಓದುವಾಗಲೇ, ಆಗೊಮ್ಮೆ ಈಗೊಮ್ಮೆ ಸಿಗರೇಟು ಸೇದುವುದೂ, ಹಾಸ್ಟೆಲಿನಲ್ಲಿ ಗೆಳೆಯರ ಜತೆ ಮೋಜು ಮಾಡುವಾಗ ಬಿಯರ್ ಏರಿಸುವುದು ಅಭ್ಯಾಸವಾಗಿದ್ದರೂ, ಕುಡಿತ ಮುಂಬೈಗೆ ಬಂದ ನಂತರ ಸಮಯ ಕಳೆಯುವ ಸಾಧನವಾಗಿದ್ದು ಕಡೆಗೆ ಚಟವಾಗಿ ಪರಿಣಮಿಸಿತ್ತು. ಶಬನಮ್ ಳ ಒತ್ತಾಯದಿಂದ, ಕಣ್ಣೀರಿನಿಂದ ವಿಚಲಿತನಾಗಿ ಒಮ್ಮೆ ಥೆರಪಿಗೆ ಸೇರಿದ್ದರೂ ಮುಗಿದ ಎರಡು ತಿಂಗಳಿಗೇ ಮತ್ತೆ ಪ್ರಾರಂಭವಾಗಿತ್ತು.

ಸಂಜೆಗೆ ಹಾಸ್ಟೆಲಿನ ಟಿಟಿ ರೂಮಿನಲ್ಲಿ ಪೆಥಾಲಜಿಯ ಆನಂದ್ ಸಿಕ್ಕಿದ. "ಅರೇ ಶಂಕರ್, ತೇರಾ LFT ಥೋಡಾ ಬಿಗಡ್ ಗಯಾ ಹೈ. ಎನ್ಜೈಮ್ಸ್ ಭೀ ಬಢ್ ಗಯೇ ಹೈ, ಲೇಕಿನ್ A:G reverse ಹೋ ಗಯಾ ಹೈ. ಆಲ್ಬುಮಿನ್ ಥೋಡಾ ಕಮ್ ಹೈ. HBs Ag ನೆಗೆಟಿವ್ ಹೈ. ದಾರೂ ಪೀನಾ ಅಬ್ ತೊ ಬಂದ್ ಕರೋ ಯಾರ್" ಎಂದ. ನಾನು ಕುಡಿದರೆ ಇವನ ದುಡ್ಡಿನಿಂದೇನೂ ಅಲ್ಲವಲ್ಲ, ಇವನಿಗೇಕೆ ಕಾಳಜಿ? ಎಂದು ಮನಸ್ಸಿನಲ್ಲೇ ಸಿಡಿಮಿಡಿಗೊಂಡರೂ ರಿಪೊರ್ಟ್ ತೆಗೆದುಕೊಂಡು ಎತ್ತಿಟ್ಟ.

