• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿವಿಜಿಯವರ ಮುಕ್ತಕಗಳ ಮೆರುಗು.. - ಭಾಗ 2

By Super
|

ಮಾನವೀಯತೆ ಎಂದರೆ ನನ್ನ ಅರ್ಥದಲ್ಲಿ ‘ತಮ್ಮ ಸುತ್ತ ಮುತ್ತಲ ಜಡ ಜೀವಜಂತುಗಳ ಆಗುಹೋಗುಗಳಿಗೆ ಸ್ಪಂದಿಸುವ ಕ್ರಿಯೆ, ಸಹೃದಯತೆ’. ಇದಕ್ಕೆ ಹಲವಾರು ಅರ್ಥ ಇದೆ. ಇದರ ಬಗ್ಗೆ ಆಳವಾದ ಅಧ್ಯಯನ ಆಗಿದೆ, ಆಗುತ್ತಿದೆ. ಮುಂದೆ ಸಹ ಆಗುತ್ತದೆ. ಈ ಕ್ರಿಯೆಯಲ್ಲಿ ಉದಾತ್ತವಾದ ಗುಣವನ್ನು ನೋಡುವುದು, ಇತರರಿಗೆ ಮಾದರಿಯಾಗಿ ನಡೆದುಕೊಳ್ಳುವ ಸ್ವಭಾವವೇ ಮೌಲ್ಯ.

ಡಿ.ವಿ.ಜಿಯವರ ಪ್ರತಿಯಾಂದು ಪದ್ಯ ಇದನ್ನು ಸಾರಿ ಸಾರಿ ಹೇಳುತ್ತದೆ. ಆದ್ದರಿಂದ ಇದು ‘ಬಡವರ ಭಗವದ್ಗೀತೆ’ ಎಂದರೆ ತಪ್ಪಾಗಲಾರದು. ಇಲ್ಲಿ ಬಡವರು ಎಂದರೆ, ಆರ್ಥಿಕವಾಗಿ ಬಡತನವಲ್ಲ. ಬದಲಿಗೆ ಸಂಸ್ಕೃತ ಭಾಷೆ ಹಾಗು ಅರ್ಥಗಳ ಬಡತನ. ಇಲ್ಲಿ ಈ ವಸ್ತುವನ್ನು ನೇರವಾಗಿ ನಿರೂಪಿಸಿರುವ ಕೆಲವು ಪದ್ಯಗಳನ್ನು ನನಗೆ ಸರಿ ಕಂಡಂತೆ ಆರಿಸಿ, ವಿವರಿಸಲು ಪ್ರಯತ್ನಿಸಿದ್ದೇನೆ.

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು।

ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು।।

ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ।

ಮಾನವತೆ ನಿಂತಿಹುದು- ಮಂಕುತಿಮ್ಮ ।। 410 ।।

ನಾಡು, ನುಡಿ, ರಾಜರು, ರಾಜ ಸಾಮ್ರಾಜ್ಯಗಳು, ಗುರು ಸ್ಥಾನಗಳು ಬೇರೆ ಬೇರೆ ಧರ್ಮಗಳು ಕಾಲ ಪ್ರವಾಹದಲ್ಲಿ ಕಣ್ಣಿಗೆ ಕಾಣಿಸದ ರೀತಿ ಕೊಚ್ಚಿ ಹೋಗಿದೆ. ಆದರೆ ಮಾನವತೆ ಇಂದಿಗೂ ಸಹ ಅಚಲವಾಗಿ ನಿಂತಿದೆ.

ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ?।

ತಂಗದಿರನೆಸಕ ಕಣ್ಗಮೃತ, ಕಣಜಕದೇಂ।।

ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ।

ಪೊಂಗುವಾತ್ಮವೆ ಲಾಭ- ಮಂಕುತಿಮ್ಮ ।। 498 ।।

ಸಂಗೀತದ ಇಂಪಿನಿಂದ ಹೊಟ್ಟೆ ತುಂಬುವುದಿಲ್ಲ. ಚಂದ್ರನ ಬೆಳಕಿಂದ ಕಣಜಕ್ಕೆ ಉಪಯೋಗವೇನು? ಇವು ಮನಸ್ಸಿಗೆ ಆನಂದವನ್ನು ತರುತ್ತದೆ. ಆದರೆ ಭೌತಿಕ ಪ್ರಯೋಜನವೇನಿಲ್ಲ. ಹಾಗೆ ಒಳ್ಳೆಯ ಕೆಲಸವನ್ನು ಮಾಡಿ ಅದರಿಂದ ಫಲವೇನು? ನನಗಾಗುವ ಲಾಭವೇನು? ಎಂದು ಕೇಳುವುದು ಸರಿಯಲ್ಲ. ಒಳ್ಳೆಯ ಕೆಲಸವನ್ನು ಅಂಗಡಿಯ ವ್ಯಾಪಾರದಂತೆ ಒಂದಕ್ಕೆ- ಇನ್ನೊಂದು ಎಂದು ಮಾಡಲಾಗದು. ನಮ್ಮ ಕಣ್ಣಿಗೆ ಬೀಳದೆ ಇರುವ, ಆದರೆ ಆತ್ಮಕ್ಕೆ ಆಗುವ ಒಂದು ಸಂಸ್ಕಾರವೇ ಇದರಿಂದ ಆಗುವ ಲಾಭ.

ಒರೆಹಚ್ಚಿ ನೋಡಿ, ಡಿವಿಜಿಯವರ ಈ ಮಾತುಗಳ ದಿಟ ಗೊತ್ತಾಗುತ್ತದೆ

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು।

ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ।।

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ।

ಜಸವು ಜೀವನಕೆ ಮಂಕುತಿಮ್ಮ ।। 522 ।।

ಹೊಸ ಉಪಾಯಗಳೊಡನೆ, ವಿಚಾರಗಳೊಡನೆ ಹಳೆ ನೆನಪು, ಅನುಭವ ಹಾಗು ಸಿದ್ಧಾಂತಗಳು ಸೇರಿದರೆ ಜೀವನ ಸಮೃದ್ಧಿಯಾಗುತ್ತದೆ. ಹಿಂದಿನ ಜನಾಂಗದ ವಿಚಾರ, ದಾರ್ಶನಿಕತೆಗಳೊಂದಿಗೆ ನವ ವಿಚಾರ ಸೇರಿಸಿ ಜನ ಜೀವನಕ್ಕೆ ಯಶಸ್ಸನ್ನು ತಂದುಕೊಡುವುದು ಇಂದಿನ ಯುವ ಪೀಳಿಗೆಗೆ ಒಂದು ಕಿವಿ ಕಿವಿಮಾತು, ಡಿ.ವಿ.ಜಿಯವರಿಂದ.

ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ।

ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ।।

ಎಲೆ ನೀನು; ವಿಶ್ವವೃಕ್ಷದೊಳ್‌ ಎಲೆಯಾಳೊಂದು ನೀಂ ।

ತಿಳಿದದನು ನೆರವಾಗು- ಮಂಕುತಿಮ್ಮ ।। 563 ।।

ಈ ವಿಶ್ವ ವೃಕ್ಷದಲ್ಲಿ ನಾವೆಲ್ಲ ಬಿಳಲಲ್ಲ, ಬೇರಲ್ಲ, ಮುಂಡ ಕಾಂಡಗಳಲ್ಲ, ಚಿಗುರಲ್ಲ, ಹೂವಲ್ಲ, ಕಾಯಿ ಹಣ್ಣಲ್ಲ, ಯಾವ ಒಂದು ದೊಡ್ಡ ಅಂಗವೂ ಅಲ್ಲ- ಬರಿ ಒಂದು ಎಲೆ ಮಾತ್ರ. ಇದನ್ನು ಅರಿತು ಲೋಕ ಕಲ್ಯಾಣದಲ್ಲಿ ನೆರವಾಗು. ಗಿಡದ ಬೆಳವಣಿಗೆಯಲ್ಲಿ ಎಲೆಯ ಪಾತ್ರ ಹಿರಿದು. ಎಲೆ ತರಿದು ಹಾಕಿದರೆ ಗಿಡ ಚರ್ಮ ಸುಲಿದ ಮನುಷ್ಯನಂತಾಗಿ ಸಾಯುತ್ತದೆ. ಈ ವಿಶ್ವ ವೃಕ್ಷಕ್ಕೆ ಸಾವಿಲ್ಲದಿದ್ದರೂ ಅದರ ಪೋಷಣೆ ಪ್ರತಿಯಾಬ್ಬ ವ್ಯಕ್ತಿಗೂ ಬೇಕು.

