ಅಜ್ಜನಮನೆ
ನನ್ನ ಈ ದುಗುಡಕ್ಕೆ ಯಾರನ್ನೂ ದೂಷಿಸುವ ಹಕ್ಕು ನನಗಿಲ್ಲ. ಆದರೂ ಯಾಕೋ ಒಮ್ಮೊಮ್ಮೆ ಮನಸ್ಸಿನ ಮೂಲೆಯಲ್ಲಿ "ಅಜ್ಜನಮನೆ" ಕಾಡುತ್ತದೆ. ಈ ದುಗುಡ ತೀರ ತ್ರಾಸದಾಯಕವಾದಾಗ ನನ್ನ ರೂಮಿನಲ್ಲಿ ಕೂತು ಅಳುತ್ತೇನೆ. ಈ ಹಾಳಾದ್ದು ಅಳು ಕೂಡ ಹಾಲು ಕಾಯಿಸಿದ ಹಾಗೆ. ಹಾಲು ಹೆಚ್ಚೆಂದರೆ 2 ಸಲ ಉಕ್ಕುತ್ತದೆ. ಆಮೇಲೆ ಸುಮ್ಮನೆ ಕುದಿಯುತ್ತದೆ. ಅಳು ಇದೇ ರೀತಿಯದು.
- ಅಜಿತ್ ಹೆಗಡೆ,ಸಿಂಗಪುರ
ನನ್ನ ವಯಸ್ಸು 14. ಈಗಷ್ಟೇ 7ನೇ ತರಗತಿಯ ಪರೀಕ್ಷೆ ಮುಗಿಸಿ ರಜೆಯ ಮಜಾವನ್ನು ಸವಿಯುವ ಪ್ರಯತ್ನದಲ್ಲಿದ್ದೇನೆ. ಈ ಗೊಡ್ಡು ಬೇಸಿಗೆ ಕ್ಯಾಂಪ್, ಕೋಚಿಂಗ್ ಕ್ಲಾಸ್ ಗಳಲ್ಲಿ ಸುತರಾಂ ನನಗೆ ಇಷ್ಟವಿಲ್ಲ. ಪುಣ್ಯವಶಾತ್ ಅಪ್ಪ-ಅಮ್ಮನಿಗೂ ಈ ರೋಗ ತಗುಲಿಲ್ಲ. ಈಗ ನನ್ನ ಕೈಲಿರುವ ಯಕ್ಷ ಪ್ರಶ್ನೆ ಈ 2 ತಿಂಗಳ ರಜೆಯನ್ನು ಕಳೆಯೋದು ಹೇಗೆ? ಅಂತ. ನನ್ನ ಗೆಳೆಯರೆಲ್ಲ ನೆಂಟರ ಮನೆ ವಿಶೇಷವಾಗಿ ಅಜ್ಜನಮನೆ (ಅಜ್ಜಿಮನೆ)ಯಲ್ಲಿ ಕಳೆಯುವ ಯೋಚನೆಯಲ್ಲಿದ್ದಾರೆ. ಆದರೆ ನಾನೇನು ಮಾಡಲಿ? ಅಜ್ಜನಮನೆ ಖಾಲಿ ಹೊಡೆಯುತ್ತಿದೆಯಲ್ಲಾ!. ಇಷ್ಟು ದಿನ ಅಜ್ಜಿ ಇದ್ದ ಕಾರಣ ಹೇಗೋ ಹದಿನೈದಿಪ್ಪತ್ತು ದಿನ ಕಳೆಯುತ್ತಿದ್ದೆ. ಈಗ ಆ ಭಾಗ್ಯವೂ ಇಲ್ಲ. ಹಮ್.... ಸ್ವಲ್ಪ ಫ್ಲ್ಯಾಷ್ ಬ್ಯಾಕ್ ಗೆ ಹೋಗಿ ಬರೋಣವಾ.
