• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ

By ರಾಜಾರಾಮ್ ಕಾವಳೆ
|

ಹಲವು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಹಲವು ಸ್ನೇಹಿತರು ಬಂದಿದ್ದರು. ಮಾತುಕತೆ ಉಪಚಾರಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದೆವು. ನನ್ನ ಪತ್ನಿ ಪದ್ಮಳು ತಯಾರಿಸಿದ್ದ ರುಚಿಕರವಾದ ಊಟವನ್ನು ಸ್ವಾರಸ್ಯವಾಗಿ ಎಲ್ಲರೂ ಸವಿಯುತ್ತಿದ್ದಾಗ, ಉಪ್ಪಿನಕಾಯಿಯನ್ನು ಇಡುವುದನ್ನು ಮರೆತಿದ್ದನ್ನು ಕಂಡು ಪದ್ಮಳು ನನಗೆ ಹೇಳಿದಳು-

‘ರೀ, ಉಪ್ಪಿನಕಾಯಿಯನ್ನು ತಂದಿಡ್ರೀ’.

ಅದಕ್ಕೆ ಕಬ್ಬೋರ್ಡಿನಲ್ಲಿದ್ದ ಅನೇಕ ಉಪ್ಪಿನಕಾಯಿಗಳನ್ನು ನೋಡಿ ನಾನು ಅವಳನ್ನು ಕೇಳಿದೆ-

‘ಯಾವ ಉಪ್ಪಿನಕಾಯಿ ತರಲಿ?’

ಅದಕ್ಕೆ ಅವಳು, ‘ಅದೇ ಮನೇ ಉಪ್ಪಿನಕಾಯಿ ತನ್ನಿ’ ಎಂದಳು.

ಅಲ್ಲಿದ್ದ ಅನೇಕ ಅಂಗಡಿಯಿಂದ ಕೊಂಡ ಉಪ್ಪಿನಕಾಯಿಗಳ ಜತೆಗಿದ್ದ, ನಮ್ಮ ಮನೆಯಲ್ಲೇ ಬೆಳೆದ ಸೇಬಿನಿಂದ, ನಾನೇ ತಯಾರಿಸಿದ ಆ ಉಪ್ಪಿನಕಾಯಿಯ ಬಾಟಲನ್ನು ತಂದು ನಮ್ಮ ಅತಿಥಿಗಳ ಮುಂದಿಟ್ಟೆನು.

ಅದಕ್ಕೆ ನನ್ನ ಸತಿ ‘ಏನ್ರಿ, ಎಲ್ಲಾಬಿಟ್ಟು ನೀವು ಮಾಡಿದ ಆ ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ ತಂದ್ರಲ್ಲ್ರೀ’ ಎಂದಳು.

ಎಲ್ಲಾ ಉಪ್ಪಿನಕಾಯಿಗಳು ಅಂಗಡಿಯಿಂದ ತಂದದ್ದಾದರಿಂದ, ಅವಳಿಗೆ ಇನ್ನಾವುದೂ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇಲ್ಲವೆಂದು ಹೇಳಿದಾಗ ಆಕೆ- ‘ಅದೇರೀ ಬೆಂಗಳೂರಿನಿಂದ ನಮ್ಮಮ್ಮನ ಮನೆಯಿಂದ ತಂದ ಆ ದೊಡ್ಡ ಬಾಟಲು, ಪ್ಲಾಸ್ಟಿಕ್‌ ಕವರಿನಿಂದ ಮುಚ್ಚಿರುವ ಬಾಟಲು ಇದೆಯಲ್ಲಾ ಅದೇ ಮನೇ ಉಪ್ಪಿನ ಕಾಯಿ’ ಎಂದಳು.

