ನಿನಗಾಗಿ.. : ಮೆಂಫಿಸ್ ದಿನೇಶ್ ಉಡುಪಿ ಕವನ

ಬರಬಾರದವರು ಬರದಿದ್ದರೂ
ಕತ್ತಲ ಮೂಲೆಯಲಿ ನಿಂತು
ದೊಡ್ಡವರಂತೆ ನಟಿಸಿ ಕಣ್ಣೀರಿಗೆ
ಓಘ ತಂದಿತ್ತರು
ನಿನ್ನೆ ಮೊನ್ನೆಯವರೆಗೆ ನಾಚಿ
ನಲಿಯುತ್ತಿದ್ದ ಹೂವುಗಳೆಲ್ಲ
ಮುದುಡಿ, ಆಸರೆಗೆ ಗೆಲ್ಲ ಮೇಲೆ
ಬಾಗಿ ಧೂಳ ಹಾಸಿನ ಮೇಲೆ
ಉದುರಿದ ಹನಿಗಳ ನೆನಪುಗಳನ್ನೇ
ದಿಟ್ಟಿಸುತಿದ್ದವು
ಆವರ್ತವಿಲ್ಲದ ಸಮಯವಾಗಿ
ದಾರ, ಕಟ್ಟುಗಳಿಲ್ಲದೆ ಹೆಡೆಮುರಿ
ಕಟ್ಟಿ ಬಿಟ್ಟೆ, ಆದರೂ
ದೂರದಲ್ಲೆಲ್ಲೊ ಸಣ್ಣದಾಗಿ ಮಿಡಿದಿದ್ದಿಯೇನೊ?
ಹಾಗಂತ ಎದೆಯು ಒತ್ತರಿಸಿಕೊಂಡು ಉಮ್ಮಳಿಸುತಿತ್ತು
ಇನ್ನೇನು ತಾನೆ ಮಾಡಲಿ ನಿನಗಾಗಿ?
ನೀನು ಬಾರದ ಗುಡಿಗೆ
ಇನ್ಯಾರೂ ಬರದಂತೆ
ಇಳಿಜಾರ ಹಾದಿಗೆ
ಯಾತನೆಯ ನೀರ ಸುರಿ ಸುರಿದು
ಪಾಚಿ ಕಟ್ಟಿಸಿ ನನ್ನ
ನಾನು ಬಂದಿಯಾಗಿಸಿಬಿಟ್ಟೆ











Click it and Unblock the Notifications