• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾಗೆ ಒಲಿದ ಓಡಿಸ್ಸಿ

By * ಗುರು ಬಬ್ಬಿಗದ್ದೆ, ಸ್ವೀಡನ್
|
ಸಂಗೀತ ಸುಧೆಯೊಳಗೆ ಮೀಯದವರಾರು

ಕಾಲ್ಗೆಜ್ಜೆ ಸಪ್ಪಳಕೆ ಒಲಿಯದವರಾರು

ನೃತ್ಯದಲಿ ನಟರಾಜ ಸೂರೆಗೊಂಡನು ಮನವ

ದೀಪಕ ರಾಗವು ಬೆಳಗಿಸಿತು ಜಗವ

ಸಂಗೀತ ಮತ್ತು ನೃತ್ಯ ಎಂಥಹ ಅರಸಿಕರನ್ನು ರಸಿಕತೆಗೆ ಒಯ್ಯುತ್ತವೆ. ಅದೊಂದು ಅಮಲು, ಮನಸ್ಸಿನ ನೋವಿಗೆ ಸಂಜೀವಿನಿ ಇದ್ದಂತೆ, ಆನಂದದ ಸಾಗರದಂತೆ. ಅದು ಶಾಸ್ತ್ರಬದ್ದ ಭಾರತೀಯ ಸಂಗೀತ-ನೃತ್ಯವೇ ಆಗಿರಬಹುದು ಇಲ್ಲವೆ ಪಾಶ್ಚಾತ್ಯರ ಪಾಪ್-ನೃತ್ಯ ವೇ ಆಗಿರಬಹುದು. ಅದರಲ್ಲೂ ಭಾರತೀಯ ನೃತ್ಯ ಪ್ರಕಾರಗಳಿಗೆ ಸಿಕ್ಕಷ್ಟು ಪ್ರಸಿದ್ದಿ ಜಗತ್ತಿನ ಯಾವ ನೃತ್ಯ ಪ್ರಕಾರಗಳಿಗೂ ಸಿಕ್ಕಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಭಾರತೀಯರಾದ ನಾವು ಅರೆ ಬೆತ್ತಲೆಯ ವಿದೇಶಿ ನೃತ್ಯವನ್ನೇ ಸವಿಯುತ್ತಾ ನಮ್ಮ ತನವನ್ನು ಮರೆಯುತ್ತಿದ್ದೇವೆ. ವಿದೇಶಿಯರು ಎಂದಕೂಡಲೇ ಕೇವಲ ಬೆತ್ತಲೆ ಕುಣಿಯುವವರು ಎನ್ನುವುದನ್ನು ನಮಗೆ ಗೊತ್ತಿಲ್ಲದೇ ಅಂದುಕೊಂಡುಬಿಟ್ಟಿದ್ದೇವೆ. ನಾವು ನಮ್ಮದನ್ನೇ ಬಿಟ್ಟು ಪರಕೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಕ್ರತಿಯ ಅಃಪತನಕ್ಕೆ ಕಾರಣೀಭೂತರಾಗುತ್ತಿದ್ದರೆ ಸದ್ದಿಲ್ಲದೆ ಸ್ವೀಡನ್ನಿನ ಮಹಿಳೆಯೊಬ್ಬರು ಭಾರತೀಯ ನೃತ್ಯದಲ್ಲಿ ಕಳೆದ 15 ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆಂದರೆ ನಿಮಗೇನನ್ನಿಸುತ್ತದೆ?

ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿರುವ ಅನಿಟ್ಟೆ ಪೂಜಾ (ಪೂಜಾ ಎನ್ನುವುದು ಓಡಿಸ್ಸಿ ಗುರು ಇಟ್ಟ ಹೆಸರು) ಕಳೆದ ನೃತ್ಯ ವರ್ಷಗಳಿಂದ ಓಡಿಸ್ಸಿ ನೃತ್ಯ ಕಲಿಯುತ್ತಿದ್ದಾರೆ ಅಷ್ಟೇ ಅಲ್ಲ ಕಲಿಸುತ್ತಿದ್ದಾರೆ. ಭಾರತದ ಎಲ್ಲ ನೃತ್ಯ ಪ್ರಕಾರಗಳಲ್ಲೂ ಕೈಯ್ಯಾಡಿಸಿರುವ ಇವರು ಕೊನೆಯದಾಗಿ ಆರಿಸಿಕೊಂಡಿದ್ದು ಓಡಿಸ್ಸಿ ವನ್ನು. ಹೃದಯಸ್ಪರ್ಶಿ ಅಭಿನಯ, ತಾಳಕ್ಕೆ ತಕ್ಕ ಹೆಜ್ಜೆ, ಹೆಜ್ಜೆಗೆ ತಕ್ಕ ಭಾವದ ಮೂಲಕ ಇಲ್ಲಿಯ ಜನರ ಕಣ್ಮಣಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಪೂಜಾ ಎನ್ನುವುದನ್ನು ಸೇರಿಸಿಕೊಂಡಿರುವ ಇವರದು ಸುಖೀ ಕುಟುಂಬ. ಇವರ ಗಂಡ ಲಿಯನಾರ್ಡೋ ಒಬ್ಬ ನಟ ಹಾಗೂ ಶಿಕ್ಷಕ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಒಬ್ಬಳು ಗಾಯತ್ರಿ, ಇನ್ನೊಬ್ಬಳು ಕರೀಷ್ಮಾ. ಇಬ್ಬರಿಗೂ ಇಟ್ಟ ಭಾರತೀಯ ಮೂಲದ ಹೆಸರು ಅವರ ಭಾರತ ಪ್ರೇಮಕ್ಕೆ ಹಿಡಿದ ಕನ್ನಡಿ.

ಮೂಲತಃ ಸ್ವೀಡನ್ನಿನಲ್ಲಿಯೇ ಹುಟ್ಟಿ ಬೆಳೆದ ಅನಿಟ್ಟೆ ಪೂಜಾ, ತಮ್ಮ ತಂದೆಯವರಿಂದ ಸಂಗೀತ ಹಾಗೂ ನೃತ್ಯಗಳಲ್ಲಿ ಆಸಕ್ತಿ ತಳೆದರು. ನೃತ್ಯ ಇವರ ರಕ್ತದಲ್ಲಿಯೇ ಬೆಳೆದಿತ್ತು. ಆದರೆ ಅದು ಭಾರತದೊಂದಿಗೆ ವಿಸ್ತರಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಕ್ಕಿಲ್ಲ. ಥಿಯೇಟರ್ ಗಳಲ್ಲಿ ವೇಷ-ಭೂಷಣ ಮಾಡುವವರಾಗಿದ್ದ ಇವರು ಕ್ರಮೇಣ ನೃತ್ಯದ ಕಡೆಗೆ ಒಲಿದಿದ್ದೇ ಸೋಜಿಗದ ಕಥೆ. "ಸ್ಟಾಕ್ ಹೋಮ್ ನಲ್ಲಿ ನಾಟಕ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಗ ಅನೇಕ ಏಷ್ಯಾದ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆಗಲೇ ಭಾರತ ನೃತ್ಯದ ಬಗೆಗೆ ಜಗತ್ತಿನಾದ್ಯಂತ ಇರುವ ಕೌತುಕತೆ, ಗೌರವ ನನ್ನಲ್ಲಿ ಹೊಸ ಸಂಚಲನ ಉಂಟು ಮಾಡಿತು. ಒಮ್ಮೆ ಕೂಚಿಪುಡಿ ನೃತ್ಯವನ್ನು ವೀಕ್ಷಿಸಿದೆ, ಆ ನೃತ್ಯಕ್ಕೆ ಸಿಕ್ಕಿದ ಅದ್ಭುತ ಗೌರವಕ್ಕೆ ಬೆರಗಾದೆ, ಆಗಲೇ ಅನ್ನಿಸಿತು, ಭಾರತೀಯ ನೃತ್ಯದಲ್ಲಿ ಏನೋ ಇದೆ,ಅದನ್ನು ಕಲಿಯಬೇಕು, ಅಸ್ವಾದಿಸಬೇಕು" ಎನ್ನುವ ಪೂಜಾ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದಾರೆ.

ಉಡುಪಿಯಲ್ಲಿ ಯಕ್ಷಗಾನ ವೇಷ-ಭೂಷಣ ಮಾಡುವುದನ್ನು ಕಲಿತ ಇವರು ನಂತರ ಹತ್ತು ಹಲವು ಭಾರತೀಯ ನೃತ್ಯಗಳಿಗೆ ವೇಷ-ಭೂಷಣ ಹಾಕುವುದನ್ನು ಕಲಿತರು. ಇದೇ ಸಂದರ್ಭದಲ್ಲಿ ಓರಿಸ್ಸಾದ ಪುರಿ ಜಗನ್ನಾಥ ರಥೋತ್ಸವವನ್ನು ವೀಕ್ಷಿಸುವ ಅವಕಾಶ ಲಭಿಸಿತು. ಅಲ್ಲಿಯ ಆ ಮನಮೋಹಕ ಓಡಿಸ್ಸಿ ನೃತ್ಯ, ಅವರ ಶ್ರದ್ಧೆ, ಜಗನ್ನಾಥನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪರಿ, ಅವನನ್ನು ಒಲಿಸಿಕೊಳ್ಳುವ ನಾಟ್ಯ ಶೈಲಿ ಇವರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿತು. ಅಂದೇ ನಿರ್ಧರಿಸಿದರಂತೆ " ಇದೇ ನೃತ್ಯವನ್ನು ತಾನು ಕಲಿಯಬೇಕು, ಅದರ ಸತ್ವವನ್ನು ಅರಿಯಬೇಕು, ಆ ಜಗನ್ನಾಥನಲ್ಲಿ ತಲ್ಲೀನವಾಗುವ ಯಾವ ಮಹಾಶಕ್ತಿ ಈ ಓಡಿಸ್ಸಿ ನೃತ್ಯಕ್ಕಿದೆ ಎನ್ನುವುದನ್ನು ತಾವು ಮನಗಾಣಬೇಕು" ಎಂಬುದಾಗಿ.

ಇದೇ ಸಂದರ್ಭದಲ್ಲಿ ಭಾರತೀಯ ನೃತ್ಯ ಅಕಾಡೆಮಿಯ ಫೆಲೋಶಿಪ್ ಲಭಿಸಿತು. ಅಲ್ಲಿಂದ ಅನಿಟ್ಟೆ ಪೂಜಾ ತಿರುಗಿ ನೋಡಲಿಲ್ಲ. ಮೂರು ವರುಷ ಕುಚಿಪುಡಿ ಕಲಿತರು. ಇದರ ನಡುವೆಯೇ ಕೇರಳದ ಸಾಂಪ್ರದಾಯಿಕ ನೃತ್ಯ "ಥೆಯ್ಯಾಮ್" ನೋಡುವ ಸೌಭಾಗ್ಯ ಒದಗಿತು. ಆದರೆ ಅದು ಪುರುಷರಿಗೆ ಮಾತ್ರ ಎಂದು ತಿಳಿದು ಬೇಸರಗೊಂಡರು. ತದ ನಂತರ ರಾಜಸ್ಥಾನದ ಪ್ರಸಿದ್ಧ ನೃತ್ಯ"ಕಲಬೆಲಿಯಾ", ಹಠಯೋಗ ಶಿಕ್ಷಣ, ಕಥಕ್ಕಳಿ, ಭರತನಾಟ್ಯ ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡರು. "ಕಲೆ ಸಾಧಕನ ಸೊತ್ತು" ಎಂಬುದನ್ನು ಅಕ್ಷರಷಃ ನಿಜ ಮಾಡಿದ ಅನಿಟ್ಟೆ ಪ್ರಸಿದ್ಧ ಓಡಿಸ್ಸಿ ನೃತ್ಯ ಗುರು ಶ್ರೀ ಗುರು ಹರಿಕ್ರಷ್ಣ ಬೆಹ್ರಾ ರಲ್ಲಿ 6 ವರ್ಷಗಳ ಕಾಲ ಅಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗಳನ್ನು ಬಿಟ್ಟಿರಲಾಗದ, ನೃತ್ಯವನ್ನು ಬಿಡಲೊಲ್ಲದ ದ್ವಂದ್ವ ಇವರನ್ನು ಕಾಡಿತು. ಕೊನೆಗೂ ಗೆದ್ದದ್ದು ಓಡಿಸ್ಸಿ. ತಮ್ಮ ಮಗಳನ್ನು ತಮ್ಮೊಂದಿಗೆ ಕೂರಿಸಿಕೊಂಡೇ ನೃತ್ಯ ಕಲಿತು ಶಹಬ್ಬಾಸ್ ಎನಿಸಿಕೊಂಡರು.

