‘ಕೊರೊನಾ’ಗೆ ಒಂದೇ ದಿನ 3000 ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಬಲಿ
ಅಮೆರಿಕ ಪರಿಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಮತ್ತೊಂದು ದಾಖಲೆಯನ್ನ ಬರೆದಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 3,265 ಜನ ಮೃತಪಟ್ಟಿದ್ದಾರೆ. ಅಲ್ಲದೆ ಇದರ ಜೊತೆಗೆ 2 ಲಕ್ಷ 27 ಸಾವಿರದಷ್ಟು ಹೊಸ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿರುವುದು ಆತಂಕವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ.
ಕೊರೊನಾ ಬಂದಪ್ಪಳಿಸಿದ ಬಳಿಕ ವಿಶ್ವದ ದೊಡ್ಡಣ್ಣನ ಬುಡ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ. ಈ ಹೊತ್ತಲ್ಲಿಯೇ ಅಮೆರಿಕ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ನಿನ್ನೆ ಒಂದೇ ದಿನ ಮತ್ತೆ ದಾಖಲೆ ಪ್ರಮಾಣದಲ್ಲಿ 'ಕೊರೊನಾ' ಕೇಸ್‌ಗಳು ಪತ್ತೆಯಾಗಿವೆ.
ಅಲ್ಲದೆ ಕೊರೊನಾ ಸೋಂಕಿನಿಂದ ಒಂದೇ ದಿನ 3,265 ಜನರು ಮೃತಪಟ್ಟಿರುವುದು ಅಲ್ಲಿನ ಭೀಕರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ. ಈ ಮೂಲಕ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ಜನರ ಸಂಖ್ಯೆ 2 ಲಕ್ಷ 97 ಸಾವಿರಕ್ಕೆ ಬಂದು ನಿಂತಿದೆ. ಇನ್ನೇನು ಸಾವಿನ ಸಂಖ್ಯೆ 3 ಲಕ್ಷ ಮುಟ್ಟಿದರೂ ಅಚ್ಚರಿ ಬೇಕಿಲ್ಲ. ಅಷ್ಟು ಹದಗೆಟ್ಟು ಹೋಗಿದೆ ವಿಶ್ವದ ನಂಬರ್ 1 ದೇಶದ ಪರಿಸ್ಥಿತಿ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!
ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ ‘ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ.
ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಇಷ್ಟೆಲ್ಲಾ ನಡೆದರೂ ಅಮೆರಿಕ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ, ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇಲ್ಲ. ಬದಲಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದು ಅಮೆರಿಕನ್ನರ ಆತಂಕಕ್ಕೆ ಕಾರಣವಾಗಿದೆ.

ಮುಂದಿನ ಕೆಲ ವಾರಗಳು ಹಾರಿಬಲ್..!
ಅಮೆರಿಕದ ನಾಯಕರಿಗೆ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ ಕೆಲ ವಾರಗಳು ಭಾರಿ ಗಂಡಾಂತರ ಎದುರಾಗಲಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂ ಮಧ್ಯೆ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ಜನವರಿ ಅಥವಾ ಫೆಬ್ರವರಿ ತಿಂಗಳವರೆಗೂ ಪರಿಸ್ಥಿತಿ ಇದೇ ರೀತಿ ಇರುವ ಸಾಧ್ಯತೆ ಇದೆ. ಸಾಮೂಹಿಕವಾಗಿ ವ್ಯಾಕ್ಸಿನ್ ನೀಡಿದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಬಂದರೆ ಬಚಾವ್, ಇಲ್ಲವಾದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು.