ನಮ್ಮ ಅಪ್ಪ ಅಮ್ಮಂದು ಲವ್ ಜಾಸ್ತಿ ಅರೆಂಜ್ ಕಮ್ಮಿ ಮದುವೆ ಅಂತೆ! ಅಮ್ಮನಿಗೆ ಇರುವುದೊಂದು ಅವಳ ಅಕ್ಕ ಮತ್ತು ಅಮ್ಮ. ನಮ್ಮ ಅಜ್ಜ ಮದುವೆಯ ಮೊದಲೇ ತೀರಿಕೊಂಡರಂತೆ. ಅಪ್ಪನ ಮಾತಿನಲ್ಲೇ ಹೇಳುವುದಾದರೆ ಅವರಿಗೆ "ಮಾವ" ಎನ್ನುವ ಶಬ್ದದಲ್ಲಿ ಎಷ್ಟು ಅಕ್ಷರವಿದೆ ಎನ್ನುವುದೂ ಗೊತ್ತಿಲ್ಲವಂತೆ ಪಾಪ. ನಾನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಪ್ಪನ ಗೆಳೆಯರೆಲ್ಲ ಮಾವನ ಮನೆಯ ಬಗ್ಗೆ ಪಟ್ಟಾಂಗ ಹೊಡೆಯುವಾಗ ಅಪ್ಪ, ಅನ್ಯ ಮನಸ್ಕರಾಗುತ್ತಾರೆ. ಮಾವ ಭಾವಂದಿರ ಆ ರಾಜೋಪಚಾರದ ಕೊರತೆ ಅಪ್ಪನಿಗೆ ಕಾಡುತ್ತಿರಬಹುದು. ಅಮ್ಮನಿಗೂ ಪ್ರತಿ ಹಬ್ಬಕ್ಕೆ ಕರೆದು ಕಳಿಸಿ ಕೊಡುವ ಅಣ್ಣಂದಿರ ಕೊರತೆಯೆನೋ ಎಂದು ನನ್ನ ಭಾವನೆ. ಅಪ್ಪನಿಗೆ ಮಾವನ ಮನೆ ಅಂದರೆ ಅತ್ತೆ ಹಾಗೂ ಅಪರೂಪಕ್ಕೆ ಸಿಗುವ ನನ್ನ ದೊಡ್ಡಪ್ಪ ದೊಡ್ಡಮ್ಮ. ಕಾರಣ ನನಗೂ ಬಾಲ್ಯದ ಅತಿ ಸಂತೋಷದ ಕ್ಷಣಗಳಾದ ರಜೆಯನ್ನು ಅಜ್ಜನ ಮಡಿಲಲ್ಲಿ ಕಳೆಯುವ ಬಯಕೆ ಈಡೇರಲಿಲ್ಲ.
ಅಜ್ಜನ ಜೊತೆಯ ಕಣ್ಣಾಮುಚ್ಚಾಲೆಯೋ ಅಥವಾ ಹೊಳೆಯಲ್ಲಿ ಈಜುವ ಪ್ರಯತ್ನದಲ್ಲಿ ಎಮ್ಮೆಯ ಥರ ಗಂಟೆಗಟ್ಟಲೆ ಇರುವುದೋ, ಅಜ್ಜನ ಕಪಾಟಿನಿಂದ ಕದ್ದು ಚಾಕೋಲೇಟ್, ಖರ್ಜೂರ ತಿನ್ನುವುದೋ ಉಹುಂ ಒಂದೂ ಗೊತ್ತಿಲ್ಲ. ಮಾವನ ಜೊತೆ ತೋಟಕ್ಕೆ ಹೋಗುವುದೋ ಸೈಕಲ್/ಬೈಕ್ ನಲ್ಲಿ ಹಾಲು ಡೇರಿಗೆ ಹೋಗುವ ಆ ಮಜ ಕೂಡ ನಾ ಸವಿಯಲು ಆಗಲಿಲ್ಲ. ಮಾವನ ಮಗ /ಮಗಳ ಜೊತೆಯ ತುಂಟಾಟ- ಪೋಲಿತನ, ಮಾವಿನಹಣ್ಣು ಪೇರಲೆಹಣ್ಣುಗಳಿಗಾಗಿ ಹೊಡೆದಾಟ-ಮುನಿಸು, ಆಟಿಗೆ ಸಾಮಾನಿಗಾಗಿ ಆಗುವ ರಂಪ-ತಂಪ ಒಂದೂ ನಾ ಕಾಣೆ. ಬೇಸಿಗೆ ರಜೆ ಮುಗಿಸಿ ಬಂದ ಗೆಳೆಯರೆಲ್ಲ ತಮ್ಮ ತಮ್ಮ ಅಜ್ಜನಮನೆಯ ಸಾಹಸಮಯ ರಸಮಯ ಕಥಾನಕವನ್ನು ಬಿಚ್ಚಿಟ್ಟಾಗ ಮನಸ್ಸಿಗೆ ಏಕೋ ಕಸಿವಿಸಿ. ಆಪ್ಪ ಒಮ್ಮೊಮ್ಮೆ ಬಾಲ್ಯದ ಅವರ ಅಜ್ಜನಮನೆಯ ನೆನಪಿನ ಬುತ್ತಿ ತೆರೆದಾಗಲೂ ಅಷ್ಟೆ, ಮನಸ್ಸೆಂಬ ಕನ್ನಡಿಗೆ ಧೂಳು ಆವರಿಸಿದ ಹಾಗೆ.
