ಜಾರ್ಜಿಯಾ ರಾಜ್ಯದ ಫಲಿತಾಂಶ ಬದಲಾವಣೆಗೆ ಗವರ್ನರ್ ಕೆಂಪ್ ಮೇಲೆ ಅಧ್ಯಕ್ಷ ಟ್ರಂಪ್ ಒತ್ತಡ
ಜಾರ್ಜಿಯಾ ರಾಜ್ಯದ ಜನಪ್ರತಿನಿಧಿಗಳ ಸಭೆ ಕರೆದು, ಜೋ ಬೈಡನ್ ಆಯ್ಕೆಯನ್ನು ತಿರಸ್ಕರಿಸುವಂತೆ ಮಾಡಬೇಕು ಎಂದು ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟಂಪ್ ಅವರು ಜಾರ್ಜಿಯಾ ಗವರ್ನರ್ ಬ್ರಯಾನ್ ಕೆಂಪ್ ರಲ್ಲಿ ಮನವಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ ಎಂಬುದಾಗಿ ಸಿಎನ್ ಎನ್ ವರದಿ ಮಾಡಿದೆ.
ಜಾರ್ಜಿಯಾ ರಾಜ್ಯದ ಪ್ರತಿನಿಧಿಗಳ ವಿಶೇಷ ಅಧಿವೇಶನವನ್ನು ಕರೆಯಬೇಕು. ಜನಪ್ರತಿನಿಧಿಗಳು ತಮ್ಮ ಸ್ವಂತ ಚುನಾಯಿತರನ್ನು ಆಯ್ಕೆ ಮಾಡಲು ಮನವೊಲಿಸಬೇಕು, ಆಗ ಅವರು ತನ್ನನ್ನು ಬೆಂಬಲಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇನ್ನು ಬ್ಯಾಲಟ್ ಸಿಗ್ನೇಚರ್ ಗಳಲ್ಲಿ ಗೈರಾದವರ ಆಡಿಟ್ ಮಾಡಲು ಆದೇಶ ನೀಡಬೇಕು ಎಂದು ಕೂಡ ರಿಪಬ್ಲಿಕನ್ ಗವರ್ನರ್ ಅನ್ನು ಟ್ರಂಪ್ ಕೇಳಿದ್ದಾರೆ.
ಆದರೆ, ಅಂಥ ಆಡಿಟ್ ಗೆ ಆದೇಶ ನೀಡಲು ತಮಗೆ ಅಧಿಕಾರ ಇಲ್ಲ ಎಂದಿರುವ ಕೆಂಪ್, ವಿಶೇಷ ಅಧಿವೇಶನ ಕರೆಯಲು ಸಾಧ್ಯವಿಲ್ಲ ಎಂದು ಟ್ರಂಪ್ ಗೆ ಮಾಹಿತಿ ನೀಡಿದ್ದಾಗಿ ಮೂಲಗಳು ತಿಳಿಸಿವೆ. ಈ ಕರೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶ್ವೇತ ಭವನ ನಿರಾಕರಿಸಿದೆ. ಈ ವಿಚಾರ ಮೊದಲಿಗೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ವರದಿ ಆಗಿತ್ತು.

ಕೆಂಪ್ ವಕ್ತಾರ ಕೋಡಿ ಹಾಲ್ ಮಾತನಾಡಿ, ಅಧ್ಯಕ್ಷರ ಜತೆ ಮಾತನಾಡಿದ್ದನ್ನು ಖಾತ್ರಿ ಪಡಿಸಿದ್ದಾರೆ. ಆದರೆ ಈ ಮಾತುಕತೆ ಬಗ್ಗೆ ಕೇಳಿದಾಗ, ವ್ಯಕ್ತಿಯೊಬ್ಬರ ಸಾವಿಗೆ ಶೋಕ ವ್ಯಕ್ತಪಡಿಸಲು ಕರೆ ಮಾಡಿದ್ದರು ಅಷ್ಟೇ ಎಂದು ಉತ್ತರಿಸಿದ್ದಾರೆ.
ಅಂದ ಹಾಗೆ ಜಾರ್ಜಿಯಾದಲ್ಲಿ ಬೈಡನ್ ಹನ್ನೆರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಆ ಮೂಲಕ ಕಳೆದ ಮೂರು ದಶಕದಲ್ಲಿ ಜಾರ್ಜಿಯಾದಲ್ಲಿ ಗೆದ್ದ ಮೊದಲ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಆಡಿಟ್ ನಡೆಸಿ, ನವೆಂಬರ್ 20ನೇ ತಾರೀಕಿನಂದು ಬೈಡನ್ ಗೆಲುವನ್ನು ಕೆಂಪ್ ಖಾತ್ರಿ ಪಡಿಸಿದ್ದಾರೆ. ಅದರಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚು ಬ್ಯಾಲಟ್ ಮತ ಕೂಡ ಒಳಗೊಂಡಿದೆ.
ಕೆಂಪ್ ನಿಲುವಿನ ಬಗ್ಗೆ ಸಂದರ್ಶನಗಳಲ್ಲಿ ಕಿಡಿ ಕಾರಿದ್ದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಕೆಂಪ್ ರನ್ನು ಬೆಂಬಲಿಸಿದ್ದಕ್ಕೆ ತಾನೀಗ ನಾಚಿಕೆ ಪಡುವಂತಾಗಿದೆ ಎಂದು ಕೂಡ ಹೇಳಿದ್ದರು.












Click it and Unblock the Notifications