Get Updates
Get notified of breaking news, exclusive insights, and must-see stories!

ನಿಮ್ ಮನೇಲೂ ಇಳಿಗೆಮಣೆಯಲಿ ಕಾಯಿ ತುರೀತಿರಾ?

An essay on coconut grater
ಇವತ್ತು ಆಫೀಸಿನಿಂದ ಮನೆಗೆ ಕಾಲಿಟ್ಟಾಗ ನನ್ನ ಯಜಮಾನನ ಹೆಗಲ ಮೇಲೊಂದು ಹಳೆಯ ಬಟ್ಟೆ, ಕೈಯಲ್ಲಿ ಇಳಿಗೆ ಮಣೆ. ಇದೇನಿದು ಅವತಾರ ಎನ್ನುವಷ್ಟರಲ್ಲಿ "ಅವತ್ತು ಹೇಳಿದ್ನಲ್ಲಾ ಇವತ್ತು ಮಾಡ್ತಾ ಇದೀನಿ" ಎಂದು ಇಳಿಗೆಮಣೆಯನ್ನು ಹಳೆಯಬಟ್ಟೆಯಲಿ ಸುತ್ತುತ್ತಾ ಬಡಬಡನೆ ಒದರಿ, ಬಿರ್ರನೆ ಹೊರನಡೆದರು. ಏನಾಯ್ತು, ಅದ್ಯಾಕೇ, ಇರು ಬಂದೆ ಎಂದು ನನ್ನ ಪ್ರಶ್ನೆ ಬರುವಷ್ಟರಲ್ಲಿ ಮನೆಯ ಹೊರಗಿದ್ದ ಕಸದ ತೊಟ್ಟಿಯಲ್ಲಿ ಇಳಿಗೆಮಣೆ ರಾರಾಜಿಸಿತ್ತು.

ಯುದ್ದದಲಿ ಗೆದ್ದ ಯೋಧನಂತೆ ಮನೆಯೊಳಗೆ ಬಂದವರತ್ತ ಕೆಂಗಣ್ಣು ಬೀರಿ "ಇಪ್ಪತ್ತೆಂಟು ವರ್ಷ ಬೇಕಾಯ್ತಾ ಅದ್ನ ಎಸೆಯೋ ಧೈರ್ಯ ಮಾಡೋಕ್ಕೆ, ಅದೇನ್ ಪಾಪ ಮಾಡಿತ್ತು ಎಂದು ಗೊಣಗುತ್ತಾ ಕುಕ್ಕರಿಸಿದೆ. ಅದ್ಯಾಕೋ ಇಳಿಗೆಮಣೆಗೂ-ನನ್ನ ಯಜಮಾನನಿಗೋ ಅಲರ್ಜಿ. ಅದ್ನ ಕಂಡಾಗಲೆಲ್ಲ ಒಂದಿನ ಎಸಿತೀನಿ ನೋಡು ಎನ್ನುತ್ತಲೇ ಇದ್ರು. ಇವತ್ತು ಮಾಡಿದ್ರು. ತೌರಿನಿಂದ ತಂದಿದ್ದ ನನ್ನ ಅಡುಗೆ ಮನೆಯ ಸಹಾಯ ಪೀಠಕ್ಕೆ ಸಿಕ್ತು ಮುಕ್ತಿ, ನಂಗೆ ಕಾಡ್ತು ಕಾಯಿ ಹ್ಯಾಗ್ ತುರೀಲಿ ಎಂಬ ಯೋಚ್ನೆ. ಅದೇಕೋ ಕಡೇ ಬಾರಿ ಹೊರಗಿದ್ದ ಕಸದ ತೊಟ್ಟಿಯತ್ತ ಕಣ್ ಹಾಯಿಸಿದೆ. ಬಿಮ್ಮನೆ ಮಲಗಿತ್ತು ಇಳಿಗೆ ಮಣೆ. ಮನ ಪಿಚ್ಚೆನಿಸಿತು.

