ಅಮೆರಿಕೆಯಲ್ಲಿ ದೆವ್ವ ಪ್ರೇತ ಪಿಶಾಚಿಯ ಆಟ ಮತ್ತು ಕಾಟ!

ಈಗಂತು ಅಮೆರಿಕದ ಯಾವ ಅಂಗಡಿಗೆ ಹೋದರೂ ಒಂದಿಷ್ಟು ತಲೆಬುರುಡೆ, ಅಸ್ಥಿಪಂಜರ, ಪ್ರೇತ-ಪಿಶಾಚಿಯ ವೇಷಗಳು, ಬೃಹದಾಕಾರದ ಕುಂಬಳಕಾಯಿಗಳು, ದಿಗುಲುಗೊಳಿಸುವ ಮುಖವಾಡಗಳು, ಗುಮ್ಮನಂತೆ ಕೂಗಿ ಹೆದರಿಸುವ ಚಿತ್ರ-ವಿಚಿತ್ರ ರೂಪಿ ಬೊಂಬೆಗಳು ಕಾಣುತ್ತವೆ.

  • ಅಲಕ ಜೋಶಿ,ಉತ್ತರ ಕ್ಯಾಲಿಫೋರ್ನಿಯ

ಅಮೆರಿಕೆಯಲ್ಲಿ ದೆವ್ವ ಪ್ರೇತ ಪಿಶಾಚಿಯ ಆಟ ಮತ್ತು ಕಾಟ!ಈ ಭೂತಚೇಷ್ಟೆ'ಯೆಲ್ಲಾ ಹಾಲೊವೀನ್ ಹಬ್ಬಕ್ಕಾಗಿ. ಅಕ್ಟೋಬರ್ 31ರ ಹಾಲೊವೀನ್ ಪಾರ್ಟಿಗಾಗಿ ಏನೆಲ್ಲಾ ಕುಚೇಷ್ಟೆಗಳನ್ನು ಮಾಡಬಹುದು? ಯಾರನ್ನು ಹೇಗೆ ಹೆದರಿಸಬಹುದು? ಯಾರಿಗೆ ಯಾವ ಭೂತದ ವೇಷ ಒಪ್ಪುತ್ತದೆ? ತಮ್ಮ ಮನೆಯನ್ನು ಭೂತ್ ಬಂಗ್ಲಾ' ಮಾಡಲು ಇನ್ನೂ ಏನೇನು ಬೇಕು? ಎಲ್ಲೆಲ್ಲಿ ಯಾವ ಬೆದರುಬೊಂಬೆಗಳನ್ನು ನಿಲ್ಲಿಸಬಹುದು? ಆ ದಿನ ಯಾವ ಭೂತದ ಸಿನೆಮಾ ನೋಡಬಹುದು? ಎಂಬುದೀಗ ಇಲ್ಲಿ ಪ್ರಚಲಿತವಿರುವ ಚರ್ಚೆ!

ಪಶ್ಚಿಮ ದೇಶಗಳ ಜನಪ್ರಿಯ ಹಬ್ಬಗಳಲ್ಲಿ ಕ್ರಿಸ್ಮಸ್ ನಂತರದ ಸ್ಥಾನ ಹಾಲೊವೀನ್ಗೆ. ಬ್ರಿಟನ್ ಮತ್ತು ಐರ್ಲೆಂಡ್ ನಲ್ಲಿ ಕ್ರಿಸ್ತ ಪೂರ್ವದಲ್ಲೇ ಆರಂಭವಾದ ಈ ಹಬ್ಬ, ವಲಸಿಗರಿಂದಾಗಿ 19ನೇ ಶತಮಾನದಲ್ಲಿ ಅಮೆರಿಕಕ್ಕೆ ಹಬ್ಬಿತು. 20ನೇ ಶತಮಾನದಲ್ಲಿ ಐರೋಪ್ಯ ದೇಶಗಳಿಗೂ ಹರಡಿ, ಈಗ ಬಹಳಷ್ಟು ರಾಷ್ಟ್ರಗಳಲ್ಲಿ ಹಾಲೊವೀನ್ ಚೇಷ್ಟೆ' ನಡೆಯುತ್ತದೆ. ಬೇಸಿಗೆಯ ದೀರ್ಘ ದಿನಗಳು ಮುಗಿದು, ಚಳಿಗಾಲದ ದೀರ್ಘ ರಾತ್ರಿಗಳು ಶುರುವಾಗುವ ಕುರುಹಾಗಿ ಈ ಹಬ್ಬ ಮೊದಲಿಗೆ ಆರಂಭಗೊಂಡಿತು. ಪ್ರಭುತ್ವ, ನಾಗರಿಕತೆ ಮತ್ತು ಕಾಲ ಬದಲಾಗುತ್ತಿದ್ದಂತೆ ಈ ಹಬ್ಬದ ಆಚರಣೆಗಳೂ ಬದಲಾಗಿ, ಹಲವಾರು ಕಥೆ-ಉಪಕಥೆಗಳು ಬೆಸೆದುಕೊಂಡವು.