ಇಂಗ್ಲೆಂಡಿನಲ್ಲಿ ನೆಲೆಸಿ, ಸಂಸಾರಹೂಡಿ ಸುಮಾರು ಹದಿನೈದು ವರ್ಷಗಳಾಗಿದ್ದರೂ, ನನ್ನ ಸತಿಗೆ ‘ನಮ್ಮಮನೆ’ ಎಂದರೆ ಬೆಂಗಳೂರಿನಲ್ಲಿರುವ ತನ್ನ ಮಾತಾಪಿತೃಗಳ ಮನೆಯೇ. ನಾವು ಈ ಹೊರದೇಶದಲ್ಲಿ ಹೂಡಿದ ಈ ನಮ್ಮ ಮನೆ ‘ನಮ್ಮ ಮನೆ’ಯಾಗಿರಲಿಲ್ಲ. ಈ ಮಾತಿನ ಸನ್ನಿವೇಶ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದದ್ದು. ಅನೇಕ ವರ್ಷಗಳ ಹೊರದೇಶಗಳ ವಾಸದ ನಂತರ, ಅನೇಕ ಮನೆಗಳ ಬದಲಾವಣೆಗಳ ನಂತರ, ನಾವು ಆ ‘ಮನೆ ಉಪ್ಪಿನಕಾಯಿ’ ಮಾಡದ ಮನೆಗೇ ಮತ್ತೆ ಹಿಂತಿರುಗಿ ಬಂದು ನೆಲೆಹೂಡಿದ್ದೇವೆ. ಈಗ ಇದು ‘ನಮ್ಮಮನೆ’ಯಾಗಿದೆಯೆ? ನಮ್ಮ ಉಪ್ಪಿನಕಾಯಿ ‘ಮನೆ ಉಪ್ಪಿನಕಾಯಿ’ ಎಂದು ಕರೆಸಿಕೊಳ್ಳುವುದೇ?

ನಮ್ಮಮನೆ ಎಂಬುದು ಯಾವುದು? ಅದು ಎಲ್ಲಿದೆ? ಹಾಗೆ ಹೇಳುವವರು ಯಾರು? ಅದು ಒಂದೇಕಡೆ ಅಚಲವಾಗಿರುವ ಕಟ್ಟಡವೇ? ಅಥವ ಅದು ಕೇವಲ ಮಾನಸಿಕ ಭ್ರಮೆಯೇ? ನಮ್ಮ ಮನೆ ಯಾವುದು ಎಂದು ವಿಚಾರ ಮಾಡುವ ಮೊದಲು ಹಾಗೆ ಕೇಳುವವರು ಯಾರು ಎಂದು ಮೊದಲು ವಿಚಾರ ಮಾಡೋಣ. ಅಂದರೆ ಯಾರು ನಮ್ಮ ಮನೆ ಎಂದು ಕೇಳುವಾಗ ಯಾವುದು ನಮ್ಮ ಮನೆ ಎಂದೆನಿಸಿಕೊಳ್ಳುವುದು? ಈ ಮೊದಲೇ ನೋಡಿದ ಹಾಗೆ, ನಾನು ತಿಳಿದುಕೊಂಡ ನಮ್ಮ ಮನೆ, ನನ್ನ ಸತಿಯ ನಮ್ಮ ಮನೆಯಲ್ಲ. ಇನ್ನು ನಮ್ಮ ಮಕ್ಕಳ ‘ನಮ್ಮ ಮನೆ’ ಮತ್ತು ನಮ್ಮ ‘ನಮ್ಮಮನೆ’ ಒಂದೇ ಆಗಿರಲಾರದು. ಅಣ್ಣತಮ್ಮಂದಿರ ಮತ್ತು ಅಕ್ಕತಂಗಿಯರೊಡಗೂಡಿ ಬೆಳೆದ ಮನೆಯು ಯಾವಾಗಲೂ ನಮ್ಮ ಮನೆಯಾಗಿರುವುದೇ? ನಮ್ಮ ಮನೆಯೆಂದು ದೃಢೀಕರಿಸಿ ಅದರಲ್ಲಿ ನಮ್ಮನ್ನು ಬೆಳೆಸಿದ ಮಾತಾಪಿತೃಗಳಿಗೆ ಅದೇಮನೆ ಅವರಿಗೆ ‘ನಮ್ಮಮನೆ’ಯಾಗಿದ್ದೀತೆ?

