ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಬಿಜೆಪಿ ಸುಳ್ಳು ನಂಬಂದಂತೆ ಕರೆ ಕೊಟ್ಟ ಸಿದ್ದರಾಮಯ್ಯ
ವಿಜಯಪುರ, ಫೆಬ್ರವರಿ 02: ಮೌಡ್ಯ, ಕಂದಾಚಾರ, ಜಾತಿ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಆರಂಭಿಸಿದ್ದ ಬಸವಾದಿ ಶರಣರ ಅನುಯಾಯಿ ನಾನು. ನಾವು ಬಸವಾದಿ ಶರಣರ ಮಾರ್ಗದಲ್ಲಿ ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಈಗಲೂ ನಡೆಯುತ್ತಿದ್ದೇವೆ. ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸರ್ಕಾರದ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

ನಾಡಿನ ಜನರನ್ನು ತಪ್ಪು ದಾರಿಗೆ ಎಳೆದು ಅವರನ್ನು ವಂಚಿಸಲು ಬಿಜೆಪಿ ಅಪ್ಪಟ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು, ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಪ್ಪಾಜಿ ನಾಡಗೌಡ ಸಚಿವರಾಗುವ ಅರ್ಹತೆ ಇದೆ: ಸಿಎಂ
ಒಂದೇ ದಿನ 227 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ. ಅಪ್ಪಾಜಿ ನಾಡಗೌಡರು ಅತ್ಯಂತ ಹಿರಿಯ ಸಭ್ಯ ರಾಜಕಾರಣಿ. ಅವರಿಗೆ ಸಚಿವರಾಗುವ ಅರ್ಹತೆ, ಅನುಭವ ಎರಡೂ ಇದೆ. ನಾಡಗೌಡರ ಕಾರಣದಿಂದ ಮುದ್ದೇಬಿಹಾಳ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದುಡಿಯುವವರು ಯಾರೋ, ದುಡಿದು ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು-ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ವಚನ ಕ್ರಾಂತಿ ಶುರುವಾಯಿತು. ಈ ಕಾರಣಕ್ಕೆ ನಾನು ಬಸವಾದಿ ಶರಣರ ಅನುಯಾಯಿ ಆಗಿದ್ದು ಎಂದು ಹೇಳಿದರು.

ಜಾತಿ ವ್ಯವಸ್ಥೆ ಬಗ್ಗೆ ಸಿಎಂ ಕಳವಳ
ಕ್ರಾಂತಿಯ ಪ್ರಭಾವದಲ್ಲಿ ಸಮಾಜ ಪೂರ್ಣ ಬದಲಾಗುವ ಮೊದಲೇ ವಚನ ಕ್ರಾಂತಿಗೆ ಅಡ್ಡಗಾಲು ಹಾಕಲಾಯಿತು. ಆದ್ದರಿಂದ ಇನ್ನೂ ಬಸವಣ್ಣನವರ ಆಶಯದ "ಇವ ನಮ್ಮವ ಇವ ನಮ್ಮವ" ಎನ್ನುವ ಆಶಯ ಈಡೇರದೆ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ ವರ್ಷ ಮಾರ್ಚ್ 20 ರಂದು ನಾನು ಮುದ್ದೇಬಿಹಾಳ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವತ್ತು ನಾನು ಮುದ್ದೇ ಬಿಹಾಳದಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನೂ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ನಾನು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆದಿದ್ಸೇವೆ. ಈಗಲೂ ಅಷ್ಟೆ. ಬಸವಾದಿ ಶರಣರು ನುಡಿದಂತೆ ನಡೆದರು. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ವಿವರಿಸಿದರು.
ಶರಣರಿಂದ ಸಿಎಂಗೆ ಸನ್ಮಾನ
ಶರಣ ಶ್ರೇಷ್ಠ ಬಸವಣ್ಣನವರನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 12 ಮಂದಿ ಶರಣ ಸ್ವಾಮೀಜಿಗಳು ವೇದಿಕೆಯಲ್ಲೇ ಅಭಿನಂದಿಸಿ, ಸನ್ಮಾನಿಸಿ ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಅಪ್ಪಾಜಿ ಸಿ.ಎಸ್.ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಕೃಷಿ ಸಚಿವರಾದ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಶಾಸಕರುಗಳಾದ ಯಶವಂತರಾಯಗೌಡ ವ್ಹಿ ಪಾಟೀಲ್, ಹಣಮಂತ ನಿರಾಣಿ, ಬಸವನಗೌಡ ಆರ್ ಪಾಟೀಲ್, ಸುನಿಲಗೌಡ ಬಿ ಪಾಟೀಲ, ಪೊ.ಹೆಚ್.ಪೂಜಾರ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
{document1}sidd












Click it and Unblock the Notifications