ರೋಗನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ 3ನೇ ಡೋಸ್ ಲಸಿಕೆ ನೀಡಲು ಅಮೆರಿಕ ಅನುಮೋದನೆ
ವಾಷಿಂಗ್ಟನ್, ಆಗಸ್ಟ್ 13: ರೋಗನಿರೋಧಕ ಶಕ್ತಿ ಕಡಿಮೆ ಇರುವಂಥ ವ್ಯಕ್ತಿಗಳಿಗೆ ಕೊರೊನಾ ಲಸಿಕೆಯ ಮೂರನೇ ಡೋಸ್ ನೀಡಲು ಅಮೆರಿಕ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ.
ಗಂಭೀರ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಎರಡು ಡೋಸ್ ಕೊರೊನಾ ಲಸಿಕೆಯೊಂದಿಗೆ ಮತ್ತೊಂದು ಡೋಸ್ ಲಸಿಕೆ ನೀಡುವುದು ಅವಶ್ಯಕ ಎಂದು ಹೇಳಿದೆ. ಫೈಜರ್ ಹಾಗೂ ಮಾಡೆರ್ನಾ ಲಸಿಕೆಯ ಹೆಚ್ಚುವರಿ ಡೋಸ್ ನೀಡಲಾಗುವುದು ಎಂದು ತಿಳಿಸಿದೆ.
ಅಪಾಯಕಾರಿ ಎನ್ನಲಾದ ಡೆಲ್ಟಾ ರೂಪಾಂತರ ವಿಶ್ವವ್ಯಾಪಿ ಹರಡುತ್ತಿದ್ದು, ಈ ಸೋಂಕಿನ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ ಇನ್ನೊಂದು ಹೆಚ್ಚಿನ ಡೋಸ್ ಅವಶ್ಯಕವಿದೆ ಎಂದು ಹೇಳಿದ್ದಾರೆ.

ಅಮೆರಿಕ ಆಹಾರ ಹಾಗೂ ಔಷಧ ನಿಯಂತ್ರಕ ಗುರುವಾರ ರಾತ್ರಿ ಈ ನಿರ್ಧಾರವನ್ನು ಪ್ರಕಟಿಸಿದೆ. ಅಂಗಾಂಗ ಕಸಿ, ಕ್ಯಾನ್ಸರ್ ಇನ್ನಿತರ ಸಮಸ್ಯೆಗಳನ್ನು ಹೊಂದಿರುವವರಿಗೆ ಸೋಂಕು ಅಪಾಯಕಾರಿಯಾಗಿದೆ. ಇಂಥವರಿಗೆ ಲಸಿಕೆ ನೀಡಬೇಕಿದೆ ಎಂದು ತಿಳಿಸಿದೆ.
ಫ್ರಾನ್ಸ್, ಇಸ್ರೇಲ್‌ನಲ್ಲಿ ಕೂಡ ಇಂಥದ್ದೇ ಶಿಫಾರಸ್ಸು ಮಾಡಲಾಗಿದೆ. "ಈ ಒಂದು ಕ್ರಮ ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿದೆ" ಎಂದು ಎಫ್‌ಡಿಎ ಕಮಿಷನರ್ ಡಾ. ಜಾನೆಟ್ ವುಡ್‌ಕಾಕ್ ತಿಳಿಸಿದ್ದಾರೆ.
ಎರಡನೇ ಡೋಸ್ ಲಸಿಕೆ ಪಡೆದುಕೊಂಡ ಇಪ್ಪತ್ತೆಂಟು ದಿನಗಳ ನಂತರ ಫೈಜರ್ ಹಾಗೂ ಮಾಡೆರ್ನಾ ಲಸಿಕೆಯನ್ನು ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಪಡೆದುಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವವರಿಗೆ ಈ ಶಿಫಾರಸ್ಸನ್ನು ಮಾಡಲಾಗಿಲ್ಲ.
ವಿಶ್ವದಾದ್ಯಂತ ಡೆಲ್ಟಾ ಕೊರೊನಾ ರೂಪಾಂತರ ಹರಡುತ್ತಿದ್ದು, ಅಮೆರಿಕದಲ್ಲಿ ಮತ್ತೆ ಪರಿಸ್ಥಿತಿ ಆತಂಕಕಾರಿಯಾಗಿ ಮಾರ್ಪಡುತ್ತಿದೆ. ಅಮೆರಿಕದಲ್ಲಿ ಡೆಲ್ಟಾ ರೂಪಾಂತರ ಪ್ರಕರಣಗಳು ಏಕಾಏಕಿ ಏರಿಕೆಯಾಗಿದ್ದು, ಆಸ್ಪತ್ರೆಗೆ ಸೇರುತ್ತಿರುವವರ, ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವದಾದ್ಯಂತ ಡೆಲ್ಟಾ ಕೊರೊನಾ ರೂಪಾಂತರ ಹರಡುತ್ತಿದ್ದು, ಅಮೆರಿಕದಲ್ಲಿ ಮತ್ತೆ ಪರಿಸ್ಥಿತಿ ಆತಂಕಕಾರಿಯಾಗಿ ಮಾರ್ಪಡುತ್ತಿದೆ.
ಜೊತೆಗೆ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ದಾಳಿಯಿಂದಾಗಿ ಐಸಿಯು ಹಾಸಿಗೆಗಳ ಲಭ್ಯತೆ ತಗ್ಗಿರುವುದು ಯುಎಸ್‌ನ ನಗರ ಆಸ್ಟಿನ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊರೊನಾ ವೈರಸ್ ಸಾಂಕ್ರಾಮಿಕದ ಸ್ಥಳೀಯ ಸ್ಥಿತಿ "ಭೀಕರ" ಎಂದು ತುರ್ತು ಎಚ್ಚರಿಕೆಯ ಗಂಟೆಯನ್ನು ಟೆಕ್ಸಾಸ್ ರಾಜಧಾನಿ ಆಸ್ಟಿನ್‌ನ ನಿವಾಸಿಗಳಿಗೆ ನೀಡಿದೆ.
ಕೊರೊನಾ ಸೋಂಕಿನ ಪ್ರಕರಣಗಳ ವಾರದ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅಮೆರಿಕ, ಭಾರತ, ಇರಾನ್, ಬ್ರೆಜಿಲ್ ಹಾಗೂ ಇಂಡೋನೇಷ್ಯಾ, ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೇಶಗಳು ಎಂದು ಗುರುತಿಸಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ, ಭಾರತ, ಬ್ರೆಜಿಲ್ ಹಾಗೂ ಇಂಡೋನೇಷ್ಯಾ ಕೊರೊನಾ ಪ್ರಕರಣಗಳಲ್ಲಿ ತಗ್ಗಿದೆ. ಆದರೆ ಅಮೆರಿಕ ಹಾಗೂ ಇರಾನ್ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ ಎಂದು ತಿಳಿಸಿದೆ.
ಒಂದು ವಾರದ ಅವಧಿಯಲ್ಲಿ ಅಮೆರಿಕದಲ್ಲಿ 734,354 ಹಾಗೂ ಇರಾನ್‌ನಲ್ಲಿ 248,102 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಎರಡು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ.
ಅಮೆರಿಕದಲ್ಲಿ ಕೊರೊನಾವೈರಸ್ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಹೆಚ್ಚಾಗಿದೆ. ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗುತ್ತಿದ್ದು, ಡೆಲ್ಟಾ ರೂಪಾಂತರ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.












Click it and Unblock the Notifications