ನಮ್ಮ ಅಜ್ಜಿತಾತರ ಕಾಲದ ಮನೆ, ನಮ್ಮ ಮಾತಾಪಿತೃಗಳ ಮನೆ, ನಾವು ಈ ಹೊರದೇಶದಲ್ಲಿ ಮಾಡಿರುವ ಮನೆ, ನಮ್ಮ ಮಕ್ಕಳು ಬೆಳೆದಮನೆ ಮತ್ತು ಅವರುಗಳು ಸ್ವತಂತ್ರವಾಗಿ ಮಾಡಿರುವ ಮನೆ ಇವುಗಳೆಲ್ಲವೂ ಅವರಿಗವರುಗಳಿಗೆ ಅನುಸಾರವಾಗಿ ಅವರವರ ‘ನಮ್ಮಮನೆ’ಗಳಾಗಿದ್ದರೂ ಅವುಗಳಾವುವೂ ಒಂದೇ ಗುಣಗಳನ್ನು ಉಳ್ಳದ್ದಾಗಿರುವುದಿಲ್ಲ. ಕಾಲಾನುಸಾರವಾಗಿ ಆಯಾಮನೆಗಳು ಬೇರೆಬೇರೆ ಗುಣಗಳ ಹೊಂದಿರುತ್ತವೆ. ನಮ್ಮ ಅಜ್ಜಿತಾತರ ಮನೆ ಅವಿಭಕ್ತ ಕುಟುಂಬದ ಮನೆಯಾಗಿತ್ತು. ಸುಮಾರು ಇಪ್ಪತ್ತು ಮೂವತ್ತು ಮಂದಿಗಳಿಗೆ ಆ ಮನೆ ‘ನಮ್ಮಮನೆ’ಯಾಗಿದ್ದಿತು. ಈರೀತಿಯ ಕೂಡೊಕ್ಕಲ ಮನೆಯ ‘ಬೇರುಗಳು’ ಅಲ್ಲಿನ ಬಳಗಗಳ ಮನೆಗಳನ್ನೂ, ಹಳ್ಳಿಗಳನ್ನೂ ಮತ್ತು ಗ್ರಾಮಗಳನ್ನೂ ಆವರಿಸಿದ್ದವು. ನಾವು ಹುಟ್ಟಿಬೆಳೆದ ನಮ್ಮ ತಂದೆ ತಾಯಿಯರ ಮನೆ ಸ್ವತಂತ್ರವಾದ ಏಕತಾ ಸಂಸಾರ ವಾಗಿದ್ದರೂ, ಬಂದೂಹೋಗಿ ಮಾಡುವ ಸಂಬಂದಿಕರಿಂದ ಅದು ಒಂದು ಅವಿಭಕ್ತ ಕುಟುಂಬವಾಗಿದ್ದಿತು.

ಈ ಅವಿಭಕ್ತ ಕುಟುಂಬ ಮತ್ತು ವಿಸ್ತುತಕುಟುಂಬಗಳು ಅವುಗಳ ಭಾಗಿಗಳಿಗೆ ಕ್ಷೇಮ, ಸುರಕ್ಷತೆ ಮತ್ತು ಭದ್ರತೆಗಳನ್ನು ಒದಗಿಸುತ್ತಿದ್ದವು. ಆಶ್ರಯ ಮತ್ತು ಸಂರಕ್ಷಣೆಗಳೊಂದಿಗೆ ಅವುಗಳು ಅಡ್ಡಿ ಆತಂಕಗಳನ್ನೂ ತರುತ್ತಿದ್ದವು. ರಹಸ್ಯ ಮತ್ತು ಗುಟ್ಟಿನ ವಿಚಾರಗಳಿಗೆ ಅವಕಾಶಗಳು ಅತಿ ವಿರಳವಾಗಿದ್ದವು. ಇರುವ ಸ್ವಲ್ಪ ಭಾಗ್ಯಕ್ಕೆ ಭಾಗೀದಾರರನೇಕರಿದ್ದರು. ಕುಟುಂಬಗಳು ಬೆಳೆದಂತೆ ಇತರರಿಂದ ನಿರ್ಬಂಧ ಮತ್ತು ಒತ್ತಾಯಗಳು ಜಾಸ್ತಿಯಾಗಿ ಕಾರ್ಯಕಸುಬುಗಳು ಕೊಂಡೊಯ್ದಲ್ಲಿಗೆ ಹೋಗಬೇಕಾದ ಸಂದರ್ಭ ಬಂದುದರಿಂದ, ನಮ್ಮ ಕಾಲಕ್ಕೆ ಏಕತಾ ಸಂಸಾರವು ಅನಿವಾರ್ಯವಾಯಿತು.

