• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮೂರಲ್ಲೊಂದು ನಾಟಕ : ಕಟ್ಟೆ ಬಳಗದಿಂದ ‘ಉದ್ಭವ’

By Staff
|

* ಮಂಗಳಾ ಕುಮಾರ್‌, ಸ್ಯಾನ್‌ ಹೋಸೆ, ಕ್ಯಾಲಿಫೋರ್ನಿಯಾ

Mangala Kumarಆಗಸ್ಟ್‌ , ಸೆಪ್ಟೆಂಬರ್‌ ತಿಂಗಳಲ್ಲಿ , ಅಕ್ಟೋಬರಿನ ಮೊದಲೆರಡು ವಾರಗಳಲ್ಲಿ ಏನಾಯ್ತು ಗೊತ್ತೇ ?

ಸಿಲಿಕಾನ್‌ ಕಣಿವೇಲಿ ನಾಲ್ಕು ಜನ ಕನ್ನಡಿಗರು ಒಟ್ಟಿಗೆ ಸೇರಿದರೆ ಸಾಕು. ‘ರೀ, ನ್ಯೂಸ್‌ ಕೇಳಿದ್ರಾ, ಐವತ್ತು ಜನ ಸೇರ್ಕೊಂಡು ಉದ್ಭವ ಅಂತ ದೊಡ್ಡ ಡ್ರಾಮ ಮಾಡ್ತಾರಂತೆ’, ‘ಹೊಸ ತರದ ನಾಟಕ ಅಂತ ಸುದ್ದಿ. ಅಗಾಧವಾದ ಸ್ಟೇಜ್‌ ಸೆಟ್ಟಿಂಗ್‌ ಇರತ್ತಂತೆ’ ಎನ್ನುವ ಮಾತುಗಳೇ. ಇದು ಜನಸಾಮಾನ್ಯರ ಮಾತುಕಥೆಯಾದರೆ, ಸ್ವಲ್ಪ ಸೀರಿಯಸ್‌ ಆಗಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯುಳ್ಳವರ ಚರ್ಚೆಯೇ ಬೇರೆ. ‘ಉದ್ಭವ ನಾಟಕದ ವಸ್ತು ಬಗ್ಗೆ ನೀವೇನು ಹೇಳ್ತೀರ?’, ‘ಬಿ.ವಿ. ವೈಕುಂಠರಾಜು ಅವರು ಅಷ್ಟು ಸಮರ್ಥವಾಗಿ ಮೂಡಿಸಿರೋ ಊರಿನ ರಾಜಕೀಯ, ಆ ಪಾತ್ರಗಳ ಕಾಂಪ್ಲೆಕ್ಸಿಟಿ, ಆ ಸನ್ನಿವೇಶಗಳು ಕೆರಳಿಸುವ ವೈಚಾರಿಕತೆ, ಇದನ್ನೆಲ್ಲ ನಾಟಕದಲ್ಲಿ ತೋರಿಸೋದು ಕಷ್ಟ ಅಲ್ಲವಾ?’

ಈ ಸುದ್ದಿಗಳು ರೆಕ್ಕೆ ಪುಕ್ಕ ಕೆದರಿ ಹಾರಾಡಲು ಕಾರಣವಿಲ್ಲದೇ ಇರಲಿಲ್ಲ . ಯಾಕೆ ಅಂತೀರಾ? ಈಗೊಂದು ಮೂರು ವರ್ಷಗಳ ಹಿಂದೆ ‘ಹುಡುಕಾಟ’ ಎನ್ನುವ ಅಸಂಗತ ನಾಟಕವನ್ನು ಪ್ರದರ್ಶಿಸಿ ನಮ್ಮೂರಿನ ರಸಿಕರ ಮನವನ್ನು ಗೆದ್ದ ‘ಕಟ್ಟೆ’ ತಂಡದವರು ಅಕ್ಟೋಬರ್‌ 26 ರಂದು ‘ಉದ್ಭವ’ವನ್ನು ಪ್ರದರ್ಶಿಸುತ್ತಾರೆ ಎನ್ನುವ ಸುದ್ದಿಯನ್ನು ನಮ್ಮೂರಲ್ಲಿ ಯಾರೂ ಚಿಲ್ಲರೆ ವಿಷಯ ಎಂದು ಬದಿಗಿಡುವುದಿಲ್ಲ. ಅದರಲ್ಲೂ ಈ ಸುದ್ದಿಗೆ ನಮ್ಮೂರಿನ ಘಟಾನುಘಟಿಗಳು ಸೇರಿಕೊಂಡು ಮಾಡುತ್ತಿರುವ ನಾಟಕ, ಎಲ್ಲಾ ದುಡ್ಡನ್ನೂ ಭಾರತ ಸಾಕ್ಷರತಾ ಯೋಜನೆಗಾಗಿ ಅರ್ಪಿಸುತ್ತಿದ್ದಾರೆ ಎನ್ನುವ ಬಣ್ಣ ಬಣ್ಣದ ಬಾಲಂಗೋಚಿಗಳು ಅಂಟಿಕೊಂಡಾಗ, ಸುಮ್ಮನಿರಿ ಅಂದರೆ ಹೇಗೆ ಸಾಧ್ಯ ಸಾರ್‌?