ಸುಂದರ ಅಭಿನಯ, ಭಾವನೆಗಳ ಮೇಲಿನ ಹಿಡಿತ, ಭಾರತೀಯ ಸಂಸ್ಕ್ರತಿಯ ಬಗೆಗಿನ ಆಳವಾದ ಜ್ಞಾನ, ಕಥಾ-ಪುರಾಣಗಳ ವಿಶ್ಲೇಷಣೆ, ಎಂದೂ ತಪ್ಪದ ಗೆಜ್ಜೆಯೊಂದಿಗಿನ ಹೆಜ್ಜೆ ಅನಿಟ್ಟೆ ಪೂಜಾ ಅವರನ್ನು ಓಡಿಸ್ಸಿ ನೃತ್ಯ ರಂಗದ ಪ್ರತಿಭಾನ್ವಿತ ಕಲಾವಿದೆಯನ್ನಾಗಿ ಮಾಡಿವೆ. "ವಿದ್ಯಾ ವಿನಯೇನ ಶೋಭಿತೇ" ಎನ್ನುವಂತಿರುವ ಇವರು ಸ್ವೀಡನ್ನಿನ ಅದೆಷ್ಟೋ ಮಕ್ಕಳಿಗೆ ಓಡಿಸ್ಸಿ ನೃತ್ಯವನ್ನು ಕಲಿಸುತ್ತಿದ್ದಾರೆ. ತಮ್ಮ ಗಂಡನೊಂದಿಗೆ ಸೇರಿಕೊಂಡು "ವಿಶ್ವ ನೃತ್ಯ ಸಂಘ " ಸ್ಥಾಪಿಸಿ ಮಕ್ಕಳಲ್ಲಿ ಭಾರತೀಯ ಸಂಸ್ಕ್ರತಿಯನ್ನು ಬಿಂಬಿಸುತ್ತಿದ್ದಾರೆ.

ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ನೀಡುವ ಪೂಜಾ ಪ್ರಸ್ತುತ ಅರುಣಾ ಮೊಹಾಂಟಿಯವರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಸ್ವೀಡಿಷ್ ಸರಕಾರದಿಂದ ಇವರಿಗೆ ಫೆಲೋಶಿಪ್ ಲಭಿಸಿದ್ದು ಅದು ನೃತ್ಯ ಕಲಿಯಲು ಹಾಗೂ ಭಾರತೀಯ ಸಂಸ್ಕ್ರತಿ ಅರಿಯಲು ಸಹಕಾರವಾಯಿತು ಎನ್ನುತ್ತಾರೆ ಅನಿಟ್ಟೆ ಪೂಜಾ. "ಥೆಯ್ಯಾಮ ಮತ್ತು ಕಥಕ್ಕಳಿ ಕಲಿತಿದ್ದರಿಂದ ರಾಮಾಯಣ ಮತ್ತು ಮಹಾಭಾರತ ಕಥೆ ತಿಳಿಯಲು ಅನುಕೂಲವಾಯಿತು. ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆ ನಿಜಕ್ಕೂ ಶ್ರೀಮಂತವಾದದ್ದು. ಬಹುಶಃ ಇದಕ್ಕಾಗಿಯೇ ಭಾರತೀಯ ನೃತ್ಯ ಇಂದಿಗೂ ಚಿರನೂತನ, ದಿವ್ಯ ಚೇತನ" ಎನ್ನುವ ಪೂಜಾ ಅವರು ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಭಾರತವನ್ನು ಬಹುವಾಗಿ ಪ್ರೀತಿಸುವ ಇವರಿಗೆ ತಮ್ಮ ಮಕ್ಕಳಿಗೂ ಆ ಸಂಸ್ಕ್ರತಿಯನ್ನು ತಿಳಿಸುವ ಹಂಬಲವಿದೆ. ಭಾರತದಾದ್ಯಂತ ಹಲವಾರು ಕಡೆ ನೃತ್ಯ ಕಾರ್ಯಕ್ರಮ ನೀಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿ ತಮ್ಮ ನೃತ್ಯ ಶಾಲೆ ನಡೆಸುತ್ತ ಇಲ್ಲಿಯೂ ನೃತ್ಯ ಕಾರ್ಯಕ್ರಮ ನೀಡುತ್ತಾ ಇಲ್ಲಿಯ ಜನರ ಮನ ಗೆದ್ದಿದ್ದಾರೆ.

ದೇಶಾಭಿಮಾನ ಎನ್ನುವುದು ಎಲ್ಲಿ? ಹೇಗೆ? ಟಿಸಿಲೊಡೆಯುತ್ತದೆ ಎಂದು ಹೇಳುವುದು ಕಷ್ಟ. ಅದು ಯಾವ ರೂಪದಲ್ಲಿ ಇರುತ್ತದೆಯೋ ಬಲ್ಲವರಾರು. ದೇಶದಲ್ಲಿದ್ದೇ ಪರಕೀಯರಾಗುವುದು, ಪರಕೀಯರಾಗಿದ್ದುಕೊಂಡೇ ಒಂದು ದೇಶವನ್ನು ಪ್ರೀತಿಸುವುದು ಸೋಜಿಗ. ನಮ್ಮ ಸಂಸ್ಕ್ರತಿ, ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಅನಿಟ್ಟೆ ಪೂಜಾ ಅವರಿಗೆ ಅಭಿನಂದನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more