ನನ್ನ ಕಾರ್ಯದ ಸಂಬಂಧವಾಗಿ ಬೆಂಗಳೂರಿನಲ್ಲಿ, ಇಂಗ್ಲೆಂಡಿನಲ್ಲಿ ಮತ್ತು ಸೌದೀಅರೇಬಿಯಾದಲ್ಲಿ ನಾನು ಮನೆಗಳನ್ನು ಮಾಡಬೇಕಾಗಿದ್ದಿತು. ಬೆಂಗಳೂರಿನಲ್ಲಿ ನಾವು ಬಾಲ್ಯದಲ್ಲಿ ಬೆಳೆದ ಮನೆ, ಇಂಗ್ಲೆಂಡಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಿ ಪೋಷಿಸಿ ಬೆಳಸಿದ ಮನೆ, ಕೆಲವೇ ವರ್ಷಗಳ ನಂತರ ಬೆಂಗಳೂರಿಗೆ ಮಕ್ಕಳೊಂದಿಗೆ ವಾಪಸ್ಸು ತೆರಳಿ ವಾಸಿಸಿದ ಮನೆಗಳು ನಮಗೆ ‘ನಮ್ಮ ಮನೆ’ ಎಂಬ ಭಾವನೆ ಸಹಜವಾಗೇ ಕೊಟ್ಟಿದ್ದವು.

ಆದರೆ ಇತ್ತೀಚಿನವರೆಗೂ ಸುಮಾರು ಒಂಭತ್ತು ವರ್ಷಗಳ ಮೇಲೂ ವಾಸ ಮಾಡಿದ ಸೌದೀಅರೇಬಿಯಾದ ಮನೆಗೆ ‘ನಮ್ಮಮನೆ’ ಎಂಬ ಭಾವನೆ ಅಷ್ಟೇನೂ ಬರಲಿಲ್ಲ. ಆದರೆ ಸೌದೀಅರೇಬಿಯಾದಿಂದ ವಾಪಸ್ಸು ಬಂದು, ಮಕ್ಕಳನ್ನು ಬೆಳೆಸಿದ, ಬಾಡಿಗೆಗೆ ಕೊಟ್ಟಿದ್ದ, ನಮ್ಮ ಹಳೆಯ ಮನೆಗೆ ಬಂದಾಗ, ‘ನಮ್ಮ ಮನೆ’ ಎಂಬ ಭಾವನೆ ತಕ್ಷಣ ಬಂದಿತು. ಅದೇಕೆ ಸೌದಿಯಲ್ಲಿ ಬರಲಿಲ್ಲ?

