• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿತ್ತಿದ ಕರ್ಮಕ್ಕೆ ತಕ್ಕ ಬೆಳೆ, ಪಾಪ ಕರ್ಮವ ತೊಳೆ

By Prasad
|

* ಶೋಭಾ ರಂಗೇಗೌಡ , ನ್ಯೂಜೆರ್ಸಿ

ಒಳ್ಳೆಯ ಜನರೇಕೆ ತೊಂದರೆಗೀಡಾಗುತ್ತಾರೆ?

ಒಳ್ಳೆಯವರಾಗಿರುತ್ತಾರೆ ಅದಕ್ಕೆ. ಇಂಥಾ ಸೀರಿಯಸ್‌ ಜೋಕು ಕೇಳಿದಾಗ ಜೀವನದಲ್ಲಿ ಕಂಡು ಕೇಳಿದ ಅನೇಕ ಘಟನಾವಳಿಗಳು ನೆನಪಾದವು-

ಬೆಂಗಳೂರಿನಲ್ಲಿ ಒಬ್ಬ ವ್ಯಾಪಾರ ಮಾಡುತ್ತಿದ್ದ. ತನ್ನ ಕೆಲಸಗಾರನೇ ತನಗೆ ಮೋಸ ಮಾಡಿದರೆಂದು ಆತ ಬೇರೆ ವ್ಯಾಪಾರ ಶುರುಮಾಡಿದ. ಅಲ್ಲಿಯೂ ಕಿರಿಕ್ಕಿನ ಬುಸ್ಸು, ವ್ಯಾಪಾರ ಠುಸ್ಸು. ಒಂದು ದಿನ ಅವನ ಅಂಗಡಿಗೆ ಕಳ್ಳರು ನುಗ್ಗಿ ಇದ್ದಬದ್ದದ್ದನ್ನೆಲ್ಲಾ ದೋಚಿಕೊಂಡು ಹೋದರು. ಆಗ ಆತ ನನಗೇ ಯಾಕಪ್ಪಾ ಈ ರೀತಿ ಕಷ್ಟ ಬರುತ್ತಿದೆ; ಬೆಳಗ್ಗೆ ಎದ್ದು ದೇವರಿಗೆ ನಮಸ್ಕಾರ ಮಾಡದೆ ಬೇರೆ ಯಾವ ಕೆಲಸವನ್ನು ಮಾಡುವುದಿಲ್ಲ, ಮಲಗುವ ಮುಂಚೆ ಪುನಃ ದೇವರನ್ನು ಪಾರ್ಥಿಸುತ್ತೇನೆ. ಕ್ಷಣ ಕ್ಷಣಕ್ಕು ದೇವರನ್ನು ಜಪಿಸುತ್ತಿರುತ್ತೇನೆ. ಆದರೂ ನನಗೇಕೀ ತರಹ ಕಷ್ಟಗಳು ಎಂದು ಪೇಚಾಡಿಕೊಂಡ.

*

ಚೀನಾದವಳೊಬ್ಬಳು ಭಾರತದ ಎಲ್ಲಾ ಯಾತ್ರಾಸ್ಥಳಗಳಿಗೆ ಕುಟುಂಬ ಸಮೇತ ಹೋಗಿ, ದೇವರಿಗೆ ಅಡ್ಡಬಿದ್ದು ಚೀನಾಗೆ ಮರಳಿದಳು. ಇದಾದ ಸ್ವಲ್ಪ ದಿನದಲ್ಲೆ ಆಕೆಯ ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಹಾಳಾದವು. ಇಲ್ಲಿಂದ ಭಾರತಕ್ಕೆ ಹೋಗಿ ದೇವರ ದರ್ಶನ ಮಾಡಿದ್ದಕ್ಕೆ ನೋಡಿ ದೇವರು ನನಗೆ ಕೊಟ್ಟ ಪ್ರತಿಫಲ ಎಂದು ಅವಳು ಅಲವತ್ತುಕೊಂಡಳು.

