ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನೆನಪು ನಿಮ್ಮ ಮಾತು ಕಾಡುವುದು ಪರಿ ಪರಿ

By * ಪ್ರಸನ್ನ ವಿಶ್ವೇಶ್ವರಯ್ಯ ಕುಮಾರ್, ನ್ಯೂಜೆರ್ಸಿ
|
Google Oneindia Kannada News

Prasanna Kumar and his father
ಅಪ್ಪ, ಅಣ್ಣ, ಭಾವ, ದಾದ ಎಂದು ನಿಮ್ಮ ಕರೆವರು
ಎಲ್ಲ ಕರೆಗೆ ಓಗೊಡುವ ನೀವು ಮಕ್ಕಳಿಗೆ ದೇವರು
ಕೆಲಸ ಕಾರ್ಯ ಮುಗಿಸಿ ಮನೆಗೆ ಬರುವದನ್ನು ಕಾಯ್ವರು
ಬಂದ ಒಡನೆ ನೀವು ಕೊಡುವ ಪ್ರೀತಿಯನು ಉಣುವರು

ನಮ್ಮ ಸುಖಕೆ ನಮ್ಮ ಏಳ್ಗೆಗೆ ನೀವು ನಿತ್ಯ ದುಡಿದಿರಿ
ಮಂಡ್ಯ ಮೈಸೂರ್ ರೈಲಿನಲ್ಲಿ ನಿತ್ಯ ಪ್ರಯಾಣಿಸಿದಿರಿ
ಎರಡು ಕೈಲಿ ಭಾರ ಹೊತ್ತು ದಿನವು ನಡೆದು ಬಂದಿರಿ
ಅಕ್ಕಿ ಬೇಳೆ ರಾಗಿಯೊಡನೆ ಬ್ರೆಡ್ಡು ಬಿಸ್ಕತ್ತೂ ತಂದಿರಿ

ಪದವಿಯಲ್ಲಿ ಪ್ರಥಮ ಸ್ಥಾನ ನನಗೆ ಎಂದು ತಿಳಿಯಿತು
ಅಪ್ಪ ಅಮ್ಮ ಸ್ನೇಹಿತರಿಗೆ ತಿಳಿಸುವ ತವಕ ಹೆಚ್ಚಾಯಿತು
ನಿತ್ಯ ಬರುವ ಹಾದಿಯಲ್ಲಿ ನಿಮಗೆ ವಾಹನವೊಂದು ಬಡಿಯಿತು
ಕೈಲಿ ಸಿಹಿಯ ಡಬ್ಬ ಹಿಡಿದ ನನಗೆ ಮುಖ ಪೆಚ್ಚಾಯಿತು

ನಿಮ್ಮ ಸೇವೆ ಮಾಡಿದೆನಗೆ ಜೀವನ ಸಾರ್ಥಕವಾಯಿತು
ಬಂಗಾರದ ಪದಕ ಸ್ವೀಕರಿಸುವುದ ನೀವು ನೋಡುವಂತಾಯಿತು
ನಿಮ್ಮ ಶ್ರದ್ಧೆ ನಿಮ್ಮ ದುಡಿತ ನಮಗೆ ಬಾಳು ನೀಡಿತು
ನಿಮ್ಮ ಮಾರ್ಗದರ್ಶನ ನಮ್ಮನ್ನು ಒಳ್ಳೆಯ ಪ್ರಜೆಯಾಗಿಸಿತು

ಹಲವು ನೂರು ಸಂಬಳದಿ ನಮ್ಮ ಸಾಕಿ ಸಲುಹಿದಿರಿ
ತಿಂಡಿ ತೀರ್ಥ ಅನ್ನ ಬಟ್ಟೆ ಎಲ್ಲವನ್ನು ಕೊಡಿಸಿದಿರಿ
ಪ್ರೀತಿ ಪ್ರೇಮ ಸಹನೆ ಜೊತೆ ಬಾಳುವುದನು ಕಲಿಸಿದಿರಿ
ನೀವದನು ನೋಡಲು ಮಾತ್ರ ಇರದೆ ದೂರ ನಡೆದಿರಿ

ನೀವಿಲ್ಲದ ನನ್ನ ಬಾಳಲಿ ನಿಮ್ಮ ನೆನಪು ಹಸಿರು
ಮೊದಲ ಕೊನೆಯ ನಾಮದ ನಡುವೆ ನಿಮ್ಮದೇ ಹೆಸರು
ನಮ್ಮ ಮಕ್ಕಳ ಏಳ್ಗೆಗೆ ಮಾಡಿಕೊಂಡಿರೆವೆನು ಸ್ವಲ್ಪ ಕೈ ಕೆಸರು
ನಿಮ್ಮ ಹರಕೆ ಮಕ್ಕಳ ಶ್ರಮಕೆ ಆಗುವುದೆ ಬಾಯ್ ಮೊಸರು?

ನಿಮ್ಮ ನೆನಪು ಬಂದ ದಿನವು ಕನಸಿನಲ್ಲಿ ಬರುವಿರಿ
"ಹೇಗಿರುವೆ ಮರಿ" ಎಂದು ತಲೆಯ ನೇವರಿಸುವಿರಿ
ನಿಮ್ಮ ನೆನಪು ನಿಮ್ಮ ಮಾತು ಕಾಡುವುದು ಪರಿ ಪರಿ
"ಅಪ್ಪನ ದಿನ"ವಿಂದು ನನ್ನ ಸ್ವರ್ಗದಿಂದಲೆ ಹರಸಿರಿ

English summary
Kannada poem on father's day by Prasanna Kumar from New Jersey, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X