ನಾಳೆಗೆ ಬರುತ್ತೇನೆಂದ ಶಬನಮ್ ಬಾರದೆ ಎರಡು ದಿನಗಳಾದವು. ಮೊಬೈಲ್ ಗೆ ಫೋನ್ ಮಾಡಿದರೆ "ದಿಸ್ ಮೊಬೈಲ್ ಫೋನ್ ಇಸ್ ಸ್ವಿಚ್ಡ್ ಆಫ್" ಎನ್ನುವ ಸಂದೇಶ. ಎರಡು ದಿನಗಳಿಂದ ಸಂಜೆಗೆ ಕಾಲು ಊದಿಕೊಳ್ಳುತ್ತಿವೆ. ಇಂದು ಬೆಳಿಗ್ಗೆ ಮುಖ ಕೂಡ ಕೊಂಚ ಊದಿದಂತೆ ಇತ್ತು. "ಥತ್.. ಇದೇನಾಗಿ ಹೋಯಿತು?" ಎಂದುಕೊಂಡ ಶಂಕರಪ್ಪ. ಓಪಿಡಿ ಮುಗಿಸಿ ಬರುವಾಗ ನಾಯರ್ ಹಾಸ್ಪಿಟಲ್ ನಿಂದ ಪ್ಲಾಸ್ಟಿಕ್ ಸರ್ಜರಿಯ ರೊಟೇಶನ್ ಗೆ ಬರುವ ಆ ಹುಡುಗರು ಸಿಕ್ಕಿದರು. "ಡಾ ಶಂಕರ್, ಕಲ್ ರಾತ್ ಕೋ ಹಮಾರೆ ಸೆಂಡ್ ಆಫ್ ಪಾರ್ಟಿ ಮೇ ಆನಾ ಜರೂರ್" ಎಂದರು. ಆರಾರು ತಿಂಗಳಿಗೆ ಬದಲಾಗುವ ಹೌಸ್ ಆಫೀಸರ್ ಗಳು, ಮಕ್ಕಳ ರೋಗ ಚಿಕಿತ್ಸೆ, ಮೆಡಿಸಿನ್, ಆರ್ಥೊಪಿಡಿಕ್ಸ್, ಪ್ಲಾಸ್ಟಿಕ್ ಸರ್ಜರಿ ಮುಂತಾದ ವಿಭಾಗಗಳಲ್ಲಿ ರೊಟೇಶನ್ ಮುಗಿಸಿ ತಮ್ಮ ತಮ್ಮ ಆಸ್ಪತ್ರೆಗಳಿಗೆ ಹಾರಿ ಹೋಗುತ್ತಿದ್ದರು. ಯಾರೊಂದಿಗೂ ಆತ್ಮೀಯ ಸಂಬಂಧ ಬೆಳೆಯದೆ ಇರಲು ಕಾರಣ ಈ ಸೀಮಿತ ಅವಧಿಯೆ. ಸೋಜಿಗವೆಂಬಂತೆ, ಈ ಆರು ತಿಂಗಳುಗಳಲ್ಲಿಯೆ ಹಲವು ಪ್ರಣಯ ಪ್ರಸಂಗಗಳೂ ಹುಟ್ಟಿ ಸಾಯುತ್ತಿದ್ದವು.

ಇಂದು ಡ್ರಿಂಕ್ಸ್ ತೆಗೆದುಕೊಳ್ಳಲೇಬಾರದು ಎಂದುಕೊಂಡು ಸಂಜೆಗೆ ಹಾಸ್ಟೆಲಿನಲ್ಲೇ ಇದ್ದ ಪಾರ್ಟಿಗೆ ಹೋದ. ಆದರೆ ಎಂತಹ ಬಲವಾದ ನಿರ್ಣಯವನ್ನೂ ಮುರಿಸುವ ಸೆಳೆತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆ ಮೈಸೂರಿನ ಹುಡುಗನಿಗೆ, ಪ್ಲಾಸ್ಟಿಕ್ ಸರ್ಜರಿಯ ಎರಡನೆಯ ವರ್ಷದಲ್ಲಿದ್ದ ಅವಳ ಹೆಸರೇನು? ವೈಶಾಲಿ.. ತುಂಬ ದಿಟ್ಟ ಹುಡುಗಿ.. ಬಿಯರ್ ಕುಡಿಸಿಯೇ ಬಿಟ್ಟಳು. ಪೆದ್ದು ಮುಂಡೇದು ಮೊದಲ ಬಾರಿ ಕುಡಿದದ್ದೆಂದು ಕಾಣುತ್ತದೆ. "ರೋಟಿ ಬಹುತ್ ಅಚ್ಚಾ ಹೈ" ಎಂದು ಹಪ್ಪಳ ತಿನ್ನಲಿಕ್ಕೆ ಹತ್ತಿದ.

