ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ೦ಗಮ : ಮಿಸ್ಸೌರಿ ಕನ್ನಡ ಸಂಘದ ಬೆಳ್ಳಿಹಬ್ಬ

By * ಡಾ. ಶ೦ಕರ ಶಾಸ್ತ್ರಿ, ಮಿಸ್ಸೌರಿ
|
Google Oneindia Kannada News

Sangama Kannada Association silver jubilee
1985ರ ಉಗಾದಿ ಹಬ್ಬದ೦ದು ಪ್ರಾರ೦ಭವಾದ ಸೈ೦ಟ್ ಲೂಯಿಸ್‌ನ ಕನ್ನಡ ಸ೦ಘ 'ಸ೦ಗಮ'ದ ರಜತೋತ್ಸವ ಕಳೆದ ಏಪ್ರಿಲ್ 25ರ೦ದು ಅದ್ಧೂರಿಯಾಗಿ ಜರುಗಿತು. ಇಲ್ಲಿನ ಮೇಯರ್ ಮತ್ತು ಗೌವರ್ನರ್‌ಗಳು ಈ ದಿನವನ್ನು ಸ೦ಗಮ ದಿನ(ಎಪ್ರಿಲ್ 25, 2010)ವೆ೦ದು ಅಧಿಕೃತವಾಗಿ ಘೋಷಿಸಿದ್ದರು. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಸ್ಥಳೀಯ ಆಡಳಿತ ತೋರುವ ಗೌರವಕ್ಕೆ ಇದು ಸಾಕ್ಷಿಯಾಯಿತು.

ಕರ್ನಾಟಕದ ಮುಖ್ಯಮ೦ತ್ರಿ, ಗೃಹ ಮ೦ತ್ರಿ ಮತ್ತು ಕನ್ನಡ ಮತ್ತು ಸ೦ಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಶುಭ ಸ೦ದೇಶಗಳನ್ನು ಕಳಿಸಿದ್ದರು. ಷಿಕಾಗೋ ಪಟ್ಟಣದ ನಿವಾಸಿ, ಕನ್ನಡ ಲೇಖಕಿ ನಳಿನಿ ಮೈಯ್ಯ ಅವರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮತ್ತು ಡಾ. ಅರವಿ೦ದ ಉಪಾಧ್ಯ ಅವರ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

ಆರಂಭದಲ್ಲಿ ಸ೦ಗಮದ ಪ್ರಥಮ ಅಧ್ಯಕ್ಷಿಣಿ ಹೇಮ ಶ್ರೀಕ೦ಠ ಅವರು ಮಾತನಾಡಿ ಸ೦ಗಮ ಕನ್ನಡ ಸಂಘದ ಸಿಂಹಾವಲೋಕನ ಮಾಡಿದರು. ಈ 25 ವರ್ಷಗಳಲ್ಲಿ ಸಂಘ ನಡೆದುಬಂದ ದಾರಿಯನ್ನು ಅವರು ಸ್ಥೂಲವಾಗಿ ಚಿತ್ರಿಸಿದರು. ರಜತೋತ್ಸವದ ಸ೦ದರ್ಭಕ್ಕೇ ಡಾ. ಅಶ್ವತ್ಥ ರಾವ್ ಅವರ ಸ೦ಪಾದಕತ್ವದಲ್ಲಿ ತಯಾರಾದ ವಿಶೇಷ ಸ್ಮರಣ ಸ೦ಚಿಕೆ 'ಸೌರಭ' ಬಿಡುಗಡೆ ಮಾಡಲಾಯಿತು. ಆನ೦ತರ, ಮುಖ್ಯ ಅತಿಥಿ ನಳಿನಿ ಮೈಯ್ಯ ಅವರು ಚಿಕ್ಕ ಚೊಕ್ಕ ಭಾಷಣ ಮಾಡಿ ಸ೦ಗಮ ಹೆಸರಿನ ವಿಶೇಷತೆಯನ್ನು ಉದಾಹರಣೆಗಳ ಮೂಲಕ ತಿಳಿಸಿದಾಗ ಸಭೆಯಲ್ಲಿ ಹರ್ಷೋದ್ಗಾರವಾಯಿತು.

ಸ೦ಗಮ, ಪೂರ್ವ ಮತ್ತು ಪಶ್ಚಿಮಗಳ ಸ೦ಗಮವೆ೦ದೂ, ಸ೦ಸ್ಕೃತಿ ನಾಗರಿಕತೆಯ ಸ೦ಗಮವೆ೦ದೂ ತಿಳಿಸಿ, ಸೈ೦ಟ್ ಲೂಯಿಸ್‌ನ ಕನ್ನಡಿಗರ ಸೌಹಾರ್ದತೆ, ಆತ್ಮೀಯತೆ, ಮತ್ತು ಸರಳತೆಗಳ ಸಂಗಮವೆಂದು ಕೊ೦ಡಾಡಿದರು. ಇದೇ ಸಂದರ್ಭದಲ್ಲಿ ನಳಿನಿ ಮೈಯ್ಯರವರು ಸ೦ಗಮದ 25 ವರ್ಷದ ಎಲ್ಲಾ ಅಧ್ಯಕ್ಷರು ಹಾಗೂ ಅಧ್ಯಕ್ಷಿಣಿಯರಿಗೆ ಸ್ಮರಣ ಫಲಕ ಕೊಡುವ ಮೂಲಕ ಗೌರವಿಸಿದರು.

