ದೀಪಕ್ ಹೊಸ ಪತ್ನಿ ಬಗ್ಗೆ ನಿನಗೇನಾದ್ರೂ ಗೊತ್ತೆ?
ಇಂಗ್ಲಿಷ್ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ
[email protected]
ಪವನ್,
ನೀನು ನಿನ್ನ ತಾಯಿಯ ಶವಸಂಸ್ಕಾರದಲ್ಲಿ ತೊಡಗಿರುವ ಈ ಸಮಯದಲ್ಲಿ ನಿನ್ನನ್ನು ಈ ವಿಚಾರವಾಗಿ ಕೇಳುತ್ತಿರುವುದಕ್ಕೆ ನಾನು ಕ್ಷಮೆ ಬೇಡುತ್ತೇನೆ. ಆದರೆ ನನಗೀಗ ನಿನ್ನಿಂದ ಒಂದು ಉಪಕಾರವಾಗಬೇಕಿದೆ. ನನಗೆ ತಾನು ದೀಪಕ್‌ನ ಹೆಂಡತಿ ಎಂದು ಹೇಳಿಕೊಂಡ ರೂಪ ಎಂಬಾಕೆಯಿಂದ ಆಕೆ ಭಯದಲ್ಲಿರುವ ಕರೆಯೊಂದು ಬಂದಿತ್ತು. ಆ ಕರೆಯ ನಂತರ ಆಕೆ ಮತ್ತೆ ಕರೆ ಮಾಡಿಲ್ಲ.
ಇದರಿಂದಾಗಿ ನಾನು ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನನಗೆ ಕರೆ ಮಾಡಬೇಕಾದರೆ ಅವಳು ಬಹಳ ಹತಾಶಳಾಗಿರಬೇಕು. ಅವಳಿಗೆ ಅಮೇರಿಕಾದಲ್ಲಿ ಬೇರೆ ಯಾರೂ ಗೊತ್ತಿಲ್ಲವೆ? ನಾನು ನಿನಗೆ ಮುಂಚೆಯೇ ಹೇಳಿದಂತೆ ದೀಪಕ್ ಬನಾರಸ್ ಐಐಟಿಯಲ್ಲಿ ಓದಿದ್ದು. ಅಲ್ಲಿ ಪ್ರಾಯಶಃ ನಿನಗಿಂತ ಕೆಲವೇ ವರ್ಷಗಳ ಹಿರಿಯ ವಿದ್ಯಾರ್ಥಿಯಿರಬೇಕು. ನಿನ್ನ ಐಐಟಿ ಸಂಪರ್ಕಗಳಿಂದ ದಯವಿಟ್ಟು ನೀನು ಅವನ ಹೆಂಡತಿಯ ಹೆಸರನ್ನು ಖಚಿತಪಡಿಸಿಕೊಳ್ಳಬಲ್ಲೆಯ?
*
ಅವಳು ಇ-ಮೇಯ್ಲ್‌ುನ ಸೆಂಡ್ ಬಟನ್ ಅನ್ನು ಒತ್ತಿದಳು. ಅದೇ ದಿನ ಸಂಜೆಗೆ ಅವಳಿಗೆ ಅವನಿಂದ ಪ್ರತ್ಯುತ್ತರ ಬಂದಿತು.