ರಾತ್ರೆ 12ಕ್ಕೆ ತಮ್ಮ ತಮ್ಮ ಕೋಣೆಗೆ ತೆರಳಿದ ಎಲ್ಲರಿಗೂ ನಿದ್ದೆ. ಮರುದಿನ ಶಂಕರಪ್ಪ ಎದ್ದಾಗ ಎದಿರು ಕೋಣೆಯ ಬಾಗಿಲು ಇನ್ನೂ ತೆರೆದಿರಲಿಲ್ಲ. ಇಂದು ಹೊಟ್ಟೆಯೂ ಕೊಂಚ ಉಬ್ಬಿದೆ. ತಡ ಕೂಡಾ ಆಗಿತ್ತು. ಬೇಗ ಬೇಗ ಕೆಲಸ ಮುಗಿಸಿ fever ಓಪಿಡಿಗೆ ಓಡಿದ. ಶಬನಮ್ ರಾತ್ರಿಗೆ ಫೋನ್ ಮಾಡಿದಳು. ಅಕ್ಕನೊಡನೆ ಔರಂಗಾಬಾದ್ ನಲ್ಲಿ ಇದ್ದೇನೆಂದೂ ತಂದೆಗೆ ಅನಾರೋಗ್ಯವೆಂದು ಬರಬೇಕಾಯಿತೆಂದೂ ಇನ್ನು ಮೂರು ದಿನಗಳ ನಂತರ ಮುಂಬೈಗೆ ಮರಳುವೆನೆಂದೂ ತಿಳಿಸಿದಳು. "ಐ ಲವ್ ಯೂ" ಹೇಳಿ ಫೋನಿಟ್ಟಳು. ಮಾತನಾಡುವಾಗ ಮಧ್ಯೆ ಒಮ್ಮೆ ಬಿಕ್ಕಿದಳೋ ತಿಳಿಯದೆ ಹೋಯಿತು. ನಾಳೆಯಿಂದ ರಾತ್ರಿ ಪಾಳಿ.

ಈ ಆಸ್ಪತ್ರೆಗೆ ರಾತ್ರಿಯಾಗಲೀ ಹಗಲಾಗಲೀ ಭರ್ತಿಯಾಗುವ ರೋಗಿಗಳ ಕೊರತೆಯಿಲ್ಲ ಎಂದುಕೊಳ್ಳುತ್ತಿದ್ದಂತೆ ಹೊಟ್ಟೆಯೊಳಗೆ ಏನೋ ಕಿವಿಚಿದಂತಹ ನೋವು. ಓ ಪಿಡಿ ಬಿಲ್ಡಿಂಗಿನಲ್ಲಿ ಹೋಗಿ ಕುಳಿತ. ರಾತ್ರಿ ಹತ್ತು ಗಂಟೆಯಾಯಿತು. ಹತ್ತಿರದ ಆರ್ಥರ್ ರೋಡ್ ಜೈಲಿನ ಬಳಿ ಪಹರೆಯ ಸೀಟಿ ಕೇಳಿಸುತ್ತಿತ್ತು. ಗಕ್ಕನೆ ಬಂದು ಟ್ಯಾಕ್ಸಿ ನಿಂತಿತು. ತೆಳು ಮೈಯಿನ, ಮುಖ ಒಣಗಿಹೋದ ಆ ಹೆಂಗಸನ್ನು ಇಬ್ಬರು ಮಹಿಳಾ ಪೋಲಿಸರು ಕರೆತಂದರು. ಈ ಮಹಿಳಾ ಪೋಲಿಸರು ಅದೇಕೆ ಆ ಖಾಕಿ ಸೀರೆ ಉಡುತ್ತಾರೆ? ಶಿಸ್ತಾಗಿ ಗಂಡಸು ಪೋಲಿಸರಂತೆ ಪ್ಯಾಂಟ್ ಶರ್ಟ್ ತೊಡಬಾರದೆ? ಎಂದುಕೊಳ್ಳುತ್ತಾ ಹಿಂದಿಯಲ್ಲಿ ಕೇಳಿದ "ಏನು ತೊಂದರೆ?". ಅಗಲವಾದ ಬಿಂದಿ ಇಟ್ಟು ದೊಡ್ಡವಳಂತೆ ಕಾಣುತ್ತಿದ್ದ ಆ ಮಹಿಳಾ ಪೋಲಿಸ್ ಹೇಳಿದಳು, "ಸಿ ಎಸ್ ಡಬ್ಲ್ಯೂ (ಕಮರ್ಷಿಯಲ್ ಸೆಕ್ಸ್ ವರ್ಕರ್) ಹೈ.. ಲಾಕಪ್ ಮೇ ಥೀ, ಕಹತೀ ಹೈ ಪೀಠ್ ಮೇ ದರ್ದ್ ಹೈ.." ಎಂದಳು. ಅವರು ಬರೆಸಿದ ಓಪಿಡಿ ಚೀಟಿ ನೋಡಿದ. ಹೆಸರು ಶಬನಮ್; ವಯಸ್ಸು 30 ಎಂದು ಬರೆದಿತ್ತು. ಏಕೋ ಮತ್ತೊಮ್ಮೆ ಹೊಟ್ಟೆಯಲ್ಲಿ ಕಿವಿಚಿದಂತಾಯ್ತು.

