ಭಗವಂತ ಹತ್ತಕ್ಕೇ
ಅವತಾರ ಯಾಕೆ
ನಿಲ್ಲಿಸಿ ಬಿಟ್ಟ ?
ಅಕ್ರಮ ಖೋಟಾ
ಮೋಸದ ಆಟ
ಕಡಿವಾಣಕ್ಕೆ
ನೂರವತಾರದ
ಕನಿಷ್ಠಾವಶ್ಯಕತೆ
ಅನುಭವ ಪಟ್ಟ !!
*
ನವರಾತ್ರಿ ಮಹಿಮೆ
ಕಣ್ಣಿಲ್ಲದೆ ಬೇಡುವ
ಕುರುಡನೂ
ಭಿಕ್ಷೆ
ಸಿಗಬೇಕಿದ್ದರೆ
ಹಾಕಬೇಕು ಬಣ್ಣ !
*
ಸರಕಾರೀ ಮರ್ಜಿ
ಉದ್ಯೋಗ ವಿನಿಮಯ
ಕಛೇರಿಯಲ್ಲಿತ್ತ ಅರ್ಜಿಗೆ
ಬಂದದ್ದು ಉತ್ತರ ಫಕ್ಕನೆ
ವೃದ್ಧಾಪ್ಯ ವೇತನದ ಅರ್ಜಿ
ಸ್ವೀಕೃತಿ ಪತ್ರದ ಜತೆ ಒಕ್ಕಣೆ
ವಿವರಗಳಿಗೆ ಭೇಟಿ ನೀಡಿ
ನಮ್ಮಾಫೀಸು
ಸ್ಮಶಾನಕ್ಕೆ ಹತ್ತಿರ !
*
ನಾಟಿ ಫಸಲು
ಇಷ್ಟವಾದಾತ
ದಕ್ಕಲಿಲ್ಲ ಕೈಕೊಟ್ಟ.
ಸಿಕ್ಕಿದ ಹುಡುಗನೆ ಸೈ
ಹಿಡಿದಳು ಕೈ ಏನು ಕಷ್ಟ !
ಗುಟ್ಟಲ್ಲಿ ಹಡೆದಳಾ ಬಾಲೆ
ಅಷ್ಟಮ ಮಾಸದಲ್ಲೇ ..
ಮಗು ಮಾತ್ರ
ದಷ್ಟ ಪುಷ್ಟ !
*
ಟೈಂ ಬಾಂಬು
ಆಷಾಢ ಹುಣ್ಣಿಮೆ
ಹೊಸ್ತಿಲ ಪೂಜೆಗೆ
ಭರದಿಂದ ತಯಾರಿ
ಹೊಸಾ ಜರತಾರಿ
ಆಶಾ ಗಾಳಿಯಲ್ಲೆ ಸವಾರಿ
ಉಷಾ ಕಾಲದಲ್ಲೆ
ತಿಂಗಳ ಪರ್ಯಾಯದ
ಬಾಂಬು ಸುರಿಮಳೆ ..
ಯೋಜನೆಯೆಲ್ಲ ತಣ್ಣಗೆ
ಆಶಾ ಢಂ!