ತರಕಾರಿ ಹಚ್ಚೋಕ್ಕೆ ಚಾಕು ಉಪಯೋಗಿಸಿದ್ರೂ ಕಾಯಿ ತುರಿಯೋಕ್ಕೆ ಇಳಿಗೆ ಮಣೆಯೇ ಸರಿ. ಅಡುಗೆ ಕಾರ್ಯ ಮತ್ತೆ ಸ್ವಾಹ ಕಾರ್ಯ ಎರಡೂ ಒಟ್ಟಿಗೆ ಆಗುತ್ತೆ. ಹಾಗೆ ಕೈಗೆ, ಮೈಗೆ ವ್ಯಾಯಾಮ ಕೂಡ ಆಗುತ್ತೆ. ಕೆಳಗೆ ಕೂರುವ ಅಭ್ಯಾಸ ಬಲ ಬಿಟ್ಟು ಹೋಗೋಲ್ಲ. ಅದೇನೋ ಒಂಥರಾ ಮಜ. ಇಳಿಗೆ ಮಣೆಯ ಪೀಠದ ಮೇಲೆ ಕುಳಿತು ಕೆಳಗೆ ಪ್ಲಾಸ್ಟಿಕ್ ಪೇಪರ್ ಹಾಕಿ ಫ್ರೆಶ್ ಆಗಿ ಒಡೆದ ಕಾಯಿಯನ್ನು ತುರಿತಾ ಸ್ವಲ್ಪ ಹಾಗೆ ಬಾಯಿಗೆ ಹಾಕಿಕೊಂಡ್ರೆ.... ಅಹಾ ಟೈಮಿದ್ದಾಗ ಕೈಯಲ್ಲಿ ಕಾಯಿ ತುರಿ ತೆಗೊಂಡು ಸ್ವಲ್ಪ ಸಕ್ಕರೆ ಬೆರೆಸಿ ತಿಂದರಂತೂ, ಅದೇನು ಸವಿ- ನಾಲಿಗೆಯಲಿ ನೀರೂರುತ್ತೆ ಅಲ್ವಾ?

ಅದ್ಯಾಕೋ ಕೆಲವು ಕಾಯಿ ಒಂದೇ ಏಟಿಗೆ ಟಪ್ ಆಗುತ್ತೆ, ಮತ್ತೊಮ್ಮೆ ಅದೆಷ್ಟು ಟಪ್ ಏನಿಸಿದರೂ ಹಾಳಾದು ಒಡೆಯೋದೇ ಇಲ್ಲ. ಅಯ್ಯೋ ಗೋಟುಕಾಯಿ ಇದು ಎಂದು ಗೊಣಗಿ ಬೇರೆ ಕಾಯಿ ಒಡೆಯುವ ಪರಿಸ್ಥಿತಿ ಬರುತ್ತೆ. ಕೆಲವರಂತೂ ತೆಂಗಿನಕಾಯಿಯನ್ನು ಒಂದೇ ಏಟಿಗೆ ಟಪ್ ಎಂದು ಸರಿ-ಸಮವಾಗಿ ಹೋಳು ಮಾಡ್ತಾರೆ. ಪೌರುಷ ತೋರಿಸಲು ಬರಿಗೈಯಿಂದ ಕಾಯಿ ಮೇಲೆ ಏಟು ಹಾಕಿ ಹೋಳು ಮಾಡುವವರೂ ಇದ್ದಾರೆ. ಅದೊಂದು ಕಲೆ. ಕೆಲವೊಮ್ಮೆ ಕಾಯಿ ಒಡೆಯಲು ಹೋಗಿ ಕಾಯಿ ದುಂಡಗೆ ಹಾಗೇ ಇರುತ್ತೆ ಕೈಗೆ ಜುಟ್ಟು ಮಾತ್ರ ಸಿಗುತ್ತೆ. ಜುಟ್ಟಿಲ್ಲದ ಕಾಯಿ ಒಡೆವಾಗ "ಗಣೇಶಂಗೆ" ಇದು ಎಂದು ಅಮ್ಮ ಗೊಣಗುತ್ತಿದ್ದ ಮಾತೂ ನೆನಪಿಗೆ ಬರುತ್ತೆ.

ಹಬ್ಬ-ಹರಿದಿನಗಳಲ್ಲಿ ಅರಿಶಿನ-ಕುಂಕುಮ ಲೇಪಿತ ಕಾಯಿಯ ಜುಟ್ಟು ಕಿತ್ತು ಟಪ್-ಟಪ್ ಎಂದು ನಿಲುಗಾಲವಿಲ್ಲದೆ ಒಡೆದು, ಅರ್ಧ ಹೋಳು ಪ್ರಸಾದ ಎಂದಿತ್ತು ಇನ್ನರ್ಧವ ತಿನ್ನಲೂ ಆಗದೆ, ಎಳನೀರು ಕುಡಿಯಲೂ ಆಗದೆ ಸೋತು ಸುಣ್ಣವಾಗಿರುತ್ತಾನೆ. ಪ್ರಸಾದದ ಕಾಯಿ ಉಪಯೋಗಿಸುವ ಮೊದಲು ಸಕ್ಕರೆಯಲಿ ಅದ್ದಿ ಬಾಯಿಗೆ ಸಿಹಿ ಎನಿಸಿಕೊಂಡಾಗ ಏನೋ ಸಾರ್ಥಕ್ಯ ಭಾವ. ಕಾಶಿಯಾತ್ರೆ, ವರಪೂಜೆಗಳಲ್ಲಿ ವಿಶಿಷ್ಟ ಸ್ಥಾನ ಕಾಯಿ ಒಡೆಯುವುವ ಭಾವನಿಗೆ, ಮೈದುನನಿಗೆ, ಸಂಬಂಧಿಗೆ ಕಾಣಿಕೆ ಬೇರೆ. ಒಡೆದಾಕ್ಷಣ ಎಲ್ಲಿಂದಲೋ ಪ್ರತ್ಯಕ್ಷರಾಗುತ್ತಿದ್ದರು ಚೂರುಗಳ ಹೆಕ್ಕುವ ಹುಡುಗರು.

