ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?
ವಾಷಿಂಗ್ಟನ್, ಜೂನ್ 2: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿರುವುದು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು. 46 ವರ್ಷ ವಯಸ್ಸಿನ ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಅವರ ಸಾವನ್ನು 'ನರಹತ್ಯೆ' ಎಂದು ವೈದ್ಯಕೀಯ ಪರೀಕ್ಷಕರು ವರ್ಗೀಕರಿಸಿದ್ದಾರೆ.
ಕುತ್ತಿಗೆ ಮೇಲೆ 'ವೈಟ್' ಪೊಲೀಸ್ ಡೆರೆಕ್ ಚೌವಿನ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದಾಗ, ಕಾರ್ಡಿಯೋಪಲ್ಮನರಿ ಅರೆಸ್ಟ್ ನಿಂದ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಕಾರಣವಾದ ಮಿನ್ನಿಯಾಪೊಲಿಸ್ ನಗರದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಮೇಲೆ ಈಗಾಗಲೇ ಮರ್ಡರ್ ಕೇಸ್ ಹಾಕಲಾಗಿದ್ದು, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಬೇಡಿಕೊಳ್ಳುತ್ತಿದ್ದರೂ, ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲಿಂದ ಡೆರೆಕ್ ಚೌವಿನ್ ಕಾಲು ತೆಗೆಯಲಿಲ್ಲ. ಡೆರೆಕ್ ಚೌವಿನ್ ತೋರಿದ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಾರ್ಜ್ ಫ್ಲಾಯ್ಡ್ ಕುಟುಂಬದ ವಕೀಲ ಹೇಳಿದ್ದೇನು.?
ಕುತ್ತಿಗೆ ಮತ್ತು ಬೆನ್ನಿನಲ್ಲಿ ಉಂಟಾದ ಕಂಪ್ರೆಷನ್ ನಿಂದ ಜಾರ್ಜ್ ಫ್ಲಾಯ್ಡ್ ಗೆ ಉಸಿರು ಕಟ್ಟಿದೆ ಎಂಬ ಅಂಶ ಶವಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಜಾರ್ಜ್ ಫ್ಲಾಯ್ಡ್ ಕುಟುಂಬದ ವಕೀಲರು ಸೋಮವಾರ ತಿಳಿಸಿದ್ದಾರೆ.
ಕುತ್ತಿಗೆ ಮತ್ತು ಬೆನ್ನಿನಲ್ಲಿ ಉಂಟಾದ ಕಂಪ್ರೆಷನ್ ನಿಂದ ಜಾರ್ಜ್ ಫ್ಲಾಯ್ಡ್ ಮೆದುಳಿಗೆ ರಕ್ತ ಪೂರೈಕೆ ಆಗಿಲ್ಲ. ಪೊಲೀಸ್ ಆಫೀಸರ್ ಡೆರೆಕ್ ಚೌವಿನ್ ವಿರುದ್ಧ ಥರ್ಡ್ ಡಿಗ್ರಿ ಮರ್ಡರ್ ಕೇಸ್ ಹಾಕಲಾಗಿದೆ. ಅದನ್ನು ಈಗ ಫಸ್ಟ್ ಡಿಗ್ರಿ ಮರ್ಡರ್ ಗೆ ಅಪ್ ಗ್ರೇಡ್ ಮಾಡಬೇಕಿದೆ ಎಂದು ವಕೀಲ ಬೆನ್ ಕ್ರಂಪ್ ಹೇಳಿದ್ದಾರೆ.

ಶವಪರೀಕ್ಷೆಯ ವರದಿಗಳು ಭಿನ್ನ
ಅಧಿಕೃತ ಶವಪರೀಕ್ಷೆಯ ವರದಿಗೆ ಹೋಲಿಸಿದರೆ ಕುಟುಂಬದ ಪರವಾಗಿ ನಡೆದ ಶವಪರೀಕ್ಷೆಯ ವರದಿ ಭಿನ್ನವಾಗಿದೆ.
ಅಧಿಕೃತ ಶವಪರೀಕ್ಷೆಯ ವರದಿಯಲ್ಲಿ ಜಾರ್ಜ್ ಫ್ಲಾಯ್ಡ್ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಾಗೇ, ಮಾದಕ ದ್ರವ್ಯಗಳನ್ನು ಸೇವಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಆದ್ರೆ, ಕುಟುಂಬದ ಪರವಾಗಿ ನಡೆದ ಶವಪರೀಕ್ಷೆಯಲ್ಲಿ ಹೃದ್ರೋಗದ ಕುರಿತು ಯಾವುದೇ ಪುರಾವೆ ಕಂಡುಬಂದಿಲ್ಲ.

ಪ್ರತ್ಯೇಕ ಶವಪರೀಕ್ಷೆ
ಅಧಿಕೃತ ಶವಪರೀಕ್ಷೆಯ ವರದಿ ಬಂದ ಬಳಿಕ ಸ್ಥಳೀಯ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದ ಕಾರಣ ಜಾರ್ಜ್ ಫ್ಲಾಯ್ಡ್ ಕುಟುಂಬ ಪ್ರತ್ಯೇಕವಾಗಿ ಶವಪರೀಕ್ಷೆ ನಡೆಸಲು ಮುಂದಾಯಿತು. ಫ್ಯಾಮಿಲಿ ಪರವಾಗಿ ಮೈಕೆಲ್ ಬಾಡೆನ್ ಮತ್ತು ಅಲೆಸಿಯಾ ವಿಲ್ಸನ್ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆ ನಡೆಸಿದರು.
ಮೈಕೆಲ್ ಬಾಡೆನ್ ನ್ಯೂಯಾರ್ಕ್ ಸಿಟಿಯ ಮಾಜಿ ಮುಖ್ಯ ವೈದ್ಯಕೀಯ ಪರೀಕ್ಷಕರಾಗಿದ್ದು, ಎರಿಕ್ ಗಾರ್ನರ್ ಅವರ ಶವಪರೀಕ್ಷೆಯನ್ನೂ ನಡೆಸಿದ್ದರು. 2014 ರಲ್ಲಿ ನ್ಯೂಯಾರ್ಕ್ ಪೊಲೀಸರಿಂದ ಎರಿಕ್ ಗಾರ್ನರ್ ಹತ್ಯೆಗೀಡಾಗಿದ್ದರು.
ಮಿಸೌರಿಯ ಫರ್ಗುಸನ್ ನಲ್ಲಿ 18 ವರ್ಷದ ಮೈಕೆಲ್ ಬ್ರೌನ್ ಎಂಬಾತನ ಶವಪರೀಕ್ಷೆಯನ್ನೂ ಇದೇ ಮೈಕೆಲ್ ಬಾಡೆನ್ ನಡೆಸಿದ್ದರು. ಮೈಕೆಲ್ ಬ್ರೌನ್ ಕೂಡ ಪೊಲೀಸ್ ಅಧಿಕಾರಿಯ ಅಟ್ಟಹಾಸದಿಂದಲೇ ಮೃತಪಟ್ಟಿದ್ದ.

ಸ್ಟೇಟ್ ಪ್ರಿಸನ್ ನಲ್ಲಿ ಡೆರೆಕ್ ಚೌವಿನ್
ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಕಾರಣವಾದ ಡೆರೆಕ್ ಚೌವಿನ್ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಉಳಿದ ಮೂರು ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ, ಆ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿಲ್ಲ.
{ಚಿತ್ರಕೃಪೆ: ಎಪಿ}












Click it and Unblock the Notifications