ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠಗಳೆಂಬ ನವಶ್ರೀಮಂತ ಕಂಪನಿಗಳು

By Staff
|
Google Oneindia Kannada News

ಕರುನಾಡಲ್ಲಿ ಇತ್ತೀಚೆಗೆ ಭಾರೀ ಕುತೂಹಲ ಕೆರಳಿಸಿರುವ, ಆದಿಚುಂಚನಗಿರಿ ಮಠಕ್ಕೆ ಪರ್ಯಾಯ ಮಠ ಕಟ್ಟುವ ವಿವಾದವನ್ನು ಎದುರಿಗಿಟ್ಟುಕೊಂಡು ನೋಡಿದರೆ, ಈ ಘಟನೆ ನಿಜವಾಗಲೂ ಒಂದು ರೀತಿಯಲ್ಲಿ ಸಮಾಜದಲ್ಲಿನ ಅಂಧಶ್ರದ್ಧೆಗಳನ್ನು ತೊಡೆಯುವಲ್ಲಿ ಸಹಕರಿಸುತ್ತಿದೆ ಎಂದು ಹೇಳದೆ ವಿಧಿಯಿಲ್ಲ . ಇಂತಹುದೇ ಒಂದು ಹುಬ್ಬಳ್ಳಿಯ ಮೂರುಸಾವಿರ ಮಠದ ವಿಷಯದಲ್ಲಿಯೂ ನಡೆದು ಆಗ ಉತ್ತರ ಕರ್ನಾಟಕದಲ್ಲಿನ ಒಂದಷ್ಟು ಜನರು ಈ ಸ್ವಾಮೀಜಿಗಳ 'ತಪೋಬಲ"ವನ್ನು, 'ಪಾವಿತ್ರ್ಯ"ವನ್ನು ಕಣ್ಣಾರೆ ಕಂಡಿದ್ದರು. ಅಂಥದ್ದೇ ಇನ್ನೊಂದು ನಾಟಕ ಈಗ ಅಲ್ಪಸ್ವಲ್ಪ ರೂಪಾಂತರಗಳೊಂದಿಗೆ ಮರು ಪ್ರದರ್ಶನ ಕಾಣುತ್ತಿದೆ.

ಭಾರತದಲ್ಲಿ ಅನಾದಿ ಕಾಲದಿಂದ ಬಂದ ಈ ಮಠ, ಸ್ವಾಮೀಜಿಗಳು, ಅಸಂಬದ್ಧವಾದ ಇಲ್ಲದ ಪಾವಿತ್ರ್ಯ ಆರೋಪಣೆ, ಅದರಿಂದಾದ ಶೋಷಣೆ, ಜನವಿಭಜನೆ, ಅಸಹ್ಯವಾದ ತಾರತಮ್ಯಗಳೆಲ್ಲವನ್ನೂ ಗಮನಿಸಿದರೆ, ಪ್ರಸ್ತುತದಲ್ಲಿ ನಡೆಯುತ್ತಿರವ ಘಟನೆ- ನಿಜವಾಗಲೂ ಈ ಸ್ವಾಮೀಜಿಗಳ 'ಇಲ್ಲದ ಪಾವಿತ್ರ್ಯ"ವನ್ನು ಜನರ ಮುಂದೆ ಅನಾವರಣ ಮಾಡಿ, ಜನರನ್ನು ಚಿಂತನೆಗೆ ಹಚ್ಚುವ, ತನ್ಮೂಲಕ ವೈಚಾರಿಕತೆ ಬೆಳೆಸುವಲ್ಲಿ ಅಷ್ಟೊ ಇಷ್ಟೊ ಯಶಸ್ವಿಯಾಗಲಿದೆ.