ಇದಕ್ಕೆ ಪೂರಕವಾದ ಇನ್ನೊಂದು ರಚನೆ ಡಿ.ವಿ.ಜಿಯವರಿಂದ ಸಹ ಇದೇ ತತ್ತ್ವವವನ್ನು ಪ್ರತಿಪಾದಿಸುತ್ತದೆ.

ವನಸುಮದೊಲೆನ್ನ ಜೀ

ವನವು ವಿಕಸಿಸುವಂತೆ

ಮನವನನುಗೊಳಿಸು ಗುರುವೇ- ಹೇ ದೇವ।।

......

ಉಪಕಾರಿ ನಾನು ಎ।

ನ್ನುಪಕೃತಿಯು ಜಗಕೆಂಬ।

ವಿಪರೀತ ಮತಿಯನುಳಿದು।।

......

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ।

ವೈರ ಹಗೆತನ ಬೇಡ, ಹಿರಿ ನಿಯಮವಿರಲಿ।।

ವೈರಾಗ್ಯ ಕಾರುಣ್ಯಮೇಳನವೆ ಧೀರತನ।

ಹೋರುದಾತ್ತತೆಯಿಂದ- ಮಂಕುತಿಮ್ಮ ।। 574 ।।

ತಿಮ್ಮ ಗುರು ಧೈರ್ಯವಾಗಿ ಹೋರಾಡು ಎಂದು ಹೇಳಿರುವುದು- ಒಬ್ಬನೇಯಾದರೂ ಸಹ ನ್ಯಾಯಕ್ಕಾಗಿ ಹೋರಾಡು. ಕೋರ್ಟಿನ ಕೇಸು ಗೆಲ್ಲಲೇಬೇಕೆಂಬ ಮೊಂಡುತನ ಸಲ್ಲ. ಹೋರಾಡುವುದರಿಂದ ತನಗೆ ಆಗುವ ಲಾಭವನ್ನು ಗಣನೆಗೆ ತೆಗೆದುಕೊಳ್ಳದೆಲೆ ಹೋರಾಡುವುದು ವೈರಾಗ್ಯ, ಬೇರೊಬ್ಬರಿಗೆ ಹಿಂಸೆ ಕೊಡದ ಉದ್ದೇಶದಿಂದ ಹೋರಾಡುವುದು ಕಾರುಣ್ಯ. ಈ ರೀತಿ ಉನ್ನತ ನಿಯಮಗಳ ಚೌಕಟ್ಟಿನಲ್ಲಿ ಹೋರಾಡುವುದು ಉದಾತ್ತವಾದ ಮೌಲ್ಯ.

ಮುಟ್ಟಿ ನೋಡವನ ಮೈ ಕಟ್ಟು ಕಬ್ಬಿಣ।

ಗಟ್ಟಿತನ ಗರಡಿ ಫಲ- ಮಂಕುತಿಮ್ಮ ।।588।।

ಗರಡಿ ಮನೆಗೆ ಸೇರಿದ ವ್ಯಕ್ತಿ- ಜಟ್ಟಿ, ಪ್ರತಿದಿನ ಸಾಮು ಮಾಡಿ, ಕಷ್ಟಪಟ್ಟು ಕುಸ್ತಿ ಮಾಡಿ ಬಲ ಪಡೆಯುತ್ತಾನೆ. ಆದರೆ ಒಂದು ದಿನ ಜಟ್ಟಿ ಕಾಳಗದಲ್ಲಿ ಸೋತುಹೋದರೆ, ಅವನು ಮಾಡಿದ ಸಾಮು ಎಲ್ಲ ವಿಫಲವೆ? ಅವನ ಮೈಕಟ್ಟು ಮುಟ್ಟಿ ನೋಡಿದರೆ, ಅದು ಕಬ್ಬಿಣದಂತೆ ಗಟ್ಟಿಯಲ್ಲವೆ. ಅವನು ಬೆಳೆಸಿಕೊಂಡ ಶಕ್ತಿಯನ್ನು , ಇನ್ನೊಬ್ಬನೊಡನೆ ಸೆಣಸಿದಾಗ ಆಗುವ ಫಲಿತಾಂಶದಿಂದ ಅಳೆಯಬಾರದು. ಅವನ ಅಭ್ಯಾಸದ ಫಲವನ್ನು ಅವನ ದೇಹಕ್ಕೆ ಬಂದ ದಾರ್ಢ್ಯದಿಂದ ಅಳೆಯಬೇಕು. ಹಾಗೆಯೇ ಜೀವನವನ್ನು ಅದಕ್ಕೆ ಆದ ಸಂಸ್ಕಾರದಿಂದ ನೋಡಬೇಕೇ ಹೊರತು ಅದು ಗಳಿಸಿದ ಫಲದಿಂದಲ್ಲ .

ಜೀವನ ದರ್ಶನ : ಭಗವಂತ ಸಾಹೇಬ, ನಾವೇ ಕುದುರೆಗಳು

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ।

ಕುದುರೆ ನೀನ್‌, ಅವನು ಪೇಳ್ದಂತೆ ಪಯಣಿಗರು।।

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು।

ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ ।। 600।।

ಕುದುರೆಗೊಬ್ಬ ಸಾಹೇಬ. ಸಾಹೇಬ ಹೇಳಿದಂತೆ ಕುದುರೆ ಓಡುತ್ತದೆ.

ನಮ್ಮ ಬದುಕು ಸಹ ಜಟಕಾ ಬಂಡಿಯಂತೆ. ಈ ಜಗತ್ತಿನ ನಿಯಾಮಕನು ಹೇಳಿದ ಕಡೆ ನಾವು ಹೋಗಬೇಕು. ಹಾಗೆ ನಮ್ಮಂತಹ ಪಯಣಿಗರು ಕೂಡ. ಗಾಡಿಗೆ ಕಟ್ಟಿದ ಕುದುರೆ ತನ್ನ ಶಕ್ತಿಯಿದ್ದಷ್ಟು ದೂರ ಹೋಗುತ್ತದೆ. ಮುಂದೆ ಹೋಗಲು ಸಾಧ್ಯವಾಗದೆ ಹೋದರೆ ಕೆಳಗೆ ಕುಸಿಯುತ್ತದೆ. ಆದರೆ ಸತ್ತೇನೂ ಹೋಗುವುದಿಲ್ಲ . ನೆಲವೇ ಅದಕ್ಕೆ ಆಧಾರ. ಚೇತರಿಸಿಕೊಂಡು ಮುಂದೆ ಹೋಗಬಹುದು.

ಇದೇ ರೀತಿಯ ಮೌಲ್ಯದ ಮೇಲೆ ಕೆಲವು ಪದ್ಯಗಳನ್ನು ಬರೆದಿದ್ದಾರೆ. ಕೆಲವು ಕಡೆ ಹೇಳುತ್ತಾರೆ..

