ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಬಾರಿಸಿದ 'ಕನ್ನಡ ಕಲಿ' ಡಿಂಡಿಮ

By ವೆಂಕಟ್, ಸಿಂಗಪುರ
|
Google Oneindia Kannada News

ಸುಮಾರು ಸಲ ಸಿಂಗಪುರ ಮಕ್ಕಳಿಗೆ ಕನಿಷ್ಠ ಪಕ್ಷ ಸ್ವಲ್ಪಮಟ್ಟಿಗಿನ ಕನ್ನಡ ಅಕ್ಷರಗಳ ಜ್ಞಾನವನ್ನು ಕಲಿಸಿಕೊಡುವ ವಿಷಯದ ಚರ್ಚೆ ನಡೆಯುತ್ತಲೇ ಬಂದಿದೆ. ಇದಕ್ಕೆ ಪೂರಕವೆಂಬಂತೆ 2012ರ ಜನವರಿಯಲ್ಲಿ ಕನ್ನಡ ಸಂಘ ಸಿಂಗಪುರ "ಕನ್ನಡ ಕಲಿಕಾ ಕೇಂದ್ರ"ದ ಸಮಿತಿಯನ್ನು ರಚಿಸಿ ಅದರಡಿಯಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡು ಅದರೆಡೆಗೆ ರೂಪು-ರೇಷೆಗಳನ್ನು ನಿರೂಪಿಸಿ, ಮಾಡಬೇಕಾದಂತಹ ಕಾರ್ಯಗಳ ಪಟ್ಟಿಯನ್ನು ತಯಾರಿಸಿ, ಯೋಜನೆಯ ಕಾರ್ಯತಂತ್ರಗಳ ಪರಿಧಿಯನ್ನು ನಿರ್ವಹಿಸಲಾಯಿತು.

ಮೊದಲನೆಯ ಹೆಜ್ಜೆಯಾಗಿ 28 ಜನವರಿ 2012ರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಕಥೆ ಹೇಳುವ ಸ್ಪರ್ಧೆ ಹಾಗು ಪೋಷಕರಿಗೆ "ಕನ್ನಡದ ಆಳಿವು-ಉಳಿವು"ವೆಂಬ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ವಿಚಾರ ಸಂಕಿರಣದಲ್ಲಿ ಬಹುಪಾಲು ತಂದೆ-ತಾಯಿಯಂದಿರು ತಮ್ಮ ಮಕ್ಕಳು ಕನ್ನಡ ಕಲಿಯಬೇಕೆಂಬ ಉತ್ಸುಕತೆಯಲ್ಲಿದ್ದರೂ ಹೇಗೆ, ಎಲ್ಲಿ ಹಾಗು ಯಾವುದು ಸೂಕ್ತ/ಸುಲಭ ಮತ್ತು ಕನ್ನಡದ ಬಗೆಗಿನ ಸಾಮಾನ್ಯ ಅಕ್ಷರಜ್ಞಾನದ ಅವಶ್ಯಕತೆಯ ವಿಷಯಗಳ ಅರ್ಥಪೂರ್ಣ ಚರ್ಚೆಗಳು ನಡೆದವು.

ಇದರ ಫಲವಾಗಿ ಕನ್ನಡ ಸಂಘದ ಪದಾಧಿಕಾರಿಗಳು "ಕನ್ನಡ ಕಲಿಕಾ ಕೇಂದ್ರ"ದಡಿಯಲ್ಲಿ ಮಕ್ಕಳಿಗೆ ಕನ್ನಡದ ಅಕ್ಷರಮಾಲೆಯನ್ನು ಪರಿಚಯಿಸಿ ಕಲಿಸಿಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡರು. ಆಗಸ್ಟ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ "ಕನ್ನಡ ಕಲಿ" ತರಗತಿಗಳನ್ನು ಪ್ರಾರಂಭಮಾಡುವ ನಿರ್ಧಾರವನ್ನು ತೆಗೆದುಕೊಂಡು, ಸಂಘದ ಸಹ ಕಾರ್ಯದರ್ಶಿಯಾದ ರಾಮನಾಥ್ ಅವರ ಮುಂದಾಳತ್ವದಲ್ಲಿ ವೆಂಕಟ್, ಶ್ರೀನಿವಾಸ್ ಹಾಗು ರಾಜೇಶ್‌ ಹೆಗಡೆ ಅವರೊಡಗೂಡಿ ನಿರ್ವಹಿಸಲು ನಿರ್ಧರಿಸಲಾಯಿತು.