ಚಿಕ್ಕಂದಿನಲ್ಲಂತೂ ಅಮ್ಮ ಕಾಯಿ ತುರಿತಾ ಇದ್ರೆ ಬಿಳಿ-ಬಿಳಿಯಾಗಿ ಉದುರುತ್ತಿದ್ದ ಕಾಯಿ ತುರಿಗೆ ಕೈ ಚಾಚುತ್ತಿದ್ದೆವು. ಕೆಲವೊಮ್ಮೆ ಮುದ್ದಿನಿಂದ ಚಟ್ನಿಗೆ ಬೇಕು ಕಣೆ ಪುಟ್ಟಾ ಎಂದು ಕೊಟ್ಟರೆ, ಮಗದೊಂದು ದಿನ ಕೊಡ್ತೀನಿ ನೋಡು ನಾಲ್ಕು, ಮೈಗಾಗೋಲ್ಲ ಹೋಗಿ ಆಡ್ಕೋಳಿ ಎಂದು ಬೈಯ್ಯೋವ್ಳು. ಚಿಕ್ಕಂದಿನಲ್ಲಿ ಕಾಯಿ ತುರಿಯುವ ಆಕರ್ಷಣೆ ಗಂಡು ಮಕ್ಕಳಿಗೂ ಇರುತ್ತಿತ್ತು. ನಾ ಮುಂದು ತಾ ಮುಂದು ಎಂದು ಒಂದೇ ಬದಿಗೆ ತುರಿದು, ಹೇಳಿಲ್ವಾ ಬರೋಲ್ಲ, ಅದಕ್ಕೇ ಹೇಳೋದು ಅರ್ಧಂಬರ್ಧ ಕೆಲ್ಸ ನಿಂದು ಎಂದು ಅನಿಸಿಕೊಂಡಿದ್ದೆ. ಒಮ್ಮೆ ಹೆರೆಮಣೆಯ ಮೇಲೆ ಕುಳಿತು ಕಾಯಿ ತುರಿತಾ ಬೆರಳು ಕಟ್ಟಾಗಿಸಿಕೊಂಡಾಗ ಯಾಕೆ ಮಗು ಕೈಯಲ್ಲಿ ಕೆಲ್ಸ ಮಾಡಿಸ್ತೀಯ ಎಂದು ಅಣ್ಣ(ಅಪ್ಪ) ಅಮ್ಮನನು ಬೈಯ್ದದ್ದು, ನನ್ನ ಗಾಯಕ್ಕೆ ಅರಿಶಿನ ಹಚ್ಚಿದ್ದು ಓಹ್ ಇಳಿಗೆ ಮಣೆಯೊಂದಿಗೆ ನೆನಪಿನ ಮೆರವಣಿಗೆಗಳ ಸಾಲು ಸಾಲು.

ಈಗ ಕಾಯಿ ತುರಿಯೋ ಮೆಷಿನ್ ಬಂದಿದೆ, ತುರಿದ ರೆಡಿಮೇಡ್ ಕಾಯಿ ಸಿಗುತ್ತೆ ಆದ್ರೂ ಇಳಿಗೆಮಣೆಯಲಿ ತುರಿದ ಫ್ರೆಶ್ ಕಾಯಿ ರುಚಿಯೇ ಬೇರೆ. ನಂಗಂತೂ ಇನ್ನೊಂದು ಇಳಿಗೆ ಮಣೆ ತರುವ ಧೈರ್ಯ ಬರಲಿಲ್ಲ. ತಂಗಳು ಪೆಟ್ಟಿಗೆಯಲಿ ಪ್ಲಾಸ್ಟಿಕ್ ಚೀಲದಲಿ ಬಂದಿಯಾದ ಕಾಯಿತುರಿಯೇ ಗತಿ.

ತಿರುಳು, ನಾರು, ಜುಟ್ಟು, ಚಕ್ಕೆ ಹೀಗೆ ಸಂಪೂರ್ಣ ಉಪಯುಕ್ತ ಕಾಯಿಯನ್ನು ತುರಿದು ಅಂಗೈಯಲ್ಲಿ ಇಟ್ಟುಕೊಂಡು ಕೊಬ್ಬು ಹೆಚ್ಚೆಂಬ ಯೋಚನೆ ಬರುವಷ್ಟರಲ್ಲಿ ಥಟ್ಟನೆ ತಿಂದು ಬಿಡಿ (ಎಂದಾದರೊಮ್ಮೆ)... ಒಂದ್ನಿಮಿಷ ... ಸ್ವಲ್ಪ ಸಕ್ಕರೆ ಬೆರೆಸಿ ತಿನ್ನಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+