*

ಇನ್ನೊಬ್ಬಾಕೆ ಸಮಾಜಸೇವಕಿ. ಅಯ್ಯೋ ಅಂದವರ ಕರೆಗೆ ಓ ಎನ್ನುವ ಜಾಯಮಾನದವಳು. ಮನಸ್ಸಿಗೆ ಕೆಟ್ಟದ್ದು ಅಂದರೇನು ಅಂತಲೇ ಗೊತ್ತಿರದಷ್ಟು ಒಳ್ಳೆಯದಾಗಿತ್ತು ಆಕೆಯ ಮನಸ್ಸು. ಅನೇಕರ ಕಣ್ಣೀರು ಒರೆಸಿದ್ದಳು. ದೇಶದ ಉದ್ದಗಲಕ್ಕೂ ಒಳ್ಳೆಯದನ್ನು ಮಾಡಿಕೊಂಡು ಬರುತ್ತಿದ್ದಳು. ಹೀಗಿರುವಾಗ, ಒಂದು ದಿನ ಆಕೆ ಜಾರಿ ಕೆಳಕ್ಕೆ ಬಿದ್ದು ಕಾಲನ್ನು ಮುರಿದುಕೊಂಡಳು. ವೈದ್ಯರು ಸಂಪೂರ್ಣ ಪರೀಕ್ಷೆಮಾಡಿ, ವೀಲ್‌ ಚೇರ್‌ ಸಹಾಯದಿಂದ ಓಡಾಡಬಹುದು ಅಂತ ಹೇಳಿದಾಗ ಗೋಳೋ ಅಂದಳು. ನೂರಾರು ಜನರ ಕಣ್ಣೀರೊರೆಸಿದವಳಿಗೆ ನಿತ್ಯಕರ್ಮಕ್ಕೂ ಬೇರೆಯವರನ್ನು ಅವಲಂಬಿಸಬೇಕಾದ ಸ್ಥಿತಿ. ಒಬ್ಬರಿಗೂ ಕೆಡಕು ಮಾಡದೆ ಒಳ್ಳೊಳ್ಳೆ ಕೆಲಸವನ್ನೇ ಮಾಡಿಕೊಂಡು ಬರುತ್ತಿದ್ದ ನನಗೇಕೆ ಈ ರೀತಿಯ ಶಿಕ್ಷೆ ಅಂತ ಗೋಳಾಡಿದಳು.

*

ನನ್ನ ಸ್ನೇಹಿತರೊಬ್ಬರ ಒಬ್ಬನೇ ಮಗ ತುಂಬ ಒಳ್ಳೆಯವನು. ಅದರಿಂದಾಗೇ ಅವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಒಂದು ದಿನ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಗೆ ಹಿಂತಿರುಗುವಾಗ, ಲಾರಿಯಾಂದು ಅವನ ಕಾರಿಗೆ ಬಂದು ಗುದ್ದಿತು. ಎಲ್ಲರೂ ಸ್ಪಾಟ್‌ ಔಟ್‌. ಈ ವಿಷಯ ಕೇಳಿದ ಆತನ ತಂದೆ-ತಾಯಿ ಮಗನ ಕಳೆದುಕೊಂಡ ದುಖಃದಲ್ಲಿ ದೇವರನ್ನು ಶಪಿಸಿ ಬೈದಾಡಿದರು. ನನ್ನ ಮಗ ಯಾರಿಗೂ ಕೆಡಕನ್ನು ಮಾಡಿರಲಿಲ್ಲ . ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡಿಕೊಂಡು ಚೆನ್ನಾಗಿದ್ದ. ಅವನನ್ನು ನಮ್ಮಿಂದ ಏಕೆ ಕಿತ್ತುಕೊಂಡೆಯಪ್ಪಾ ಎಂದು ಸಂಕಟಪಟ್ಟರು.

ಇಂಥ ಅನೇಕ ನಿದರ್ಶನಗಳು ಒಪ್ಪತ್ತಿಗೊಂದರಂತೆ ಸಿಗುತ್ತವೆ.

*

ಹಾಗಾದರೆ, ಹೀಗಾಗಲು ಕಾರಣವೇನು? ಅಂತರಾಳ ಮುಟ್ಟಿಕೊಂಡು ತಣ್ಣಗೆ ಯೋಚಿಸಿ. ಅದಕ್ಕೂ ಮುಂಚೆ ಮಹಾಭಾರತದ ಈ ಸನ್ನಿವೇಶ ಕೇಳಿ...

ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಶ್ರೀಕೃಷ್ಣನು ಪಾಂಡವರನ್ನೂ, ಕೌರವರನ್ನೂ ಹಾಗು ಉಳಿದವರೆಲ್ಲರನ್ನೂ ಕುರಿತು ಹೀಗೆಂದನು- 'ನನಗೆ ದ್ವಾರಕಕ್ಕೆ ಹೊರಡುವ ಸಮಯವಾಯಿತು, ಹೇಳಿ, ನನ್ನಿಂದ ನಿಮಗೇನಾದರು ಸಹಾಯಬೇಕೆ" ಎಂದು ಕೇಳಿದನು. ಆಗ ಅಲ್ಲಿದ್ದ ಧೃತರಾಷ್ಟ್ರ , 'ನಾನು ಇಲ್ಲಿಯವರೆಗೆ ಯಾರಿಗೂ ಮೋಸ ಮಾಡಿಲ್ಲ, ಯಾರಿಗೂ ಯಾವುದೇ ಅನ್ಯಾಯ ಮಾಡಿಲ್ಲ, ಯಾರೊಂದಿಗೂ ನಿರ್ದಯೆಯಿಂದ ವರ್ತಿಸಿಲ್ಲ . ಆದರೂ ನನಗೆ ಕಣ್ಣು ಕಾಣೋದಿಲ್ಲ. ಈಗ ನೂರೂ ಮಕ್ಕಳನ್ನು ಯುದ್ಧದಲ್ಲಿ ಕಳೆದುಕೊಂಡೆ. ದೇವರು ನನಗೆ ಏಕೆ ಈ ರೀತಿಯ ಅನ್ಯಾಯ ಮಾಡಿದ? ಹೇಳುವಂಥವನಾಗು" ಎಂದ. ಅದಕ್ಕೆ ಶ್ರೀಕೃಷ್ಣ ಕೊಟ್ಟ ಉತ್ತರ ಹೀಗಿತ್ತು- 'ಆ ಪ್ರಶ್ನೆಗೆ ನಿನ್ನಲ್ಲೆ ಉತ್ತರವಿದೆ , ಹೋಗು- ಯಾರೂ ಇಲ್ಲದ ಜಾಗದಲ್ಲಿ ಕುಳಿದು ಒಬ್ಬನೆ ಧ್ಯಾನ ಮಾಡಿ, ನಿನ್ನ ಅಹಂ ಅನ್ನು ಬಿಟ್ಟು, ಆಧ್ಯಾತ್ಮದ ಪರಿಧಿಗೆ ಬಾ. ಆಗ ನಿನ್ನ ಈ ಪ್ರಶ್ನೆಗೆ ತಂತಾನೇ ಉತ್ತರ ಸಿಗುತ್ತದೆ."

ಶ್ರೀಕೃಷ್ಣನ ಸಲಹೆಯಂತೆ ಧ ೃತರಾಷ್ಟ್ರನು ಧ್ಯಾನಮಗ್ನನಾದ. ಧ್ಯಾನಮಾಡುತ್ತ ಮಾಡುತ್ತಾ ಆಧ್ಯಾತ್ಮಿಕತೆಯನ್ನೂ ಪಡೆದ. ಹಾಗಾದಾಗ ಅವನಿಗೆ ತನ್ನ ಪೂರ್ವಜನ್ಮದ ದೃಶ್ಯ ನೆನಪಾಯಿತು. ಆಧ್ಯಾತ್ಮಿಕತೆ ಪ್ರಜ್ಞೆಯ ಪರಿಧಿಯಲ್ಲಿ ನಮ್ಮ ಪೂರ್ವಜನ್ಮದ ಚರಿತ್ರೆ ದಾಖಲಾಗಿರುತ್ತದೆ. ಅದನ್ನು ಹೊಕ್ಕಿ ನೋಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆಧ್ಯಾತ್ಮ ಪ್ರಜ್ಞೆಯ ಪರಿಧಿ ಪ್ರವೇಶಿಸಿದ ಧ ೃತರಾಷ್ಟ್ರನಿಗೆ ಕಂಡ ಹಳೆದ ಜನ್ಮದ ಕಥೆ ಹೀಗಿತ್ತು- ಅವನಾಗ ಒಬ್ಬ ದುಷ್ಟ ರಾಜನಾಗಿದ್ದ. ಒಂದು ದಿನ ಪುಷ್ಕರಿಣಿಯ ಪಕ್ಕ ನಡೆದು ಹೋಗುತ್ತಿದ್ದಾಗ ನೂರು ಮುದ್ರೆಗಳನ್ನು ತನ್ನ ಸುತ್ತಲೂ ಇಟ್ಟುಕೊಂಡ ಹಂಸವನ್ನು ಕಂಡನು. ಎಲ್ಲಿ ಇದು ತನಗಿಂತ ಶ್ರೇಷ್ಠವಾಗುವುದೋ ಎಂಬ ಭ್ರಾಂತಿಯಿಂದ ತನ್ನ ಸೇವಕರಿಗೆ ಆ ಹಂಸದ ಕಣ್ಣುಗಳನ್ನು ಕಿತ್ತು, ಅದರ ನೂರು ಮುದ್ರೆಗಳನ್ನೂ ನಾಶಮಾಡಿ ಎಂದು ಆಜ್ಞೆ ಮಾಡಿದ. ಹಂಸ ಸತ್ತಿತು. ಆ ಪಾಪ ಧ ೃತರಾಷ್ಟ್ರನ ಸುತ್ತಿಕೊಂಡಿತು.

ಧ್ಯಾನದಿಂದ ಹೊರಬಂದ ಧ ೃತರಾಷ್ಟ್ರನಿಗೆ ತಾನು ಕುರುಡನಾದದ್ದು, ನೂರು ಮಕ್ಕಳನ್ನು ಕಳೆದುಕೊಂಡದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಪೂರ್ವಜನ್ಮದ ಕರ್ಮದ ಫಲಗಳನ್ನು ಈ ಜನ್ಮದಲ್ಲಿ ಅನುಭವಿಸಬೇಕು ಅನ್ನುವ ಮಾತು ಜನಜನಿತವಾಗಿರಲು ಇಂಥದ್ದೇ ಯಾವುದಾದರೂ ಬಲವಾದ ಕಾರಣ ಇದ್ದೇ ಇರುತ್ತದೆ.

