ಅಮೆರಿಕ ಚುನಾವಣೆ: ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಆಯ್ಕೆ
ವಾಷಿಂಗ್ಟನ್, ನ.4: ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಅವರು ಮೂರನೇ ಬಾರಿಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ(House of Representatives)ಗೆ ಆಯ್ಕೆಯಾಗಿದ್ದಾರೆ. ಡೆಮಾಕ್ರೆಟಿಕ್ ಕಾಂಗ್ರೆಸ್ ಸದಸ್ಯ ರಾಜಾ ಅವರು ಲಿಬರ್ಟರಿಯನ್ ಪಾರ್ಟಿಯ ಪ್ರೆಸ್ಟನ್ ನೆಲ್ಸನ್ ಅವರನ್ನು ಸೋಲಿಸಿದ್ದಾರೆ.
47 ವರ್ಷ ವಯಸ್ಸಿನ ರಾಜಾ ಅವರು ಸುಮಾರು ಶೇ 71ಕ್ಕೂ ಅಧಿಕ ಮತ ಗಳಿಸಿರುವ ವರದಿಗಳೂ ಬಂದಿವೆ. ರಾಜಾ ಅವರು ದೆಹಲಿಯಲ್ಲಿ ಜನಿಸಿದ್ದು, ಅವರ ಪೋಷಕರು ತಮಿಳುನಾಡು ಮೂಲದವರಾಗಿದ್ದಾರೆ. ರಾಜಾ ಅವರು ಕಳೆದ ನಾಲ್ಕು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಆಯ್ಕೆಯಾಗಿದ್ದರು.
ಪ್ರಿಸ್ಟನ್ ವಿವಿ, ಹಾರ್ವರ್ಡ್ ವಿವಿಯಲ್ಲಿ ವ್ಯಾಸಂಗ ಮಾಡಿರುವ ಕೃಷ್ಣಮೂರ್ತಿ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು ನಂತರ ಕಾನೂನು ವಿವಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. 2000ರಲ್ಲಿ ಬರಾಕ್ ಒಬಾಮಾ ಅವರು ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

2010ರಲ್ಲಿ ಡೆಮೊಕ್ರೆಟಿಕ್ ಪಾರ್ಟಿಯಿಂದ ಇಲಿನಾಯ್ ಸ್ಪರ್ಧಿಸಿ ಡೇವಿಡ್ ಮಿಲ್ಲರ್ ವಿರುದ್ಧ ಶೇ 1ರಷ್ಟು ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 2012ರಲ್ಲಿ ಮತ್ತೊಮ್ಮೆ ಟಾಮಿ ಡಕ್ ವರ್ಥ್ ವಿರುದ್ಧ ಸೋಲುಂಡರು. 2016ರಲ್ಲಿ ಸೆನೆಟ್ ಗೆ ಸ್ಪರ್ಧಿಸಿ ಮೊದಲ ಗೆಲುವು ಕಂಡರು. ನಂತರ ಮುಖ್ಯ ಚುನಾವಣೆಯಲ್ಲಿ ರಿಪಬ್ಲಿಕನ್ ಸ್ಪರ್ಧಿ ವಿರುದ್ಧ ಶೇ 58.1ರಷ್ಟು ಮತ ಗಳಿಸಿ ಜಯ ದಾಖಲಿಸಿದರು. 2018ರಲ್ಲಿ ಶೇ 65.97ರಷ್ಟು ಮತ ಪಡೆದು ಹಾಲಿ ಸೆನೆಟ್ ಸದಸ್ಯರಾಗಿ ಈ ಬಾರಿ ಕಣಕ್ಕಿಳಿದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಅಂತರದ ಮತಗಳಿಸಿ ಜಯಭೇರಿ ಬಾರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಭಕ್ತ ರಾಜಾ ಮೊದಲ ಬಾರಿಗೆ ಸೆನೆಟ್ ಗೆ ಸ್ಪರ್ಧಿಸಿದ್ದಾಗ ಕರ್ನಾಟಕದ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಹರಕೆ ಹೊತ್ತುಕೊಂಡಿದ್ದರು. ಮೊದಲ ಗೆಲುವು ಸಾಧಿಸಿದ ಬಳಿಕ ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿ ನಾಗಪ್ರತಿಷ್ಠೆ ಹರಕೆ ತೀರಿಸಿದ್ದರು.
ಕೃಷ್ಣಮೂರ್ತಿ ಅವರು ಪತ್ನಿ ಪ್ರಿಯಾ ಅವರು ವೃತ್ತಿಯಿಂದ ವೈದ್ಯೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದು, ಇಲಿಯಾನ್ ಪ್ರಾಂತ್ಯದ ಸ್ಕಾಂಬರ್ಗ್ ನಲ್ಲಿ ನೆಲೆಸಿದ್ದಾರೆ.












Click it and Unblock the Notifications