ನಾಟಕ ಹೇಗಿತ್ತು ಅಂತೀರಾ?

‘ನಮ್ಮ ಹವ್ಯಾಸಿ ತಂಡದವರ ಉದ್ದೇಶ ಕನ್ನಡದಲ್ಲಿ ಗಂಭೀರ ನಾಟಕಗಳನ್ನು ಪ್ರಯೋಗ ಮಾಡುವುದು. ಧನ ಸಂಪಾದನೆಯಲ್ಲ’ ಎಂದು ನಿರ್ದೇಶಕ ಅಶೋಕ್‌ ಕುಮಾರ್‌ ಅವರ ಕಳಕಳಿಯ ವಿನಂತಿಯಿಂದ ಅಕ್ಟೋಬರ್‌ 26 ರಂದು ಸಾಯಂಕಾಲ 5 ಘಂಟೆಗೆ ಪ್ರದರ್ಶನದ ಆರಂಭವಾಯಿತು. ನಾಟಕ ಆರಂಭವಾದ ಎರಡೇ ನಿಮಿಷಗಳಲ್ಲಿ ರುದ್ರ, ನಂಜುಂಡರು ಊರಿನ ರೂಪುರೇಷೆಗಳ ಮತ್ತು ರಾಗಣ್ಣನ ಕಾರುಬಾರುಗಳ ಒಳನೋಟದ ಪೀಠಿಕೆ ಹಾಕಿ ಪ್ರೇಕ್ಷಕರ ಆಸಕ್ತಿಯನ್ನು ಗರಿಗೆದರಿಸಿದ್ದು ಗಮನೀಯ. ನಂತರ ಸುಮಾರು ಒಂದು ಘಂಟೆಯ ಕಾಲ ನಾಟಕದ ಪೂರ್ವಾರ್ಧದಲ್ಲಿ ಊರಿನ ವಿವಿಧ ಪಾತ್ರಗಳು ಮಿಂಚಿದವು.

ಜನ ಮರುಳೋ ಜಾತ್ರೆ ಮರುಳೋ ಎನ್ನುವ ಗಾದೆ ರಾಗಣ್ಣನಿಗೆ ಗೊತ್ತಿಲ್ಲವೇ? ಊರಿನ ಕುರಿಗಳು ಯಾವ ದಿಕ್ಕಿನಲ್ಲಿ ನಡೆದರೆ ತನಗೆ ಲಾಭ ಎನ್ನುವುದನ್ನು ಸ್ವಾರ್ಥಿಯಾದ ಅವನಿಗೆ ಹೇಳಿಕೊಡಬೇಕೇ? ಆದರೆ ರಾಗಣ್ಣನ ಹೊಸ ಯೋಜನೆ ಅವನ ಹಳೆಯ ಎಲ್ಲಾ ಕುತಂತ್ರಗಳನ್ನೂ ಮೀರಿಸಿದ್ದು.