ಇಪ್ಪತ್ತೊಂದನೆ ಶತಮಾನದಲ್ಲಿ ಬೆರಳ ತುದಿಗೆ ಜಗತ್ತನ್ನು ಎಟುಕಿಸಿಕೊಂಡಿರುವ ನಮಗೆ, ಧ್ಯಾನ ಮಾಡಿ ಆಧ್ಯಾತ್ಮಿಕತೆ ಪಡೆಯಲು ಅಷ್ಟು ಕಷ್ಟ ಪಡಬೇಕೆ ಅನ್ನಿಸುವುದು ಸಹಜ. ಅದಕ್ಕೊಂದು ಶಾರ್ಟ್‌ ರೂಟ್‌ ಇಲ್ಲವೇ ಎಂಬ ಪ್ರಶ್ನೆ ಕೇಳಿದರೂ ಆಶ್ಚರ್ಯವಿಲ್ಲ. ಧ್ಯಾನ ಎಂಬುದರ ಧ್ವನ್ಯರ್ಥ ಮನನವಾಗಬೇಕು. ಒಂದೇ ರಾತ್ರಿಯಲ್ಲಿ ನಾಲ್ಕು ವರ್ಷದ ಇಂಜನಿಯರಿಂಗ್‌ ಮಾಡಲು ಸಾಧ್ಯವೇ? ಹಗಲು ರಾತ್ರಿ ಕಷ್ಟ ಪಟ್ಟು ಓದಿ ಪರೀಕ್ಷೆ ಚೆನ್ನಾಗಿ ಬರೆದ ಮೇಲೆ ತಾನೆ ಫಲಿತಾಂಶದ ಮಾತು. ಇದನ್ನು ಶಿಕ್ಷಣ ವಿಜ್ಞಾನ ಅನ್ನುವುದಾದರೆ, ಆಧ್ಯಾತ್ಮಕ್ಕೂ ಒಂದು ವಿಜ್ಞಾನವಿದೆ.

ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಈ ವಿದ್ಯೆಯನ್ನು 'ಆತ್ಮವಿದ್ಯ" ಎಂದು ಕರೆಯುತ್ತಿದ್ದರು. ವಿದ್ಯಾ ಎಂದರೆ ವಿಜ್ಞಾನ ಎಂದರ್ಥ. ಹೇಗೆ ಪರಿಸರ ವಿಜ್ಞಾನಕ್ಕೆ ಅದರದೇ ಆದ ನಿಯಮಗಳಿವೆಯೋ ಹಾಗೆ ಆತ್ಮವಿದ್ಯೆಗೂ ನಿಯಮಗಳಿವೆ. ಅವೇ ಕರ್ಮದ ನಿಯಮಗಳು ಮತ್ತು ಪೂರ್ವಜನ್ಮದ ನಿಯಮಗಳು.

ಹಾಗಾದರೆ, ಕರ್ಮದ ನಿಯಮಗಳು ಯಾವುವು?