ಅವಳು ತೊಟ್ಟಿದ್ದ ಕಮೀಜ್ ಅನ್ನು ಮೇಲೆ ಸರಿಸಿ ನೋಡಿದ. ಬೆನ್ನ ಮಧ್ಯದಿಂದ ಬಲ ಪಕ್ಕೆಗೆ ಓರೆಯಾಗಿ ಹೊಪ್ಪಳೆ ಬಂದ ಚರ್ಮ. ಕನಿಷ್ಠ ಆರು ಸೆಂಟಿಮೀಟರಿನಷ್ಟು ಅಗಲವಿತ್ತು. ನೋಡಿದ ತಕ್ಷಣ "ಇದು ಅದೇ" ಎಂದು ಹೇಳಬಹುದಾದಷ್ಟು ನಿಚ್ಚಳವಾಗಿತ್ತು. ಅಲ್ಲದೆ ಇವರು ಹೇಳುವಂತೆ ಈ ಹೆಂಗಸು "ಸಿ ಎಸ್ ಡಬ್ಲ್ಯು" ಆಗಿದ್ದರೆ ಹರ್ಪಿಸ್ ಇಷ್ಟು ಅಗಲ ಹರಡುವುದಕ್ಕೆ ರೋಗನಿರೋಧಕ ಶಕ್ತಿಯ ಕೊರತೆಯೂ ಕಾರಣವಾಗಿರಬಹುದು, ಮುಖ್ಯತಃ ಏಡ್ಸ್.. ಜತೆಗಿದ್ದ ಮಹಿಳಾ ಪೋಲಿಸಿಗೆ ಹೇಳಿದ, "ದೇಖೋ, ಇಸ್ಕೋ ಹರ್ಪಿಸ್ ಹೋ ಗಯಾ ಹೈ, ಔರ್ ಭಿ ಜಾಞ್ ಚ್ ಕರನೆ ಪಡೇಂಗೆ, ಭರ್ತಿ ಕರನಾ ಪಡೇಗಾ" ಎಂದು ಹೇಳಿದ. ಆಯಾ ಅವಳನ್ನು ವ್ಹೀಲ್ ಚೇರ್ ನಲ್ಲಿ ಕುಳ್ಳಿರಿಸಿ ಕರೆದೊಯ್ದಾಗ ಒಬ್ಬ ಮಹಿಳಾ ಪೋಲಿಸ್ ಅವಳ ಜತೆಗೇ ವಾರ್ಡಿಗೆ ಹೋದಳು. ಖುರ್ಚಿಯಲ್ಲಿ ಕುಳಿತ ಶಂಕರಪ್ಪನಿಗೆ ಅವಳ ಹೆಸರೇನೆಂದು ಪಕ್ಕನೆ ನೆನಪಾಯ್ತು. ಮತ್ತೊಮ್ಮೆ ಹೊಟ್ಟೆಯಲ್ಲಿ ತೀವ್ರವಾಗಿ ನೋವು ಬಂತು. ಜತೆಗೆ ತಡೆಯಲಾರದ ಓಕರಿಕೆ. ಸಿಂಕಿಗೆ ಓಡಿದ.. ಕಪ್ಪು ಕಪ್ಪಾದ ವಾಂತಿ. ತಲೆ ಸುತ್ತಿ ಬಂತು. ಸಿಸ್ಟರ್ ಮರಾಠೆ ಓಡಿ ಬಂದು ಅವನ ತೋಳು ಹಿಡಿಯುವಷ್ಟರಲ್ಲಿ ಕಣ್ಣು ಕತ್ತಲೆ ಬಂದು.. ಪ್ರಜ್ಞೆ ತಪ್ಪುವ ಮೊದಲು ತಲೆಯ ಭರ್ತಿ ಶಬನಮ್... ಜತೆಗೆ "ಬೂ" ಎಂದು ಚರ್ಚ್ ಗೇಟ್ ಕಡೆಗೆ ಓಡುತ್ತಿರುವ ಲೋಕಲ್ ಟ್ರೇನ್...