Kannada Kali classes in Singapore

ಕನ್ನಡ ಸಂಘ (ಸಿಂಗಪುರ)ದ ಈ ಎಲ್ಲಾ ಪ್ರಯತ್ನಗಳಿಗೆ ಸದಾ ನಮ್ಮ ಬೆನ್ನು ತಟ್ಟಿ ಈ ಕಾರ್ಯಕ್ರಮದ ಬೆನ್ನೆಲುಬಾಗಿ ನಮ್ಮನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಸಲಹೆ, ಸೂಚನೆ ಹಾಗು ಸೂಕ್ತ ಸಮಯದಲ್ಲಿ ಕನ್ನಡ ಕಲಿಯಲು ಅನುಕೂಲವಾದಂತಹ ಪಠ್ಯಪುಸ್ತಕ ಹಾಗು ಸಲಕರಣೆಗಳು ನಮ್ಮ ವೇಳಾಪಟ್ಟಿ ಹಾಗು ತರಗತಿಯ ವಿಷಯಗಳನ್ನು ನಿರ್ಧರಿಸುವಲ್ಲಿ ಬಹಳ ಸಹಕಾರಿಯಾದವು.

ಮೊದಲನೆಯ ಹೆಜ್ಜೆಯಾಗಿ ತರಗತಿಗಳನ್ನು ಎಲ್ಲರಿಗೂ ಅನುಕೂಲವಾದಂತಹ ಸ್ಥಳವನ್ನು ನೋಡಬೇಕು ಎನ್ನುವ ವಿಷಯಗಳ ಚರ್ಚೆ ನಡೆಯುತ್ತಿರುವಾಗ ರಾಮನಾಥ್ ಅವರು SINDA (Singapore Indian Association)ನಲ್ಲಿ ತರಗತಿಯ ಕೊಠಡಿಗಳನ್ನು 28 ಸೆಪ್ಟೆಂಬರ್ ರಿಂದ-30 ಅಕ್ಟೋಬರ್ ರ ಪ್ರತಿ ಭಾನುವಾರ ಬೆಳಿಗ್ಗೆ 9.30-12.30ರವರಗೆ ಕಾಯ್ದಿರಿಸಲಾಗಿದೆ ಎಂಬ ವಿಷಯವನ್ನು ತಿಳಿಸಿದಾಗ ಎಲ್ಲರಿಗೂ ಇದು ತುಂಬ ಸೂಕ್ತವಾದ ಸ್ಥಳವೆನಿಸಿತು. ಕನ್ನಡ ಸಂಘದ ವತಿಯಿಂದ ಮಕ್ಕಳ ನೋಂದಣಿಗಾಗಿ ಮಿಂಚಂಚೆ ಕಳುಹಿಸಿದ ಕೆಲವೇ ದಿನಗಳಲ್ಲಿ ಸದಸ್ಯರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತು, 35 ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದು ನಮ್ಮ ಹುಮ್ಮಸ್ಸನ್ನು ಹೆಚ್ಚಿಸಿ ನಮಗೆ ಹೆಚ್ಚು ಕಾರ್ಯೋನ್ಮುಖರಾಗಲು ಹುರಿದುಂಬಿಸಿತು.

English summary
Singapore Kannada Sangha has started 'Kannada Kali' - Kannada language teaching classes for children. Kannada development authority has provided easy to understand text books to the organization. Children have been participating with enthusiasm. A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X