ಬಿತ್ತಿದ ಬೀಜದ ಗಮ್ಮತ್ತಿನ ಮೇಲೆ ತೆಗೆಯುವ ಬೆಳೆಯ ಕಿಮ್ಮತ್ತು ನಿಂತಿರುತ್ತದೆ. ಜೀವನವೆಂಬ ಹೊಲದಲ್ಲಿ ನಾವು ನಡೆಸುವುದು ನಿತ್ಯ ಉಳುಮೆ. ನಮ್ಮ ಅನಿಸಿಕೆ, ನಡಾವಳಿ, ಆಡುವ ಪ್ರತಿಯಾಂದು ಮಾತು, ಮಾಡುವ ಪ್ರತಿಯಾಂದು ಕೆಲಸ, ನಮ್ಮನ್ನು ಕೆರಳಿಸುವ ನಮ್ಮ ಮನೋಭಾವಗಳು, ಅಂತಃಕರಣ, ಕಲ್ಪನಾಶಕ್ತಿ, ಆಸಕ್ತಿ ಕೆರಳಿಸುವ ಆಕಾಂಕ್ಷೆ... ಹೀಗೆ ಜೀವನದ ಹೊಲದಲ್ಲಿ ಬೀಜಗಳ ಬಿತ್ತುತ್ತಾ ಹೋಗುತ್ತೇವೆ. ಕೆಲವು ಗಟ್ಟಿ ಕಾಳುಗಳಾದರೆ, ಕೆಲವು ಜೊಳ್ಳು. ಗಟ್ಟಿ ಬೀಜದ ಮರ ಕೊಡುವ ಫಲ ಸಿಹಿಯಾದರೆ, ಕಹಿ ಬೀಜದ ಫಲವೂ ಕಹಿ. ಈ ಪೈಕಿ ಬೀಜ ಬಿತ್ತಿದಾತ ತನ್ನ ಪಾಲಿಗೆ ಬರುವ ಫಲವನ್ನೇ ಉಣಬೇಕು. ಈ ವಿಷಯದಲ್ಲಿ ಯಾರೂ ಏನೂ ಮಾಡಲಾರರು. ಕೆಲವೊಮ್ಮೆ ಅಗಿಂದಾಗಲೆ ನಮ್ಮ ಕರ್ಮದ ಫಲಗಳು ಸಿಕ್ಕಿಬಿಡುತ್ತವೆ. ಇನ್ನು ಕೆಲವೊಮ್ಮೆ ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಉದಾಹರಣೆ ಎಂದರೆ, ನಾವೀಗ ಎಲ್ಲಾದರೂ ಒಂದು ಪಾರ್ಟಿಗೆ ಹೋಗಿ ಹೊಟ್ಟೆ ಬಿಗಿಯುವಷ್ಟು ಊಟ ಮಾಡಿಬಂದರೆ ನಮಗೆ ಅದರ ಪರಿಣಾಮವಾಗಿ ಅಜೀರ್ಣ ಮತ್ತಿತರ ತೊಂದರೆಗಳಾಗುತ್ತವೆ. ಹೀಗೆ ಕರ್ಮದ ಫಲಗಳು ನಮ್ಮ ಬೆನ್ನಿಗೆ ಕಟ್ಟಿದ ಮೂಟೆಯ ಹಾಗೆ. ಎಲ್ಲಿ ಹೋದರೂ ಬಿಡುವುದಿಲ್ಲ. ಇದು ಕರ್ಮದ ಸರಳ ನಿಯಮ.

ಎಲ್ಲಾ ಮನುಷ್ಯರನ್ನು ದೇವರು ಸಮನಾಗಿ ಸೃಷ್ಟಿಸಿದ್ದಾನೆ ಅನ್ನುತ್ತಾರೆ. ಆದರೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಜಾಣತನ ಹಾಗೂ ಸಾಮರ್ಥ್ಯದ ಸಮಾನತೆ ಯಾಕೆ ಇರುವುದಿಲ್ಲ ? ಹಿರಿ ಮಗ ಐ. ಎ. ಎಸ್‌. ಆಫೀಸರ್‌ ಆದರೆ, ಕಿರಿಮಗನಿಗೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ್ನ ಪಾಸ್‌ ಮಾಡೋಕೂ ಆಗಲ್ಲ. ಯಾಕೆ ? ಸಿಂಧಿ ಭಾಷೆಯಲ್ಲಿ ಒಂದು ಗಾದೆ ಇದೆ- ತಾಯಿಯು ಮಕ್ಕಳಿಗೆ ಜನ್ಮವನ್ನು ನೀಡುತ್ತಾಳೆ, ಆ ಮಕ್ಕಳು ತಮ್ಮ ಜೊತೆ ತಮ್ಮ ತಮ್ಮ ಹಣೆಬರಹ ( ಅದೃಷ್ಟ) ವನ್ನು ತರುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಎಲ್ಲರೂ ತಮ್ಮ ತಮ್ಮ ಕರ್ಮಗಳನ್ನು ತಮ್ಮ ತಮ್ಮ ಜೊತೆ ತರುತ್ತಾರೆ. ಒಂದು ಕುಟುಂಬದಲ್ಲಿ ತಮ್ಮ ಒಬ್ಬ ದೊಡ್ಡ ಕೋಟ್ಯಾಧಿಪತಿಯಾದರೆ, ಅಣ್ಣ ಸಂಸಾರದ ಒಂದು ಹೊತ್ತಿನ ತುತ್ತಿನಚೀಲ ತುಂಬಿಕೊಳ್ಳಲೂ ಹೆಣಗುತ್ತಿರುತ್ತಾನೆ.