Sri Balagangadharanatha Swamiji at the receiving end ?ಕರ್ನಾಟಕದಲ್ಲಿನ ಮಠಗಳ ಇತ್ತೀಚಿನ ಇತಿಹಾಸವನ್ನು ಗಮನಿಸಿದಾಗ ಪ್ರಮುಖವಾಗಿ ಕಾಣಿಸುವುದು ಲಿಂಗಾಯತರ ಮಠಗಳು. ಇವುಗಳ ಸಂಖ್ಯೆ ಸಾವಿರಾರು. ಹಿಂದೆಲ್ಲ ಸಮಾಜದಲ್ಲಿ ಸಂಘಟಿತ ಸೇವಾಕಾರ್ಯ ನಿರ್ವಹಿಸುತ್ತಿದ್ದುದು ಈ ಮಠಗಳೆ. ಶ್ರೀಮಂತರು, ಉಳ್ಳವರು ತಮ್ಮ ಕೈಲಿ ಮಾಡಲಾಗದ ಸಮಾಜ ಸೇವೆಯನ್ನು ಮಠಗಳಿಗೆ ಹಣ, ಧಾನ್ಯ ನೀಡುವುದರ ಮುಖಾಂತರ ಪ್ರೋತ್ಸಾಹಿಸುತ್ತಿದ್ದರು ಮತ್ತು ಎಷ್ಟೋ ಸಮಾಜಮುಖಿ ಮಠಾಧೀಶರುಗಳೂ ಜೋಳಿಗೆ ಹಿಡಿದು ಭಿಕ್ಷೆ ಎತ್ತಿ ಮಠ, ಶಾಲೆಗಳನ್ನು ಕಟ್ಟಿದರು. ಹಾಗೆಯೇ ಮಠಗಳು ಸ್ವಾವಲಂಬಿಗಳಾಗುವ ದೃಷ್ಟಿಯಿಂದ ಇಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳನ್ನು ನಡೆಸಿ ಕ್ಯಾಪಿಟೇಷನ್‌ ಮತ್ತಿತರವುಗಳ ನೆರವಿನಿಂದ ದೊಡ್ಡ ಬೃಹತ್‌ ಸಂಸ್ಥೆಗಳಾಗಿ ಹೋದವು. ಇಂದು ಮಠಾಧೀಶರುಗಳ ಪಾವಿತ್ರ್ಯಕ್ಕಿಂತ ಅವರ ಪ್ರಭಾವಳಿಗೆ, ಸಂಪತ್ತಿಗೆ ಹೆದರಿ ಸಮಾಜದ ಹಿರಿಯರು, ರಾಜಕಾರಣಿಗಳು ನಡೆದುಕೊಳ್ಳಬೇಕಾಗಿದೆ. ಸಾಮಾನ್ಯರು ಇದೆಲ್ಲ ಸ್ವಾಮೀಜಿಗಳ ತಪೋಬಲದಿಂದಲೇ ಆಯ್ತು ಎಂಬ ತಪ್ಪು ಗ್ರಹಿಕೆಗೆ ಒಳಗಾಗಬೇಕಾಗಿದೆ.

ಇದರಿಂದಾದ ಮತ್ತೊಂದು ಪರಿಣಾಮವೆಂದರೆ ಎಲ್ಲಾ ರೀತಿಯ ಜಾತಿ-ಒಳ ಪಂಗಡಗಳಲ್ಲಿ ಆದ ಮಠಕ್ರಾಂತಿ. ಕಳೆದ ಕೆಲವು ದಶಕಗಳಲ್ಲಿ ರಾಜ್ಯದ ಪ್ರತಿಯಾಂದು ಜಾತಿಯವರೂ ತಮ್ಮದೇ ಆದ ಮಠಗಳನ್ನು ನಿರ್ಮಿಸಿಕೊಂಡಿದ್ದಾರೆ. ಸ್ವಾತಂತ್ರ್ಯಾನಂತರದ ಮಹಾನ್‌ ಕ್ರಾಂತಿಯೆಂದರೆ ಹಣ ಮತ್ತು ವಿದ್ಯೆ ಯಾವುದೇ ಜಾತಿಯ ಸೊತ್ತಾಗಿ ತೊತ್ತಾಗಿ ಉಳಿಯದೆ ಎಲ್ಲ ವರ್ಗಗಳಲ್ಲಿಯೂ ಇಂದು ಶ್ರೀಮಂತರೂ, ವಿದ್ಯಾವಂತರೂ ಇರುವುದು. ಇದು ಹೊಸ ಜೀವಗಾಳಿ ಮತ್ತು ಇತಿಹಾಸದಲ್ಲಿಯೆ ಈ ತರಹದ ಅಭಿವೃದ್ಧಿಯಾಗಲಿ, ಸರ್ವಜನರ ಏಳಿಗೆಯಾಗಲಿ ಎಂದೂ ಆಗಿರಲಿಲ್ಲ. ಈಗಿನಷ್ಟು ಕಡಿಮೆ ಕೊಳಕು ನಮ್ಮ ಇತಿಹಾಸದಲ್ಲಿ ಹಿಂದೆಂದೂ ಇರಲಿಲ್ಲ. ಹಾಗೆಯೇ ಕೆಟ್ಟ ಪರಿಣಾಮಗಳಲ್ಲಿ, ಬೇರೆಯವರ ಶೋಷಣೆಗಿಂತ ಸ್ವಜನರಿಂದ ಸ್ವಜನರ ಶೋಷಣೆ ಆಗುತ್ತಿರುವುದು ಮತ್ತು ಅವೈಜ್ಞಾನಿಕ ಅವೈಚಾರಿಕ ವಿದ್ಯಾವಂತರು ಅದಕ್ಕಾಗಿ ಮಠಗಳನ್ನು ಕಟ್ಟುತ್ತಿರುವುದು ಮತ್ತು ಉಪಯೋಗಿಸಿಕೊಳ್ಳುತ್ತಿರುವುದೂ ಒಂದು.