ಹ್ಯಾರಿ ಪಾಟರ್ ನಿಂದ ಹಿಡಿದು ಹಲವಾರು ಕಥೆ,ಕಾದಂಬರಿ,ಸಿನೆಮಾಗಳಲ್ಲಿ ಹಾಲೊವೀನ್ ಪ್ರಸ್ತಾಪವಿದೆ. ಬೇಸಿಗೆ ಅಂತ್ಯಗೊಳ್ಳುವ ಈ ಸಮಯದಲ್ಲಿ ಸಾವುಬದುಕಿನ ನಡುವಿನ ಅಂತರ ಮಾಸಿ, ಸತ್ತವರೆಲ್ಲಾ ಎದ್ದು ಬಂದು ಕಿರಿಕಿರಿ ಮಾಡುತ್ತಾರೆ. ತಮ್ಮ ಚಳಿಗಾಲದ ಆಹಾರ ದಾಸ್ತಾನು ನಾಶ ಮಾಡಿ, ರೋಗ ಹಬ್ಬಿಸುತ್ತಾರೆ ಎಂದೆಲ್ಲಾ ಜನ ನಂಬಿದ್ದರು. ಅವರನ್ನು ಶಾಂತಗೊಳಿಸಿ, ಪೂರ್ವೀಕರ ಪಿರಿಪಿರಿಯಿಂದ ತಪ್ಪಿಸಿಕೊಳ್ಳಲು ಮತ್ತು ದೇವತೆಗಳನ್ನು ಮೆಚ್ಚಿಸಲು ಈ ಹಬ್ಬ ಆರಂಭವಾಯಿತು.

ಎಂಥಾ ಪಿಶಾಚಿಗಳೂ ನಾಚುವಂತೆ ಚಿತ್ರ-ವಿಚಿತ್ರ ಮುಖವಾಡವಿಟ್ಟು, ಭೂತ-ಪ್ರೇತಗಳ ಅಂಗಿ ತೊಟ್ಟು, ಬೆದರು ಬೊಂಬೆಗಳನ್ನು ನೆಟ್ಟು, ಮನೆಯಲ್ಲಿ ಕರಿ ಬೆಕ್ಕುಗಳನ್ನು ಬಿಟ್ಟು, ಎಲ್ಲೆಂದರೆಲ್ಲಿ ಬೇತಾಳಗಳನ್ನು ನೇತಾಡಿಸಿ ಸಂಭ್ರಮಿಸುತ್ತಾರೆ! ದೊಡ್ಡ ಕುಂಬಳಕಾಯಿಯ ತಿರುಳು ತೆಗೆದು, ಅದರ ಮೇಲೆ ಕಣ್ಣು-ಮೂಗು-ಬಾಯಿ ಕೊರೆದು, ಒಳಗೊಂದು ದೀಪವನ್ನಿಡುವ ಇದನ್ನು Jack-o"-lantern ಎನ್ನುತ್ತಾರೆ. ಮಾಟ-ಮಂತ್ರವಾದಿಗಳ ಬಟ್ಟೆ ತೊಟ್ಟ ಮಕ್ಕಳು ಮನೆ-ಮನೆಯ ಬಾಗಿಲು ಬಡಿಯುತ್ತಾರೆ. ಈ ಪುಟಾಣಿ ದೆವ್ವಗಳಿಗೆ ಕ್ಯಾಂಡಿಯೊ ಮತ್ತೊಂದೊ ಕೊಟ್ಟು ಸಮಾಧಾನ ಮಾಡದಿದ್ದರೆ ಏನಾದರೊಂದು ಕಿತಾಪತಿ ಮಾಡಿ ಹೆದರಿಸುತ್ತಾರೆ. ಇದಕ್ಕೆ trick or treating ಎಂದೇ ಹೆಸರು.

ದುಷ್ಟರ ವಿರುದ್ಧ ಶಿಷ್ಟರ ಜಯದ ಪ್ರತೀಕವಾದ, ದೇವರ ಪ್ರೀತ್ಯರ್ಥವಾಗಿ ಕುಂಬಳಕಾಯಿಯ ಸಾಂಕೇತಿಕ ಬಲಿ ಕೊಡುವ, ಬೊಂಬೆ ಕೂರಿಸುವ, ಮಕ್ಕಳಿಗೆಲ್ಲಾ ಬೊಂಬೆ ತಿಂಡಿ ಕೊಡುವ… ಅಯ್ಯೋ! ಹಾಲೊವೀನ್ ಬಗ್ಗೆ ಹೇಳ್ತಾ ಹೇಳ್ತಾ… ಯಾಕೊ ನಮ್ಮೂರ ದಸರಾ ಹಬ್ಬ ನೆನಪಾಗಿಬಿಡ್ತಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+