ಅನು,
ಇಲ್ಲಿ ಜನರನ್ನು ಪತ್ತೆ ಮಾಡುವುದು ಬಹಳ ಸುಲಭ! ಭಾರತದಲ್ಲಿ ಎಲ್ಲರಿಗೂ ಎಲ್ಲರ ಬಗ್ಗೆಯೂ ಗೊತ್ತು. ನಾನು ಇಂದು ಬೆಂಗಳೂರಿನ ಬಸವಗುಡಿಯಲ್ಲಿರುವ ರೂಪಾಳ ಮನೆಯವರನ್ನು ನೋಡಲು ಹೋಗಿದ್ದೆ. ಅವಳ ತಂದೆ ಪ್ರೌಢಶಾಲೆಯೊಂದರಲ್ಲಿ ಅಧ್ಯಾಪಕರು. ಅವರು ಮತ್ತು ಅವರ ಹೆಂಡತಿ ಸಂಪ್ರದಾಯವಾದಿ ಬ್ರಾಹ್ಮಣರು ಹಾಗು ಬಹಳ ಬಡವರು. ಅವರ ಮನೆಯಲ್ಲಿ ಯಾವುದೇ ಪೀಠೋಪಕರಣಗಳಾಗಲಿ ಪೋನಾಗಲಿ ಇಲ್ಲ. ರೂಪ ಅವರ ಏಳು ಜನ ಹೆಣ್ಣು ಮಕ್ಕಳಲ್ಲಿ ಐದನೆಯವಳು. ದೀಪಕ್‌ನ ಮನೆಯವರು ಅವನಿಗೆ ಹೆಣ್ಣು ಕೇಳಲು ಅವರ ಮನೆಗೆ ಹೋಗಿದ್ದಾಗ ಆಕೆ ಇಂಗ್ಲಿಷ್‌ನಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಳು.
ರೂಪ ದೀಪಕ್‌ನನ್ನು ಮದುವೆಯಾಗಿ ಅಮೇರಿಕಕ್ಕೆ ಹೋದ ನಂತರ ಅವರಿಬ್ಬರಲ್ಲಿ ಯಾರಿಂದಲೂ ತಮಗೆ ಯಾವುದೇ ಕರೆಯಾಗಲಿ ಪತ್ರವಾಗಲಿ ಬರದೇ ಇರುವುದರಿಂದ ತಮಗೆ ಚಿಂತೆಯಾಗಿದೆ ಎಂದು ಅವಳ ಮನೆಯವರು ನನಗೆ ಹೇಳಿದರು. ನಾನು ರೂಪಾಳ ಗಂಡ ಓದಿದ ಕಾಲೇಜಿನಲ್ಲಿಯೇ ಓದಿದ್ದು ಹಾಗು ನನ್ನ ಮುಂದಿನ ಅಮೇರಿಕ ಪ್ರವಾಸದಲ್ಲಿ ಅವಳನ್ನು ಭೇಟಿಯಾಗುತ್ತೇನೆ ಎಂದು ನಾನು ಅವರಿಗೆ ಮಾತು ಕೊಟ್ಟೆ.
ಅದನ್ನು ಕೇಳಿ ಅವರಿಗೆ ಬಹಳ ನೆಮ್ಮದಿಯಾಯಿತು. ಅವಳ ತಾಯಿ ನನ್ನ ಕೈಯನ್ನು ಹಿಡಿದುಕೊಂಡು ಅತ್ತುಬಿಟ್ಟರು. ‘‘ಬಡವರ ಮನೆಯವರು ಎಂದೂ ಶ್ರೀಮಂತರ ಮನೆಯವರ ಜೊತೆ ಮದುವೆ ಮಾಡಿಕೊಳ್ಳಬಾರದು,’’ ಎಂದು ಅವರು ಹೇಳಿದರು. ‘‘ಅವನು ಬಹಳ ಒಳ್ಳೆಯವನಾಗಿ ಕಂಡ. ನನಗೆ ಗೊತ್ತು ಅವನು ನಿಜವಾಗಲೂ ಒಳ್ಳೆಯವನೆ. ರೂಪ ಸಂತೋಷವಾಗಿ ಇದ್ದಾಳೆಂದು ನಾನು ಆಶಿಸುತ್ತೇನೆ,’’ ಎಂದರು.
ಇದು ನಿಜವಾಗಲೂ ಬೇಸರದ ವಿಷಯ. ರೂಪ ಮತ್ತೆ ನಿನಗೆ ಕರೆ ಮಾಡಲಿ ಮತ್ತು ಅದರಿಂದ ನೀನು ನಿನ್ನ ಕೈಲಾದ ಸಹಾಯ ಅವಳಿಗೆ ಮಾಡುವಂತಾಗಲಿ ಎಂದು ಆಶಿಸುತ್ತೇನೆ.
ನಿನ್ನ ಯೋಗಕ್ಷೇಮ ನೋಡಿಕೊ,
ಪವನ್.












Click it and Unblock the Notifications