‘ರಸ್ತೆ ಅಗಲ ಮಾಡ್ತಾರಂತೆ, ಮನೆಗಳೆಲ್ಲ ಕೆಡವ್ತಾರಂತೆ, ಅಂಗಡಿಗಳನ್ನೆಲ್ಲ ಮಟ್ಟಸ ಮಾಡ್ತಾರಂತೆ’ ಅಂತ ರುದ್ರ, ನಂಜುಂಡರನ್ನ ಛೂ ಬಿಟ್ಟಿದ್ದೇ ಸಾಕು. ಶುರುವಾಯ್ತು ನೋಡಿ ಕುರಿಗಳು ಸಾರ್‌ ಕುರಿಗಳು ಹಾಡು. ರುದ್ರ, ನಂಜುಂಡ, ನಿಂಗವ್ವ, ಪಳನಿ, ಪೋಲೀಸಪ್ಪ, ಗೋವಿಂದಪ್ಪ, ಹೋಟೆಲ್‌ ಭಟ್ಟರು, ಸಾಹುಕಾರ ರಾಮಯ್ಯನವರು ಎಲ್ಲ ಒಬ್ಬರಿಗಿಂತ ಒಬ್ಬರು ತಮ್ಮ ತಮ್ಮ ಸಮಸ್ಯೆಗಳನ್ನ, ಲಾಭ ನಷ್ಟಗಳನ್ನ ಎಷ್ಟು ಚೆನ್ನಾಗಿ ಹೇಳಿಕೊಂಡರು ಗೊತ್ತೆ , ನೀವು ನೋಡಬೇಕಿತ್ತು ? ಪ್ರೇಕ್ಷಕರೆಲ್ಲ ಕುರ್ಚಿಯಲ್ಲಿ ನೆಟ್ಟಗೆ ಕೂತು, ಮುಂದೇನು ನಡೆಯತ್ತೆ ನೋಡೋಣ ಅಂತ ರೆಪ್ಪೆಗಳನ್ನೂ ಆಡಿಸದೆ ಗಮನ ಕೊಡಲು ಶುರು ಮಾಡಿದ್ದಕ್ಕೆ ಕಾರಣ ಏನಪ್ಪಾ ಅಂದರೆ- ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕ ಹಾಗೆ ಎಲ್ಲರೂ ರಾಗಣ್ಣನ ತಾಳಕ್ಕೆ ಕುಣಿಯಲು ಶುರು ಮಾಡಿದ ಮೇಲೆ, ಅವರವರ ತೆರನಾಗಿ ರಾಗಣ್ಣನ ಜಾಲ ಹರಡೋದನ್ನ ನೋಡಬೇಡವೆ?

ಆಮೇಲೆ ಸಾಹುಕಾರ ರಾಮಯ್ಯನವರು ಕಾಸು ಬಿಚ್ಚಲು ರೆಡಿ ಅಂತ ಗೊತ್ತಾದ ಮೇಲೆ, ಊರಿನ ಪಡ್ಡೆ ಹುಡುಗರು, ಅವರ ನಾಯಕ ರಾಧಾಕೃಷ್ಣ ಎಲ್ಲರನ್ನೂ ಸೇರಿಸಿಕೊಂಡು, ರಾಗಣ್ಣನ ಮಸಲತ್ತಿನಿಂದ ಗಣೇಶನ ಉದ್ಭವವೂ ಸಮರ್ಪಕವಾಗಿ ಆಗಿ ಹೋಯ್ತು. ತಿಳಿದೋ ತಿಳಿಯದೇನೋ ಪ್ರೇಕ್ಷಕರೂ ಸಹ ಶಾಸ್ತ್ರಿಗಳು ಶುರುಮಾಡಿದ ‘ಗಣೇಶ ಶರಣಂ ಶರಣು ಗಣೇಶ’ ಭಜನೆಯಲ್ಲಿ ಶಾಮೀಲಾದರು. ಈ ಮಧ್ಯದಲ್ಲಿ ಅಚಾನಕವಾಗಿ ಸಿಕ್ಕಿಹಾಕಿಕೊಂಡ ಶಿಲ್ಪಿ ಆಚಾರಿಗಳು ಗಣೇಶನ ಉದ್ಭವದ ಬಗ್ಗೆ ನಿಜ ಹೇಳುತ್ತಿದ್ದಾರೋ ಸುಳ್ಳು ಹೇಳುತ್ತಿದ್ದಾರೋ ಎನ್ನುವ ಬಗ್ಗೆ ಊರಿಗಿಲ್ಲದ ಕಾಳಜಿ ಪ್ರೇಕ್ಷಕರಿಗೆ ತಮಾಷೆ ಅನ್ನಿಸಿತಾದರೂ, ಆ ಸನ್ನಿವೇಶದ ಒಳ ಅರ್ಥದ ಮೊನಚು ತಾಗದೇ ಇರಲಿಲ್ಲ. ಅವರವರ ಊರಿನ ರಾಗಣ್ಣ , ರಾಧಾಕೃಷ್ಣ , ಗಾಂಧೀವಾದಿ ನಾರಾಯಣರಾಯರು, ಊರಿನ ಪುಢಾರಿ ಶಂಕರಪ್ಪನವರ ನೆನಪು ಆ ಕ್ಷಣದಲ್ಲಿ ಎಲ್ಲರನ್ನೂ ಕಾಡಿಸಿದ ಬಗ್ಗೆ ಸಂದೇಹವಿಲ್ಲ.

