• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಸ ವೃಷ್ಟಿ, ಸರಸತಿಯ ಸರಸ ವೃಷ್ಟಿ!

By Staff
|
ಅದೊಂದು ರಸ ವೃಷ್ಟಿ! ಕಾರ್ಯಕ್ರಮದ ಕೈಪಿಡಿಯಲ್ಲಿ ಅದರ ಹೆಸರೇ ಸರಸತಿಯ ಸರಸ ವೃಷ್ಟಿ'! ಅಮೆರಿಕಾದ ನೆಲದಲ್ಲಿ ಕನ್ನಡ ಸಾಹಿತ್ಯ ಗೋಷ್ಠಿ!

ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ ನಡೆದ ವಸಂತೋತ್ಸವದ ಒಂದು ಅಂಗವಾದ ಈ ಸಾಹಿತ್ಯ ಗೋಷ್ಠಿಯಲ್ಲಿ ಏನುಂಟು, ಏನಿಲ್ಲ! ಇನಿಯನ ಬಗ್ಗೆ ಬರೆದ ಪ್ರೀತಿಯ ಕವನ ಉಂಟು, ಫೋನಿನ ಬಗ್ಗೆ ಬರೆದ ಹಾಸ್ಯಭರಿತ ನೊಸ್ಟಾಲ್ಜಿಕ್ ಕವನ ಉಂಟು, ಸೇಡು, ದ್ವೇಷ, ದುಃಖ, ದುಗುಡ, ಸ್ವೈನ್ ಫ್ಲೂ ವೈರಸ್, ಸಾಂಖ್ಯ ಯೋಗದ ಕನ್ನಡೀಕರಣ, ಬಿಸಿಬೇಳೆ ಹುಳಿಯನ್ನ ಅಂತ ಅಂದುಕೊಂಡು ಹಳಸಿದ ಪಾವ್ ಭಾಜಿ ತಿಂದವರ ಪಾಡು....ಹೀಗೆ ಕೇವಲ ತೊಂಭತ್ತು ನಿಮಿಷಗಳಲ್ಲಿ ನೂರು ಭಾವಗಳನ್ನು ಹೊಮ್ಮಿಸಿ, ನಗಿಸಿ, ಅಳಿಸಿ, ಬಿ ಎಮ್ ಡಬ್ಲ್ಯು' ಎನ್ನುತ್ತಾ ಹಾಸ್ಯದಲ್ಲೇ ನಮ್ಮ ಹುಳುಕನ್ನು ಎತ್ತಿ ತೋರಿಸಿ ಸಂದುಹೋದ ಆ ಕ್ಷಣಗಳನ್ನು ಮೆಲುಕು ಹಾಕಿದಷ್ಟೂ ಮುಗಿಯದು!

ಇದರ ನಿರ್ವಾಹಕರು ಮಧು ಕೃಷ್ಣಮೂರ್ತಿ ಮತ್ತು ನಳಿನಿ ಮೈಯ. ಘಮ ಘಮ ಎಂದು ಪರಿಮಳ ಸೂಸುವ ಹಲವು ಬಗೆಯ ಹೂವುಗಳನ್ನು ಪೋಣಿಸುವ ದಾರವಾದ ಹಿಗ್ಗಿನ ಕೆಲಸ ಇವರದ್ದು! ಊಟ ಮಾಡುವಾಗ ಬರುವ ಸುಖ ಅಡಿಗೆ ಮಾಡುವಾಗೇನೂ ಬರುವುದಿಲ್ಲವಲ್ಲ. ಹಾಗೇ ಸಾಹಿತ್ಯ ಗೋಷ್ಠಿಯನ್ನು ಪ್ರಸ್ತುತಗೊಳಿಸುವ ತಯಾರಿಯಲ್ಲಿ "ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ" ಅಂತ ಉಳಿದ ದಿನದಿನದ ವ್ಯವಹಾರಗಳನ್ನು ನಿರ್ಲಕ್ಷಿಸಿ ಮನೆಯವರಿಗೆಲ್ಲ ತೊಂದರೆ ಕೊಟ್ಟ ಕ್ಷಣಗಳೂ ಇಲ್ಲವೆಂದಿಲ್ಲ. ಆದರೆ ಕೊನೆಗೆ ಈ ಗೋಷ್ಠಿ ತುಂಬಿದ ಸಭೆಯಲ್ಲಿ ವೇದಿಕೆಯ ಮೇಲೆ ವಿಜೃಂಭಿಸಿದಾಗ "ಎಲ್ಲ ಶ್ರಮವೂ ಸಾರ್ಥಕವಾಯಿತು" ಎಂಬ ಧನ್ಯತೆಯ ಭಾವ ನಿರ್ವಾಹಕರ ಎದೆಯನ್ನು ತುಂಬಿತ್ತು.