‘ನಮ್ಮ ಮನೆ’ಯೆಂಬ ಭಾವನೆ ಯಾವುದರಿಂದ ಬರುತ್ತದೆ? ಎಂಬ ಪ್ರಶ್ನೆ ಮೇಲೇರುತ್ತದೆ. ಈ ಭಾವನೆಯನ್ನು ತರುವ ಮನೆಗಳ ಲಕ್ಷಣಗಳೇನಾದರೂ ಇವೆಯೇ? ಎಂದು ಯೋಚಿಸತೊಡಗಿದೆನು. ಮೊದಲನೆಯದಾಗಿ, ಯಾವಮನೆ ರಕ್ಷಣೆ ಮತ್ತು ಕ್ಷೇಮವನ್ನು ಕೊಡುವುದೋ ಅದು ನಮ್ಮ ಮನೆಯಾಗುವುದು. ಎರಡನೆಯದಾಗಿ ನಾವು ಯಾವ ಮನೆಯಲ್ಲಿ ನಮ್ಮ ಮಕ್ಕಳನ್ನು ಪೋಷಿಸಿ ಬೆಳೆಸುವೆವೋ ಆ ಮನೆ ನಮ್ಮ ಮನೆಯಾಗುವುದು. ಈ ಕಾರಣಗಳಿಂದ ನಮಗೆ ಸೌದಿಯಮನೆಗೆ ನಮ್ಮಮನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ ಆ ದೇಶಕ್ಕೆ ನಾನು ಹೋದಾಗ ನಮ್ಮ ಮಕ್ಕಳಿಬ್ಬರೂ ದೊಡ್ಡವರಾಗಿ ಕೆಲಸಕ್ಕೆ ಸೇರಿ ಸ್ವತಂತ್ರರಾಗಿ ಇಂಗ್ಲೆಂಡಿನಲ್ಲೇ ಉಳಿದುಕೊಂಡರು. ಅಂದರೆ ನಮ್ಮ ಮಕ್ಕಳು ನಮ್ಮ ಜತೆಯಲ್ಲೇ ವಾಸಮಾಡಲಿಲ್ಲ. ಆದರೂ ಈ ನಮ್ಮ ಹಳೇಮನೆಯು, ಮಕ್ಕಳು ನಮ್ಮೊಂದಿಗಿಲ್ಲದಿದ್ದರೂ ಅದೇಕೆ ನಮ್ಮಮನೆ ಎಂಬ ಭಾವನೆಯನ್ನು ಕೊಡುತ್ತದೆ?

ಅದೇಕೆಂದರೆ, ಈ ಮನೆಯು ನಮ್ಮ ಮಕ್ಕಳು ಪೋಷಿಸಿ ಬೆಳೆದದಿನಗಳನ್ನು ಜ್ಞಾಪಕಕ್ಕೆ ತರುತ್ತದೆ. ಅದಲ್ಲದೆ ಆ ದಿನಗಳಲ್ಲಾದ ಸನ್ನಿವೇಶಗಳ ಭಾವನೋದ್ವೇಗಗಳ ನೆನಪನ್ನೂ ತರುತ್ತದೆ. ನಮ್ಮ ಮನಸ್ಸಿನ ಅಂತರಾಳದಲ್ಲಿ ಹುದುಗಿದ್ದ ಎಲ್ಲಾ ಭಾವೋದ್ವೇಗಗಳು ಒಮ್ಮೆಯೇ ಹೊರಹೊಮ್ಮಿ ನಮಗೆ ಆನಂದವನ್ನು ತರುತ್ತದೆ. ಮನೋವಿಜ್ಞಾನಿಗಳು ಹೇಳುವ ಹಾಗೆ ನಮ್ಮ ಅಂತರಾಳದ ಮನಸ್ಸಿಗೆ ಅಂದರೆ ಸಬ್‌-ಕಾಂಷಿಯಸ್‌ ಮನಸ್ಸಿಗೆ ಸಾಮಾನ್ಯವಾಗಿ, ಈ ಭಾವೋದ್ವೇಗಗಳು ನಿಜ ಸನ್ನಿವೇಶಗಳಿಂದ ಬರುತ್ತಿವೆಯೇ ಅಥವ ಪ್ರಬಲವಾಗಿ ಯೋಚಿಸಿದ ಕೃತಕ ಸನ್ನಿವೇಶಗಳಿಂದ ಬರುತ್ತಿವೆಯೇ ಎಂಬುದನ್ನು ಬಿಡಿಸಿಹೇಳುವುದಕ್ಕಾಗುವುದಿಲ್ಲ. ನಿಜಸ್ಥಿತಿಯ ಸನ್ನಿವೇಶದಷ್ಟೇ ಆನಂದವನ್ನು ಕೃತಕ ಸನ್ನಿವೇಶವೂ ತರುತ್ತದೆ. ಅದೇರೀತಿಯಲ್ಲಿ ದುಃಖ, ವ್ಯಸನ, ಭಯ, ಕಷ್ಟ , ಕೋಪ ಇವುಗಳನ್ನು ಹೊಂದಿದ ಹಳೆಯ ಸನ್ನಿವೇಶಗಳೂ ಆಯಾ ವ್ಯತಿರಿಕ್ತವಾದ, ಆನಂದದಾಯಕವಲ್ಲದ ಭಾವೋದ್ರೇಕಗಳನ್ನು ತರುವುದು. ಆದರೆ ನಾವು ಸಾಮಾನ್ಯವಾಗಿ ಒಳ್ಳೆಯ ನೆನಪುಗಳನ್ನೇ ಹೆಚ್ಚಾಗಿ ಜ್ಞಾಪಕದಲ್ಲಿಟ್ಟುಕೊಂಡಿರುತ್ತೇವೆ. ಅದೂ ಅಲ್ಲದೆ, ಮಕ್ಕಳ ವಿಚಾರವಾಗಿ, ವಾತ್ಸಲ್ಯ, ಪ್ರೇಮ, ಸುಖ ಮತ್ತು ಆನಂದಗಳ ನೆನಪುಗಳನ್ನೇ ಜ್ಞಾಪಿಸಿಕೊಳ್ಳುವ ತಾಯಿ(ತಂದೆ)ಯರಿಗೆ ಆ ಮನೆಯೇ ಅವರಿಗೆ ‘ನಮ್ಮಮನೆ’ಯಾಗಿರುತ್ತದೆ.

ಆದರೆ, ನಮ್ಮ ಬೆಳೆದಮಕ್ಕಳಿಗೆ ನಮ್ಮ ಈ ಮನೆ ಅವರ ‘ನಮ್ಮಮನೆ’ಯಾಗಿ ಇನ್ನೂ ಉಳಿದಿದೆಯೇ? ಅಥವ ಅದು ಅವರ ಮಾತಪಿತೃಗಳ ಮನೆಯೇ? ಕೆಲಸದ ನಿಮಿತ್ತ ಸ್ವಂತವಾಗಿ ಲಂಡನ್ನಿನಲ್ಲಿ ಒಂದು ಅಪಾರ್ಟ್ಮೆಂಟ್‌ ಮಾಡಿರುವ ನಮ್ಮ ಮಗಳಿಗೆ ಈ ನಮ್ಮಮನೆ ಅವಳ ‘ನಮ್ಮಮನೆ’ ಯಾಗಿ ಇನ್ನೂ ಉಳಿದಿದೆ. ಈ ಸಲದ ಕ್ರಿಸ್ಮಸ್‌ ರಜೆಯಲ್ಲಿ ‘ನಮ್ಮಮನೆ’ಗೆ ಅವಳು ಬರುವುದನ್ನು ಬಹಳ ಆದರದಿಂದ ಎದುರುನೋಡುತ್ತಿದ್ದೇವೆ. ಅವಳಿಗೂ ಅದೇ ಸಡಗರ. ಅವಳ ಸಹೋದ್ಯೋಗಿಗಳಿಗೆ, ‘ಈಸಲ ನಾನು ‘ನಮ್ಮಮನೆಯಲ್ಲಿ’ ಕ್ರಿಸ್ಮಸ್ಸನ್ನು ಕಳೆಯುತ್ತೇನೆ’ ಎಂದು ಹೇಳಿದ್ದಾಳೆ. ಆದರೆ ಈ ವರ್ಷ ಹೊಸದಾಗಿ ಮದುವೆಯಾದ ನಮ್ಮ ಮಗನು ಮಾಡಿರುವ ಹೊಸ ಮನೆಗೆ ನಾವೆಲ್ಲರೂ ಕ್ರಿಸ್ಮಸ್‌ ದಿನ ಹೋಗುತ್ತೇವೆ. ಅವನು ಹೊಸ ಪತ್ನಿಯಾಂದಿಗೆ ಅವರ ‘ನಮ್ಮ ಮನೆ’ ಮಾಡಿರುವುದರಿಂದ ಅವನಿಗೆ ಈ ‘ನಮ್ಮಮನೆ’ಯ ಮೇಲೂ ಗಮನ ಕೊಡುವುದು ಸ್ವಲ್ಪ ಕಷ್ಟ.