ಆದಿಚುಂಚನಗಿರಿ ಮಠ ಇಂದು ಕರ್ನಾಟಕದಲ್ಲಿನ ಶ್ರೀಮಂತ ಮಠಗಳಲ್ಲಿ ಒಂದು. ನಾಗಮಂಗಲದ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡರು ಹೇಳುವ ಪ್ರಕಾರ- 30 ವರ್ಷಗಳ ಹಿಂದೆ ಬ್ಯಾಂಕ್‌ ಲೆಕ್ಕದಲ್ಲಿ ಕೇವಲ 55 ರೂ ಇದ್ದದ್ದು ಇಂದು ಒಟ್ಟು ವಹಿವಾಟು 1500 ಕೋಟಿಗಳನ್ನು ಮೀರಿದೆ. ಹಾಗೆಯೇ ಇಂದು ಮಠದ ಶಾಲೆಗಳಲ್ಲಿ 3 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇಷ್ಟೆಲ್ಲ ಸಾಧನೆ, ಸೇವೆ ಸಲ್ಲಿಸಿರುವ ಮಠದ ಪ್ರಭಾವವೂ ಒಕ್ಕಲಿಗ ಸಮುದಾಯದಲ್ಲಿ ಕಡಿಮೆಯೇನಲ್ಲ . ಈ ಪ್ರಭಾವಕ್ಕೆ ಇಂದು'ತಪಃಶಕ್ತಿ"ಗಿಂತ ಮಠದ ಬಂಡವಾಳಶಾಹಿಯ ಕೊಡುಗೆಯೇ ಕಾರಣ. ಇನ್ನು ಸ್ಪರ್ಧೆಯನ್ನು ಯಾರು ತಾನೆ ಬಯಸುತ್ತಾರೆ? ಅದಕ್ಕಾಗಿಯೇ ಪರ್ಯಾಯ ಮಠದ ಸ್ಥಾಪನೆ ಇಂದು ಕಂಪನಗಳನ್ನು ಸೃಷ್ಟಿಸಿರುವುದು.

ಇವೆಲ್ಲವನ್ನೂ ಗಮನಿಸಿದರೆ ಅನ್ನಿಸುವುದಿಷ್ಟು : ತಮ್ಮ ನೈಜ ಮೂಲೋದ್ದೇಶವಾದ ಸಾಮಾಜಿಕ ಸುಧಾರಣೆಗಿಂತ, ಆರ್ಥಿಕ ಅಭಿವೃದ್ಧಿಗೇ ಈ ಎಲ್ಲಾ ಮಠಗಳು ಹೆಚ್ಚಿನ ಗಮನ ಹರಿಸಿವೆ. ಕೆಲವು ಮಠಾಧೀಶರುಗಳ ಜೀವನಶೈಲಿ ಬಹುರಾಷ್ಠ್ರೀಯ ಕಂಪನಿಗಳ ಸಿ.ಇ.ಓ.ಗಳ ಜೀವನಶೈಲಿಯನ್ನ್ನು ಹೋಲುತ್ತದೆ. ಸ್ವಾಮೀಜಿಗಳ ವಿದೇಶ ಪ್ರವಾಸಗಳೂ ಹೆಚ್ಚಾಗಿವೆ.