ಸಾಹಿತ್ಯ ಗೋಷ್ಠಿ ಎಂಬ ಸರಸ್ವತಿ ಪೂಜೆಗೆ ಕನ್ನಡದ ಮಲ್ಲಿಗೆ, ಸಂಪಿಗೆ, ಕೇದಗೆ ಹೂಗಳನ್ನು ತಂದ ಸುರೇಶ್ ರಾಮಚಂದ್ರ, ಮೈ ಶ್ರೀ ನಟರಾಜ, ದತ್ತಾತ್ರಿ, ಶಾಂತಲಾ ಭಂಡಿ, ರವಿ ಮತ್ತು ಮಾಯಾ ಹರಪನಹಳ್ಳಿ, ಮಧು ಕೃಷ್ಣಮೂರ್ತಿ, ಶ್ರೀನಾಥ್ ಭಲ್ಲೆ, ರಾಮಪ್ರಿಯನ್, ವಿಶ್ವನಾಥ ಹುಲಿಕಲ್, ಗುರುಪ್ರಸಾದ್ ಕಾಗಿನೆಲೆ, ಪಿ ಆರ್ ಮೀರಾ, ಸವಿತ ರವಿಶಂಕರ್ ಅವರಿಗೆಲ್ಲ ನಾವು ಹೇಳುವುದಿಷ್ಟೆ- ನಿಮ್ಮ ಹೂವಿನ ಕಂಪಿಗೆ ತಲೆದೂಗಿದವರಲ್ಲಿ ವೈದೇಹಿ ಮತ್ತು ವೀಣಾ ಶಾಂತೇಶ್ವರ ಅವರೂ ಸೇರಿದ್ದಾರೆ ಅಂತ ಅವರ ಬಾಯಿಂದಲೇ ಕೇಳಿ ನಮಗಾದ ಆನಂದ ಅಷ್ಟಿಷ್ಟಲ್ಲ!

ಮನರಂಜನೆ

ಸಾಹಿತ್ಯ ರಂಗದ ವಸಂತೋತ್ಸವದ ಅಂಗವಾಗಿ ಸಂಜೆಯ ಮನರಂಜನೆ ಕಾರ್ಯಕ್ರಮದ ಜವಾಬ್ಧಾರಿಯನ್ನು ಸ್ಥಳೀಯ ಕನ್ನಡ ಸಂಘಗಳಿಗೆ ಬಿಟ್ಟು ಕೊಡುವುದು ಒಂದು ರೂಢಿಯಾಗಿ ಬಂದಿದೆ. ಒಂದು ನಾಟಕವೋ, ಒಂದು ನೃತ್ಯ ನಾಟಕವೋ ಇರುವುದು ವಾಡಿಕೆ. ಆದರೆ ಈ ಬಾರಿ ಕಾವೇರಿ ಕನ್ನಡ ಸಂಘದ ಕಲಾವಿದರಿಂದ ಎರಡು ನಾಟಕಗಳು ಪ್ರದರ್ಶನಗೊಂಡಿದ್ದು ಒಂದು ರಂಗ ಹಬ್ಬವೇ ಸರಿ. ಎರಡೂ ನಾಟಕಗಳು ಒಂದು ವಿಶೇಷವನ್ನು ಹೊಂದಿದ್ದವು. ಕೃಷ್ಣಮೂರ್ತಿ ಪುರಾಣಿಕ್‌ರವರ ರಾಧೇಯ ಅವರ ಏಕೈಕ ನಾಟಕವಾದರೆ, ಅನಕೃರವರ ಶತಮಾನೋತ್ಸವದ ಸ್ಮರಣಾರ್ಥ ಹಿರಣ್ಯಕಶಿಪು ನಾಟಕ ಕಾಲೋಚಿತವಾಗಿತ್ತು. ಎರಡೂ ನಾಟಕಗಳು ಕಾಕತಾಳಿಯವಾಗಿ ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವಕ್ಕೂ ಕಾಲೋಚಿತವಾಗಿ ಮಾತೃಪ್ರೇಮವನ್ನು ಸಾರುವ ನಾಟಕಗಳಾಗಿದ್ದವು.