ಇದೇರೀತಿಯಲ್ಲಿ ನಾವು ಹುಟ್ಟಿಬೆಳೆದ ಊರು ‘ನಮ್ಮಊರು’ ಎಂಬ ಭಾವನೆ ಕೊಡುತ್ತವೆಯೇ? ಯಾವಯಾವ ಭಾವನೋದ್ವೇಗಗಳು ನಮ್ಮಮನೆ ಎಂಬ ಭಾವನೆಯನ್ನು ಕೊಡುವುವೋ ಅದೇರೀತಿಯಲ್ಲಿ ನಮ್ಮ ಊರುಗಳು ಅದೇರೀತಿಯ ಭಾವನೆಗಳನ್ನು ತೋರುವುವು. ನಮ್ಮ ಬೆಳವಣಿಗೆ, ವಿದ್ಯಾಭ್ಯಾಸ, ಊರಿನಲ್ಲಿ ನಡೆಸಿದ ಕಾರ್ಯಚಟುವಟಿಕೆಗಳು, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿನ ವ್ಯವಹಾರಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಸೇರಿರುವ ಭಾವನೆ ಕೊಡುವ ಊರೇ ‘ನಮ್ಮಊರು’ ಆಗಿರುತ್ತದೆ. ಈ ಭಾವನೆ ನನಗೆ ಸೌದೀಅರೇಬಿಯಾದಲ್ಲಿ ಬರಲಿಲ್ಲ. ನನ್ನ ಆಸ್ಪತ್ರೆ, ನನ್ನ ಕ್ಲಿನಿಕ್‌, ನನ್ನ ರೋಗಿಗಳು ಎಂಬ ಭಾವನೆಗಳು ಇದ್ದವೇ ಹೊರತು, ಅದು ನನ್ನ ಊರು, ನನ್ನ ದೇಶ ಎಂಬ ಭಾವನೆ ಬರಲೇ ಇಲ್ಲ. ಅದು ನನ್ನ ತಪ್ಪೂ ಅಲ್ಲ , ಅಥವಾ ಸೌದೀಅರೇಬಿಯಾದ ತಪ್ಪೂ ಅಲ್ಲ.

ಅದೆಲ್ಲಾ ಇರಲಿ. ನೀವೇನಾದರು ನಮ್ಮ ಊರಿಗೆಬಂದಾಗ ನಮ್ಮ ಮನೆಗೆ ಊಟಕ್ಕಾದರೂ ಬನ್ನಿ. ನಮ್ಮ ಮನೆಯಲ್ಲೇ ಮಾಡಿದ ‘ಮನೆ ಉಪ್ಪಿನಕಾಯಿ’ಯನ್ನೇ ಹಾಕುವೆನು. ಈಗ ಅದನ್ನು ನನ್ನ ಸತಿಯೂ ‘ಮನೆ ಉಪ್ಪಿನಕಾಯಿ’ ಎಂದು ಕರೆಯುವಳು. ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Homemade Pickles! Namma Mane Uppinakaayi, a Kannada essay by Rajaram Cavale, Hampshire, UK
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more