ವ್ಯಾಕ್ಸಿನ್ ಇಲ್ಲ, ದೇಹ ತಡೆಯುತ್ತಿಲ್ಲ
ಈ ಹಿಂದೆ ಟ್ರಂಪ್ ಡಿಸೆಂಬರ್ ಒಳಗಾಗಿ ವ್ಯಾಕ್ಸಿನ್ ಸಿಗುವ ಭರವಸೆ ವ್ಯಕ್ತಪಡಿಸಿದ್ದರು. ಇದರ ಹಿಂದೆ ಚಳಿ ಹತ್ತಿರವಾಗುತ್ತಿದೆ ಎಂಬ ಮುನ್ಸೂಚನೆ ಕೂಡ ಇತ್ತು. ಆದರೆ ಟ್ರಂಪ್ ಭರವಸೆ ಈಡೇರಿಲ್ಲ, ಟ್ರಂಪ್ ಊಹೆ ಸುಳ್ಳಾಗಿ ಹೋಗಿದೆ. ಏಕೆಂದರೆ ಇನ್ನೂ ಅಮೆರಿಕದಲ್ಲಿ ಸಾಮೂಹಿಕ ಲಸಿಕೆ ಯೋಜನೆ ಸಿದ್ಧವಾಗಿಲ್ಲ. ಈ ಮಧ್ಯೆ 2 ಲಕ್ಷ 97 ಸಾವಿರ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಚಳಿಗಾಲ ಅಮೆರಿಕದ ನೆಲಕ್ಕೆ ಬಂದಪ್ಪಳಿಸಿದ್ದು, ಆ ಭಗವಂತನೇ ಅಲ್ಲಿನ ನಿವಾಸಿಗಳನ್ನು ಕಾಪಾಡಬೇಕಿದೆ. ಮಾಮೂಲಿ ಚಳಿ ಇದ್ದಾಗಲೇ ಜನ ನೂರಾರು ರೋಗಿಗಳಿಗೆ ತುತ್ತಾಗುತ್ತಿದ್ದರು. ಆದರೆ ಈಗ ಬಂಪರ್ ಗಿಫ್ಟ್ ಎಂಬಂತೆ ಕೊರೊನಾ ಬಂದೆರಗಿದ್ದು, ದೊಡ್ಡಣ್ಣನ ನಾಡು ಸಂದಿಗ್ಧ ಸ್ಥಿತಿಯಲ್ಲಿ ಸುಧಾರಿಸಿಕೊಳ್ಳಲು ಕೂಡ ಸಾಧ್ಯವಾಗದೆ ನಲುಗಿ ಹೋಗಿದೆ.
Recommended Video

ಲಸಿಕೆ ನಂಬಿ ಕೂತರೆ ಸ್ಮಶಾನ..!
ಕೆಲ ತಿಂಗಳ ಹಿಂದೆ ಬ್ರಿಟನ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ಒಂದು ಆಘಾತಕಾರಿ ಸಂಗತಿ ತಿಳಿಸಿದ್ದರು. ಕೊರೊನಾ ಸೋಂಕು ಅಷ್ಟು ಸುಲಭವಾಗಿ ಭೂಮಿಯಿಂದ ನಾಶವಾಗದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ ಇನ್ನೇನು ಲಸಿಕೆ ಬಂದುಬಿಡುತ್ತೆ, ಕೊರೊನಾ ಈ ಭೂಮಿಯನ್ನೇ ಬಿಟ್ಟು ತೊಲಗುತ್ತೆ ಎಂಬ ಊಹೆಗಳು ಇದ್ದರೆ ಮನಸ್ಸಿನಿಂದ ತೆಗೆದುಹಾಕಿ ಎಂದಿದ್ದರು. ಏಕೆಂದರೆ ಈವರೆಗೂ ಯಾವುದೇ ಲಸಿಕೆಗಳು ಅಷ್ಟು ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆಯಿಂದ ಸದ್ಯಕ್ಕೆ ಕೊರೊನಾ ನಿಯಂತ್ರಿಸಬಹುದು. ಲಸಿಕೆ ಬಂದ ನಂತರ ಹಲವು ವರ್ಷಗಳ ಕಾಲ ಕೊರೊನಾ ಭೂಮಿ ಮೇಲೆ ಇರುತ್ತದೆ ಎಂದು ಎಚ್ಚರಿಸಿದ್ದರು. ತಜ್ಞರ ಎಚ್ಚರಿಕೆ ಬೆನ್ನಲ್ಲೇ ಅಮೆರಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿ ಆತಂಕವನ್ನು ಹೆಚ್ಚುಮಾಡಿದೆ.











Click it and Unblock the Notifications