ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯಾ, ಯು.ಎಸ್.ಎ.
ಹೀಗೊಂದು ರಾಮನವಮಿ


- ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯಾ, ಯು.ಎಸ್.ಎ.
[email protected]
ಕೋಸಂಬರಿಯು ರುಚಿಯಾಗಿ
ಪಾನಕವು ಸಿಹಿಯಾಗಿ
ರಾಮನಾಮಾಮೃತವು
ಕಿವಿಯ ತುಂಬಿ
ಅಭಿಷೇಕ ಅಲಂಕಾರ
ಗಾನ ನಾಟ್ಯ ಕಥಾಸಾರ
ಮುತ್ತಿನ ಪಲ್ಲಕ್ಕಿ ರಥೋತ್ಸವ
ಎಂಥಾ ಸಂಸ್ಕೃತಿ! ವೈಭವ !!
ರಾಮ
ಸೀತಾರಾಮ
ನಿಜಗುಣಧಾಮ
ಮರ್ಯಾದಾ ಪುರುಷೋತ್ತಮ !
ಎಲ್ಲರಿಗೂ ಬೇಕು
ಶ್ರೀರಾಮನಂತಹ ಮಗ
ತಂದೆ ಮಾತನು ಉಳಿಸೆ
ಕಾಡಿಗೆ ಹೋದ ರಾಮ
ಹೆಣ್ಣು ಮಕ್ಕಳ ಕನಸು
ಶ್ರೀರಾಮನಂತಹ ಗಂಡ
ಭೂಜಾತೆ ಸೀತೆಯನು
ಕೈಹಿಡಿದು ಕಾಪಾಡಿ
ಕಾಡಿಗಟ್ಟುವ ಮುನ್ನ
ಬೆಂಕಿಗೊಡ್ಡಿದ ರಾಮ !!
ಅಂದು ವನವಾಸಿ
ಇದೇ ರಾಮನ ಹಿಂದೆ
ನಡೆದವಳು ನಮ್ಮ ಹುಡುಗಿ
ಅಹುದಹುದು, ಅದುವೇ ಸರಿ
ತರುಣಿಗೆ ಪತಿ ದೈವಂ !
ಅಯ್ಯೋ ರಾಮ!
ನೆನಪಿಲ್ಲವೇ ನಿನಗೆ
ಅದೆಲ್ಲ ಅಮೃತ ಘಳಿಗೆ ?
ಹೆಚ್ಚಾಯಿತೇ ನಿನಗೆ
ಅಗಸನೊಬ್ಬನ ಕಟಕಿ
ಕಾಣಲಿಲ್ಲವೇ ಎದುರು
ತುಂಬು ಬಸುರಿ ಜಾನಕಿ ?
ಲೋಕಾಪವಾದಕ್ಕೆ
ರಾಮ ಹೆದರಿದನಂತೆ
ಈ ನೀತಿಸಂಹಿತೆಗೆ
ಬೆಲೆ ತೆತ್ತವಳು ಸೀತೆ
ಇದ್ದರೆ ನಾವು ಅವಳಂತೆ
ಲೋಕದಿ ಬಲು ಹಿತವಂತೆ !
ರಾಮನವಮಿಯ ದಿವಸ
ರಾಮನಾಮಾಮೃತವು
ಕಿವಿಯ ತುಂಬಿದರೂ...
ಅಲ್ಲೆಲ್ಲೋ ಕೇಳಿತು
ಸೀತೆಯ ವ್ಯಥೆಯ ದನಿ.
ರಾಮನವಮಿಯ ದಿವಸ
ಪಾನಕದ ಸಿಹಿಯಿದ್ದರೂ
ಹೋಗದು ಹಾಳು ಕಹಿ
ಏನು ಮನಸೋ ?
ಅಯ್ಯೋ! ರಾಮ! ರಾಮ!!












Click it and Unblock the Notifications