ಉತ್ತರ ಅಮೆರಿಕಾದಲ್ಲಿ ಅಕ್ಕ-ಪುನೀತ್ ಸ್ಟಾರ್ ನೈಟ್

ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರ ಆಯೋಜಿಸುತ್ತಿರುವ ಕನ್ನಡ ನಟನಟಿ ನೃತ್ಯ ಕಲಾವಿದರ ಅಮೆರಿಕಾ ಜೈತ್ರಯಾತ್ರೆಗೆ ಸರ್ವ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅಕ್ಕ ನಿರ್ದೇಶಕ ಮಂಡಳಿಯ ಛೇರ್ ಮನ್ ಅಮರ್ ನಾಥ್ ಗೌಡ ಭಾನುವಾರ ಬೆಂಗಳೂರಿನಲ್ಲಿ ದಟ್ಸ್ ಕನ್ನಡ ಪ್ರತಿನಿಧಿಗೆ ತಿಳಿಸಿದರು.
ಎರಡು ವರ್ಷಕ್ಕೊಮ್ಮೆ, ಅಂದರೆ ಸರಿ ವರ್ಷ ಸಂಖ್ಯೆಯಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯುವುದು ಪದ್ದತಿ. ಆದರೆ ನಡುವಿನ ಬೆಸ ಸಂಖ್ಯೆಯ ವರ್ಷದಲ್ಲಿ ಒಂದು ಬೃಹತ್ ಮಟ್ಟದ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆನ್ನುವುದೇ ಅಕ್ಕ ಆಶ್ರಯದ ಚಲನಚಿತ್ರ ರಸಸಂಜೆಯ ಉದ್ದೇಶ ಎಂದು ಅಮರ್ ನಾಥ್ ವಿವರಿಸಿದರು.
ಸ್ಟಾರ್ ನೈಟ್ ಏರ್ಪಾಟಾಗುವುದು ಅಮೆರಿಕಾದ ಬೇಸಿಗೆ ಕಾಲ ಮುಗಿಯುವ ವೇಳೆ. ಅಂದರೆ ಲೇಬರ್ ಡೇ ದೀರ್ಘ ವಾರಾಂತ್ಯ ರಜಾಕಾಲ. ಈ ಬಾರಿ ಲೇಬರ್ ಡೇ ರಜಾ ಯಥಾಪ್ರಕಾರ 5 ಸೆಪ್ಟೆಂಬರ್, ಸೋಮವಾರ. ರಜಾ ಕಾಲದ ಕನ್ನಡ ಮಜಾ ಅನುಭವಿಸಲು ಅಮೆರಿಕನ್ನಡಿಗರಿಗೆ ಇದೊಂದು ಸುವರ್ಣಾವಕಾಶ ಎಂದು ಅಕ್ಕದ ಅಧಿಕಾರಿ ಹೇಳಿದರು.
ಅಮೆರಿಕಾದ ಪೂರ್ವ ಕರಾವಳಿ ಅಂದರೆ ನ್ಯೂ ಜೆರ್ಸಿಯಲ್ಲಿ ಒಂದು ಹಾಗೂ ಪಶ್ಚಿಮ ಕರಾವಳಿ ಸ್ಯಾನ್ ಫ್ರಾನ್ಸಿಸ್ ಕೊ ಬೇ ಏರಿಯಾದಲ್ಲಿ ಇನ್ನೊಂದು ಕಾರ್ಯಕ್ರಮ ಇರುತ್ತದೆ. ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಈಗಾಗಲೇ ಅಮೆರಿಕಾ ಪ್ರವಾಸ ಕೈಗೊಂಡಿದ್ದು ಸೂಕ್ತ ಸಭಾಂಗಣಗಳ ಶಾರ್ಟ್ ಲಿಸ್ಟ್ ಮಾಡಿದೆ.
ಸ್ಟಾರ್ ನೈಟ್ ನಡೆಯುವ ಮುನ್ನಾದಿನ ಸಂಜೆ ಕನ್ನಡ ಚಲನಚಿತ್ರ ನಟನಟಿಯರೊಂದಿಗೆ ಡಿನ್ನರ್ ಇರುತ್ತದೆ. ಇದು ಪೇಯ್ಡ್ ಡಿನ್ನರ್ ಆಗಿದ್ದು ಸಂಗ್ರಹವಾಗುವ ಹಣ ಅಕ್ಕದ ದತ್ತಿ ನಿಧಿ ವತಿಯಿಂದ ಆಯೋಜಿಸಲಾಗುವ ಕರ್ನಾಟಕ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗ ಆಗುತ್ತದೆ ಎಂದು ಗೌಡರು ತಿಳಿಸಿದರು.
ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಉತ್ತರ ಅಮೆರಿಕಾದಲ್ಲಿ ಕನ್ನಡ ಚಲನಚಿತ್ರಗಳ ಅಭಿರುಚಿಯನ್ನು ಉತ್ತು ಬಿತ್ತುವುದು ಹಾಗೂ ಕನ್ನಡ ಚಿತ್ರಗಳಿಗೆ ಅಮೆರಿಕಾ ಮಾರುಕಟ್ಟೆ ಬೆಳೆಯಲು ಕಿಂಡಿ ತೆರೆಯುವುದಾಗಿರುತ್ತದೆ. ಸ್ಟಾರ್ ನೈಟ್ ಕಾರ್ಯಕ್ರಮದ ಇತರ ಎಲ್ಲ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅಮರ್ ನಾಥ್ ಗೌಡ ತಿಳಿಸಿದರು.












Click it and Unblock the Notifications