ಇಲ್ಲಿ ಎರಡು ಪ್ರಶ್ನೆಗಳು ಬರುತ್ತವೆ: (1) ಅಸಮಾನತೆ ಕರ್ಮದ ಫಲಗಳೆ? (2) ಹಾಗಿದ್ದಲ್ಲಿ ಅದು ಸಮಂಜಸವೇ?- ನಮ್ಮ ಹಣೆಬರಹವನ್ನು (ವಿಧಿ) ನಾವೇ ಬರೆದುಕೊಳ್ಳುತ್ತೇವೆ. ನಮ್ಮ ಜೀವನವನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ನಮ್ಮ ಪ್ರತಿಯಾಂದು ಯೋಚನೆ, ಕ್ರಿಯೆ, ಆಕಾಂಕ್ಷೆಗಳು ಕರ್ಮವನ್ನು ಹುಟ್ಟಿಸುತ್ತವೆ. ಇದನ್ನು ನಾವು ಸಾವಿರಾರು ವರ್ಷಗಳಿಂದ ನಿರ್ಮಿಸುತ್ತಾ ಬಂದಿದ್ದೇವೆ. ನಮ್ಮ ಕ್ರಿಯೆ, ಯೋಚನೆಗಳು ಧರ್ಮಶೀಲವಾದಲ್ಲಿ ಅದು ಒಳ್ಳೆಯ ಕರ್ಮವಾಗುತ್ತದೆ. ಅದೇ ನಮ್ಮ ಕ್ರಿಯೆ. ಯೋಚನೆಗಳು ನೀಚ ಮಟ್ಟದ್ದಾದರೆ ಅದು ಕೆಟ್ಟ ಕರ್ಮವಾಗುತ್ತದೆ. ಒಳ್ಳೆಯ ಅಥವ ದುಷ್ಟ ಕರ್ಮಗಳನ್ನು ಉತ್ಪಾದಿಸುವ ನಮಗೆ, ಅದರ ಫಲಗಳು ನಾವು ಅದನ್ನು ಸಮತೋಲನ ಮಾಡುವವರೆಗೂ ನಮ್ಮ ಜೀವನ ಉದ್ದಕ್ಕೂ ಅಂಟಿಕೊಂಡಿರುತ್ತವೆ.

ನಮ್ಮ ಪೂರ್ವಜನ್ಮದ ಕರ್ಮಗಳು ರಹಸ್ಯ. ಯಾಕೆ?

ಇದು ದೇವರ ಕೃಪೆ ಎಂದು ತಿಳಿಯಿರಿ. ಒಂದು ವೇಳೆ ನಮ್ಮ ಪೂರ್ವಜನ್ಮದ ವೈರಿ ಈ ಜನ್ಮದಲ್ಲಿ ಹೆಂಡತಿಯೋ, ಗಂಡನೋ ಆದರೆ ಏನು ಗತಿ? ಹಿಂದಿನ ಲೆಕ್ಕ ತೀರಿಸಲೆಂದೆ ದೇವರು ಹೀಗೆ ಆ ಜನ್ಮದ ವೈರಿಯನ್ನು ಈ ಜನ್ಮದಲ್ಲಿ ಗಂಡ-ಹೆಂಡಿರಾಗೆ ಮಾಡಿರುತ್ತಾನೆ. ಈ ಸತ್ಯವನ್ನು ತಿಳಿದ ನಾವು, ಸುಖ ಜೀವನ ಮಾಡಲು ಸಾಧ್ಯವೇ? ಈ ಎಲ್ಲ ಸತ್ಯವನ್ನು ನಮಗೆ ಗೊತ್ತಾಗಿಸಿದರೆ ನಮ್ಮ ಗತಿ ದೇವರೇ ಗತಿ !

ದುಷ್ಟ ಕರ್ಮವು ಹೇಗೆ ಹುಟ್ಟಿತು?

ದೇವರು ಮನುಷ್ಯನಿಗೆ ತನ್ನ ಇಚ್ಛಾಶಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರಕೊಟ್ಟಿದ್ದನು. ಅವನು ಉಪನಿಷತ್‌ನಲ್ಲಿ ಕರೆಯುವ ಪ್ರೇಯ ಮತ್ತು ಶ್ರೇಯ- ಎರಡರಲ್ಲಿ ಯಾವುದಾದನ್ನಾದರೂ ಆರಿಸಿಕೊಳ್ಳಬಹುದಿತ್ತು. ಪ್ರೇಯ ಎಂಬುದು ಸರಸದಂತೆ. ಅದು ನಮ್ಮನ್ನು ನಿಪಾತಕ್ಕೆ ಕರೆದೊಯ್ಯುತ್ತದೆ, ಶ್ರೇಯ ಎಂಬುದು ಒಳ್ಳೆಯದು. ಆದರೆ ಆ ಹಾದಿಯಲ್ಲಿ ಕಷ್ಟಗಳು ಬಹಳಷ್ಟು. ಆದರೆ ಕೊನೆಯಲ್ಲಿ ನಮ್ಮ ಸ್ಥಿತಿ ಸುಧಾರಿಸುತ್ತದೆ. ಆಧ್ಯಾತ್ಮಿಕತೆಯನ್ನು ಪಡೆಯುತ್ತೇವೆ. ನಮ್ಮಲ್ಲಿ ಹಲವಾರು ಮಂದಿ ಸುಲಭದ ಹಾದಿಯನ್ನು ಹಿಡಿದು ಪ್ರೇಯವನ್ನು ಅವಲಂಬಿಸಿಕೊಂಡು, ಜೀವನದುದ್ದಕ್ಕೂ ಪಾಪ ಕರ್ಮಗಳ ಮೇಲೆ ಪಾಪ ಕರ್ಮಗಳನ್ನು ಮಾಡುತ್ತ ಹೋಗುತ್ತಾರೆ.