ನಮ್ಮ ತಂದೆ, ಅವರ ಅಮ್ಮ-ಅಪ್ಪ ಎರಡೂ ಕಡೆಯಿಂದ ಹಿರಿಯ ಮೊಮ್ಮಗ. ಅಜ್ಜನಮನೆ ಅಪ್ಪನ ಬೇಸಿಗೆ ಅರಮನೆ! ಅವರ ಅಜ್ಜ ಉಗ್ರ ನರಸಿಂಹನ ಅಪರಾವತಾರವಂತೆ. ಆದರೆ ಮೊಮ್ಮಗನ ಮುಂದೆ ಉಹುಂ ಆಟ ನಡೆಯದು. ಆಜ್ಜನ ನೆರಳನ್ನು ಕಂಡರೇ ನಡುಗುವ ಅ ಮನೆಯಲ್ಲಿ ಮುದ್ದಿನ ಮೊಮ್ಮಗ ನಮ್ಮ ಅಪ್ಪನಿಗೆ ಅಜ್ಜನ ತಿಜೋರಿಯಿಂದ ಚಾಕೋಲೇಟ್ ತೆಗೆಯುವಷ್ಟು ಸ್ವಾತಂತ್ರ್ಯ. ಇನ್ನು ಮಾವಂದಿರು ಅವರ ಮಕ್ಕಳ ಜೊತೆಗಿನ ಮಜಾಗೆ ಕೊರತೆಯೇ ಇಲ್ಲವಂತೆ. ನಮ್ಮ ತುಂಟ ಅಪ್ಪನೇ ಹೇಳುವಂತೆ ಅಜ್ಜನಮನೆಯಲ್ಲಿ ಅವರಿಗಿದ್ದ ಒಂದೇ ಒಂದು ಕೊರತೆ ಎಂದರೆ ಮಾವನ ಮಗಳು!! ಅಪ್ಪನಿಗೆ ಮಾವನ ಪ್ರಥಮ ಕುಡಿ ಗಂಡು ಮಗುವಾದಾಗ ಎರಡನೆಯದಾದರೂ ಹೆಣ್ಣು ಆಗಬಹುದೇನೋ ಎನ್ನುವ ಮನದ ಮೂಲೆಯ ಆಸೆ ಇತ್ತಂತೆ. ಆದರೆ ನನಗೆ?, ಮಾವನೇ ಇಲ್ಲ ಇನ್ನು ಮಗಳೆಲ್ಲಿಂದ ಬಂತು?
ನನ್ನ ತಂದೆಯ ಕಡೆಯ ಅಜ್ಜ ಅಜ್ಜಿ ನನ್ನ ಅಚ್ಚು-ಮೆಚ್ಚು. "ಅಜ್ಜನಮನೆ"ಯ ಕೊರತೆಯನ್ನು ನೀಗಿಸುವಲ್ಲಿ ಇವರದ್ದು ಸಿಂಹಪಾಲು. ನನ್ನ ಈ ದುಗುಡಕ್ಕೆ ಯಾರನ್ನೂ ದೂಷಿಸುವ ಹಕ್ಕು ನನಗಿಲ್ಲ. ಆದರೂ ಯಾಕೋ ಒಮ್ಮೊಮ್ಮೆ ಮನಸ್ಸಿನ ಮೂಲೆಯಲ್ಲಿ "ಅಜ್ಜನಮನೆ" ಕಾಡುತ್ತದೆ. ಈ ದುಗುಡ ತೀರ ತ್ರಾಸದಾಯಕವಾದಾಗ ನನ್ನ ರೂಮಿನಲ್ಲಿ ಕೂತು ಅಳುತ್ತೇನೆ. ಈ ಹಾಳಾದ್ದು ಅಳು ಕೂಡ ಹಾಲು ಕಾಯಿಸಿದ ಹಾಗೆ. ಹಾಲು ಹೆಚ್ಚೆಂದರೆ 2 ಸಲ ಉಕ್ಕುತ್ತದೆ. ಆಮೇಲೆ ಸುಮ್ಮನೆ ಕುದಿಯುತ್ತದೆ. ಅಳು ಇದೇ ರೀತಿಯದು. 2 ಬಾರಿ ಕಣ್ಣೀರ ಧಾರೆ ಉಕ್ಕಿ ಹರಿಯುತ್ತದೆ. ನಂತರ ಒಳಗೇ ರೋದನೆ. ಆಮೇಲೆ ಮರ್ಕಟ ಮನಸ್ಸನ್ನು ಹತೋಟಿಗೆ ತರುವ ವ್ಯರ್ಥ ಪ್ರಯತ್ನ ನಡೆಸುತ್ತೇನೆ.ಹೀಗೆ ಇರುತ್ತೇನೆ. ನಿಮ್ಮ ಬಳಿ ನನ್ನ ಮನದ ದುಗುಡ ಹೇಳಿಕೊಂಡು ಸ್ವಲ್ಪ ಹಗುರಾಗಿದ್ದೇನೆ.












Click it and Unblock the Notifications