ರಷ್ಯನ್ ಯುದ್ಧೋಪಕರಣ ಖರೀದಿ ಭಾರತಕ್ಕೆ ಒಳಿತಲ್ಲ: ಅಮೆರಿಕ ಸಲಹೆ
ವಾಷಿಂಗ್ಟನ್, ಏ. 6: ರಷ್ಯಾದಿಂದ ಯುದ್ಧ ಸಾಮಗ್ರಿಗಳನ್ನ ಖರೀದಿಸುವುದು ಭಾರತಕ್ಕೆ ಹಿತಾಸಕ್ತಿಗೆ ತರವಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಎಚ್ಚರಿಸಿದ್ದು, ರಷ್ಯಾದ ಯುದ್ಧೋಪಕರಣ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಇಲ್ಲಿನ ವಾರ್ಷಿಕ ರಕ್ಷಣಾ ಬಜೆಟ್ ಮೇಲಿನ ವಿಚಾರಣೆಯೊಂದರಲ್ಲಿ ಹೌಸ್ ಆರ್ಮ್ಡ್ ಸರ್ವಿಸಸ್ ಕಮಿಟಿಯ ಸದಸ್ಯರ ಜೊತೆ ಮಾತನಾಡುತ್ತಿದ್ದ ಲಾಯ್ಡ್ ಆಸ್ಟಿನ್, "ರಷ್ಯನ್ ಉಪಕರಣದ ಖರೀದಿ ಮಾಡುವುದು ಭಾರತಕ್ಕೆ ಒಳಿತಲ್ಲ ಎಂಬುದು ನಮ್ಮ ಅನಿಸಿಕೆ. ಭಾರತಕ್ಕೆ ಈ ಬಗ್ಗೆ ಅರಿವು ಮೂಡಿಸಲು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ" ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧ ನಡೆಸುತ್ತಿರುವ ರಷ್ಯಾವನ್ನು ಆದಷ್ಟೂ ಏಕಾಂಗಿಯಾಗಿಸಲು ಅಮೆರಿಕ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತದಿಂದ ನೈತಿಕ ಬೆಂಬಲ ಅಮೆರಿಕಕ್ಕೆ ಅಗತ್ಯವೂ ಹೌದು. ಆದರೆ ಅಮೆರಿಕ ಮತ್ತು ರಷ್ಯಾ ಮಧ್ಯೆ ಭಾರತ ಸಮಾನ ಅಂತರ ಕಾಯ್ದುಕೊಳ್ಳುವ ನೀತಿ ಅನುಸರಿಸುತ್ತಿದೆ. ರಷ್ಯಾ ಜೊತೆ ಇಂಧನ ಮತ್ತು ಶಸ್ತ್ರಾಸ್ತ್ರ ಖರೀದಿಗೆ ಭಾರತ ಮುಂದಾಗಿದೆ. ಇದು ಅಮೆರಿಕಕ್ಕೆ ಮುಜುಗರ ತರುವ ವಿಚಾರವೂ ಹೌದು. ಈ ನಿಟ್ಟಿನಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅವರ ಈ ಹೇಳಿಕೆ ಬಂದಿದೆ.

"ರಷ್ಯಾದ ವಿವಿಧ ಯುದ್ಧೋಪಕರಣಗಳ ಮೇಲೆ ಹೂಡಿಕೆ ಮಾಡುವ ಪ್ರಮಾಣವನ್ನು ಕಡಿಮೆ ಮಾಡಿ, ನಮಗೆ ಸರಿಹೊಂದುವ ವ್ಯವಹಾರಗಳಲ್ಲಿ ಭಾರತ ಹೆಚ್ಚು ಗಮನ ಕೊಡುತ್ತದೆಂದು ಆಶಿಸಿದ್ದೇವೆ" ಎಂದು ಲಾಯ್ಡ್ ಆಸ್ಟಿನ್ ಅಭಿಪ್ರಾಯಪಟ್ಟರು.