ಇನ್ನು ಬ್ರಾಹ್ಮಣ ಮಠಗಳ ಸುದ್ದಿಗೆ ಬಂದರೆ ಸದಾ ವಜ್ರಕಿರೀಟ, ಪೀಠೋತ್ಸವಗಳಲ್ಲಿ ವ್ಯಸ್ತವಾಗಿ ಬಿಡುವಿಲ್ಲದೆ ಇರುವ ಈ ಮಠಗಳ ಸ್ವಾಮೀಜಿಗಳು- ತಮ್ಮ ಸಮಾಜಕ್ಕೇ ಏನೂ ಮಾಡಿಲ್ಲ, ವಿದ್ಯಾಸಂಸ್ಥೆಗಳಿಲ್ಲ ಎಂದು ಅನಾವಶ್ಯಕವಾದ, ಪುರಾತನವಾದ, 'ಅಪವಿತ್ರ ಆರೋಪ" ಹೊತ್ತಿದ್ದಾರೆ. ದಶಕಗಳ ಹಿಂದೆ ಪರಮ ಪೂಜ್ಯ, ಯದುಕುಲತಿಲಕನ ಪೂಜಾರಿ ಪೇಜಾವರರು ದಲಿತರ ಓಣಿಗಳಿಗೆ ಹೋಗಿಬಂದಿದ್ದನ್ನೆ ದೊಡ್ಡ ಕ್ರಾಂತಿಯೆಂದು ಭಾವಿಸುವ, ಮಹದುಪಕಾರ ಮಾಡಿದೆವೆಂದು ಭಾವಿಸುವರಿಂದ ಬೇರೇನನ್ನೂ ಬಯಸುವುದು ಪ್ರಾಯಶ್ಚಿತ್ತವಿಲ್ಲದ ಪಾಪ ! ಎಲ್ಲಾ ಮಠಾಧೀಶರೂ ಸಮಾಜಸೇವೆಗೊ, ಸುಲಿಗೆಗೊ ನಿಂತಾಗ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಮುಂದಿನ ಮಠಾಧೀಶ, ಪುರೋಹಿತಶಾಹಿ ಪೀಳಿಗೆಯನ್ನು ಉದ್ದರಿಸುವ ಚಿಂತೆ ಮತ್ತು ಈ ವಿಷಯದಲ್ಲಿ ಇಡೀ ಕರ್ನಾಟಕದ ಮಠಾಧೀಶರುಗಳ ವಾರಸತ್ವ ನಮ್ಮ ಪೇಜಾವರರಿಗೆ!

ಇನ್ನು ಮುಂದಿನ ಒಂದೆರಡು ದಿನಗಳಲ್ಲಿ ನಡೆಯುವ ಚುಂಚನಗಿರಿ ಮಠಕ್ಕೆ ಪರ್ಯಾಯವಾದ ಮಠದ ಹುಟ್ಟು , ತದನಂತರ ಘಟಿಸುವ ಘಟನೆಗಳು, ಕನ್ನಡಿಗರನ್ನು ಇಡೀ ದೇಶದಲ್ಲಿಯೇ ಅತಿ ಹೆಚ್ಚು ವೈಚಾರಿಕರನ್ನಾಗಿ ಚಿಂತಕರನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ . ಈ ಸಮಯದಲ್ಲಿ , ಯಾವುದೇ ಮಠಾಧೀಶರಿಗಳಿಗೂ ಡೈವ್‌ ಹೊಡೆಯದೆ, ದೇವಸ್ಥಾನಗಳಿಗೆ ಹರಕೆ ಹೊತ್ತುಕೊಳ್ಳದೆ, ಅಹಿಂಸೆಯಾಧಾರಿತ ಆಂದೋಳನವನ್ನು ಕಟ್ಟಿದ ಮಹಾತ್ಮ ಗಾಂಧಿಯನ್ನು ನೆನೆಸಿಕೊಳ್ಳುವುದು ತುಂಬಾ ಪ್ರಸ್ತುತ.

ಓದುಗರ ಎಲ್ಲಾ ರೀತಿಯ ಆಕ್ಷೇಪಣೆ-ಸಲಹೆಗಳಿಗೆ ಸ್ವಾಗತವಿದ್ದು, ಅವುಗಳನ್ನು ವಿ-ಲೇಖಿಸಿ.

( ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರವು )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X