ಎಲೆಕ್ಷನ್‌ನಲ್ಲಿ ಗೆದ್ದ ರಾಧಾಕೃಷ್ಣ ದೊಡ್ಡಮನುಷ್ಯನಾಗಿ ರಾಗಣ್ಣನನ್ನು ಕಡೆಗಣಿಸಲು ಶುರು ಮಾಡಿದಾಗ, ರಾಗಣ್ಣನ ತಲೆ ಕಾಫಿ, ಟೀ ಇಲ್ಲದೆ ಕೆಲಸ ಮಾಡಲು ನಿರಾಕರಿಸಿತಂತೆ. ಹಾಗಾಗಿ ನಂಜುಂಡ ಪ್ರೇಕ್ಷಕರಿಗೂ ವಿರಾಮಿಸಲು ಹೇಳಿದ. ವಿರಾಮದ ಸಮಯದಲ್ಲಿ ರಾಗಣ್ಣ ಇನ್ನೊಂದು ಕುತಂತ್ರಕ್ಕೆ ಯೋಜನೆ ಹಾಕುತ್ತಿದ್ದ ಬಗ್ಗೆ ಪ್ರೇಕ್ಷಕರಿಗೆ ಅನುಮಾನವೇ ಇರಲಿಲ್ಲ. ಸಮೋಸ ಮೆಲ್ಲುತ್ತ ಸಣ್ಣ ಸಣ್ಣ ಗುಂಪುಗಳಲ್ಲಿ ಮುಂದಿನ ಯೋಜನೆ ಬಗ್ಗೆ ಚರ್ಚೆಗಳು ನಡೆದವು.

ನಾಟಕದ ಉತ್ತರಾರ್ಧ ಸರಸರನೆ ಹಾರಿತು. ರಾಧಾಕೃಷ್ಣನ ಮೇಲೆ ಅಪವಾದ ಹೊರಿಸಿ, ಶಿವಲಿಂಗದ ಉದ್ಭವವನ್ನೂ ನಡೆಸಿ, ರಾಗಣ್ಣ ಮತ್ತೆ ಊರಲ್ಲಿ ಮೆರೆದಿದ್ದು, ರಾಧಾಕೃಷ್ಣ ಊರು ಬಿಟ್ಟು ಹೋಗಿದ್ದು ಎಲ್ಲವೂ ಪ್ರೇಕ್ಷಕರು ನಿರೀಕ್ಷಿಸಿದ್ದ ಸನ್ನಿವೇಶಗಳೇ. ಆದರೆ ಆ ನಿರೀಕ್ಷೆಯನ್ನು ಹುಟ್ಟಿಸಿ, ಬೆಳೆಸಿ, ಬೇರೂರಿಸುವ ಸನ್ನಿವೇಶಗಳ, ವ್ಯಕ್ತಿತ್ವಗಳ ಬಗ್ಗೆ ಪ್ರೇಕ್ಷಕರಿಂದ ನಿರ್ದೇಶಕ ಅಶೋಕ್‌ ಕುಮಾರ್‌ ಮತ್ತು ಅವರ ತಂಡಕ್ಕೆ ಉತ್ತರ ಬೇಕಂತೆ. ಯಾವುದನ್ನೂ ಪ್ರಶ್ನೆ ಮಾಡದೆ ‘ಊರಿನಲ್ಲಿ ನಾನೂ ಒಬ್ಬ’ ಆಗಿಬಿಟ್ಟಿದೀರೋ ಅಥವಾ ಯೋಚನೆ ಮಾಡಿ ಉತ್ತರ ಆಮೇಲೆ ಹೇಳ್ತೀರೊ?

