ನೃಪತುಂಗ ಕನ್ನಡ ಕೂಟಕ್ಕೆ 35 ವರ್ಷ!

Nrupatunga Kannada Koota 35th anniversaryಅಮೆರಿಕಾದ ಹಿರಿಯ ಕನ್ನಡ ಕೂಡಗಳಲ್ಲೊಂದಾದ ನೃಪತುಂಗ ಕನ್ನಡ ಕೂಟ ಇತ್ತೀಚೆಗೆ 35ನೇ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಮತ್ತು ಅರ್ಥವತ್ತಾಗಿ ಆಚರಿಸಿಕೊಂಡಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುತ್ತ ಹಿರಿಯರೂ ತಾವೇ ಮಕ್ಕಳಂತಾದರು. ನೆನಪಿನಲ್ಲುಳಿಯುಂಥ ಕಾರ್ಯಕ್ರಮಗಳ ಚಿಕ್ಕದಾದ ಮತ್ತು ಚೊಕ್ಕದಾದ ವರದಿ ಮಂಗಳಾ ಉಡುಪ ಅವರಿಂದ.

***

ಅಟ್ಲಾಂಟಾ ಕನ್ನಡಿಗರು ಇಲ್ಲಿನ ನೃಪತುಂಗ ಕನ್ನಡಕೂಟದ 35ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಈ ಸೆಪ್ಟೆಂಬರ್ 20ರಂದು ಆಚರಿಸಿದರು. ಸದರನ್ ಪಾಲಿಟೆಕ್ನಿಕ್ ಕಾಲೇಜಿನ ವಿಶಾಲ ಆವರಣದಲ್ಲಿ ಬಗೆಬಗೆಯ ಕಾರ್ಯಕ್ರಮಗಳನ್ನು ಬೆಳಿಗ್ಗೆ 9.30ರಿಂದ ರಾತ್ರಿ 9 ಗಂಟೆಯವರೆಗೂ ನಡೆಸಲು ನೂರಾರು ಕನ್ನಡಿಗರು ಸತತವಾಗಿ ಶ್ರಮಿಸಿದರು. ಸುಮಾರು ಒಂದು ವರ್ಷದ ಯೋಜನೆ ಮತ್ತು 6 ತಿಂಗಳ ಪರಿಶ್ರಮದ ಸಾರ್ಥಕತೆ ಅಂದು ದೊರಕಿತು ಎನ್ನಬಹುದು.

ಕನ್ನಡ ತಾಯಿಗೆ ನಮನ ಸಲ್ಲಿಸುವ ಹಾಡುಗಳಿಂದ ಪ್ರಾರಂಭವಾದ ಕಾರ್ಯಕ್ರಮಗಳು ಕರ್ನಾಟಕದ ಮಹಾರಥಿಗಳನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗಿದ್ದು ವಿಶೇಷ. ಬೆಳಗಿನ ಸಮಯದಲ್ಲಿ ಪುಟ್ಟ ಮಕ್ಕಳು ಹಾಡುಗಳಿಗೆ ನರ್ತಿಸಿ ನಮ್ಮನ್ನೂ ನಲಿಸಿದರೆ ಇನ್ನು ಕೆಲವು ಪುಟಾಣಿ ಮಕ್ಕಳು ಕರ್ನಾಟಕದ ಇತಿಹಾಸದ ಹೆಮ್ಮೆಯ ಪ್ರಸಿದ್ಧ ವ್ಯಕ್ತಿಗಳ ವೇಷ ಹಾಕಿಕೊಂಡು ಎಲ್ಲರ ಮನ ರಂಜಿಸಿದರು. ಸ್ಥಳೀಯ ಕಲಾವಿದರ "ಗೋವಿಂದನ ಗೊಂದಲ" ನಾಟಕ ಎಲ್ಲರನ್ನೂ ನಗಿಸಲು ಯಶಸ್ವಿಯಾಯಿತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ದೇಶಭಕ್ತಿ, ಭಾವಗೀತೆ ಮತ್ತು ಜನಪದ ಗೀತೆಗಳ ಹೊನಲೇ ಹರಿಯಿತು. ಸಂಜೆ ಕೂಡಾ ಮಕ್ಕಳಿಂದ ಮತ್ತು ದೊಡ್ಡವರಿಂದ ಸಾಕಷ್ಟು ನೃತ್ಯ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಕಲಾವಿದರು ಅಭಿನಯಿಸಿದ "ಉಪಚಾರ" ನಾಟಕವೂ ಕೂಡಾ ಎಲ್ಲರ ಮನ ರಂಜಿಸಿತು. ಹಂಟ್ಸ್‌ವಿಲ್ ಗೆಳೆಯರ ತಂಡ "ಯಮಲೋಕದಲ್ಲಿ ಒಂದು ದಿನ" ನಾಟಕವಾಡಿದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳೂ ಕೂಡ ಹಿತಮಿತವಾಗಿ ಸೇರಿಕೊಂಡು ನೆರೆದಿದ್ದ ಜನರೆಲ್ಲ ಹೊರಡುವಷ್ಟರಲ್ಲಿ ಬರೀ ಕನ್ನಡ/ಕರ್ನಾಟಕದ ಗುಂಗಲ್ಲೇ ಹೋಗಿದ್ದರೆ ಆಶ್ಚರ್ಯವಿಲ್ಲ.

