Namma Metro: ಹಳದಿ ಮಾರ್ಗಕ್ಕೆ ಶೀಘ್ರವೇ ಮತ್ತೆರಡು ಹೊಸ ಮೆಟ್ರೋ ಸೇರ್ಪಡೆ: 5 ನಿಮಿಷಕ್ಕೊಮ್ಮೆ ಸಂಚಾರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸುಮಾರು ಒಂದು ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತಿರುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ (Metro Yellow Line) ಮತ್ತೆ ಹೊಸ ಎರಡು ರೈಲುಗಳು ಬರಲಿವೆ. ಶೀಘ್ರವೇ 10 ರೈಲುಗಳೊಂದಿಗೆ ಮಾರ್ಗದಲ್ಲಿ ಕಾರ್ಯಾಚರಣೆ ಆಗಲಿದೆ. ಆಗ ಪ್ರತಿ ಐದು ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚಾರ ನಡೆಸುತ್ತವೆ.
ಆರ್‍ವಿ.ರಸ್ತೆ ಮತ್ತು ಬೊಮ್ಮಸಂದ್ರ ವರೆಗಿನ ಹಳದಿ ಮಾರ್ಗದಲ್ಲಿ ನಿತ್ಯ ಅಂದಾಜು ಒಂದು ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿ 8 ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಈ ರೈಲುಗಳು ಪೀಕ್ ಸಮಯದಲ್ಲಿ 9 ನಿಮಿಷಕ್ಕೆ ಒಂದರಂತೆ, ಸಂಚಾರ ದಟ್ಟಣೆ ಕಡಿಮೆ ಇರುವಾಗ ಸುಮಾರು 15 ನಿಮಿಷಗಳಿಗೆ ಒಂದರಂತೆ ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ಮೇ ತಿಂಗಳಿನಿಂದ ಪ್ರತಿ 5-6 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ನಡೆಸಲಿವೆ ಎಂದು BMRCL ಮೂಲಗಳು ತಿಳಿಸಿವೆ.

ಏಪ್ರಿಲ್ ಮಧ್ಯಕ್ಕೆ 9ನೇ ರೈಲು ಆಗಮನ
ಏಪ್ರಿಲ್ 2ರಂದು ಹಳದಿ ಮಾರ್ಗಕ್ಕಾಗಿ ಡ್ರೈವರ್‌ಲೆಸ್ 9ನೇ ರೈಲು ಸೆಟ್ ಪಶ್ಚಿಮ ಬಂಗಾಳದ ಟಿಟಾಗರ್ ಕಂಪಿಯಿಂದ ಹೊರಟಿದೆ. ಇದು ಏಪ್ರಿಲ್ ಮಧ್ಯಭಾಗಕ್ಕೆ ಬೆಂಗಳೂರು ಮೆಟ್ರೋ ಡಿಪೋಗೆ ಬರಲಿದೆ. ಆ ರೈಲನ್ನು ಹಳಿ ಮೇಲೆ ಇಳಿಸಿ ಜೋಡಿಸುತ್ತಿದ್ದಂತೆ ಪ್ರಾಯೋಗಿಕ ಸಂಚಾರ ಮತ್ತು ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳು ನಡೆಯಲಿವೆ. ಬಳಿಕ ಕೆಲವೇ ದಿನಗಳಲ್ಲಿ ಅಧಿಕೃವಾಗಿ ಕಾರ್ಯಚರಣೆಗೆ ನಿಯೋಜನೆಗೊಳ್ಳಲಿದೆ.
