ಬೆಂಗಳೂರು ಸ್ವಚ್ಛತೆಗೆ ಬಿಗ್ ಪ್ಲಾನ್: ವಾರಕ್ಕೆ 10 ಕಿ.ಮೀ ರಸ್ತೆ ಕ್ಲೀನ್ ಮಾಡಲು ಪಾಲಿಕೆ ನಿರ್ಧಾರ
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರಕ್ಕೆ ಕನಿಷ್ಠ 10 ಕಿ.ಮೀ.ಯಂತೆ ಇಡೀ ನಗರ ಸ್ವಚ್ಛತೆಗೆ ಮುಂದಾಗಿದೆ. ವಿಶೇಷ ಸ್ವಚ್ಛತಾ ಅಭಿಯಾನ ಎಲ್ಲ ಐದು ಪಾಲಿಕೆಗಳ ವ್ಯಾಪ್ತಿಯಲ್ಲೂ ಚಾಲ್ತಿಯಲ್ಲಿದೆ. ನಿರಂತರ ಸಾಮೂಹಿಕ ಸ್ವಚ್ಛತೆಯಿಂದ ನಗರ ನೈರ್ಮಲ್ಯ ಕಾಪಾಡಲು ಸಹಕಾರಿ ಅಗಲಿದೆ ಎಂದಿರುವ ಆಯುಕ್ತರಾದ ರಾಜೇಂದ್ರ ಚೋಳನ್ ಅವರು, ಸದ್ಯ 4.05 ಕಿಲೋಮೀಟರ್ ಸ್ವಚ್ಛತೆ ನಡೆಸಲಾಗಿದೆ. ಅದಕ್ಕಾಗಿ ನೂರಾರು ಸಿಬ್ಬಂದಿ, ಹತ್ತಾರು ಟ್ರ್ಯಾಕ್ಟರ್ ಬಳಕೆ ಆಗಿದೆ. ಒಟ್ಟು 32 ಲೋಡ್ ತ್ಯಾಜ್ಯ ತೆರವುಗೊಳಿಸಿದ್ದಾಗಿ ಅವರು ವಿವರಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಸ್ವಚ್ಛತೆ ಕಾಪಾಡುವ ಹಾಗೂ ನಾಗರಿಕರಿಗೆ ಆರೋಗ್ಯಕರ ಪರಿಸರ ಒದಗಿಸುವ ಉದ್ದೇಶದಿಂದ ವಿವಿಧ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಇಂದು ಕೈಗೊಳ್ಳಲಾಗಿದೆ135 ಜನ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸಾಮೂಹಿಕ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 3 ಜೆಸಿಬಿ, 27 ಟ್ರ್ಯಾಕ್ಟರ್‌ಗಳ ಬಳಕೆಯೊಂದಿಗೆ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ ಅಪಾರ ತ್ಯಾಜ್ಯ ತೆರವುಗೊಳಿಸಿ ವಿಲೇವಾರಿ ಮಾಡಿದ್ದಾಗಿ ತಿಳಿಸಿದ್ದಾರೆ.

ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿನ ಬೇರೆ ಬೇರೆ ಭಾಗಗಳಲ್ಲಿ ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ನಿಯಮಿತ ಸ್ವಚ್ಛತಾ ಕಾರ್ಯಗಳ ಜೊತೆಗೆ ವಿಶೇಷ ಕಾರ್ಯಾಚರಣೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ನಗರದಲ್ಲಿ ಗುರುತಿಸಲ್ಪಟ್ಟ ಬ್ಲ್ಯಾಕ್ ಸ್ಪಾಟ್ ಪ್ರದೇಶಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದಕ್ಕೆ ನಗರ ಪಾಲಿಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಸಾರ್ವಜನಿಕರು ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೇ, ನಿಗದಿತ ಸ್ಥಳಗಳಲ್ಲಿ ಮಾತ್ರ ತ್ಯಾಜ್ಯ ವಿಸರ್ಜಿಸುವ ಮೂಲಕ ನಗರ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು. ಇಂದು ಭಾನುವಾರ ನಡೆದ ವಿಶೇಷ ಸ್ವಚ್ಛತಾ ಕಾರ್ಯಾಚರಣೆಗಳು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ ನಗರ ಕ್ಷೇತ್ರಗಳ ಪ್ರಮುಖ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಎಲ್ಲೆಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ
1) ಚಾಮರಾಜಪೇಟೆ ಕ್ಷೇತ್ರದ ಬಿಬಿಎಂಪಿ ಸಮುದಾಯ ಭವನ, 9ನೇ ಅಡ್ಡರಸ್ತೆ, ದೇವರಾಜ್ ಅರಸ್ ನಗರದಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.
