ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ : ಕಲಿಯುವ ಆಸೆ, ಕಲಿಸಿದ ಧನ್ಯತೆ

By * ವಿಶ್ವೇಶ್ವರ ದೀಕ್ಷಿತ
|
Google Oneindia Kannada News

American children at Kannada Kali
ಅಮೆರಿಕಾದಲ್ಲಿ ಕನ್ನಡ ಮಕ್ಕಳಿಗೆ ಅ ಆ ಇ ಈ ಉ ಊ ಎ ಏ.. ಕಲಿಸುವ ಉದ್ದೇಶದಿಂದ ಆರಂಭವಾದ ಸಂಸ್ಥೆಯ ಹೆಸರು 'ಕನ್ನಡ ಕಲಿ'. ಈ ಶಾಲೆಗೆ ಈಗ ಹತ್ತು ವರ್ಷ ತುಂಬಿತು. ಕಳೆದ ಮಾರ್ಚ್ 20, ಶಾಲೆಗೆ ಮತ್ತು ಕನ್ನಡ ಕಲಿಯುವ ಮಕ್ಕಳಿಗೆ ಒಂದು ವಿಶೇಷ ದಿನ; ದಕ್ಷಿಣ ಕ್ಯಾಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ಕನ್ನಡ ಕಲಿ ಕಾರ್ಯಕ್ರಮದ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ಕನ್ನಡಮಯವಾಗಿ ಜರುಗಿತು.

ಸೆಪ್ಟಂಬರ್ 24, 2000ದಂದು ಮೊದಲ ಕನ್ನಡ ಕಲಿ ತರಗತಿ ಕರ್ನಾಟಕ ಸಾಂಸ್ಕೃತಿಕ ಸಂಘದ ಮುಂದಾಲೋಚನೆಯಿಂದ ಅರ್ವೈನ್ ನಗರದಲ್ಲಿ ಪ್ರಾರಂಭವಾಯ್ತು. ಕನ್ನಡಿಗರ ಮನದಲ್ಲಿದ್ದ ಅದಮ್ಯ ಆಸೆಗೆ ಅಭಿವ್ಯಕ್ತಿ ನೀಡಿತು. ಕೂಡಲೆ ಡೈಮಂಡ್ ಬಾರ್, ಸರಿಟೊಸ್, ಅನಹೈಮ್ ಹಿಲ್ಸ್, ಸಾನ್ ಫರ್ನಾಂಡೊ ವ್ಯಾಲಿ, ಮತ್ತು ಪಾಮ್ಡೇಲ್ ಗಳಲ್ಲಿ ಕನ್ನಡ ಕಲಿ ಶಾಖೆಗಳು ಚಿಗುರೊಡೆದವು. ಕನ್ನಡ ಕಲಿಸುತ್ತ ಕನ್ನಡದ ಕಂಪನ್ನು ತೆಂಕಣ ನಾಡಿನ ಉದ್ದಗಲಕ್ಕೂ ಹರಡತೊಡಗಿದವು. ಸದ್ಯ, ಅರ್ವೈನ್, ಸರಿಟೊಸ್, ಮತ್ತು ವ್ಯಾಲಿ ಶಾಖೆಗಳು ಮಾತ್ರ ಕ್ರಿಯಾಶೀಲವಾಗಿದ್ದರೂ ಎಂದಿಗಿಂತ ಹೆಚ್ಚು ವಿದ್ಯಾರ್ಥಿಗಳು ಇಂದು ಕನ್ನಡ ಕಲಿಯುತ್ತಿದ್ದಾರೆ; ಹೆಚ್ಚು ಶಿಕ್ಷಕರು ಪಾಠ ಹೇಳುತ್ತಿದ್ದಾರೆ; ಹೆಚ್ಚು ಸಹಾಯಕರು ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ.

ಮಾತು ಓದು ಬರಹಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಕಲಿಯುತ್ತಿದ್ದಾರೆ. ವೇದಿಕೆಯ ಮೇಲೆ ಕನ್ನಡ ಮಾತನಾಡಿ ಕಾರ್ಯಕ್ರಮಗಳನ್ನು ನಡೆಸಿಕೊಡುವಷ್ಟು ಮುಂದುವರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ಮೊದಲ ದಿನದಿಂದ ಹತ್ತು ವರ್ಷಗಳೂ ಕನ್ನಡ ಕಲಿಯ ಕಟ್ಟೆ ಹತ್ತಿದ್ದಾರೆ. ಓದು ಬರಹಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಜೊತೆಗೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕಾಲೇಜಿಗೆ ತೆರಳುತ್ತಿದ್ದಾರೆ. ಇದು ಕನ್ನಡ ಕಲಿಯ ಉದ್ದೇಶ ಮತ್ತು ಮಹತ್ವದ ಸಾಧನೆ.

ಇವರಿಗೆ ಕನ್ನಡ ಕಲಿ ಪದವಿ ಪ್ರದಾನ ಸಮಾರಂಭವೂ ಹತ್ತನೆಯ ವರ್ಷದ ಹಬ್ಬದ ಒಂದು ವಿಶೇಷವಾಗಿತ್ತು. ಆಕಾಶ ದೀಕ್ಷಿತ, ಶಿಲ್ಪಾ ಜಗನ್ನಾಥ, ಶೃತಿ ಶಾಂತಾರಾಮ್ ಮತ್ತು ಅರಿಂಜಯ ಮಾಧವ ತಮ್ಮ ಪದವಿ ಸ್ವೀಕಾರ ಭಾಷಣವನ್ನು ಕನ್ನಡದಲ್ಲಿ ನೀಡಿದರು. ಕನ್ನಡ ಸಂಸ್ಕೃತಿ ಕನ್ನಡ ಐಡೆಂಟಿಟಿಗಳೊಂದಿಗೆ ತಮ್ಮ ವ್ಯಕ್ತಿತ್ವಗಳನ್ನು ಕನ್ನಡ ಕಲಿ ಹೇಗೆ ರೂಪಿಸಿದೆ ಎಂದು ವಿವರಿಸಿದರು. ತಾವು ಸೇರುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕ್ಯಾಂಪಸ್ ಕ್ಲಬ್ ಗಳನ್ನು ಇವರು ಆರಂಭಿಸಲಿ ಎನ್ನುವುದು ನಮ್ಮ ಎಂದಿನ ಆಸೆ; ಆರಂಭಿಸುತ್ತಾರೆ ಎಂಬ ಭರವಸೆ ಇದೆ.

ಕನ್ನಡ ಕಲಿ ವಿದ್ಯಾರ್ಥಿಗಳು ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯಕ್ರಮಗಳಲ್ಲಿ ಸದಾ ಮಿಂಚುತ್ತಿದ್ದಾರೆ. ನಾಟಕ, ನೃತ್ಯ, ಹಾಡುಗಳಲ್ಲಿ ನಿಸ್ಸೀಮರಾಗಿದ್ದಾರೆ. 2006ರಲ್ಲಿ ಓದು ಬರಹಗಳೊಂದಿಗೆ “ಕನ್ನಡ ಹಾಡು" ತರಗತಿಯನ್ನು ಪ್ರಾರಂಭಿಸಲಾಯಿತು. ಕವಿತೆ, ಹಾಡುಗಳ ಮೂಲಕ ಕನ್ನಡ ಕಲಿಸುವ ಈ ಪ್ರಯತ್ನ ಇಂದು ಎಲ್ಲರಿಗೂ ಪ್ರಿಯವಾಗಿದೆ. ಇಲ್ಲಿ ಕಲಿತ ಹಾಡುಗಳು ಮಕ್ಕಳಿಗೆ ಬಾಯಿಪಾಠವಾಗಿದ್ದು ಅವರು ಹಾಡಲು ಸದಾ ಸಿದ್ಧರು.

ಶೀಲಾ ಭಟ್, ಶಿಲ್ಪಾ ಜಗನ್ನಾಥ, ನೀಲ ಕೊಟ್ರಪ್ಪ, ಆಕಾಶ ದೀಕ್ಷಿತ, ಮತ್ತು ವಿವಹ್ನಿ ಶಾಸ್ತ್ರಿ (ಕರ್ನಾಟಕ ಸಂಸ್ಕೃತಿಕ ಸಂಘದ ) ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಲ್ಪಾ ಬರೆದ “ನನ್ನ ಮೇಲೆ ಕನ್ನಡ ಸಂಸ್ಕೃತಿಯ ಪ್ರಭಾವ" ಎಂಬ ಲೇಖನಕ್ಕೆ 2008ರಲ್ಲಿ ಅಕ್ಕ (ಅಮೆರಿಕದ ಕನ್ನಡ ಕೂಟಗಳ ಆಗರ)ದ ಸ್ಕಾಲರ್ಶಿಪ್ ಬಂದಿದೆ.

ಮೂರು ತಿಂಗಳಿಗೊಮ್ಮೆ ಲೇಖನ, ಸುದ್ದಿ, ಶಿಕ್ಷಕರಿಗೆ ಕುಡಿನುಡಿ, ಕನ್ನಡ ಪಾಠಗಳನ್ನುಳ್ಳ ನಿಯತಕಾಲಿಕೆಯೊಂದನ್ನು ಹೊರತರುತ್ತಿದ್ದೇವೆ. ಇನ್ನೂ ಹೆಚ್ಚಿನ ಸಂತಸದ ಸಂಗತಿ ಎಂದರೆ, ಈ ಮೂಲಕ, ಅಮೆರಿಕದ ಉದ್ದಗಲಕ್ಕೂ ಕನ್ನಡ ಕಲಿಯ ಅರಿವು ಮೂಡಿದ್ದು, ಅನೇಕ ಕನ್ನಡ ಕೂಟಗಳು ಮತ್ತು ಅಭಿಮಾನಿ ವ್ಯಕ್ತಿಗಳು ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಇಂಥ ಪ್ರಯತ್ನಗಳಿಗೆ ಕನ್ನಡ ಕಲಿಯ ಸಹಕಾರ ಸದಾ ಇದೆ.

ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X