ಅಮೆರಿಕಾದಲ್ಲಿ ಪುತ್ತೂರಾಯರ ಜೋಕ್ ಜಂಕ್ಷನ್

ಸುಮಾರು 45 ನಿಮಿಷಗಳ ಕಾಲ ರಾಯರು ಜೋಕುಗಳನ್ನು ಸಿಡಿಸುತ್ತಾ ಹೋದರು. ಕಾವೇರಿ ಕನ್ನಡಿಗರು ನಗುತ್ತಲೇ ಇದ್ದರು. ಈ ಮುಂಚೆ ರಾಯರ ಜೋಕುಗಳನ್ನು ಕೇಳಿ ಆನಂದಿಸಿದ ಅನುಭವ ಇರುವ ಕನ್ನಡಿಗರು ಮುಗುಳು ನಗೆ ಬೀರಿದರೆ, ಮೊದಲ ಬಾರಿಗೆ ಕೇಳಿದ ಹೊಸ ಜನ ಬಿದ್ದೂಬಿದ್ದೂ ನಕ್ಕರು. ಒಂದು ವಾರಾಂತ್ಯದ ಬದುಕು ಲವಲವಿಕೆಯಿಂದ ಕಳೆದುದಕ್ಕೆ ಜೀವನ ಸಾರ್ಥಕವಾಯಿತೆಂದರು.
ಬದುಕಿನ ಎಲ್ಲ ಮಗ್ಗಲುಗಳಿಂದ ಆಯ್ದ ವಸ್ತು ವಿಷಯಗಳನ್ನು ಹೆಕ್ಕಿ ನಗೆಪಟಾಕಿ ಹಾರಿಸುವುದು ಪುತ್ತೂರಾಯರಿಗೆ ನೀರು ಕುಡಿದಷ್ಟು ಸುಲಭ. ಆದರೆ, ಈ ಬಾರಿ ಅವರು ಹಾರಿಸಿದ ನಗೆ - AK 47 ಗಳು ಸಭ್ಯತೆಯ ಅಂಕೆ ಮೀರದೆ ಇದ್ದುದು ಗಮನಾರ್ಹ ಎಂದು ಕಾವೇರಿಯ ಹಿರಿಯ ಸದಸ್ಯರೊಬ್ಬರು ಒನ್ ಇಂಡಿಯ ಕನ್ನಡ ವೆಬ್ ಸೈಟಿಗೆ ತಿಳಿಸಿದರು. ಈ ಮೂಲಕ ತಾವು ಒಬ್ಬ ಹಾಸ್ಯಗಾರರು ಎಂದು ನಿರೂಪಿಸಿದ ರಾಯರು ಜೋಕರ್ ಎಂಬ ಹಣೆಪಟ್ಟಿಯನ್ನು ತಾವೇ ಅಳಿಸಿಹಾಕಿಕೊಂಡರು.
ಮೇರಿಲ್ಯಾಂಡ್ ನಿವಾಸಿ ಪ್ರಶಾಂತ್ ಧೋತ್ರೆ ಅವರಿಗೆ ಕಾಮಿಡಿ ಎಂದರೆ ತುಂಬ ಇಷ್ಟ. ಸ್ನೇಹಿತರ ಜತೆ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಜೋಕುಗಳನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಜೋಕುಗಳನ್ನು ಹಂಚಿಕೊಂಡು ತಿನ್ನಬೇಕು ಎಂಬ ಲೋಕೋಕ್ತಿಯಲ್ಲಿ ಅವರಿಗೆ ತುಂಬುವಿಶ್ವಾಸ. ಹಾಗಾಗಿ ಪುತ್ತೂರಾಯರ ಕಾರ್ಯಕ್ರಮವನ್ನು ವಿಡಿಯೋಗಳಲ್ಲಿ ಬಚ್ಚಿಟ್ಟಿದ್ದಾರೆ. ಅದನ್ನು ನೀವು ಬಿಚ್ಚಿ ನೋಡಿ ಆನಂದಿಸಬೇಕಾಗಿ ಸಲಹೆ. ವಿಡಿಯೋ ಭಾಗ1, ವಿಡಿಯೋ ಭಾಗ2












Click it and Unblock the Notifications