ಅಮೆರಿಕ ಶಾಸನಸಭೆಯ ಸದಸ್ಯ ಜೋ ವಿಲ್ಸನ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಕ್ಷಣಾ ಕಾರ್ಯದರ್ಶಿಗಳು ಈ ಮೇಲಿನ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ. ಕುತೂಹಲವೆಂದರೆ ಜೋ ವಿಲ್ಸನ್ ಅವರು ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾರತದ ಪರ ಲಾಬಿ ನಡೆಸುವ ಸದಸ್ಯರಲ್ಲಿ ಪ್ರಮುಖರು. ಆದರೆ ಉಕ್ರೇನ್ ಯುದ್ಧ ವಿಚಾರದಲ್ಲಿ ರಷ್ಯಾದ ವರ್ತನೆಯನ್ನ ಖಂಡಿಸದೆ ಭಾರತ ತಳೆದ ತಟಸ್ತ ನಿಲುವಿನ ಬಗ್ಗೆ ಜೋ ವಿಲ್ಸನ್ ಅಸಮಾಧಾನಗೊಂಡಿದ್ದಾರೆ. ಆ ಬಗ್ಗೆ ಮಾತನಾಡಿದ ಜೋ ವಿಲ್ಸನ್, "ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶ ಎನಿಸಿಕೊಂಡಿರುವ ಹಾಗೂ ನಮ್ಮ ಆಪ್ತ ದೇಶವೂ ಆಗಿರುವ ಭಾರತವು ಅಮೆರಿಕನ್ ಮೈತ್ರಿಕೂಟವನ್ನು ಕಡೆಗಣಿಸಿ ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆಯನ್ನ ಆಯ್ದುಕೊಂಡಿದ್ದು ದುರಂತ" ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಜೋ ವಿಲ್ಸನ್, "ಭಾರತದ ನಾಯಕರು ರಷ್ಯಾ ಜೊತೆಗಿನ ಮಿಲಿಟರಿ ವ್ಯವಹಾರದಿಂದ ದೂರವಾಗಿ ಪ್ರಜಾತಂತ್ರದ ಸಹಜ ಮೈತ್ರಿಕೂಟದ ಜೊತೆ ಸೇರಲು ಅನುವಾಗುವಂತಾಗಬೇಕು. ಅದು ಸಾಧ್ಯವಾಗುವ ರೀತಿಯಲ್ಲಿ ಅಮೆರಿಕದ ವಿದೇಶೀ ಮಿಲಿಟರಿ ಮಾರಾಟ ಕಾರ್ಯಕ್ರಮದ ಮೂಲಕ ನಾವು ಯಾವ ರೀತಿಯ ಯುದ್ಧಾಸ್ತ್ರ ವ್ಯವಸ್ಥೆಯನ್ನು ಭಾರತಕ್ಕೆ ಮುಂದೊಡ್ಡಬಹುದು" ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ವಿಶ್ವದಲ್ಲೇ ಅತ್ಯುತ್ತವೆನಿಸುವ ಯುದ್ಧಾಸ್ತ್ರ ವ್ಯವಸ್ಥೆಯನ್ನ ನಾವು ಹೊಂದಿದ್ದೇವೆ. ಭಾರತಕ್ಕೆ ಆಕರ್ಷಕ ಎನಿಸುವ ಯುದ್ಧಾಸ್ತ್ರ ಶ್ರೇಣಿ ನಮ್ಮಲ್ಲಿ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈ ಉತ್ತರದಿಂದ ಸಮಾಧಾನಗೊಂಡ ಜೋ ವಿಲ್ಸನ್, "ಭಾರತದ ಶ್ರೇಷ್ಠ ಜನರ ಜೊತೆ ಕೈಜೋಡಿಸುವ ನಿಮ್ಮ ಕೆಲಸ ಹೀಗೆ ಮುಂದುವರಿಯುತ್ತಿರಲಿ ಎಂದು ಎದುರುನೋಡುತ್ತೇನೆ. ಮಾರಾಟ ವ್ಯವಸ್ಥೆಯಲ್ಲಿ ಇರುವ ಕೆಲ ನಿರ್ಬಂಧಗಳನ್ನ ನಾವು ಸಡಿಲಿಸಿದಲ್ಲಿ ಭಾರತ ನಮಗೆ ಅದ್ಭುತ ಮಿತ್ರರಾಷ್ಟ್ರವಾಗಬಲ್ಲುದು" ಎಂದು ಆಶಿಸಿದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications