ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕನ್ನಡ ಕಂದಮ್ಮಗಳ ತೊದಲುನುಡಿ

By Prasad
|
Google Oneindia Kannada News

Singara Utsav in Singapore
"ಸಿಂಗಾರ ಉತ್ಸವ" - ಸಿಂಗಪುರ ಕನ್ನಡ ಸಂಘದ ನೇತೃತ್ವದಲಿ ಸಿಂಗಪುರಕ್ಕೆ ವಲಸೆ ಬಂದಿರುವ ಕನ್ನಡಿಗರಲ್ಲಿ ಇರುವ ಪ್ರತಿಭೆಗಳ ಹೊರಸೂಸಲು ಹಾಗೂ ಮುಂಬರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ. ಈ ಕಾರ್ಯಕ್ರಮ ಭಾನುವಾರ 27, ಫೆಬ್ರವರಿ ಸಂಜೆ ಇಲ್ಲಿನ ಡೋವರ್ ಸ್ಥಳದಲ್ಲಿರುವ ಪಾಲಿಟೆಕ್ ಸಭಾಂಗಣದಲ್ಲಿ ನಡೆಯಿತು.

ಸಿದ್ಧಿವಿನಾಯಕನಿಗೆ ನಮನದೊಂದಿಗೆ ನಂತರ ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರ ಸ್ವಾಗತ ಭಾಷಣ ಮುಗಿದಂತೆ ನಾನು ಜೋಗುಳ ಹಾಡ್ತೀನಿ ಎನ್ನುತ್ತಾ ಮೂರು ವರುಷದ ಕೂಸೊಂದು ವೇದಿಕೆಯ ಮೇಲೆ ಕುಳಿತುಕೊಂಡಿತು. ಅದರ ಪಕ್ಕದಲಿ ತನ್ನನೇ ಅರಿಯದ ಪುಟಾಣಿ ಹಸುಗೂಸೊಂದನು ವೇದಿಕೆಯ ಮೇಲೆ ಮಲಗಿಸಿದರೋರ್ವರು. ಲಾಲಿ ಹಾಡುತ್ತಾ, ತನ್ನ ಪುಟ್ಟ ಕೈಗಳಿಂದ ಜೋಜೋ ಹಾಡಿದ ಪುಟಾಣಿಯ ತೊದಲಿನ ಜೋಗುಳದ ದನಿಗೆ ನಿದ್ರಿಸಿತು ಆ ಕೂಸು, ಆದರೆ ಸಭಿಕರ ಚಪ್ಪಾಳೆಯ ಸುರಿಮಳೆಗೆ ಬೆಚ್ಚಿತೇನೋ ಸರಿ. ಆ ಚಪ್ಪಳೆ ಸುರಿಮಳೆ ತನಗೇ ಎಂದರಿಯದು ಆ ಕೂಸು, ತಾನೇನೋ ಸಾಧಿಸಿದೆ ಎಂದು ಹೆಮ್ಮೆಯಿಂದ ಉಗುರು ಕಚ್ಚುತ್ತಾ ಅಮ್ಮನತ್ತ ನೋಡಿತು ಮಗದೊಂದು. ಪಾಪದ್ದು, ಅದಕ್ಕೇನು ಗೊತ್ತು! ಬೊಂಬೆಯಾಟವಯ್ಯಾ!

ದೊಡ್ಡವರೆಲ್ಲಾ ಜಾಣರಲ್ಲ : ಇಷ್ಟರಲ್ಲೇ ಮತ್ತೊಂದು ಪುಟಾಣಿ ವೇದಿಕೆಗೆ ಬಂದು "ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ" ಎಂದನು. ಇದಕ್ಕೆ ಸಿಕ್ಕ ಬಹುವಾನ ಹಿರಿಯರ ಚಪ್ಪಾಳೆ. ನಾನೇನು ಉಲಿದದ್ದು ಎಂಬುದರ ಅರಿವಿಲ್ಲದೇ ಎಲ್ಲರನೂ ಸಂತಸಪಡಿಸಿದೆನೆಂಬ ಹೆಮ್ಮೆಯಿಂದ ಮತ್ತದೇ ಸಾಲು ಹೇಳಿದಾಗ ನಗೆಯ ಅಲೆ. ಆ ನಗೆಯ ಅಲೆಕಂಡು ಪಾಪದ್ದಕ್ಕೆ ಮುಂದಿನ ಸಾಲು ಮರೆತೇ ಹೋಯ್ತು. ಮೈಕನ್ನು ಬಿಡಲಿಚ್ಚಿಸದೆ "ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ" ಎಂದು ಉಪದೇಶ ನೀಡಿದ್ದೇ, ನೀಡಿದ್ದು. ಕೋಣರಲ್ಲದವನಿಗೆ, ಜಾಣರಲ್ಲದವನು ಬಂದು ಎತ್ತಿಕೊಂಡೊಯ್ಯ ಬೇಕಾದ ಪರಿಸ್ಥಿತಿ ಬಂದಾಗ "ಹಿರಿಯರು ಹೇಳುವ ಮಾತು ಖಂಡಿತ ನಿಜ ಅಲ್ಲ" ಎಂಬುದರ ಅರಿವು ಆಗಿರಲೇಬೇಕು ಅದಕ್ಕೆ.

ಮಕ್ಕಳಿಂದ ಗಣಪತಿ ಸ್ತೋತ್ರ, ಹನುಮಾನ್ ಚಾಲೀಸ, ಮಾಧವಾ ಮಧುಸೂಧನಾ, ಪವಮಾನ ಜಗದಾ ಪ್ರಾಣ, ಭಾವಗೀತೆ, ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತಾ, ನಾಯಿಮರಿ ನಾಯಿಮರಿ ತಿಂಡಿ ಬೇಕೆ, ದಾಸರ ನಾಮಗಳು, ನಿನ್ನಿಂದಲೇ, ರಾಗೀ ತಂದೀರಾ, ಊರದೇವರ ಮಾಡಬೇಕಣ್ಣಾ, ಜಾನಪದ ಗೀತೆಗಳು, ಡಿ.ವಿ.ಜಿ ಅವರ ಕಗ್ಗ, ಅಕ್ಕನ ವಚನಗಳನ್ನು ಒಳಗೊಂಡಿದ್ದ ಪುಟಾಣಿ ಹಕ್ಕಿಗಳ ತೊದಲ್ನುಡಿಗಳ ಕಲರವ ಮುದನೀಡಿತು. ಮಕ್ಕಳನು ಸಜ್ಜುಗೊಳಿಸಿ, ಕಲಿಸಿದ ತಂದೆ-ತಾಯಿಯರ ಪ್ರೋತ್ಸಾಹಕ್ಕೆ ಆ ಸಂಭ್ರಮದಲಿ ಪಾಲ್ಗೊಂಡ ಸಮಸ್ತ ಪ್ರೇಕ್ಷಕರ ನಮನ.

ಗಾಯನ ಪಾಡಿದಿರೀ ನೀವು, ವಾದ್ಯ ನುಡಿಸುವೆವು ನಾವು ಎಂದ ಮತ್ತೊಂದು ಮಕ್ಕಳ ಗುಂಪು ವಯಲಿನ್, ಕೊಳಲು, ತಬಲಾ, ಸಿತಾರ್, ಕೀಬೋರ್ಡ್‌ಗಳ ನುಡಿಸಿ ತಮ್ಮ ಪ್ರತಿಭೆಗಳ ಬೆಳಕು ಚೆಲ್ಲಿದರು. ಗಾನಂ, ವಾದ್ಯಂ ಆದಮೇಲೆ ನಾಟ್ಯಂ ಇಲ್ಲದ ಕಾರ್ಯಕ್ರಮವೇ? ವಾರಬಂತಮ್ಮಾ ಹಾಡಿಗೆ ಭರತನಾಟ್ಯ ಮುಗಿದಂತೆ ಶ್ರೀಕೃಷ್ಣದರ್ಶನದ ಯಕ್ಷಗಾನ, ಜನಪದ ನೃತ್ಯಗಳು ಬಹಳ ಸೊಗಸಾಗಿತ್ತು.

ಯಾವೊಂದೂ ಮುಜುಗರವಿಲ್ಲದೆ ಹೇಳಿಕೊಟ್ಟದ್ದನ್ನು ಗಿಳಿಪಾಠದಂತೆ ಒಪ್ಪಿಸುವ ಪರಿ, ಬಿಮ್ಮನೆ ಮೈಕ್ ಹಿಡಿದು ಏನೋಂದೂ ಹೇಳದೆ ನಿಂತು, ಹೆತ್ತವರಿಗೆಗಾಗಿ ಹುಡುಕಾಟ, ನೋಡಿದಾಕ್ಷಣ ತನ್ನವರು ಇದ್ದಾರೆ ಎಂಬ ಹೆಮ್ಮೆ, ಕಲಿಸಿದ್ದು ಪಟಪಟನೆ ಹೇಳಿದಾಗ ಚಪ್ಪಾಳೆ ಸುರಿಮಳೆ, ದೊಡ್ಡ ಬಹುಮಾನ ಸಿಕ್ಕಿತೆಂಬ ಸಂಭ್ರಮ ನೋಡುವುದೇ ಚೆಂದ. ನಾವು ಪ್ರೇಕ್ಷಕರಾಗಿ ವೀಕ್ಷಿಸುವ ಆ ಮಕ್ಕಳ ಮುಗ್ಧ ಆಟ ಚೆಲ್ವಯ್ಯ, ಚೆಲುವೋ ತಾನಿ ತಂದಾನ.

ಮಕ್ಕಳ ಕಾರ್ಯಕ್ರಮ ಮುಗಿದ ನಂತರ ಇತ್ತೀಚೆಗೆ ನಮ್ಮನ್ನು ಅಗಲಿದ ಮಹಾನ್ ಸಂಗೀತ ಸಾಮ್ರಾಟ, ಭಾರತರತ್ನ ಪಂಡಿತ ಭೀಮಸೇನ್ ಜೋಷಿ ಅವರಿಗೆ ಸಿಂಗಪುರದ ಕನ್ನಡಿಗರಿಂದ "ಜೋಷಿ ಸರ್ ನಿಮಗಿದೋ ನಮನ" ಶ್ರದ್ದಾಂಜಲಿ, ನಂತರ ಸ್ಥಳೀಯ ಬರಹಗಾರರಿಂದ ಕವನ ವಾಚನ.

ಉತ್ಸವದ ಸಂಭ್ರಮದಲಿ ಸಿಹಿಸುದ್ದಿ : ಈ ಟಿವಿ ಹಾಗೂ ಝೀ ಟಿವಿ ಚಾನೆಲ್‌ಗಳನ್ನು ವೀಕ್ಷಿಸುವ ಸೌಲಭ್ಯ ಸಿಂಗಪುರದ ಕನ್ನಡಿಗರಿಗೆ ಎಂದು ಅಧ್ಯಕ್ಷರ ಘೋಷಣೆಗೆ ಚಪ್ಪಾಳೆಯ ಸುರಿಮಳೆ. 60ರ ದಶಕದಲಿ ತಾಯ್ನಾಡ ತೊರೆದು ಸಿಂಗಪುರಕ್ಕೆ ವಲಸೆ ಬಂದ ಎರಡು/ಮೂರು ಕನ್ನಡಿಗರ ಕುಟುಂಬ ಇದೀಗ ಸಾವಿರಕ್ಕೆ ಮೀರಿದೆ. ಕನ್ನಡ ಚಾನೆಲ್ ಇಲ್ಲ ಎಂಬ ಕೊರಗು ನಮಗಿದ್ದರೆ, ಅಯ್ಯೋ ಹೋಗೆ ನಿಮ್ಮೂರಿಗೆ ಬಂದ್ರೆ ಕನ್ನಡ ಸೀರಿಯಲ್‌ಗೆ ಸೊನ್ನೆ ಎಂಬ ಗೊಣಗಾಟ ಊರಿನಲಿ ಇರುವ ಅಮ್ಮಂದಿರದು. ಸದ್ಯ, ಕೊರಗಿಗೂ, ಗೊಣಗಾಟಕ್ಕೆ ಫುಲ್‌ಸ್ಟಾಪ್. ಕನ್ನಡ ಸಂಘದ ಪ್ರಯತ್ನಕ್ಕೆ ಸಿಕ್ಕ ಫಲ ಈ ಟಿವಿ ಮತ್ತು ಝೀ ಟಿವಿ.

ಹಾಡು, ಹಾಸ್ಯ, ಹಿರಿ-ಕಿರಿಯರ ಹರಟೆ, ಮಾತು, ನಗು ಸುಗ್ರಾಸ ಭೋಜನದ ಸಿಂಗಾರ ಉತ್ಸವ-ಮನೆ ಮಂದಿಯೆಲ್ಲ ಬೆರೆತು ಸಂಭ್ರಮಿಸುವ ಹಬ್ಬದಂತೆ. ಭಾವೈಕ್ಯದಲಿ ಕೂಡಿ ಎಂದು ಹಂಚಿಕೊಂಡೆವು ಆ ಸಂಭ್ರಮವನು ನಾವು ನಿಮ್ಮೊಡನೆ... ವಸುಧೈವ ಕುಟುಂಬಕಮ್.

ವಿ.ಸೂ: ಸಿಂಗಪುರದ ಕನ್ನಡಿಗರು ಕನ್ನಡ ಚಾನೆಲ್ ಬೇಕಾದಲ್ಲಿ ಸಂಪರ್ಕಿಸಿ: Desh IPTV-65-62927278 , 65-81610995

English summary
Singapore Kannada Sangha celebrated Singara Utsava in Singapore recently. Here is a report by Vani Ramdas. Good news is Singapore Kannadigas will be able to watch E TV and Zee TV Kannada channels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X