ಮೂಲತಃ ಧಾರವಾಡದ ರವಿ ಹರಪನಹಳ್ಳಿ, ತಮ್ಮ ಧಾರವಾಡ ಭಾಷೆಯ ಛಾಪವನ್ನು ಎಲ್ಲೂ ಒತ್ತದೆ ಅಪ್ಪಟ ಪೌರಾಣಿಕ ಭಾಷೆಯ ಸಂಭಾಷಣೆಗಳನ್ನು ಲೀಲಾಜಾಲವಾಗಿ ಹೇಳಿದ್ದೇ ಅಲ್ಲದೆ, ಕರ್ಣನ ಪಾತ್ರದಲ್ಲಿ ತಮ್ಮ ನಟನೆಯಲ್ಲೂ ಪ್ರೇಕ್ಷಕರನ್ನು ಮೂಕಗೊಳಿಸಿದರು. ತಾಯಿ ಕುಂತಿಯ ಪಾತ್ರವನ್ನು ಅಮೆರಿಕೆಯ ನಾಟಕರಂಗದಲ್ಲಿನ ಚಿರಪರಿಚಿತರಾಗಿರುವ ಸುಮ ತಮಗೆ ಹೇಳಿಮಾಡಿಸಿದ ಪಾತ್ರದ ರೀತಿಯಲ್ಲಿ ನಟಿಸಿದರು. ದಿನನಿತ್ಯದ ಕೆಲಸ ನೂರಾರು ಮೈಲುಗಳ ದೂರ ಚಿಕಾಗೋವಿನಲ್ಲಿ. ವಾರಾಂತ್ಯದಲ್ಲಿ ಮಾತ್ರ ವಾಷಿಂಗ್‌ಟನ್ ಭೇಟಿ. ಆದರೂ ತಮ್ಮ ನಾಟಕದ ಗೀಳನ್ನು ಬಿಡದ ನಿರ್ದೇಶಕ ಶ್ರೀಕಂಠಯ್ಯ ತಾವರೆಗೆರೆ (ಕಂಠಿ) ಪಾತ್ರಗಳಿಗೆ ಜೀವ ತುಂಬಿಸಿ ರಂಗದಮೇಲೆ ತರುವದರಲ್ಲಿ ಯಶಸ್ವಿ ಆಗಿದ್ದರು. ಅನಕೃ ಅವರ ಪೂರ್ಣ ರಂಗ ನಾಟಕಗಳು ಕಡಿಮೆ. ಹಲವಾರು ರೇಡಿಯೋ ನಾಟಕಗಳನ್ನು ಕೇಳಿದ್ದೇನೆ. ಬಹುಶಃ ಇದೊಂದೇ ಪೂರ್ಣ ನಾಟಕವಿರಬಹುದು. ಅವರ ಶತಮಾನೋತ್ಸವದ ಸಂದರ್ಭದಲ್ಲಿ ಆಡಿದ ಈ ನಾಟಕ ಹಿರಣ್ಯಕಶಿಪುವಿನ ಕಥೆಗೆ ಬೇರೆ ರಂಗನ್ನೇ ಕೊಟ್ಟಿತ್ತು. ಪ್ರಹ್ಲಾದನ ಪಾತ್ರದಲ್ಲಿ ನಟಿಸಿದ ಶಾಸ್ತ್ರಿ ಹಾಗೂ ಹಿರಣ್ಯಕಶಿಪುವಾಗಿ ಸಂಜಯ್‌ರಾವ್ ತಮ್ಮ ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಸದಭಿರುಚಿಯ ಹಲವಾರು ನಾಟಕಗಳನ್ನು ರಂಗದ ಮೇಲೆ ತರುತ್ತಿರುವ ಕಾವೇರಿ ಕನ್ನಡ ಸಂಘ, ಈ ಬಾರಿಯೂ ಅಮೆರಿಕೆಯ ರಾಜಧಾನಿಯಲ್ಲಿ ಪ್ರತಿಭಾವಂತ ನಟರಿಗೆ ಅಭಾವವೇ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಮುಂದೆ ಓದಿ : ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more