ಅಮೆರಿಕಾ ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಪಾಸಿಟಿವ್!
ವಾಶಿಂಗ್ಟನ್, ಮೇ.10: ನೊವೆಲ್ ಕೊರೊನಾ ವೈರಸ್ ಮಹಾಮಾರಿಗೆ ಸಾಮಾನ್ಯ ಜನರಿಂದ ಗಣ್ಯವ್ಯಕ್ತಿಯವರೆಗೂ ಎಲ್ಲರಿಗೂ ಅಂಟಿಕೊಳ್ಳುತ್ತಿದೆ. ಅಮೆರಿಕಾದ ಶ್ವೇತ ಭವನದಲ್ಲಿ ಕಾರ್ಯ ನಿರ್ವಹಿಸುವ ಮೂವರಿಗೆ ಸೋಂಕು ತಗಲಿರುವುದು ಈವರೆಗೂ ದೃಢಪಟ್ಟಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೆ ಕೊವಿಡ್-19 ಪಾಸಿಟಿವ್ ಬಂದಿದೆ. ಎರಡು ತಿಂಗಳಿನಿಂದ ಕಚೇರಿಗೆ ಆಗಮಿಸದೇ ದೂರವಾಣಿ ಮೂಲಕ ಕಾರ್ಯ ನಿರ್ವಹಿಸಿದ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಯಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳೇ ಕಂಡು ಬಂದಿರಲಿಲ್ಲ.
ಸಹಜವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಮಾಧ್ಯಮ ಕಾರ್ಯದರ್ಶಿ ಕಟಿಯಾ ಮಿಲ್ಲರ್ ರಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಸೋಂಕಿತ ಪ್ರಕರಣ ಬೆಳಕಿಗೆ ಬಂದಿದೆ.

ಇವಾಂಕಾ ಟ್ರಂಪ್ ಮತ್ತು ಪತಿಗೆ ಕೊರೊನಾ ನೆಗೆಟಿವ್:
ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಬೆನ್ನೆಲ್ಲೇ ಇವಾಂಕಾ ಟ್ರಂಪ್ ಹಾಗೂ ಅವರ ಪತಿ ಜರೇದ್ ಕುಶ್ನರ್ ತಪಾಸಣೆ ನಡೆಸಲಾಗಿದ್ದು, ಇಬ್ಬರಲ್ಲೂ ಕೊರೊನಾ ವೈರಸ್ ಸೋಂಕು ನೆಗೆಟಿವ್ ಎಂದು ಬಂದಿದೆ.
ಶ್ವೇತಭವನದಲ್ಲಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗಿಲಿರುವ ಹಿನ್ನೆಲೆ ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಡಾ.ಆಂಟೋನಿ ಫೌಸಿ ಸ್ವಯಂಪ್ರೇರಿತರಾಗಿ ಕ್ವಾರೆಂಟೈನ್ ಗೆ ತೆರಳಿದ್ದಾರೆ. ಕೊರೊನಾ ವೈರಸ್ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಆಂಟೋನಿ ಫೌಸಿ, ಕೆಲವು ಸೋಂಕಿತರ ಸಂಪರ್ಕ ಹೊಂದಿರುವ ಅನುಮಾನದ ಮೇಲೆ ಕ್ವಾರೆಂಟೈನ್ ಗೆ ತೆರಳಿದ್ದಾರೆ.












Click it and Unblock the Notifications