ವಿಧಿಯಗಸ ನೀಂ ಕತ್ತೆಯು- ಮಂಕುತಿಮ್ಮ ।।

ತಿರುಗಿಸಲಿ ವಿಧಿರಾನಿಚ್ಚೆಯಿಂ ಯಂತ್ರವನು।

ಸ್ಥಿರ ಚಿತ್ತ ನಿನಗಿರಲಿ- ಮಂಕುತಿಮ್ಮ।।

ಜವರಾಯ ಸಮವರ್ತಿ- ಮಂಕುತಿಮ್ಮ ।।

ಇಲ್ಲಿ ಕನಕದಾಸರ ನಳ- ಚರಿತ್ರೆಯಲ್ಲಿ ಬರುವ ಸನ್ನಿವೇಶ ಬಹಳ ಪ್ರಸ್ತುತ. ವಿಧಿ ನಳ ಮಹಾರಾಜನನ್ನು ಯಾವ ರೀತಿಯಲ್ಲಿ ಆಟವಾಡಿಸಿದ ಎಂಬುದು ನಮಗೆ ಗೊತ್ತಿರುವ ವಿಚಾರ. ನಳ ಪಂಚೆಯನ್ನು ಹಕ್ಕಿ ಹಿಡಿಯಲು ಹಾಸಿ ಕಳೆದುಕೊಂಡ ಸನ್ನಿವೇಶ. ದಮಯಂತಿ ಮಹಾರಾಜನ ಅವಸ್ಥೆಯನ್ನು ನೋಡಿ ಸಹಿಸಲಾಗದೆ ಗೊಳೊ ಎಂದು ಅಳುತ್ತಾಳೆ. ಆಗ ನಳ ಮಹಾರಾಜ ಹೇಳುತ್ತಾನೆ-

ವಿಧಿ ಬರೆದ ಬರೆಹವ ತಪ್ಪಿಸಲು ಹರಿ ಹರ ವಿರಂಚಾದ್ಯರಿಗೆ ಸಾಧ್ಯವೆ?

ಅಕಟಕಟಾ ಇನ್ನು ನಮ್ಮ ಪಾಡೇನು ಎಂದನಾ ನಳ ದಮಯಂತಿಗೆ।।

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।

ದೊರೆತುದ ಹಸಾದವೆಂದುಣ್ಣು ಗೊಣಗಿಡದೆ।।

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ।

ಹೊರಡು ಕರೆ ಬರಲ್‌ ಅಳದೆ- ಮಂಕುತಿಮ್ಮ ।। 601।।

ನಮ್ಮ ಮನೋಭಾವ ಹೇಗಿರಬೇಕು ಎಂದರೆ, ನಮ್ಮ ಭಾಗಕ್ಕೆ ಯಾವ ಕೆಲಸ ಬಂದರೂ, ಅದು ಅವನ ಕೆಲಸ ಎಂದು ಮಾಡಿದರೆ, ಸಣ್ಣ ಅಥವಾ ದೊಡ್ಡ ಕೆಲಸ ಎನ್ನುವ ಭಿನ್ನಾಭಿಪ್ರಾಯವಿರುವುದಿಲ್ಲ . ಎಲ್ಲಾ ಆತನಿಗೆ ಪ್ರೀತಿ ಎಂದು ಶ್ರದ್ಧೆಯಿಂದ ಮಾಡಿದರೆ ಅದರಲ್ಲಿ ಹಿರಿತನವಾವುದು ಅಥವಾ ಕಿರಿತನವಾವುದು. ದೊರೆತುದು ಪ್ರಸಾದ. ಗೊಣಗಾಟ ಬೇಡ. ಕೆಲಸ ಮುಗಿಯಿತು ಹೊರಡು ಎಂಬ ಜವರಾಯನ ಕರೆ ಬಂದಾಗ ಅಳದೆ, ಹೊರಡಬೇಕು.

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ?