2) ಚಿಕ್ಕಪೇಟೆ ಕ್ಷೇತ್ರದ 2 : ವಾರ್ಡ್ 118 & 119 ಕಲಾಸಿಪಾಳ್ಯ 1ನೇ, 2ನೇ, 3ನೇ ಮುಖ್ಯರಸ್ತೆ, ಕುಂಬಾರಗುಂಡಿ ಮತ್ತು ಸುತ್ತಮುತ್ತ ರಸ್ತೆಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
3) ಗಾಂಧಿನಗರ ಕ್ಷೇತ್ರದ ವಾರ್ಡ್ 96 ರಲ್ಲಿ ಎಂ.ಇ.ಟಿ ಸ್ಟ್ರೀಟ್ ಮತ್ತು ಅಡ್ಡರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು.
4) ಶಾಂತಿನಗರ ಕ್ಷೇತ್ರದ ವಾರ್ಡ ಸಂಖ್ಯೆ: 111 ಶಾಂತಲನಗರ, ಚರ್ಚ್ ಸ್ಟ್ರೀಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
5) ಶಿವಾಜಿನಗರ ಕ್ಷೇತ್ರದಲ್ಲಿ ಚಿನ್ನಪ್ಪ ಗಾರ್ಡನ್, ಲಿಂಕ್ ರೋಡ್ ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
6) ಸಿ.ವಿ. ರಾಮನ್ ನಗರ ಕ್ಷೇತ್ರದ ವಾರ್ಡ್ 113 ರಲ್ಲಿ ಹೊಯ್ಸಳನಗರದಿಂದ ಹಳೆಯ ಮದ್ರಾಸ್ ರಸ್ತೆ ಮೂಲಕ ದೊಮ್ಮಲೂರು ಫ್ಲೈಓವರ್ ಹಾಗೂ 100 ಅಡಿ ರಸ್ತೆಯವರೆಗೆ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು.
ಸಿಬ್ಬಂದಿ, ಪೌರ ಕಾರ್ಮಿಕರು, ಅಧಿಕಾರಿಗಳೂ ಭಾಗಿ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭಿಯಾನ ನಡೆದಿದೆ. ನಡೆಯಿತು. ಒಟ್ಟು 4.05 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 3 ಜೆಸಿಬಿ ಯಂತ್ರಗಳು ಮತ್ತು 27 ಟ್ರ್ಯಾಕ್ಟರ್‌ಗಳ ಬಳಕೆಯೊಂದಿಗೆ ದಿಂದ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 32 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಗುರುತಿಸಲ್ಪಟ್ಟಿದ್ದ 07 ಬ್ಲ್ಯಾಕ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಯಿತು.
ಈ ಕಾರ್ಯಾಚರಣೆಯಲ್ಲಿ135 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಭಾಗವಹಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದಿಂದ ಅಭಿಯಾನ ಪೂರ್ಣಗೊಂಡಿತು. ಸಾಮೂಹಿಕ ಸ್ವಚ್ಛತಾ ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸಂಬಂಧಿತ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಡಿಜಿಎಂಗಳು, ಎ.ಜಿ.ಎಂ ಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದು ಕಂಡು ಬಂತು.












Click it and Unblock the Notifications