ಅಮೆರಿಕದಿಂದ ಒಂದೇ ಒಂದು ಡಾಲರ್ ಸಿಗೋಲ್ಲ! ಪಾಕಿಸ್ತಾನಕ್ಕೆ ನಿಕ್ಕಿ ತಪರಾಕಿ
ವಾಷಿಂಗ್ಟನ್, ಫೆಬ್ರವರಿ 26: ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದು, ಅಮೆರಿಕ ಪಾಕಿಸ್ತಾನಕ್ಕೆ ಈಗಾಗಲೇ ಖಡಕ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಭಯೋತ್ಪಾದಕರಿಗೆ ನೆಲೆ ನೀಡುವುದನ್ನು ಬಿಡುವವರೆಗೂ ಅಮೆರಿಕ ಅದಕ್ಕೆ ಒಂದೇ ಒಂದು ಡಾಲರ್ ಅನ್ನೂ ನೀಡುವುದಿಲ್ಲ ಎಂದು ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹಾಲೆ ಹೇಳಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ಸಹಕಾರವನ್ನು ಹಿಂಪಡೆಯುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಹಾಲೆ ಶ್ಲಾಘಿಸಿದ್ದಾರೆ.

'ಪಾಕಿಸ್ತಾನ ಎಂದಿನಿಂದಲೋ ಭಯೋತ್ಪಾದಕರಿಗೆ ನೆಲೆ ನೀಡುತ್ತ ಬಂದಿದೆ. ಅದನ್ನು ತಕ್ಷಣ ನಿಲ್ಲಿಸದೆ ಇದ್ದಲ್ಲಿ ಪರಿಣಾಮ ಎದುರಿಸಬೇಕಾದೀತು. ತನ್ನ ವರ್ತನೆಯನ್ನು ಪಾಕಿಸ್ತಾನ ಬದಲಿಸಿಕೊಳ್ಳಬೇಕಿದೆ. ಅದು ಪಾಕಿಸ್ತಾನದ ಭವಿಷ್ಯಕ್ಕೂ ಒಳ್ಳೆಯದು' ಎಂದು ಅವರು ಹೇಳಿದರು.
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ವಾಹನವೊಂದರ ಮೇಲೆ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದರು.












Click it and Unblock the Notifications