ಮದ್ದು ತಡೆವುದೆ ಮುಪ್ಪು ಕಳ್ಳನವೋಲಮರೆ ?।।

ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ ?।

ಸಿದ್ಧವಿರು ಸೈರಣೆಗೆ -ಮಂಕುತಿಮ್ಮ ।। 635 ।।

ಬೆಟ್ಟ , ಗುಡ್ಡ ಕಣಿವೆ ಇತ್ಯಾದಿ ಪ್ರಕೃತಿ . ಗುದ್ದಲಿಯಿಂದ ಇದನ್ನು ಸಮಮಾಡಲಾದೀತೆ ? ಔಷಧಿಯಿಂದ ಮುಪ್ಪು ತಡೆಗಟ್ಟಲಾದೀತೆ ? ಮುಪ್ಪು ನಮಗರಿವಿಲ್ಲದೆಯೆ ಬಂದು ಅಮರಿಕೊಳ್ಳುತ್ತದೆ. ಯುದ್ಧ ಎಲ್ಲರಿಗೂ ಸಹ ತೊಂದರೆಯೆ ವಿನಃ ಶಾಂತಿಗಲ್ಲ. ಆದ್ದರಿಂದ ಅನಿವಾರ್ಯದ ಕೆಲಸದಲ್ಲಿ, ವಿಷಯದಲ್ಲಿ ತಾಳ್ಮೆ ಅತ್ಯಗತ್ಯ. ದೊಡ್ಡವರು ಹೇಳಿದಂತೆ ‘ ಕ್ಷಮಯಾ ಧರಿತ್ರಿ...’ಎಂಬ ಗುಣ ಇಲ್ಲಿ ಉಚಿತ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।।

ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।

ಎಲ್ಲರೊಳಗೊಂದಾಗು -ಮಂಕುತಿಮ್ಮ ।। 789 ।।

ದೊಡ್ಡ ಬೆಟ್ಟದ ಕೆಳಗಿನ ಹುಲ್ಲು ದೀನತೆಯ ಪ್ರತೀಕ. ನಾನು ಬೆಟ್ಟದಷ್ಟು ದೊಡ್ಡವನಲ್ಲ, ನಾನು ಮಾಡುವ ಕೆಲಸ ಬೆಟ್ಟದಷ್ಟು ದೊಡ್ಡದಲ್ಲ ಎಂಬ ಅರಿವು ಜೀವನ ಸಫಲತೆಗೆ ದಾರಿ. ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ನಾಣ್ಣುಡಿಗೆ ಹೊರತಾಗಬೇಕು. ಕಷ್ಟಗಳನ್ನು ಕಲ್ಲು ಹೃದಯ ಮಾಡಿಕೊಂಡು ಎದುರಿಸು. ದೀನ ದುರ್ಬಲರಿಗೆ ಒಳ್ಳೆಯವನಾಗಿರು. ಲೋಕದ ವಿಚಾರದಲ್ಲಿ ಸಹಾನುಭೂತಿಯುಳ್ಳವನಾಗಿರು.

ಇಲ್ಲಿ ನನ್ನ ಪ್ರಯತ್ನ ಮೇಲೆ ಹೇಳಿರುವ ಹಾಗೆ ‘ಡೆಮೋ’ಕೊಡುವ ಕೆಲಸ. ಇದೊಂದು ಸಾಗರ. ನಮ್ಮ ಬೊಗಸೆಯ ಆಳದಂತೆ ನಮಗೆ ಲಬ್ಧ. ಜೀವನ ದರ್ಶನದ ಪ್ರಯಾಗಕ್ಕೆ ಓಂ ಶ್ರೀ ಗಣಪತಿ, ಮೊದಲ ಮೆಟ್ಟಿಲು. ಇದನ್ನು ಓದಿದ ಯಾರಿಗಾದರು, ಮಂಕುತಿಮ್ಮನ ಕಗ್ಗದ ಬಗ್ಗೆ, ಜೀವನ ಸಮ್ಯಕ್ದರ್ಶನದ ಬಗ್ಗೆ ಕುತೂಹಲ ಮೂಡಿ, ಮಂಕುತಿಮ್ಮನ ಕಗ್ಗವನ್ನು ಕೊಂಡು ಓದಿದರೆ ನನ್ನ ಶ್ರಮ ಸಾರ್ಥಕವೆಂಬ ಭಾವನೆ ನನ್ನದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DVGs Mankutimmana Kagga and humanitarian values : A write up by Padmanabha Rao
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more