ಮೌನ ಮಲಗಿದೆ ಮಾತಿಗಾಳ್ವಿಕೆಯ ನೀಡಿ
ಮೌನದ ಮೌನ ಹೇಗಿರುತ್ತದೆ? ಒಂದು ಕ್ಷಣ ಮೌನವಾಗಿ ಕೂತು, ಒಳಗಣ್ಣು ತೆರೆದು ನೋಡಿದರೆ ಎಲ್ಲವೂ ಸುಸ್ಪಷ್ಟ. ಕವಿಗೆ ನಿಸರ್ಗದ ಮಡಿಲಲ್ಲಿ ಮೌನ ಸಾಮ್ರಾಜ್ಯ ಕಂಡಿದೆ. ನಿಮಗೆ?
- ವಸಂತ ಕುಲಕರ್ಣಿ, ಸಿಂಗಪುರ
ನಿಸರ್ಗದ ನೀರವ ತೆಕ್ಕೆಯೊಳು ತಾನುಹುದುಗಿ ಮಲಗಿಹುದು ಮುಗ್ಧ ಮೌನ
ಮಾತು ಗುಮ್ಮನಿಗಂಜಿ ಗದ್ದಲಕೆ ತಾ ಹೆದರಿ
ಪ್ರಕೃತಿಯ ಸೆರಗಲ್ಲಿ ಅವಿತಿಹುದು ಮೌನ
ಮುದಭರಿತ ತಂಗಾಳಿ ನಾಟ್ಯವಾಡುತ ಬಂದು
ಮಲಗಿಸಿದೆ ಮೌನವನು ಮೆಲುದನಿಲಿ ಹಾಡಿ
ಶಾಂತತೆಯ ಮಡಿಲಲ್ಲಿ ಮಂದಹಾಸವ ಬೀರಿ
ಮೌನ ಮಲಗಿದೆ ಮಾತಿಗಾಳ್ವಿಕೆಯ ನೀಡಿ
ಹಸಿರ ಹೊದಿಕೆಯ ಹೊಚ್ಚಿ ಹೂವ ಪರಿಮಳ ಹರಡಿ
ನಸುಗತ್ತಲರಮನೆಯ ತಾರೆಗಳ ಮಿಣುಕಿನಲಿ
ಶಶಿಧಾರೆ ಸುರಿವಲ್ಲಿ, ಹಿಮಧಾರೆ ಹರಿವಲ್ಲಿ
ಸುಪ್ತವಾಗಿದೆ ತಾನು ಸೃಷ್ಟಿಯ ಮಡಿಲಲ್ಲಿ
ಸದ್ದು ಗದ್ದಲದಿಂದ ತಪ್ತವಾಗಿಹ ಮನವ
ಮುಕ್ತವಾಗಿಸಲೆಂದು ಬಾ ಎಂದು ಕರೆದೆ
ದಿವ್ಯ ಮೌನವೆ ನೀನು ನಿಯತಿಯ ಒಡಲಲ್ಲಿ
ತಪೋ ನಿದ್ರೆಯಲಿ ಅದೇಕೆ ಇರುವೆ?












Click it and Unblock the Notifications