ಕಣ್ಣು ಬಿಟ್ಟಾಗ ಕಂಡಿದ್ದು ಉದ್ದನೆಯ ಗೋಪಿ ಚಂದನ ಇಟ್ಟಿದ್ದ ಆ ಮೈಸೂರಿನ ಹುಡುಗನ ಮುಖ. ಅವನ ಮುಖದಲ್ಲಿದ್ದ ಆತಂಕ ಶಂಕರಪ್ಪ ಕಣ್ಣು ಬಿಟ್ಟದ್ದು ನೋಡಿ ಕಡಿಮೆಯಾದಂತೆ ಕಂಡಿತು. ಸುತ್ತ ನಿಧಾನವಾಗಿ ತಲೆ ಹೊರಳಿಸಿದ. ವಾರ್ಡಿನಲ್ಲಿ ಇದ್ದದ್ದು ಗೊತ್ತಾಯಿತು. ಮೈಸೂರಿನ ಹುಡುಗ ಇವನ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡಂತೆ ಹೇಳಿದ. "ನಿಮಗೆ ಹೆಮಟೆಮಿಸಿಸ್ (ರಕ್ತ ವಾಂತಿ) ಆಯಿತು, ಅದಕ್ಕೇ ರಾತ್ರಿಯೇ ನಿಮ್ಮನ್ನು ನಾಯರ್ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದ್ದೇವೆ. ಬಹಳ ಬ್ಲಡ್ ಲಾಸ್ ಆಯಿತು ಅಂತ ಕಾಣತ್ತೆ. 4 ಯೂನಿಟ್ ಬ್ಲಡ್ ಮತ್ತು ತುಂಬಾ ಎಫ್ ಎಫ್ ಪಿ (ರಕ್ತ ಕಣಗಳ ಜತೆಗಿರುವ ಅವುಗಳ ಹೊರತಾದ ಪ್ರೋಟೀನ್ ರಸ) ಕೊಟ್ಟಿದ್ದಾರೆ" ಎಂದ. ಕೃತಜ್ಞತೆಯಿಂದ ಅವನ ಕೈ ಹಿಡಿದು ಹೇಳಿದ "ತುಂಬ ಥಾಂಕ್ಸ್, ನಿಮ್ಮ ಹೆಸರೇನು?" .. "ಸುಧೀಂದ್ರ". "ರಾತ್ರಿ ಮೆಡಿಸಿನ್ ನ ಇನ್ನೊಬ್ಬ ಹುಡುಗ ಇದ್ದ. ಬೆಳಿಗ್ಗೆ ಅವನ ಡ್ಯೂಟಿ ಇತ್ತು, ನಾನು ನೈಟ್ ಮುಗಿಸಿದ್ದರಿಂದ ಬಂದೆ" ಎಂದು ಹೇಳಿದ ಸುಧೀಂದ್ರ.

ಇಳಿಜಾರು : ಕಥೆಯ ಮೂರನೇ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X