Kasaravalli sistersಕಾರ್ಯಕ್ರಮದ ಕೆಲವು ವಿಶೇಷತೆಗಳು :

1. ಕಾಸರವಳ್ಳಿ ಸಹೋದರಿಯರಿಂದ ಒಂದು ಗಂಟೆಯ ಕಾಲ ದೇವರನಾಮಗಳ ಗಾಯನ ಅತ್ಯಂತ ಸುಮಧುರವಾಗಿತ್ತು.
2. ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು/ಕೇಸರಿ ಬಾತು, ಸಂಜೆಯ ತಿಂಡಿಗೆ ಒಬ್ಬಟ್ಟು/ಖಾರದ ಪಕೋಡ ಜೊತೆಗೆ ಮಧ್ಯಾಹ್ನ ಮತ್ತು ರಾತ್ರಿ ರುಚಿಯಾದ ಊಟಗಳನ್ನು ತಿಂದು ಎಷ್ಟೋ ಜನಕ್ಕೆ ಕರ್ನಾಟಕಕ್ಕೇ ಹೋಗಿ ಬಂದಂತಾಗಿತ್ತು.
3. 35ನೇ ವಾರ್ಷಿಕೋತ್ಸವದ ಸ್ಮರಣಸಂಚಿಕೆ "ಚಿಗುರು" ಬಿಡುಗಡೆ: ಚಿಗುರು ಸಿದ್ಧಪಡಿಸಿದ ಆನಂದ್ ರಾಜೇ ಅರಸ್, ಅಶ್ವಥ್ ಬೆಳವಾಡಿ, ನಾಗಲಕ್ಷ್ಮಿ ಇನಾಂದಾರ್ ಮತ್ತು ಮಂಗಳಾ ಉಡುಪ ಅವರಿಂದ ಬಿಡುಗಡೆಯಾಯಿತು. ಕರ್ನಾಟಕದ ಮೂಲೆಮೂಲೆಗಳಿಂದ ಮತ್ತು ಅಮೇರಿಕಾದಿಂದ ಬಂದ ಲೇಖನ/ಕವನಗಳನ್ನು ಒಳಗೊಂಡು ಸುಂದರ ಮುಖಪುಟ ಹೊತ್ತ ಚಿಗುರು ಎಲ್ಲರ ಮನೆ ಸೇರಿತು.
4. ಪ್ರತಿ ಕಾರ್ಯಕ್ರಮ ಪ್ರಾರಂಭವಾಗುವ ಮೊದಲಿನಲ್ಲಿ ಇದ್ದ ಬಿಡುವಿನಲ್ಲಿ "ನಾವು ನಡೆದ ಬಂದ ದಾರಿ" ಎಂಬ ವೀಡಿಯೋ ನಡೆಯುತ್ತಲಿತ್ತು. ಇದು ಗುಂಪನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ತುಂಬಾ ಸಹಕಾರಿಯಾಗಿತ್ತು, ಹಾಗೆಯೇ ಅಟ್ಲಾಂಟಾ ಕನ್ನಡಕೂಟದ 35 ವರ್ಷಗಳ ಸಾಧನೆಯನ್ನು ಕೂಡಾ ಜನರಿಗೆ ತಲುಪಿಸಿತು.
5. ಈ ಸಮಾರಂಭಕ್ಕೋಸ್ಕರ ದುಡಿದ ಅರವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ರಂಗದ ಮೇಲೆ ಕರೆಸಿ ಅವರ ಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
6. ಸಾಕಷ್ಟು ಸಮಾಜಸೇವೆಯನ್ನು ಈಗಾಗಲೇ ಮಾಡಿರುವಂತಹ ನೃಪತುಂಗ ಕನ್ನಡಕೂಟ ಈ ಬಾರಿಯೂ 50000 ರೂಗಳನ್ನು ಮೈಸೂರಿನ ನೃಪತುಂಗ ಶಾಲೆಗೆ ದಾನ ಮಾಡಿತು. ಹಾಗೆಯೇ ಅಟ್ಲಾಂಟಾದಲ್ಲಿ ಕನ್ನಡ ಶಾಲೆ ನಡೆಸುತ್ತಿರುವ ರೋಹಿಣಿ ಗೋಪಿನಾಥ್, ವೀಣಾ ಕೃಷ್ಣಸ್ವಾಮಿ ಹಾಗೂ ನಾಗೇಂದ್ರ ವೀದಲೂರು ಅವರನ್ನು ಅವರ ನಿಸ್ವಾರ್ಥ ಸೇವೆಗಾಗಿ ಸನ್ಮಾನಿಸಿತು. ಅಟ್ಲಾಂಟಾದಲ್ಲಿ ಕನ್ನಡ ಗ್ರಂಥಾಲಯ ನಡೆಸುತ್ತಿರುವ ಜಯಶ್ರೀ ಸಿಂಗ್ ಮತ್ತು ವಾಣಿಶ್ರೀ ರಾವ್ ಅವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.
7. $4000 ವಿದ್ಯಾರ್ಥಿವೇತನವನ್ನು ಇಲ್ಲಿಯ ಪ್ರೌಢಶಾಲೆಯಲ್ಲಿರುವ ಕನ್ನಡ ಮಕ್ಕಳಿಗೆ ನೀಡುತ್ತಿರುವ ಡಾ| ಅನ್ನಪೂರ್ಣಾ ಭಟ್ ಮತ್ತು ಡಾ|ಸುಬ್ರಹ್ಮಣ್ಯ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು.
8. ತಾರುಣ್ಯದಿಂದ ಹಿಡಿದು ತಮ್ಮ ಇಳಿವಯಸ್ಸಿನಲ್ಲೂ ಕನ್ನಡಕೂಟಕ್ಕೋಸ್ಕರ ತನು-ಮನ-ಧನ ಗಳನ್ನು ಸಲ್ಲಿಸಿ ದುಡಿಯುತ್ತಿರುವ ಡಾ| ಹೊ.ನಾ.ರಾಮಸ್ವಾಮಿಯವರನ್ನು ಸನ್ಮಾನಿಸಲು ಇಲ್ಲಿನ ಕನ್ನಡಿಗರಿಗೆ ಇದಕ್ಕಿಂತ ಒಳ್ಳೆಯ ಸಮಯ ಸಿಗುತ್ತಿರಲಿಲ್ಲ. ಅವರ ಅರ್ಧಾಂಗಿ ಇಂದಿರಾ ರಾಮಸ್ವಾಮಿಯವರನ್ನೂ ಮತ್ತು ಕುಟುಂಬದವರನ್ನೆಲ್ಲಾ ಈ ಸಮಯದಲ್ಲಿ ವೇದಿಕೆ ಮೇಲೆ ಕರೆಸಿ ಅವರ ಕೊಡುಗೆಗೆ ಅಭಿನಂದಿಸಲಾಯಿತು.ಇದು ಅವರಿಗೆಲ್ಲಾ ಅನಿರೀಕ್ಷಿತವಾಗಿತ್ತು. ಅಟ್ಲಾಂಟಾ ಕನ್ನಡಿಗರೆಲ್ಲಾ ಒಟ್ಟಿಗೆ ನಿಂತು ಸತತವಾಗಿ ಚಪ್ಪಾಳೆ ಹೊಡೆದು ಇವರೆಲ್ಲರ ಸೇವೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
"ನಿಮ್ಮ ಮನೆ/ಮಠಗಳನ್ನು ಬಿಟ್ಟು ಬರೀ ನೆನಪುಗಳನ್ನು ಹೊತ್ತುಕೊಂಡು ಇಲ್ಲಿಗೆ ಬಂದಿದ್ದೀರಿ. ನಾವು 35 ವರ್ಷಗಳಿಂದ ನೀವು ಆ ನೆನಪುಗಳನ್ನು ಅರ್ಥಪೂರ್ಣ ಮತ್ತು ಪ್ರಸಕ್ತವಾಗಿಟ್ಟುಕೊಳ್ಳಲಿ ಎಂದು ಪ್ರಯತ್ನಿಸುತ್ತಿದ್ದೇವೆ" ಎಂದು ಭಾವುಕರಾದ ಡಾ|ರಾಮಸ್ವಾಮಿಯವರು ಹೇಳಿದರು.
9. ದೊಡ್ಡವರ ಕಾರ್ಯಕ್ರಮಗಳು ನಡೆಯುತ್ತಿರುವಾಗ ಮಕ್ಕಳಿಗೆ ಬೇಸರವಾಗದಿರಲೆಂದು ಇನ್ನೊಂದು ಕಡೆ ಕರ್ನಾಟಕದಿಂದ ಬಂದ ಕಲಾವಿದ ರಘುನಂದನ ಅವರು ಬೊಂಬೆಯಾಟ ನಡೆಸಿಕೊಟ್ಟು ಮಕ್ಕಳ ಮನಸ್ಸನ್ನು ಗೆದ್ದರು.

ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ನೇತೃತ್ವವನ್ನು ಬೆಳಗಿನಿಂದ ಸಂಜೆಯವರೆಗೂ ಹೊತ್ತವರು :ಡಾ|ಜಯಂತಿ ಶ್ರೀನಿವಾಸಯ್ಯ, ರೋಹಿಣಿ ಗೋಪಿನಾಥ್, ಮಂಗಳಾ ಉಡುಪ.

ಅಂತೂ ಇಡೀ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ರೀತಿ ಆಬಾಲವೃದ್ಧರಾಗಿ ಎಲ್ಲರನ್ನೂ ರಂಜಿಸಿತು. ನಮ್ಮ ಸಂಸ್ಕೃತಿ, ಊಟ ಮತ್ತು ನೆನಪಿನ ರುಚಿಯನ್ನು ಮನಸ್ಸಲ್ಲೇ ಆಸ್ವಾದಿಸಿಕೊಂಡು "ಚಿಗುರು" ಸ್ಮರಣ ಸಂಚಿಕೆಯನ್ನು, ನೃಪತುಂಗ ಕನ್ನಡ ಕೊಓಟದ ಚಿಹ್ನೆ ಹೊತ್ತಿರುವ ಟೀ ಶರ್‍ಟ್ ಮತ್ತು ಅಂದವಾದ ಕೈಚೀಲಗಳನ್ನು ತೆಗೆದುಕೊಂಡು ಎಲ್ಲರೂ ಮನೆಗೆ ತೆರಳಿದೆವು.

ವಿ.ಸೂ : ಕಾರ್ಯಕ್ರಮದ ವಿಡಿಯೋಗಳು ಯುಟ್ಯೂಬ್ ನಲ್ಲಿ ಲಭ್ಯವಿದೆ. ನೋಡಲಿಚ್ಛಿಸುವವರು "ಅಟ್ಲಾಂಟಾ ಕನ್ನಡ ಕೂಟ" ಎಂದು ಗೂಗಲಿಸಿದರೆ ಕೆಲವಷ್ಟು ವೀಡಿಯೋಗಳು ದೊರಕುವವು. ಸದ್ಯದಲ್ಲೇ http://www.atlantakannada.org/ನಲ್ಲೂ ಕಾರ್ಯಕ್ರಮದ ಚಿತ್ರಗಳು ಮತ್ತು ವೀಡಿಯೋಗಳು ಬರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+