ಭಾರತ ಸಾಕ್ಷರತಾ ಯೋಜನೆಯ ನಿಧಿ ಸಂಗ್ರಹದಂತ ಒಳ್ಳೆಯ ಕೆಲಸಕ್ಕೆ ಕೈಹಾಕಿದ ‘ಕಟ್ಟೆ’ ತಂಡದವರ ಬೆನ್ನು ತಟ್ಟಿ ಕೈಕುಲುಕಿದ ಎಲ್ಲರೂ ನಾಟಕವನ್ನ ಆನಂದಿಸಿದ ಬಗ್ಗೆ ಅನುಮಾನವಿಲ್ಲ. ನಟ, ನಟಿಯರು, ರಂಗ ಸಜ್ಜಿಕೆ, ಹಾಡುಗಾರಿಕೆ, ಪ್ರಸಾದನ, ನೆಳಲು ಬೆಳಕಿನ ವ್ಯವಸ್ಥೆ ಎಲ್ಲಾ ಸೇರಿ ಐವತ್ತು ಜನರನ್ನೂ ಮೀರಿದ ತಂಡದಲ್ಲಿ, ಪ್ರತಿಯಾಬ್ಬರ ಸಾಮರ್ಥ್ಯವನ್ನೂ ಗುರುತಿಸಿ, ಉತ್ತೇಜಿಸಿ ಅವಕಾಶ ನೀಡುವುದು ನಿರ್ದೇಶಕರ ಹೊಣೆ. ನಿರ್ದೇಶಕರಾಗಿ ತಮ್ಮ ಹೊಣೆಗಾರಿಕೆಯನ್ನೂ, ಮತ್ತು ರುದ್ರನ ಪಾತ್ರದಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನೂ ಪ್ರದರ್ಶಿಸಿದ ಅಶೋಕ್‌ ಕುಮಾರ್‌ ಎಲ್ಲರ ಪ್ರಶಂಸೆಗೆ ಪಾತ್ರರಾದರು.

‘ಹವ್ಯಾಸಿ’ ತಂಡ, ‘ನಾಟಕ ಪ್ರಯೋಗ’ ಎಂದೆಲ್ಲ ಹಣೆಪಟ್ಟಿ ಕಟ್ಟಿಕೊಂಡು ಪ್ರೇಕ್ಷಕರ ಪ್ರೋತ್ಸಾಹ ಬಯಸಿದ್ದು ಕಟ್ಟೆ ತಂಡದ ಸೌಜನ್ಯತೆ. ಆದರೆ ಈ ನಾಟಕದ ತಯಾರಿಯಲ್ಲಿ, ಪ್ರದರ್ಶನದಲ್ಲಿ ಕಂಡು ಬಂದಿದ್ದು ಪ್ರಾಮಾಣಿಕತೆ ಹಾಗೂ ಶ್ರದ್ಧೆ. ಹೇಗಾದರೂ ನಡೆಯುತ್ತೆ , ನಮ್ಮೂರಿನ ಜನ ತಾನೆ ಅನ್ನುವ ಅಸಡ್ಡೆಯಲ್ಲ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಿ. ಪಳನಿಯ ಬೀಡಿ ಅಂಗಡಿ, ನಿಂಗವ್ವನ ತರಕಾರಿ ಮಳಿಗೆ, ಸಾಹುಕಾರ ರಾಮಯ್ಯನವರ ರೈಸ್‌ ಮಿಲ್‌, ಎಲ್ಲವೂ ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸಲ್ಪಟ್ಟು ಇಡೀ ನಾಟಕಕ್ಕೆ ಆಧಾರ ನೀಡಿದವು. ‘ಕುರಿಗಳು ಸಾರ್‌, ಕುರಿಗಳು’ ಮುಂತಾದ ಹಾಡುಗಳ ಹಿಮ್ಮೇಳದಿಂದ, ಮತ್ತು ಸಮಯಕ್ಕೆ ಸರಿಯಾಗಿ ನಡೆಸಿದ ನೆಳಲು ಬೆಳಕಿನ ಸಂಯೋಜನೆಯಿಂದ ನಾಟಕದ ಸನ್ನಿವೇಶಗಳನ್ನು ಪ್ರೇಕ್ಷಕರು ಇನ್ನೂ ಚೆನ್ನಾಗಿ ಆನಂದಿಸುವಂತಾಯಿತು.