10ನೇ ಡ್ರೈವರ್‌ಲೆಸ್ ರೈಲು ರವಾನೆ ಶೀಘ್ರ
ಇನ್ನೂ ಆರು ಬೋಗಿಗಳ 10ನೇ ಡ್ರೈವರ್‌ಲೆಸ್ ರೈಲು ಸೆಟ್ ಸಹ ಟಿಟಾಗರ್‌ನಿಂದ ಇದೇ ಏಪ್ರಿಲ್‌ನಲ್ಲೇ ಪೂರೈಕೆ ಆಗುವ ಸಾಧ್ಯತೆ ಇದೆ. ಈ ರೈಲು ಹೊತ್ತ ಲಾರಿಗಳು ಇನ್ನೂ ಟಿಟಾಗರ್‌ನಿಂದ ಹೊರಟಿಲ್ಲ. ಶೀಗ್ರವೇ ರವಾನೆ ಆಗಲಿವೆ. ಈ ಎರಡು ರೈಲಗಳ ಪ್ರಯಾಣಿಕ ಕಾರ್ಯಾಚರಣೆಗೆ ಆರಂಭವಾದರೆ ಒಟ್ಟು 10 ರೈಲುಗಳು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಕಾರಿಡಾರ್‌ನಲ್ಲಿ ಸೇವೆ ನೀಡಿದಂತಾಗುತ್ತದೆ. ಆಗ ರೈಲುಗಳ ಆವರ್ತನ ಸಮಯ ಅಂದರೆ ಪ್ರಯಾಣಿಕರಿಗೆ ನಿಲ್ದಾಣದಲ್ಲಿ 5-6 ನಿಮಿಷಕ್ಕೆ ಒಂದರಂತೆ ರೈಲುಗಳು ಲಭ್ಯವಾಗುತ್ತವೆ.
ಈ ಮಾರ್ಗದ ಮೇಲಿನ ಅವಲಂಬನೆ ಏರಿಕೆ
ಎಲೆಕ್ಟ್ರಾನಿಕ್ ಸಿಟಿ ಸೇರಿ ಬೊಮ್ಮಸಂದ್ರವರೆಗೆ ಹಳದಿ ಮಾರ್ಗ ಆರಂಭವಾದ ದಿನವೇ 30 ಸಾವಿರ ಮಂದಿ ಪ್ರಯಾಣ ಮಾಡಿದ್ದರು. ಅಲ್ಲಿಂದ ಈವರೆಗೆ ನಿತ್ಯ 90 ರಿಂದ ಒಂದು ಲಕ್ಷ ಪ್ರಯಾಣಿಕರು ನಿತ್ಯ ಸಂಚಾರ ಮಾಡುತ್ತಾರೆ. ಹಳದಿ ಮಾರ್ಗವು ಸಿಲ್ಕ್‌ಬೋರ್ಡ್ ಮಾರ್ಗವಾಗಿ ಸಾಗುತ್ತದೆ. ಹೀಗಾಗಿ ಮೆಟ್ರೋ ಮೇಲಿನ ಪ್ರಯಾಣಿಕರ ಅವಲಂಬನೆ ಹೆಚ್ಚುತ್ತಿದೆ.
ಇದೇ ವರ್ಷಾಂತ್ಯಕ್ಕೆ ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರೆಗಿನ ನೀಲಿ ಮಾರ್ಗವು ತೆರೆಯುವ ನಿರೀಕ್ಷೆ ಇದೆ. ಅದು ಸಾಧ್ಯವಾದಲ್ಲಿ ಹೊರ ವರ್ತುಲರಸ್ತೆ (ORR) ಮೂಲಕ ಸಾಗುವವರ ಪೈಕಿ ಬಹುತೇಕರು ಮೆಟ್ರೋ ಹಳದಿ ಮತ್ತು ನೀಲಿ ಮಾರ್ಗ ಏರುತ್ತಾರೆ. ಭವಿಷ್ಯದ ದೃಷ್ಟಿಯಿಂದ ತ್ವರಿತವಾಗಿ ಇನ್ನಷ್ಟು ರೈಲುಗಳ ಪೂರೈಕೆ ಆಗುವುದು ಅಗತ್ಯವಾಗಿದೆ.












Click it and Unblock the Notifications