ಗುಂಡಿಗಳು

ಗುಂಡಿಗಳು ಬೇಕಿಲ್ಲ.
ಜೋತು ಬಿದ್ದರೆ, ಆತುಕೊಂಡರೆ
ಮುಜುಗರವಿಲ್ಲ.
ನವಿರ ಪುಳಕಕೆ ಬೇಲಿಯಿಲ್ಲ,
ಎಡವಿ ಬಿಟ್ಟರೆ ಕಲರವವಿಲ್ಲ.
ಕನಸಿನ ನಿಲುವಂಗಿಗೆ
ಗುಂಡಿಗಳು ಬೇಕಿಲ್ಲ.
ಬಳುಕಿ ಸೆಳೆವ, ತುಳುಕಿ ತೋರುವ
ಕರ್ಮವಿಲ್ಲ.
ತೊಳಲಾಟದ ಪ್ರೇಮಿಗಳಿಲ್ಲ,
ಒಳನೋಟದ ನೋಡುಗರಿಲ್ಲ.
ಕನಸಿನ ನಿಲುವಂಗಿಗೆ
ಗುಂಡಿಗಳು ಬೇಕಿಲ್ಲ.
ಹಳಸು ರಂಗಿನ, ಹುಸಿ ಗಂಧದ
ಲೇಪವಿಲ್ಲ.
ಕಮರಿದ ಮಲ್ಲಿಗೆಯಿಲ್ಲ,
ಸೊಕ್ಕಿನ ಪಲ್ಲಂಗವಿಲ್ಲ.
ಕನಸಿನ ನಿಲುವಂಗಿಗೆ
ಗುಂಡಿಗಳು ಬೇಕಿಲ್ಲ.
ತೆರೆವ ಗುಂಡಿಯ ಮರೆತು ಬಿಡುವ
ಸೋಗು ಬೇಕಿಲ್ಲ.
ಮೀಟುವ ವಿಕೃತಿಗಳಿಲ್ಲ,
ಕತೆಯಾಗುವ ಸರಕುಗಳಿಲ್ಲ.
ಕನಸಿನ ನಿಲುವಂಗಿಗೆ
ಗುಂಡಿಗಳು ಬೇಕಿಲ್ಲ.












Click it and Unblock the Notifications