ಸಿಟ್ಟು ಕಾರಿಕೊಂಡು ತಪ್ಪಿನ ಹೊಣೆ ಹೊತ್ತ ಟ್ರಂಪ್ ಮಾಜಿ ವಕೀಲನಿಗೆ ಜೈಲು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮಾಜಿ ವಕೀಲ ಮೈಖೆಲ್ ಕೊಹೆನ್ ಅವರು ಟ್ರಂಪ್ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಅವರಿಗೆ ಬುಧವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರ ಕೆಟ್ಟ ಕೆಲಸಗಳನ್ನು ಮುಚ್ಚಿಡುವುದು ನನ್ನ ಕರ್ತವ್ಯವಾಗಿತ್ತು ಎಂದು ಕೊಹೆನ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ರ ಅಪರಾಧಗಳ ಜವಾಬ್ದಾರಿಯೂ ಸೇರಿದಂತೆ ಎಲ್ಲದರ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ.
ತೆರಿಗೆ ಕದ್ದಿರುವುದು, ಆರ್ಥಿಕ ಸಂಸ್ಥೆಗೆ ಸುಳ್ಳು ಹೇಳಿಕೆ ನೀಡಿರುವುದು, ಕಾನೂನು ಬಾಹಿರ ಅಭಿಯಾನಕ್ಕೆ ಕೊಡುಗೆ ಹಾಗೂ ಕಾಂಗ್ರೆಸ್ ಗೆ ಸುಳ್ಳು ಹೇಳಿಕೆ ನೀಡಿರುವ ಅಪರಾಧಕ್ಕೆ ತಮ್ಮ ಕಕ್ಷೀದಾರನಿಗೆ ಜೈಲು ಶಿಕ್ಷೆ ನೀಡಬಾರದು ಎಂದು ಕೊಹೆನ್ ಪರ ವಕೀಲರು ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್ ಜತೆಗಿನ ಸಂಬಂಧವನ್ನು ಸಾರ್ವಜನಿಕವಾಗಿ ತಿಳಿಸುವುದಾಗಿ ಹೇಳಿದ ಮಹಿಳೆಯರಿಗೆ ಸುಮ್ಮನಿರಲು ಹಣದ ಆಮಿಷ ಒಡ್ಡಿದ ಆರೋಪ ಕೂಡ ಕೊಹೆನ್ ಮೇಲಿದೆ.
ಆದರೆ, ಅದಕ್ಕೆ ಅಷ್ಟು ಪ್ರಾಮುಖ್ಯ ನೀಡುವ ಅಗತ್ಯ ಇಲ್ಲ. ಅದೊಂದು ಸರಳ ಖಾಸಗಿ ವ್ಯವಹಾರ. ಮತ್ತು ಅದನ್ನು 'ತಪ್ಪಾಗಿ' ಪ್ರಚಾರಕ್ಕೆ ನೀಡಿದ ಕೊಡುಗೆ ಎಂದು ಬಿಂಬಿಸಲಾಯಿತು ಎಂದಿದ್ದಾರೆ.












Click it and Unblock the Notifications