ನಮ್ಮೂರಿನಲ್ಲಿ ಒಳ್ಳೆಯ ಕಲಾವಿದರೆಂದು ಹೆಸರಾದ ಅಶೋಕ್‌ ಕುಮಾರ್‌ (ರುದ್ರ), ರಾಗಣ್ಣನಾಗಿ ಎಚ್‌.ಸಿ. ಶ್ರೀನಿವಾಸ್‌, ರಾಧಕೃಷ್ಣನಾಗಿ ವಾದಿರಾಜ್‌, ನಿಂಗವ್ವನಾಗಿ ಅಲಮೇಲು ಅಯ್ಯಂಗಾರ್‌ ಅವರು ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡದೆ ಅತ್ಯಂತ ಸಮರ್ಥವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ರಂಜಿಸಿದರು. ಕೆಲವೇ ಮಾತುಗಳ ಸಣ್ಣ ಪಾತ್ರಗಳಾದರೂ ಅಷ್ಟರಲ್ಲೇ ತಮ್ಮ ಪ್ರತಿಭೆಯನ್ನು ತೋರಿದವರು ಮಧುಕಾಂತ್‌ (ಶಾಸ್ತ್ರಿ), ವೆಂಕಟರಮಣ ಭಟ್‌ (ಹೋಟೆಲ್‌ ಭಟ್ಟರು), ಶ್ರೀಕಾಂತ್‌ ದೇಶಪಾಂಡೆ (ಗೋವಿಂದಪ್ಪ) ಮತ್ತು ವಿಶ್ವನಾಥ ಹುಲಿಕಲ್‌ (ನಾರಾಯಣರಾಯರು).

ಕಟ್ಟೆ ತಂಡದವರು ತಮ್ಮ ಪ್ರಯೋಗವನ್ನು ಹೇಗೆ ಉತ್ತಮಗೊಳಿಸಬಹುದು ಎನ್ನುವ ಬಗ್ಗೆ ಕೆಲವು ಸೂಚನೆಗಳು :

  • ರಾಗಣ್ಣನಿಂದ ಹಿಡಿದು ರಾಧಾಕೃಷ್ಣನವರೆಗೆ, ಸಂಭಾಷಣೆಗಳಲ್ಲಿ ನಾಟಕದ ಪೂರ್ವಾರ್ಧದಲ್ಲಿದ್ದ ಚುರುಕುತನ ನಾಟಕದ ಉತ್ತರಾರ್ಧದಲ್ಲಿ ಇರಲಿಲ್ಲ. ಉತ್ತರಾರ್ಧ ಶುರುವಾಗಿ ಹತ್ತೇ ನಿಮಿಷದಲ್ಲಿ ಸಂಭಾಷಣೆಗಳು ಸಪ್ಪೆಯಾಗಿ ಬಿಟ್ಟವು.
  • ಸನ್ನಿವೇಶ ರಚನೆಗಳೂ ಅಷ್ಟೆ. ಪೂರ್ವಾರ್ಧದ ಹೊನಲು ಉತ್ತರಾರ್ಧವನ್ನು ತೇಲಿಸಿ ಕೊನೆಮುಟ್ಟಿಸಿತೇ ಹೊರತು, ನಾಟಕದ ಮುಕ್ತಾಯ ಸಪ್ಪೆ ಎಂದರೆ ತಪ್ಪಿಲ್ಲ.
  • ಕೆಲವು ಪಾತ್ರಗಳೂ ಸಹ ‘ಹಾಡಿದ್ದೇ ಹಾಡಿದ’ ಎನ್ನುವ ‘ಪ್ರೆಡಿಕ್ಟಬಿಲಿಟಿ’ಗೆ ತುತ್ತಾದವು.

ಒಂದು ಕಾದಂಬರಿಯನ್ನು ನಾಟಕಕ್ಕೆ ಅಳವಡಿಸಿಕೊಳ್ಳುವಾಗ ಈ ರೀತಿ ಹಿಡಿತ ತಪ್ಪುವ ಸಾಧ್ಯತೆ ಇದ್ದೇ ಇರುತ್ತದೆ. ಕಟ್ಟೆ ತಂಡದವರು ತಮ್ಮ ಮುಂದಿನ ಪ್ರಯೋಗದಲ್ಲಿ ನಾಟಕದ ಪೂರ್ವರ್ಧ ಮತ್ತು ಉತ್ತರಾರ್ಧಗಳೆರಡರಲ್ಲೂ ಸಹ ಸಂಭಾಷಣೆ, ಸನ್ನಿವೇಶ ರಚನೆ ಮತ್ತು ಪಾತ್ರಗಳ ಓಟಕ್ಕೆ ಗಮನವಿಟ್ಟು ಕೆಲವು ಸುಧಾರಣೆಗಳನ್ನು ಅಳವಡಿಸಿಕೊಂಡರೆ ಅವರ ಪ್ರಯೋಗ ಇನ್ನೂ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ .

Post your Views

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X