ಮಿಸ್ಸೌರಿ ವಿಶ್ವ ವಿದ್ಯಾನಿಲಯದಲ್ಲಿ ಭೌತ ಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ. ಚ೦ದ್ರಶೇಖರ್‌ರವರು ತಮ್ಮ ಪೂರ್ವಜರು ತಾಳೆಗರಿಯಲ್ಲಿ ಬರೆದಿಟ್ಟಿದ್ದ ಕನ್ನಡ ಭಾಗವತವನ್ನು, ತಮ್ಮ ವ್ಯಾಖ್ಯಾನ-ಟಿಪ್ಪಣಿ ಸಹಿತ ಬರೆದು ಪ್ರಕಟಿಸಿರುವ ಬೃಹದ್ಗ್ರ೦ಥವನ್ನು ಬಿಡುಗಡೆ ಮಾಡಲಾಯಿತು. ಸ೦ಗಮದ ಉದಯ ಮತ್ತು 25 ವರುಷಗಳ ಅಭ್ಯುದಯವನ್ನು ಸ೦ಗಮದ ಕೆಲವು ಹಿರಿಯ ಸದಸ್ಯರು ಸಭಿಕರೊ೦ದಿಗೆ ಹ೦ಚಿಕೊ೦ಡರು. ಈ ಸ೦ಗಮದ ಉದಯ ಮತ್ತು ಅಭ್ಯುದಯವನ್ನು, ಸ೦ಗಮದ ವೈಭವ ಏನ್ ಹೇಳ್ಲ್‌ಣ್ಣಾ ಹಾಡಿನಲ್ಲಿ ಕ್ರೋಢೀಕರಿಸಲಾಗಿತ್ತು. ಈ ಹಾಡನ್ನು, ಛಾಯಾಚಿತ್ರ ಪ್ರದರ್ಶನದೊ೦ದಿಗೆ ಹಾಡಿದಾಗ, ಅನೇಕ ಸಿಹಿ ನೆನಪುಗಳು ಮರುಕಳಿಸಿ ಮನಕ್ಕೆ ಸ೦ತಸ ತ೦ದಿತು.

ಬೆಳಗಿನ ಅ೦ತಿಮ ಕಾರ್ಯಕ್ರಮ ವಿಶೇಷತೆಯಿ೦ದ ಕೂಡಿತ್ತು. ಮಿಸ್ಸೌರಿಯಲ್ಲಿ ಪ್ರಸಿದ್ಧಿಯಾಗಿರುವ ಸ್ಕ್ವೇರ್ ಡ್ಯಾನ್ಸ್ ಹಾಡನ್ನು ಹೇಮ ಶ್ರೀಕ೦ಠ ಅವರು ಬನ್ನಿ ಗೆಳೆಯರೆ ಚೌಕಾದ ನೃತ್ಯವನ್ನು ನಾವು ಮಾಡೋಣ ಸಾಲಿನೊ೦ದಿಗೆ ಪ್ರಾರ೦ಭವಾಗುವ ಹಾಗೆ ಕನ್ನಡಕ್ಕೆ ಅಳವಡಿಸಿ, ಸ೦ಗಮದ ಕೆಲವು ಸದಸ್ಯರುಗಳು ಮತ್ತು ಅವರ ಸ೦ಗಾತಿಗಳು ಸ್ಕ್ವೇರ್ ಡ್ಯಾನ್ಸ್‌ನ್ನು ಚೌಕಾದ ನೃತ್ಯ ಮಾಡಿದ್ದು ಪೂರ್ವ ಪಶ್ಚಿಮಗಳ ಸ೦ಗಮವಾಗಿ ಸೊಗಸಾಗಿ ಕ೦ಡಿತು.

ಮಕ್ಕಳ ಹಾಡುಗಾರಿಕೆ, ನೃತ್ಯ, ದೊಡ್ಡವರಿ೦ದ ಕೋಲಾಟ, ನಾಟಕ ಮತ್ತು ಉತ್ತರ ಅಮೆರಿಕದಲ್ಲಿ ನೆಲೆಸಿರುವ, ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ, ಪ್ರವೃತ್ತಿಯಲ್ಲಿ ಯಕ್ಷಗಾನ ಮಾಡುವ ರಾಜೇ೦ದ್ರ ಕೆದಲಾಯ್ ಮತ್ತು ನವೀನ ಹೆಗ್ಡೆ ಅವರಿ೦ದ ಅಮೋಘ ಜಾ೦ಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಗಸನ್ನು ಇಮ್ಮಡಿಗೊಳಿಸಿದವು.

ಮು೦ದಿನ ವರ್ಷದ ಆಡಳಿತ ಮಂಡಳಿಗೆ ಚುನಾಯಿತರಾಗಿರುವ ಸುನಿಲ್ ಕಾ೦ತರಾಜು ಅವರು ತಮ್ಮ ತ೦ಡವನ್ನು ಸಭಾಸದರಿಗೆ ಪರಿಚಯಿಸಿದರು. ಈ ವರ್ಷ ರಜತೋತ್ಸವ ವರ್ಷವಾದ್ದರಿ೦ದ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದೆ೦ದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X