ಪಾಪ ಕರ್ಮಗಳನ್ನು ಜಪದಿಂದ ನಾಶ ಮಾಡಲು ಸಾಧ್ಯವೇ?

ನಾಮ ಜಪದಿಂದ ಕರ್ಮಗಳನ್ನು ಉಪಶಮನ ಮಾಡಬಹುದೆಂದು ನಂಬಿಕೆಯಿದೆ. ಯಾವುದೇ ವಿಷಯದಲ್ಲಿ ನಮ್ಮ ಕರ್ಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾಮಜಪ ಕ್ಲೋರೋಫಾರಮ್‌ ಇದ್ದಂತೆ. ಇದು ನಾವೊಂದು ಶಸ್ತ್ರಚಿಕಿತ್ಸೆಗೆ ಒಳಗಾದಾಗ ಶಸ್ತ್ರಚಿಕಿತ್ಸಕ ವೇದನಾರೋಧಕವಾಗಿ ಕೆಲಸ ಮಾಡಿ, ಸರಿಯಾದ ಚಿಕಿತ್ಸೆಯನ್ನು ಮಾಡಿ ಸ್ವಲ್ಪವೂ ನೋವಿಲ್ಲದೇ ಹೊರಬರುವಂತೆ ಮಾಡುತ್ತದೆ. ಇಲ್ಲದಿದ್ದರೆ ಆ ನೋವಿನಿಂದಲೇ ರೋಗಿಯೂ ಯಾತನೆ ತಡೆಯಲಾರದೆ ಪ್ರಾಣಬಿಡುತ್ತಿದ್ದ. ನಾಮಜಪ ವೇದನಾರೋಧಕದಂತೆ.

ಋಷಿ ಮುನಿಗಳು ತಮ್ಮ ಶಿಷ್ಯವೃತ್ತಿಯಿಂದ ಈ ಕರ್ಮವನ್ನು ಗೆಲ್ಲುವರೇ?

ಖಂಡಿತ. ಅವರಿಗೆ ಕರ್ಮದ ನಿಯಮಗಳು ದಂಡನೆಯಾಗಿರುವುದಿಲ್ಲ .ಅದು ಅವರಿಗೆ ಸುಧಾರಣೆಯಾಗಿರುತ್ತದೆ. ಕರ್ಮದ ನಿಯಮಗಳು ನಮ್ಮನ್ನು ದಂಡಿಸಲು ಅಲ್ಲ, ಅವುಗಳು ನಮ್ಮನ್ನು ಸರಿ ದಾರಿಗೆ ತರಲು ಇರುವ ಉಪಕರಣ ಇದ್ದಂತೆ. ದೇವರ ಮಕ್ಕಳು ಕೆಲವೊಮ್ಮೆ ದೇವರ ಭಕ್ತರ ಕರ್ಮಗಳನ್ನು ತಮ್ಮ ಮೇಲೆ ತೆಗೆದು ಕೊಳ್ಳುವುದೂ ಉಂಟು. ಅದು ಹೇಗೆ ಎಂದರೆ, ದೇವರ ಪಂಜರದಲ್ಲಿರುವ ಹಕ್ಕಿಗಳನ್ನು ಬಿಡುಗಡೆ ಮಾಡಿದಂತೆ. ಯಾವ ಮನುಷ್ಯನು ಆಧ್ಯಾತ್ಮಿಕ ಶ್ರೀಮಂತನೋ ಅಂಥವನು ದೇವರಲ್ಲಿ ಪಂಜರದ ಹಕ್ಕಿಯನ್ನು ಕೊಂಡುಕೊಂಡು ಅದನ್ನು ಮಾಯವೆಂಬ ಪಂಜರದಿಂದ ಬಿಡುಗಡೆ ಮಾಡುತ್ತಾನೆ.

ಕಷ್ಟವನ್ನು ಹೇಗೆ ಎದುರಿಸುವುದು?

ನಮ್ಮ ಗಮನ ಕಷ್ಟಗಳ ಮೇಲೆ ಇದ್ದರೆ ಅದರ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಕಷ್ಟಗಳ ಹಿಂದಿರುವ ಸುಖವನ್ನು ನೋಡಿ. ಜೀವನದ ಕೆಲವೊಂದು ಕಡೆಯಷ್ಟೆ ನಾವು ಕಷ್ಟಪಡುತ್ತಿರುತ್ತೇವೆ, ಹಾಗಾಗಿ ಬಹಳಷ್ಟು ವಿಷಯಗಳಿಗೆ ನಾವು ಕೃತಜ್ಞರಾಗಿರಬೇಕು.

