ಅಮೆರಿಕ ಆದಿಚುಂಚನಗಿರಿ ಮಠದಲ್ಲಿ ಗಣೇಶೋತ್ಸವ
ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಶ್ರೀ ಆದಿಚುಂಚನ ಗಿರಿ ಮಹಾಸಂಸ್ಥಾನ ಶಾಖಾಮಠದಲ್ಲಿ ಆದಿಚುಂಚನಗಿರಿ ಸ್ಪಿರಿಚ್ಯುಯಲ್ ಅಂಡ್ ಕಲ್ಚರಲ್ ಸೆಂಟರ್‌ನ ವತಿಯಿಂದ ಸೋಮವಾರ ಗೌರಿಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.
ಅಮೆರಿಕಾದಲ್ಲಿರುವ ಕನ್ನಡಿಗರೆಲ್ಲರೂ ಒಂದುಗೂಡಿ ಗಣೇಶನ ಹಬ್ಬದ ಹಿಂದಿನ ದಿನ ಗೌರಿಹಬ್ಬದಂದು ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು. ರಾತ್ರಿ ಗೌರಿಗಣೇಶ ಹಬ್ಬದ ಆಚರಣೆಯನ್ನು ಕುರಿತು ಭಕ್ತಾದಿಗಳಿಗಾಗಿ ವಿಶೇಷ ಉಪನ್ಯಾಸ ನಡೆಯಿತು.

ಮಾರನೆ ದಿನ ವಿನಾಯಕ ಚತುರ್ಥಿಯಂದು ಅಮೆರಿಕಾದಲ್ಲಿರುವ ಮುನ್ನೂರಕ್ಕೂ ಹೆಚ್ಚು ಮಂದಿ ಭಾರತೀಯರೆಲ್ಲ ವಿನಾಯಕನನ್ನು ಮಂಗಳ ವಾದ್ಯಗಳೊಡನೆ ಭವ್ಯವಾದ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದರು. ನಂತರ, ವಿನಾಯಕ ಹೋಮವನ್ನು ಮಾಡಲಾಯಿತು. ತದನಂತರ ವಿಘ್ನವಿನಾಶಕನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಭೈರವೈಕ್ಯರಾಗಿರುವ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರಿಗೆ ಭಕ್ತರು ಭಕ್ತಿನಮನವನ್ನು ಸಲ್ಲಿಸಿದರು. ನಂತರ ಮಾತನಾಡಿದ ಬಾಬು ಕೀಲಾರ ಅವರು, ಇನ್ನು ಮುಂದೆ ಶ್ರೀ ಆದಿಚುಂಚನಗಿರಿ ಶಾಖಾಮಠದಲ್ಲಿ ಆದಿಚುಂಚನಗಿರಿ ಸ್ಪಿರಿಚ್ಯುಯಲ್ ಅಂಡ್ ಕಲ್ಚರಲ್ ಸೆಂಟರ್‌ನ ವತಿಯಿಂದ ಎಲ್ಲ ಬಗೆಯ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಭಾರತೀಯರ ಸಂಘಟನೆಯನ್ನು ಮಾಡಲಾಗುವುದು ಎಂದರು.












Click it and Unblock the Notifications