ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು
ನ್ಯೂಯಾರ್ಕ್, ಜೂನ್ 08: ಮಗಳ ಹುಟ್ಟು ಹಬ್ಬ ಆಚರಿಸಲೆಂದು ಸಂಭ್ರಮದಿಂದ ಬೀಚ್ ವೊಂದಕ್ಕೆ ದಂಪತಿ ಮತ್ತು ಮಗು ತೆರಳುತ್ತಿದ್ದ ಸಂದರ್ಭದಲ್ಲಿ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ, ಮರುದಿನ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ಮತ್ತು ಆಕೆಯ ತಂದೆ ಮೃತರಾದ ದುರಂತ ಘಟನೆ ಶುಕ್ರವಾರ ನಡೆದಿದೆ.
ಮುಖೇಶ್ ದೇಶ್ ಮುಖ್ ಮತ್ತು ಮೋನಿಕಾ ದೇಶ್ ಮುಖ್ ಕರ್ನಾಟಕದ ಬೀದರ್ ನವರು ಎಂಬ ಮಾಹಿತಿ ಲಭ್ಯವಾಗಿದ್ದು, ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ತಮ್ಮ ಕುಟುಂಬದೊಂದಿಗೆ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು.

ಕೋಲಂಬಸ್ ಕೌಂಟಿಯ ಬಳಿ ಘಟನೆ ನಡೆದಿದ್ದು, ದಂಪತಿ ತಮ್ಮ ಮಗುವಿನ ಹುಟ್ಟು ಹಬ್ಬದ ಆಚರಣೆಗೆಂದು ಬೀಚ್ ವೊಂದರ ಬಳಿ ತೆರಳುತ್ತಿದ್ದರು. ಆದರೆ ವಿಧಿಯಾಟದಲ್ಲಿ ಮರುದಿನ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು, ಜೊತೆಗೆ ಆಕೆಯ ತಂದೆ ಮೃತರಾಗಿದ್ದಾರೆ. ತಂದೆ ಸ್ಥಳದಲ್ಲೇ ಮೃತರಾದರೆ, ಗಂಭೀರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಮೃತಳಾಗಿದ್ದಾಳೆ. ತಾಯಿ ಮೋನಿಕಾ ಅವರ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತ ನಡೆಯುವ ಸಮಯದಲ್ಲಿ ಮೋನಿಕಾ ಅವರು ಕಾರ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕ್ರಾಸ್ ರಸ್ತೆಯಲ್ಲಿ ಟ್ರಕ್ ವೊಂದು ವೇಗವಾಗಿ ಬರುತ್ತಿರುವುದನ್ನು ಗಮನಿಸದ ಕಾರಣ ಈ ಘಟನೆ ನಡೆದಿದ್ದು, ಟ್ರಕ್ ಚಾಲಕನಿಗೆ ಯಾವುದೇ ಗಾಯವೂ ಆಗದೆ, ಆತ ಪಾರಾಗಿದ್ದಾನೆ.
ಇದೀಗ ಮುಖೇಶ್ ದೇಶಮುಖ್ ಮತ್ತು ಅವರ ಪುತ್ರಿಯ ಮೃತದೇಹವನ್ನು ಭಾರತಕ್ಕೆ ಕರೆತರಲು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವನ್ನು ಮುಖೇಶ್ ಕುಟುಂಬ ಕೇಳಿದೆ. ಈ ಸಂಬಂಧ ಬೀದರ್ ಸಂಸದ್ ಭಗವಂತ ಖೂಬಾ ಅವರೂ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ವಿವರಿಸಿದ್ದಾರೆ.












Click it and Unblock the Notifications