ನಮ್ಮ ಜೀವನದ ಯಾವುದೇ ಸ್ಥಿತಿಯಲ್ಲಾದರೂ ದೇವರನ್ನು ಜಪಿಸೋಣ. ಪ್ರತಿಯಾಂದು ಹೆಜ್ಜೆಗೂ ದೇವರ ಪ್ರಶಂಶಿಸುವುದನ್ನು ಅಭ್ಯಾಸ ಮಾಡಿಕೊಳ್ಳೊಣ. ಎಂಥ ಭಯದಲ್ಲೂ, ಆಶಾ ಭಂಗದಲ್ಲೂ, ಆತಂಕದಲ್ಲೂ, ಹತಾಶೆಯಲ್ಲೂ, ವ್ಯಾಕುಲದಲ್ಲೂ ದೇವರಿಗೆ ನಮಿಸೋಣ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸೋಣ. ದೇವರು ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೆಂದು ತಿಳಿಯೋಣ. ಹೀಗೆ ಭಾವಿಸುವುದರಿಂದ ನೆಮ್ಮದಿ, ಶಾಂತಿಯಿಂದ ಜೀವನ ಮಾಡಬಹುದು.

ನಾನೊಂದು ಮಹಿಳೆಯ ಉದಾಹರಣೆ ನೀಡಲು ಬಯಸುವೆ. ಆಕೆಯ ಗಂಡನನ್ನು ವೈದ್ಯರೂ ಹಲವಾರು ಬಗೆಯಲ್ಲಿ ಪರೀಕ್ಷಿಸಿ ಇನ್ನು ನಿನ್ನ ಗಂಡ ಹೆಚ್ಚು ದಿನ ಬದುಕಲಾರ ಎಂದು ಹೇಳಿ ಹೋದರು. ಆದರೂ ಆಕೆ ಎದೆಗುಂದಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ದೇವರ ಪ್ರಾರ್ಥಿಸುತ್ತಾ ಹೀಗೆ ಹೇಳುತ್ತಿದ್ದಳು, 'ನನ್ನ ಗಂಡನನ್ನು ಗುಣಪಡಿಸಿ ಅವರನ್ನು ಮತ್ತೆ ಮೊದಲಿನಂತೆ ಮಾಡಿದ್ದಕ್ಕೆ ನಿನಗೆ ವಂದನೆಗಳು" ಎಂದು ಹೇಳುತ್ತ ಇದ್ದಳು. ಆಕೆಯು ತನ್ನ ಗಂಡನನ್ನು ಮರುಪರೀಕ್ಷೆಗೆಂದು ವೈದ್ಯರ ಬಳಿಗೆ ಕರೆದುಕೊಂಡು ಹೋದಳು. ವೈದ್ಯರು ಆಕೆಯ ಗಂಡನನ್ನು ಪರೀಕ್ಷೆ ಮಾಡಿ ಆಶ್ಚರ್ಯಚಕಿತರಾದರು. ಇದೆಲ್ಲಾ ಮೇಲಿರುವವನ ಕೃಪೆಯೆಂದು ಉದ್ಗಾರ ತೆಗೆದರು.

ಬನ್ನಿ ನಾವೆಲ್ಲಾ ಒಟ್ಟಿಗೆ ಒಂದು ನಿರ್ಧಾರಕ್ಕೆ ಬರೋಣ. ಯಾವುದೇ ಸಂದರ್ಭದಲ್ಲಿ ನಮ್ಮಿಂದಾಗುವ ಒಳ್ಳೆಯ ಕಾರ್ಯವನ್ನು ಮಾಡೋಣ. ಅದರ ಪ್ರತಿಫಲವನ್ನು ದೇವರಿಗೆ ಬಿಡೋಣ. ಎಪ್ಪತೈದು ವರ್ಷದ ಹೆನ್ರಿ ಫಾರ್ಡ್ರ ಅವರ ಯಶಸ್ವಿಯ ಗುಟ್ಟೇನು ಎಂದು ಕೇಳಿದಾಗ ಅವರು ಹೇಳಿದ ಮಾತುಗಳಿವು- 'ನನ್ನ ಜೀವನವು ಮೂರು ಮುಖ್ಯ ತತ್ವಗಳ ಮೇಲೆ ನಿರ್ಮಾಣವಾಗಿದೆ. ನಾನು ಹೆಚ್ಚಿಗೆ ಏನನ್ನೂ ತಿನ್ನುವುದಿಲ್ಲ, ಯಾವುದಕ್ಕೂ ಚಿಂತಿಸುವುದಿಲ್ಲ , ಮತ್ತೆ ನಾನು ಯಾವುದೇ ಒಳ್ಳೆಯ ಕೆಲಸ ಮಾಡಿದರೆ ಅದರ ಪ್ರತಿಫಲ ಒಳ್ಳೆಯದೇ ಆಗಿರುತ್ತದೆ ಎಂದು ನಾನು ನಂಬಿದ್ದೇನೆ."

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X