ಎಚ್-1ಬಿ ವೀಸಾ ಆಯ್ಕೆ ಇನ್ನು ಸಂಬಳ ಮಟ್ಟ ಆಧಾರಿತ
ವಾಷಿಂಗ್ಟನ್, ಜನವರಿ 8: ಅಮೆರಿಕದಲ್ಲಿ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಕೆಲವೇ ದಿನಗಳು ಬಾಕಿ ಇರುವಾಗಲೇ ಎಚ್1 ಬಿ ವೀಸಾದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ವಾರ್ಷಿಕ್ ಎಚ್1ಬಿ ಕ್ಯಾಪ್ ಲಾಟರಿ ವ್ಯವಸ್ಥೆ ಬದಲಿಗೆ ವೇತನ ಆಧಾರಿತ ಆಯ್ಕೆ ಪ್ರಕ್ರಿಯೆ ಜಾರಿಗೆ ಬಂದಿದೆ.
ಅಮೆರಿಕ ಚುನಾವಣೆಗಳು ಕೆಲವು ದಿನಗಳ ಮುನ್ನ ಟ್ರಂಪ್ ಆಡಳಿತ ಈ ಪ್ರಸ್ತಾಪ ಮುಂದಿರಿಸಿತ್ತು. ಅದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಈಗ ಅಂತಿಮ ನಿಯಮವನ್ನು ಪ್ರಕಟಿಸಲಾಗಿದ್ದು, ಇನ್ನು 60 ದಿನಗಳಲ್ಲಿ ಜಾರಿಗೆ ಬರಲಿದೆ. ಆದರೆ ಇದನ್ನು ಹೊಸ ಆಡಳಿತ ರದ್ದುಗೊಳಿಸಲು ಅವಕಾಶವಿದೆ.
ಅಮೆರಿಕ:ವಿದೇಶಿಯರ ಉದ್ಯೋಗ ವೀಸಾ ನಿರ್ಬಂಧ ವಿಸ್ತರಿಸಿದ ಟ್ರಂಪ್
ಹೊಸ ನಿಯಮದಡಿ ಎಚ್-1ಬಿ ಕ್ಯಾಪ್ ವೀಸಾಗಳನ್ನು ವೇತನದ ಮಟ್ಟಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ. ತಮ್ಮ ವೃತ್ತಿಗಳಲ್ಲಿ ಅತಿ ಹೆಚ್ಚು ಸಂಬಳಗಳನ್ನು ಪಡೆಯುವವರಿಗೆ ಹಾಗೂ ಉದ್ಯೋಗದ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ವೀಸಾಕ್ಕೆ ಆದ್ಯತೆ ನೀಡಲಾಗುತ್ತದೆ.
ಹೀಗಾಗಿ ಎಚ್-1ಬಿ ವೀಸಾಗಳನ್ನು ಅಮೆರಿಕದ ಕಂಪೆನಿಗಳ ಪ್ರಾಯೋಜಕತ್ವ ಹೊಂದಿರುವ ಲೆವೆಲ್ 4ರಲ್ಲಿನ ಉದ್ಯೋಗಿಗಳಿಗೆ ಮೊದಲು ನೀಡಲಾಗುತ್ತದೆ. ಅಮೆರಿಕದಲ್ಲಿ ನಾಲ್ಕು ವೇತನ ವರ್ಗಗಳಿದ್ದು, ಅದರಲ್ಲಿ ಲೆವೆಲ್ 4 ಅತಿ ಹೆಚ್ಚು ಸಂಬಳ ಹಾಗೂ ಅನುಭವ ಉಳ್ಳವರನ್ನು ಒಳಗೊಂಡಿರುತ್ತದೆ. ಬಳಿಕ ಲೆವೆಲ್ 3 ಮತ್ತು ಉಳಿದ ಹಂತದಲ್ಲಿರುವ ಉದ್ಯೋಗಿಗಳಿಗೆ ನೀಡಲಾಗುತ್ತದೆ.
H1B Visa: ಟ್ರಂಪ್ ನಿರ್ಧಾರವನ್ನು ರದ್ದುಪಡಿಸಿದ ಯುಎಸ್ ಕೋರ್ಟ್
ಈ ಹೊಸ ನಿಯಮವು ಕೆಳಮಟ್ಟದ ವೇತನ ಮತ್ತು ಕಡಿಮೆ ಕೌಶಲದ ಹುದ್ದೆಗಳನ್ನು ತುಂಬಿಕೊಳ್ಳಲು ಎಚ್-1ಬಿ ವೀಸಾ ಯೋಜನೆಯನ್ನು ಬಳಸಿಕೊಳ್ಳುವ ಮೂಲಕ ಉದ್ಯೋಗಿಗಳಿಗೆ ಭತ್ಯೆ ಒದಗಿಸುವ ಹಾಗೂ ಕಾನೂನು ದುರ್ಬಳಕೆ ಮಾಡುವ ಚಟುವಟಿಕೆಗಳನ್ನು ಕಡಿಮೆ ಮಾಡಲಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿದೆ.