ಟ್ರಂಪ್ v/s ಟಿಕ್‌ಟಾಕ್: ಕೋರ್ಟ್ ಮೊರೆ ಹೋದ ಚೀನಿ ಕಂಪನಿ
ಟಿಕ್‌ಟಾಕ್ ಮಾರಾಟದ ವಿಚಾರವಾಗಿ ಟ್ರಂಪ್ ಆಡಳಿತ ಹೇರಿದ್ದ ನಿಷೇಧಕ್ಕೆ ಬ್ರೇಕ್ ಹಾಕಲು ಚೀನಿ ಕಂಪನಿ ವಾಷಿಂಗ್ಟನ್ ಕೋರ್ಟ್ ಮೊರೆಹೋಗಿದೆ. ಚೀನಾ ಮೂಲದ 'ಬೈಟ್ ಡಾನ್ಸ್' ಒಡೆತನದ ಟಿಕ್‌ಟಾಕ್ ವಿರುದ್ಧ ಟ್ರಂಪ್ ಕೆಂಡ ಕಾರಿದ್ದರು. ಅಲ್ಲದೆ ಟಿಕ್‌ಟಾಕ್ ಅಮೆರಿಕದ ಭದ್ರತೆಗೆ ಕಂಟಕವಾಗಿದೆ ಎಂಬ ಆರೋಪವನ್ನೂ ಟ್ರಂಪ್ ಮಾಡಿದ್ದರು. ಇದೇ ಕಾರಣಕ್ಕೆ ಅಮೆರಿಕ ಮೂಲದ ಸಂಸ್ಥೆಗೆ ಟಿಕ್‌ಟಾಕ್ ಮಾರಾಟ ಮಾಡುವಂತೆ ಗಡುವು ನೀಡಿದ್ದ ಟ್ರಂಪ್ ಆಡಳಿತ, ಅಷ್ಟರಲ್ಲಿ ವ್ಯಾಪಾರ ಕುದುರದೇ ಇದ್ದರೆ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಟ್ರಂಪ್ ಆಡಳಿತ ನೀಡಿದ್ದ ಗಡುವು ಮುಗಿಯುತ್ತಾ ಬಂದಿದ್ದು, ಅಮೆರಿಕದಲ್ಲಿಯೂ ಚೀನಾ ಕಂಪನಿ ಟಿಕ್‌ಟಾಕ್ ಬ್ಯಾನ್ ಆಗುವ ಚಿಂತೆಯಲ್ಲಿದೆ.
ಹೀಗಾಗಿ 'ಬೈಟ್ ಡಾನ್ಸ್' ಕೊರ್ಟ್ ಮೊರೆ ಹೋಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಕಂಡಿದ್ದೇ ಕಂಡಿದ್ದು, ಅಮೆರಿಕದ ನಿರ್ಗಮಿತ ಅಧ್ಯಕ್ಷ ಟ್ರಂಪ್‌ಗೆ ಗ್ರಹಗತಿ ಉಲ್ಟಾ ಹೊಡೆಯುತ್ತಿದೆ. ಈಗಾಗಲೇ ಟ್ಯಾಕ್ಸ್ ವಿಚಾರಕ್ಕೆ ಟ್ರಂಪ್ ವಿರುದ್ಧ ಅರ್ಜಿ ಹಾಕಿದ್ದಾಯ್ತು, ಚುನಾವಣೆ ವಿಚಾರವಾಗಿ ಟ್ರಂಪ್ ಕೋರ್ಟ್ ಮೆಟ್ಟಿಲು ಏರುವಂತಾಗಿತ್ತು. ಎಲ್ಲವನ್ನೂ ಮೀರಿ ಟ್ರಂಪ್ ಪತ್ನಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇಷ್ಟೆಲ್ಲಾ ಕಷ್ಟಗಳು ವಕ್ಕರಿಸಿರುವಾಗಲೇ ಚೀನಿ ಕಂಪನಿ ಟಿಕ್‌ಟಾಕ್ ಕೂಡ ಟ್ರಂಪ್‌ಗೆ ಕೋರ್ಟ್‌ನಲ್ಲಿ ಶಾಕ್ ಕೊಟ್ಟಿದೆ.

ಜಗತ್ತಿನ ಹಲವು ದೇಶಗಳಲ್ಲಿ ಬ್ಯಾನ್..!
ಸೋಷಿಯಲ್ ಮೀಡಿಯಾಗಳ ಪೈಕಿ ಜಗತ್ತಿನ ದೈತ್ಯ ಕಂಪನಿಯಾಗಿ ಬೆಳೆಯುತ್ತಿದ್ದ 'ಟಿಕ್‌ಟಾಕ್'ಗೆ ಮೊದಲು ಶಾಕ್ ನೀಡಿದ್ದೇ ಮೋದಿ ಸರ್ಕಾರ. ಅಂದಹಾಗೆ ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದ್ದೇ ಆಗಿದ್ದು, ಒಂದಾದ ನಂತರ ಒಂದು ಕಷ್ಟಗಳು ಎದುರಾದವು. ಜಗತ್ತಿನಾದ್ಯಂತ ಹಲವು ದೇಶಗಳು ಚೀನಾ ಮೂಲದ ಅಪ್ಲಿಕೇಷನ್ ಬಗ್ಗೆ ಗುಮಾನಿ ವ್ಯಕ್ತಪಡಿಸಿದವು. ಅದರಲ್ಲೂ ಚೀನಾ ವಿರೋಧಿ ರಾಷ್ಟ್ರಗಳು ಟಿಕ್‌ಟಾಕ್‌ಗೆ ಗುಡ್ ಬೈ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು. ಇದರಲ್ಲಿ ಅಮೆರಿಕ ಕೂಡ ಹಿಂದೆ ಉಳಿದಿಲ್ಲ.
ಅಮೆರಿಕ ಕೂಡ ಚೀನಾ ವಿರುದ್ಧ ಹಲವು ಗಂಭೀರ ಆರೋಪಗಳನ್ನ ಮಾಡಿದೆ. ಅಮೆರಿಕನ್ನರ ವೈಯಕ್ತಿಕ ಮಾಹಿತಿಯನ್ನು ಟಿಕ್‌ಟಾಕ್ ಚೀನಿ ಸರ್ಕಾರಕ್ಕೆ ನೀಡುತ್ತಾ ಬಂದಿದೆ ಎಂದು ಟ್ರಂಪ್ ಆರೋಪ ಮಾಡಿದ್ದರು. ಈ ಕಾರಣಕ್ಕೆ ಟಿಕ್‌ಟಾಕ್ ಅಮೆರಿಕ ಮೂಲದ ಕಂಪನಿ ಪಾಲಾಗಲಿ ಎಂಬುದು ಟ್ರಂಪ್ ನಿರ್ಧಾರವಾಗಿತ್ತು. ಆದರೆ ಟಿಕ್‌ಟಾಕ್ ಈಗ ಹೊಸ ವರಸೆ ತೆಗೆದಿದ್ದು ಟ್ರಂಪ್ ಸೋಲಿನ ಬಳಿಕ ಕಾನೂನು ಸಮರಕ್ಕೆ ಮುಂದಾಗಿದೆ.

ಜಗತ್ತನ್ನು ಆವರಿಸುತ್ತಿರುವ ಚೀನಿ ಗ್ಯಾಂಗ್..!
ಒಂದು ಕಡೆ ಚೀನಾ ಮೂಲದ ವಸ್ತುಗಳು ಜಗತ್ತಿನಲ್ಲಿ ಅಬ್ಬರಿಸುತ್ತಿದ್ದರೆ, ಮೆಲ್ಲಗೆ ಅಪ್ಲಿಕೇಷನ್ ಜಮಾನ ಕೂಡ ಇದೇ ಚೀನಿ ಗ್ಯಾಂಗ್‌ನ ಕೈಸೇರುತ್ತಿದೆ. ಚೀನಾ ಮೂಲದ ನೂರಾರು ಅಪ್ಲಿಕೇಷನ್‌ಗಳು ಸ್ಮಾರ್ಟ್ ಫೋನ್‌ಗಳ ಜೊತೆ ಬೆರೆತು ಹೋಗಿವೆ. ಮುಖ್ಯವಾಗಿ ಈ ಅಪ್ಲಿಕೇಷನ್‌ಗಳು ಚೀನಾ ಸರ್ಕಾರಕ್ಕೆ ಬೇರೆ ದೇಶಗಳ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುತ್ತಿವೆ ಎಂಬ ಗಂಭೀರ ಆರೋಪವಿದೆ.
ಅದರಲ್ಲೂ ಸಿಕ್ಕಾಪಟ್ಟೆ ಕಾಂಟ್ರವರ್ಸಿಗೆ ಗುರಿಯಾಗಿದ್ದ ಅಪ್ಲಿಕೇಷನ್‌ಗಳ ಪೈಕಿ ಟಿಕ್‌ಟಾಕ್‌ಗೆ ನಂಬರ್ 1 ಸ್ಥಾನವಿದೆ. ಜನರ ಅಚ್ಚುಮೆಚ್ಚಿನ ಟಿಕ್‌ಟಾಕ್, ಅದೇ ಜನರ ವೈಯಕ್ತಿ ಮಾಹಿತಿಯನ್ನ ಚೀನಿ ಸರ್ಕಾರಕ್ಕೆ ಕದ್ದು ನೀಡುತ್ತಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಹೀಗಾಗಿಯೇ ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದ್ದು, ಅಮೆರಿಕದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು.

ಚೀನಿ ಕಂಪನಿಗಳಿಗೆ ಬೈಡನ್ ಶಾಕ್..!
ಟ್ರಂಪ್ ನಿರ್ಗಮನ ಆಗುತ್ತಿದ್ದಂತೆ ನಮಗೆ ಒಳ್ಳೆ ಕಾಲ ಬರಬಹುದು ಎಂಬುದು 'ಟಿಕ್‌ಟಾಕ್' ಆಶಯ. ಆದರೆ ಚೀನಿ ಕಂಪನಿಯ ಈ ಕನಸು ಈಡೇರುವುದು ಸುಲಭವಲ್ಲ. ಏಕೆಂದರೆ ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಕೂಡ ಚೀನಾ ವಿರೋಧಿ ನಿಲುವು ಹೊಂದಿದ್ದಾರೆ. ಇದೇ ಕಾರಣಕ್ಕೆ ಭಾರತಕ್ಕೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿ, ಚೀನಿಯರನ್ನ ತುಳಿಯುವ ಸ್ಕೆಚ್ ಅಮೆರಿಕದಲ್ಲಿ ಸಿದ್ಧವಾಗಿದೆ. ಅಕಸ್ಮಾತ್ ಜೋ ಬೈಡನ್ ಅಧಿಕಾರ ವಹಿಸಿದ ಬಳಿಕ ನಮ್ಮ ಟೈಂ ಬದಲಾಗುತ್ತೆ ಅಂತಾ 'ಟಿಕ್‌ಟಾಕ್' ಕನಸು ಕಂಡಿದ್ದರೆ, ಅದು ಕನಸಾಗಿಯೇ ಉಳಿಯಲಿದೆ. ಏಕೆಂದರೆ ಟಿಕ್‌ಟಾಕ್ ಬ್ಯಾನ್ ವಿಚಾರದಲ್ಲಿ ಟ್ರಂಪ್ ನಿಲುವನ್ನೇ ಬೈಡನ್ ಮುಂದುವರಿಸುವ ಸಾಧ್ಯತೆ ಇದೆ.

ಟ್ರಂಪ್ ಆಡಳಿತ ಹೊರಡಿಸಿರುವ ಆದೇಶಕ್ಕೆ ತಡೆ
ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕ ಕೈಗೊಂಡ ಕ್ರಮದ ವಿರುದ್ಧ ಆ ಸಂಸ್ಥೆಗಳು ಕಾನೂನು ಸಮರ ನಡೆಸಿವೆ. ಟಿಕ್‌ಟಾಕ್ ಆ್ಯಪ್ ಡೌನ್‌ಲೋಡ್ ಮೇಲೆ ನಿರ್ಬಂಧ ಹೇರಿ ಟ್ರಂಪ್ ಆಡಳಿತ ಹೊರಡಿಸಿರುವ ಆದೇಶಕ್ಕೆ ಪೆನ್ಸಿಲ್ವೇನಿಯಾ ಕೋರ್ಟ್ ಜಡ್ಜ್ ತಾತ್ಕಾಲಿಕ ತಡೆ ನೀಡಿದ್ದರು.
ನವೆಂಬರ್ 12ರಂದು ಟಿಕ್‌ಟಾಕ್‌ನ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ಟ್ರಂಪ್ ಆಡಳಿತ ಮುಂದಾಗಿತ್ತು. ಟಿಕ್‌ಟಾಕ್ ಹೊಸದಾಗಿ ಡೌನ್‌ಲೋಡ್ ಮಾಡಿಕೊಳ್ಳಲು ನಿರ್ಬಂಧ ಹೇರಲು ಟ್ರಂಪ್ ಆಡಳಿತ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications